ಕುವೆಂಪು ಮನಮುಟ್ಟಿದ ಕೊಡಗಿನ ಬೆಡಗಿ ಯಾರು?

ಕುವೆಂಪು ಮನಮುಟ್ಟಿದ ಕೊಡಗಿನ ಬೆಡಗಿ ಯಾರು?
Updated on

ಮಹಾಕವಿ ಕುವೆಂಪು, ತಮ್ಮ ಬ್ರಹ್ಮಚಾರಿ ಜೀವನದಲ್ಲಿ ಕೊಡಗಿನ ಚೆಲುವೆಯೊಬ್ಬಳನ್ನು ಪ್ರೀತಿಸಿದ್ದರೇ? ಆಕೆ ಯಾರು? ಕೊಡಗಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಹೊತ್ತಿನಲ್ಲಿ, ಇತಿಹಾಸದಲ್ಲಿ ಮರೆಯಾಗಿ ಹೋದ ಕೊಡಗಿನ ಅಪೂರ್ವ, ಧೀಮಂತ ಸಾಂಸ್ಕೃತಿಕ ವ್ಯಕ್ತಿತ್ವವೊಂದರ ಮೇಲೆ ಬೆಳಕು ಚೆಲ್ಲುತ್ತದೆ. ಇದು ಹರಿಹರಪ್ರಿಯರ ಸುದೀರ್ಘ ಲೇಖನದ ಆಯ್ದ ಭಾಗ.

ಕುವೆಂಪು ಅವರು ತಮ್ಮ ಆತ್ಮಕತೆ (ನೆನಪಿನ ದೋಣಿಯಲ್ಲಿ) ಬರೆದದ್ದು- ಪ್ರಕಟವಾದದ್ದು 1980ರಲ್ಲಿ. ಅವರಿಗಾಗ 76ನೇ ವಯಸ್ಸು. ಅದರಲ್ಲಿ ಅವರು ತಮ್ಮ ಮೊದಲ ರಾತ್ರಿಯ ಪ್ರಸಂಗವನ್ನೂ ದಾಖಲಿಸಿದ್ದಾರೆ! ಅಥವಾ ಸಾಲದೆಂದು ತನ್ನ ಪ್ರಣಯ ಪ್ರಸಂಗವನ್ನೂ ಆತ್ಮಕಥೆಯಲ್ಲಿ ದಾಖಲಿಸಿ ಬಿಡುವುದೆ!

ನಾನು 'ಸಂಪಾದಿಸಿದ ಕುವೆಂಪು ಪತ್ರಗಳು' ಪ್ರಕಟವಾದಾಗ (1974) ಕುವೆಂಪು ಅವರ ಆತ್ಮಕಥೆ ಪ್ರಕಟವಾಗಿರಲಿಲ್ಲ. ತಿ.ತಾ. ಶರ್ಮರಿಗೆ ಬರೆದ ಪತ್ರದಲ್ಲಿ (15-1-1934), 'ಇತ್ತೀಚೆಗೆ ಅನೇಕರು ಅನೇಕ ವಿಧವಾಗಿ ಮಾತಾಡಿಕೊಳ್ಳುತ್ತಿದ್ದಾರೆ' ಎಂದು ಬರೆದಿದ್ದೀರಿ'. ಈ ಬಗ್ಗೆ ಶರ್ಮಾಜಿಯವರಲ್ಲಿ ಬೇಕಾದಷ್ಟು ಸಲ ಕೇಳಿದ್ದೆ. ಒಡನಾಟವಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರರನ್ನೂ ಕಾಡಿದ್ದೆ. ಈಗ ಆ ವಿಷಯ ಯಾಕೆ? ಏನೋ ನಡೆಯಿತು, ಮುಗಿಯಿತು ಎಂಬಂತೆ ಹಾರಿಕೆಯ ಅಥವಾ ಹಿರಿತನದ ಉತ್ತರ ನೀಡಿದ್ದರು. ಲಂಕೇಶ್ ಅವರೂ ಎಷ್ಟೋ ಬಾರಿ, 'ಏನಯ್ಯಾ ನಿಮ್ಮ ಮಹಾಕವಿ ಯಾರನ್ನಾದರೂ ಲವ್ ಮಾಡಿದ್ದರಾ?' ಇತ್ಯಾದಿಯಾಗಿ ಚುಡಾಯಿಸಿದ್ದರು. ಇದಕ್ಕೆ ಅರ್ಧ ಸಮಾಧಾನ ಸಿಕ್ಕಿದ್ದು ಕುವೆಂಪು ಅವರ ಆತ್ಮಕಥೆ ಬಂದಾಗ. ಆಗಲೂ ಸಮಸ್ಯೆ, ಅನುಮಾನ ಬಗೆಹರಿಯಲಿಲ್ಲ. ಈಗ, ಇದೀಗ ಆ ಬಗ್ಗೆ ಬೆಳಕು ಚೆಲ್ಲುವ ಒಂದು ಸೂಚನೆ- ಪ್ರಮೇಯ ಸಿಕ್ಕಿದೆ. ಹೇಗೆ ಅಲಿಗೆ ಪುಟ್ಟಯ್ಯ ನಾಯ್ಕರು ಅವರ ಕಾದಂಬರಿಗಳ, ಆತ್ಮಕಥೆಗೆ ಪ್ರೇರಕರಾಗಿ ಮಾತ್ರವೇ ಆಕರ ಸಂಗ್ರಾಹಕರಾಗಿ ನಿಂತಿದ್ದರೋ, ಅದೇ ರೀತಿ ಒಬ್ಬ ಹೆಣ್ಣು ಮಗಳು ಕುವೆಂಪು ಅವರ ಮನಸ್ಸನ್ನು ಗೆದ್ದಿದ್ದರು ಮಾತ್ರವೇ ಅಲ್ಲ ಬೆಂಬಿಡದೆ ಕಾಡಿದ್ದರು ಎಂಬುದು ಕುತೂಹಲಕರ ಸಂಗತಿ. ಅದನ್ನು ದಾಖಲಿಸಿ, ಎಷ್ಟು ಎತ್ತರವನ್ನೂ ಏರಿದ್ದಾರೆ ಎಂಬುದೇ ಇಲ್ಲಿ ಮಹತ್ತ್ವದ ಸಂಗತಿ. ತಮ್ಮ ಎರಡೂ ಕಾದಂಬರಿಗಳಿಗೆ ಹೇಗೆ ಚರಿತ್ರೆಯ ದಾಖಲೆಗಳನ್ನು ಒಬ್ಬ ಸಂಶೋಧನ ವಿದ್ಯಾರ್ಥಿಯಂತೆ ಸಂಗ್ರಹಿಸಿದ್ದರೋ, ತಮ್ಮ ಆತ್ಮಕಥೆ ಬರೆಯುವಾಗಲೂ ದಾಖಲೆಗಳು, ದಿನಚರಿ, ಪತ್ರಗಳನ್ನೂ ಮುಂದಿಟ್ಟುಕೊಂಡೇ ಕೃತಿ ರಚಿಸಿದ್ದಾರೆ. 25.6.1933ರ ದಿನಚರಿಯ ಸಾಲುಗಳು ಇವು. ಆಗ ಮೈಸೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಅವರು ವಾಸವಾಗಿದ್ದರು. ಎಂಎ ಪದವಿ ಪಡೆದು, ಕನ್ನಡ ಅಧ್ಯಾಪಕರಾಗಿ 4 ವರ್ಷಗಳಾಗಿದ್ದವು.

'ಮೊನ್ನೆ ಚಿನ್ಮಾತ್ರಾನಂದರು ಬೆಂಗಳೂರಿಗೆ ಹೋಗಿ ಬಂದು ಒಂದು ವಿಷಯ ಹೇಳಿದರು. ಅದನ್ನು ನಾನು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ತಿ.ತಾ. ಶರ್ಮರೂ ಅವರ ಪತ್ನಿಯವರೂ ನಾನು ಮದುವೆ ಮಾಡಿಕೊಂಡರೆ ಲೇಸೆಂದು ವಾದಿಸಿದರಂತೆ. ಇನ್ನೊಂದು ವಿಚಾರ- ನಾನು ಕೊಡಗಿನ ಸಾಹಿತ್ಯ ಪರಿಷತ್ತಿಗೆ ಹೋಗಿದ್ದಾಗ ಅವರ ಮನೆಗೆ ಔತಣಕ್ಕೆ ಕರೆಯಬೇಕೆಂದು ಬರೆದಿದ್ದರು. ಅವರದು ಬಹಳ ಒಳ್ಳೆಯ ಸಂಸ್ಕೃತಿಯ ಸಂಸಾರ. ಆದರೆ ನಾನು ಅಲ್ಲಿಗೆ ಹೋಗುವಾಗಲಾಗಲಿ ಹೋದ ಮೇಲಾಗಲಿ ಬೇರೆ ಯಾವುದನ್ನೂ ಭಾವಿಸಿರಲಿಲ್ಲ. ಆದ್ದರಿಂದ ಚಿನ್ಮಾತ್ರಾನಂದರು ಹೇಳಿದ ವಿಚಾರ ಕೇಳಿ ಬಹಳ ಆಶ್ಚರ್ಯವಾಯಿತು. ಆನಂದವೂ ಆಗಲಿಲ್ಲ ಎಂದು ನಾನು ಹೇಳುವುದಿಲ್ಲ. ಕುಮಾರಿ ಪ... ಅವರು ನನ್ನಲ್ಲಿ ಅನುರಕ್ತೆಯಾಗಿದ್ದರಂತೆ. ಇದು ನಿಜವೋ ಸುಳ್ಳೋ ತಿಳಿಯದು. ನಿಜವಾಗಿದ್ದರೂ ಸಂತೋಷ. ಸುಳ್ಳಾಗಿದ್ದರೂ ಸಂತೋಷ. ಅಂತಹ ಸುಸಂಸ್ಕೃತ ಸಜ್ಜನ ಕನ್ಯೆಯನ್ನು ಸಹಧರ್ಮಿಣಿಯಾಗಿ ಸ್ವೀಕರಿಸುವುದು ಭಾಗ್ಯವಲ್ಲದೆ ಮತ್ತೇನು? ಆದರೆ ನನ್ನ ಸ್ವಾತಂತ್ರ್ಯಕ್ಕೆಲ್ಲಿ ಭಂಗ ಬರುತ್ತದೆಯೋ ಎಂಬ ಭೀತಿ. ಅಲ್ಲದೆ ನಾನು ಸಂಸಾರ ನಿರ್ವಹಿಸುವಷ್ಟು ಜವಾಬ್ದಾರಿ ಮನುಷ್ಯನಲ್ಲವೆಂದು ತೋರುತ್ತದೆ. ನಾನು ಆಕಾಶವಿಹಾರಿ, ಸ್ವಪ್ನ ಸಂಚಾರಿ, ವಾಸ್ತವ ಜಗತ್ತು ಭಾರವಾಗಿ ಬಿಟ್ಟರೆ ಏನು ಗತಿ? ಹೆಂಡತಿ, ಮಕ್ಕಳು- ಮುಂದೆ ಅದರಿಂದಾಗುವ ಬಂಧನ ಪರಂಪರೆ! ಇವನ್ನೆಲ್ಲ ಯೋಚಿಸಿಯೆ ನಾನು ಮದುವೆಗೆ ಹಿಂಜರಿಯುತ್ತಿರುವುದು; ಈಶ್ವರ ಸಾಕ್ಷಾತ್ಕಾರವು ಕ್ಷುದ್ರಗಳೇ ಅಥವಾ ಮಹತ್ತುಗಳೇ. ಅಂತೂ ನಾನು ತುಂಬಾ ರೋಮಾಂಚಿತ. ಬಹುಶಃ ಕುಮಾರಿ ಪ... ರವರೇ ನನ್ನಲ್ಲಿಗೆ ಬಂದು ತಮ್ಮ ಅನುರಾಗವನ್ನು ವ್ಯಕ್ತಪಡಿಸಿದರೆ ನಾನು ಒಪ್ಪುತ್ತೇನೆಯೊ ಏನೊ! ಅದು ಗುರುದೇವನಿಚ್ಛೆ. ಏಕೆಂದರೆ ಆಕೆ ಆರ್ಯಸಮಾಜದ ಹೋಮ ಹವನಗಳಲ್ಲಿ ಬೆಳೆದವರು. ನಾನು ಸ್ವತಂತ್ರ ಯುಕ್ತಿವಾದಿ. ನಮ್ಮಿಬ್ಬರಿಗೂ ಸರಿಹೋಗುವುದನ್ನು ನಾನು ಕಾಣೆ. ಇದೆಲ್ಲ ಹುಚ್ಚುಗನಸು! (ಪುಟ 1007)
(1)    ಈ ಹಿಂದೆ, ಕುವೆಂಪು ಪತ್ರಗಳು ಸಂಕಲನದ ಪತ್ರವೊಂದರಲ್ಲಿ ತಿ.ತಾ. ಶರ್ಮರು ಬರೆದ ಪತ್ರಕ್ಕೆ, ಕುವಂಪು ಉತ್ತರಿಸಿದರಷ್ಟೆ. ಶರ್ಮಾಜಿಯವರಿಗೆ ವಿಷಯ ಗೊತ್ತಾಗಿದ್ದು ಚಿನ್ಮಾತ್ರಾನಂದರಿಂದ ಎಂದು ಈಗ ತಿಳಿಯುತ್ತಿದೆ.

(2)    ಕುವೆಂಪು ಬರೆದ ಮೇಲಿನ ಸಾಲುಗಳಲ್ಲಿ 'ಅವರ ಮನೆಗೆ ಔತಣಕ್ಕೆ ಕರೆಯಬೇಕೆಂದು ಬರೆದಿದ್ದರು' ಎಂದು ದಿಢೀರನೆ ಪ್ರಸ್ತಾಪಗೊಳ್ಳುತ್ತದೆ. ಅವರ ಎಂಬುದು, ಕುಮಾರಿ ಪ... ಎಂದಷ್ಟೇ ಕಾಣಿಸಿಕೊಳ್ಳುವ ವಿಷಯದಿಂದ, ಪ ಅವರೇ ಪತ್ರ ಬರೆದಿದ್ದರು ಎಂಬುದೂ ಬಹುಶಃ ಆಗ ಅವರು ಮಡಿಕೇರಿಯಲ್ಲಿ ಇರಲಿಲ್ಲ ಎಂಬ ಸಂಗತಿಯೂ ಹೊರಬೀಳುತ್ತದೆ.

(3)    ಆಗ್ಗಿನ್ನೂ ಮದುವೆ ವಿಷಯಕ್ಕೇ ಕುವೆಂಪು ಅವರಲ್ಲಿ ಅನುಮಾನ, ಗೊಂದಲವಿತ್ತು. ಆದರೂ 'ಅಂತಹ ಸುಸಂಸ್ಕೃತ ಸಜ್ಜನ ಕನ್ಯೆಯನ್ನು ಸಹಧರ್ಮಿಣಿಯಾಗಿ ಸ್ವೀಕರಿಸುವುದು ಭಾಗ್ಯವಲ್ಲದೆ ಮತ್ತೇನು?' ಎನ್ನುವ ಅಂತರಂಗದ ಮಾತುಗಳ ಮೂಲಕ, ಆಕೆಯೂ ಉನ್ನತ- ಭವ್ಯ ವ್ಯಕ್ತಿತ್ವದ ಹೆಣ್ಣು ಮಗಳು ಎಂಬುದು ಕಣ್ಣ ಮುಂದೆ ಸುಳಿಯುತ್ತದೆ.

(4)    ನೇರವಾಗಿ ತನ್ನಲ್ಲಿಗೇ ಆಕೆ ಬಂದು ಕೇಳಿಬಿಟ್ಟಿದ್ದರೆ ಒಪ್ಪುತ್ತಿದ್ದೆ ಎಂಬ ಮನೋಇಂಗಿತವನ್ನು ಹೊರಹಾಕಿದ್ದಾರೆ.

(5)    ಇಷ್ಟಾಗಿ, ಆಕೆ ಆರ್ಯಸಮಾಜದ ಹೋಮ ಹವನಗಳಲ್ಲಿ ಬೆಳೆದವರು ಎಂಬುದೇ ಕುವೆಂಪು ಅವರಿಗೆ ಅಡ್ಡಿ ಆತಂಕವಾದಂತೆ ಕಾಣಿಸುತ್ತೆ. ಇದರಿಂದ ಸರಿಜೋಡಿಯಾಗಲಾರದು ಎಂಬ ಎಚ್ಚರ, ತಿಳುವಳಿಕೆ, ಶ್ರೀರಾಮಕೃಷ್ಣ ಆಶ್ರಮದಲ್ಲಿ ಬೆಳೆದ ಸಂಸ್ಕಾರ ಅವರನ್ನು ಈ ಸಂಬಂಧಿಸಿ ಒಂದು ನಿಲುವಿಗೆ ಬಂದು ಮುಟ್ಟಿದ್ದರು ಎಂಬುದು ತಿಳಿಯುತ್ತದೆ.
ಆ ಕಾಲಕ್ಕೆ ಕುವೆಂಪು ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನಗಳಿಗೆ ಭಾಗವಹಿಸುತ್ತಿದ್ದರು. 1933 ಡಿಸೆಂಬರ್‌ನಲ್ಲಿ ಆ ಸಲದ ಸಾಹಿತ್ಯ ಸಮ್ಮೇಳನ ಹುಬ್ಬಳ್ಳಿಯಲ್ಲಿ. ಕವಿ ಸಮ್ಮೇಳನದ ಅಧ್ಯಕ್ಷತೆ ಕುವೆಂಪು. ಅಂದ ಮೇಲೆ ಕುವೆಂಪು ಇದ್ದೇ ಇದ್ದರು. 30.12.1943ರ ದಿನಚರಿಯ ಮುಂದಿನ ಸಾಲು ಬೇರೊಂದು ರೋಚಕ ಅಂಶವನ್ನು ಅನಾವರಣಗೊಳಿಸುತ್ತಿದೆ:

'ವಿಶಾಲವಾದ ಚಪ್ಪರದಲ್ಲಿ ಎಳ್ಳುಕಾಳು ಹಾಕಲು ಜಾಗವಿರದಂತೆ ಜನ ಕಿಕ್ಕಿರಿದು ಹೋಗಿತ್ತು. ಉತ್ಸಾಹವೋ ಉತ್ಸಾಹ ತರುಣರಲ್ಲಿ. ಅನೇಕರು ದೂರದೂರದ ಊರುಗಳಿಂದ ಕವಿ ಸಮ್ಮೇಲನದ ಅಧ್ಯಕ್ಷರನ್ನು ನೋಡುವ ಸಲುವಾಗಿಯೇ ಬಂದಿದ್ದರಂತೆ! ಜನರು ನನ್ನ ಅಧ್ಯಕ್ಷ ಭಾಷಣವನ್ನು ನಿಶ್ಯಬ್ದರಾಗಿ ಕಿವಿಗೊಟ್ಟು ಕೇಳಿದರು. ಭಾಷಣಕ್ಕೆ ಮುನ್ನ ನನ್ನನ್ನು ಸಭೆಗೆ ಪರಿಚಯ ಮಾಡಿಕೊಟ್ಟವರಲ್ಲಿ ಕೊಡಗಿನ ಮಡಿಕೇರಿಯ ಚಿ...ಪ್ಪನವರ ಮಗಳು ಪ... ವತೀದೇವಿಯವರೂ ಒಬ್ಬರಾಗಿದ್ದರು'. (ಪುಟ 1036)

(1) 30 ಪುಟಗಳ ಮೊದಲಿಗೆ ಕುಮಾರಿ ಪ... ಎಂದು ಕಣ್ಣಮುಂದೆ ತಂದು ನಿಲ್ಲಿಸಿದ್ದ ಕನ್ಯಾಮಣಿಯನ್ನು ಕುವೆಂಪು ಅವರು ಇಲ್ಲಿ, ಚಿ...ಪ್ಪನವರ ಮಗಳೆಂದೂ ಪ...ವತೀದೇವಿಯವರೆಂದೂ ಇನ್ನಷ್ಟು ಅಂಶ, ಅಕ್ಷರಗಳನ್ನು ಹೆಚ್ಚಿಸಿದ್ದಾರೆ.
(2) ಜೊತೆಗೆ, ಭಾಷಣಕ್ಕೆ ಮುನ್ನ ನನ್ನನ್ನು ಸಭೆಗೆ ಪರಿಚಯ ಮಾಡಿಕೊಟ್ಟವರೂ ಅದೇ ಹೆಣ್ಣು ಮಗಳು ಎಂದಾಗ, ಹಾಗಿದ್ದರೆ ಆಕೆ ಏನು? ಬರಹಗಾರ್ತಿಯೆ? ಸಭೆ-ಸಮಾರಂಭ- ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಧೀಮಂತೆಯೆ? ಗೋಷ್ಠಿಯಲ್ಲಿ ನಿಂತು ಪರಿಚಯ ಮಾಡಿಕೊಡುವಷ್ಟು ಪ್ರತಿಭಾಶಾಲಿಯಾಗಿದ್ದರೆ?

ಮುಂದಿನ ಪುಟಗಳಲ್ಲಿ ಸುದೀರ್ಘವಾಗಿ, ಸ್ವಾರಸ್ಯವಾಗಿ ಈ ಕುರಿತು ದಾಖಲಿಸಿದ್ದಾರೆ. ಉಪಾಹಾರ ಸ್ವೀಕರಿಸುವಾಗ ಎದುರಿಗೆ ಆಕೆ ಕುಳಿತಿದ್ದು, ಮಡಿಕೇರಿ ಸಮ್ಮೇಳನದ ಸಂದರ್ಭದಲ್ಲಿ ಆಕೆಯೇ ಅವರ ತಾಯಿಗೆ ಪತ್ರ ಬರೆದು ಮನೆಗೆ ಔತಣಕ್ಕೆ ಆಮಂತ್ರಿಸುವಂತೆ ಮಾಡಿದ್ದು, ಅದೇ ಸಂದರ್ಭದಲ್ಲಿ ಆ ತಾಯಿ ತಮ್ಮ ಮಗಳು ಬರೆದಿದ್ದ ಪತ್ರವನ್ನು ಕುವೆಂಪು ಅವರಿಗೇ ಖುದ್ದು ಕೊಟ್ಟಿದ್ದು, ಆ ಪತ್ರದಲ್ಲಿ ಜಾತಿ ಭೇದ ಗಮನಿಸದೆ ಮದುವೆಯಾಗಲು ಮುಂದಾಗಿದ್ದು, ಒಮ್ಮೆ ತಾಯಿತಂದೆಯೊಂದಿಗೆ ಆಕೆ ಆಶ್ರಮಕ್ಕೆ ಭೇಟಿ ನೀಡಿದ್ದು, ಎಲ್ಲಕ್ಕಿಂತ ಮುಖ್ಯವಾಗಿ ಕವಿಸಮ್ಮೇಲನದಲ್ಲಿ ಕುವೆಂಪು ಅವರನ್ನು ಅಧ್ಯಕ್ಷರನ್ನಾಗಿ ಸೂಚಿಸಿದಾಗ ಆಕೆ ಅನುಮೋದಿಸಿದ್ದು- ಇವೆಲ್ಲವನ್ನು ನೋಡಿದರೆ, ಕೇವಲ ಆಕೆ ರೂಪವತಿ ಮಾತ್ರವೇ ಅಲ್ಲ ವಿದ್ಯಾವತಿ, ಗುಣವತಿ, ಪ್ರತಿಭಾವಂತೆಯೂ ಕ್ರಿಯಾಶೀಲ ವ್ಯಕ್ತಿತ್ವ ಉಳ್ಳವರಾಗಿಯೂ ನಮಗೆ ಸ್ಪಷ್ಟವಾಗುತ್ತದೆ.

ಈ ಪ್ರಸಂಗಕ್ಕೆ ಕೊನೆ ಅಥವಾ ತೆರೆ ಎಳೆಯುವಂತೆ ಕುವೆಂಪು ಅವರು ಒಂದೇ ಒಂದು ಸಾಲು ಬರೆಯುತ್ತಾರೆ (ಪುಟ 1038).

'ಈಶ್ವರನಿಗೇ ಗೊತ್ತು ಯಾರು ಯಾರ ಮನಸ್ಸಿನಲ್ಲಿ ಏನು ಏನು ಆಗುತ್ತಿತ್ತು ಎಂಬುದು! ಶ್ರೀ ಗುರುಕೃಪೆ
ನನ್ನ ಜೀವನ ಸಂಗಾತಿಯನ್ನು ತಾನಾಗಿಯೇ ಗೊತ್ತು ಮಾಡಿರುವಾಗ ಅನ್ಯಥಾ ಸಂಭವಿಸಲು ಹೇಗೆ ಸಾಧ್ಯ?'

ನಿಜ. ಇಲ್ಲಿಗೆ ಆ ಪ್ರಸಂಗ ಕುವೆಂಪು ಲೆಕ್ಕದಲ್ಲಿ ಮುಗಿಯಿತು. ಆದರೆ ಕುವೆಂಪು ಅವರನ್ನು ಬೆನ್ನುಹತ್ತಿದ ಅಧ್ಯಯನಶೀಲರ ಗತಿ? ಕೊಡಗಿನ ಚಿ...ಪ್ಪನವರ ಮಗಳು, ಕುಮಾರಿ ಪ...ವತೀ ಯಾರು? ಇತ್ಯಾದಿ ಪ್ರಶ್ನೆ, ಕುತೂಹಲ, ಮಾನವ ಸಹಜ ಪರಿಹಾರಗಳಿಗೆ ಎದುರು ನೋಡುತ್ತಲೇ ಇದ್ದೆ.

ಇದ್ದಕ್ಕಿದ್ದಂತೆ ಹಳೆಯ ಪುಸ್ತಕ ಹುಡುಕಾಟದಲ್ಲಿ, 1948ರಲ್ಲಿ ಪ್ರಕಟವಾದ, ಬೆಂಗಳೂರಿನ ಸತ್ಯಶೋಧನ ಪ್ರಕಟನ ಮಂದಿರದವರು ಹೊರತಂದ 'ಕೊಡಗರ ಹೆಣ್ಣು ಮುತ್ತಮ್ಮ ಮತ್ತು ಇತರ ಕಥೆಗಳು' ಪುಸ್ತಕ ಕೈಗೆ ಸಿಕ್ಕಿತು. 10 ಕಥೆಗಳನ್ನೂ ಕಣ್ಣಲ್ಲಿ ಕಣ್ಣಿಟ್ಟು ಓದಿದೆ. ಆ ಕಾಲಕ್ಕೆ ನಾಯಿ ಕುರಿತು 'ನಮ್ಮ ಪೇನಿನಾಯಿ' ಎಂಬ ಮನೋಜ್ಞ ಕಥೆ ಅದರಲ್ಲಿದೆ. ಅರ್ಪಣೆಯ ಪುಟವೇ ಬರೆದವರ ಹೆಚ್ಚುಗಾರಿಕೆಯನ್ನು ಎತ್ತಿ ಹಿಡಿಯುತ್ತಿದೆ:
'ಸುಂದರ ಭೂಮಿಯಾದ ಕೊಡಗಿನಲ್ಲಿ ಜನ್ಮವನ್ನೆತ್ತಿ, ಕೊಡಗರ ಹೆಣ್ಣು ಎಂಬ ನನಗಿರುವ ಹೆಮ್ಮೆಗೆ, ಕಾರಣಭೂತರಾದ ನನ್ನ ಜನನೀ ಜನಕರಿಗೆ ನನ್ನ ಚಿಕ್ಕ ಕಾಣಿಕೆ'.
ಸಂಕಲನಕ್ಕೆ ಗೊರೂರು ರಾಮಸ್ವಾಮಯ್ಯಂಗಾರ್ ಅವರ ಮುನ್ನುಡಿ ಇದೆ. ಅದರಲ್ಲಿನ ಕೊನೆಯ ಮಾತುಗಳು ಹೀಗಿವೆ:
'ಶ್ರೀಮತಿ ಪದ್ಮಾವತಿ ಚಿನ್ನಪ್ಪ ರಸ್ತೋಗಿ, ಸುಸಂಸ್ಕೃತರಾದ ಕೊಡಗು ಮಹಿಳೆ. ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗದ ಬಂಗಾಳಿ ಬಾಬುಗಳಂತೆ ಕೊಡಗರು ಆಂಗ್ಲೇಯ ಅನುಕರಣಪ್ರಿಯರು. ಸರ್ಕಾರದಲ್ಲಿ ಕಾನ್‌ಸ್ಟೇಬಲ್ ಆಗುವುದು ದೊಡ್ಡ ಜಮೀನುದಾರನಾಗಿರುವುದಕ್ಕಿಂತ ಹೆಚ್ಚು ಗೌರವವೆಂದು ಕೊಡಗರು ಯೋಚಿಸಿದ ಕಾಲವೂ ಇತ್ತು. ಕೊಡಗರ ಹೆಣ್ಣು ಮಕ್ಕಳು ಸಾಧಾರಣವಾಗಿ ಕಾನ್ವೆಂಟ್ ಸ್ಕೂಲ್‌ಗಳಲ್ಲಿಯೇ ಓದುವುದು. ಶ್ರೀಮತಿ ಪದ್ಮಾವತಿರವರ ತಂದೆ ಶ್ರೀ ಚಿನ್ನಪ್ಪನವರು ಆಗಿನಿಂದಲೇ ಕೊಡಗರ ಈ ಪದ್ಧತಿಗೆ ವಿರೋಧವಾಗಿ ದಂಗೆ ಎದ್ದರು. ಹೈಸ್ಕೂಲ್ ವಿದ್ಯಾಭ್ಯಾಸ ಮುಗಿದ ಕೂಡಲೇ ಉತ್ತರ ಭಾರತದ ಕನ್ಯಾ ಗುರುಕುಲಕ್ಕೆ ಶ್ರೀಪದ್ಮಾರವರನ್ನು ಕಳುಹಿಸಿದರು. ಇವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಹಿಂದಿ ಆನರ್ಸ್‌ನಲ್ಲಿ ಪ್ರಾಂತಕ್ಕೆ ಎರಡನೆಯವರಾಗಿ ತೇರ್ಗಡೆಯಾದರು. 1934ರಲ್ಲಿ ತಾತಾ ವಿದ್ಯಾರ್ಥಿ ವೇತನ ದೊರೆತುದರಿಂದ ಇಂಗ್ಲೆಂಡಿಗೆ ಹೋಗಿ ಸಾಮಾಜಿಕ ವಿಜ್ಞಾನದಲ್ಲಿ ಮೂರು ವರ್ಷ ತರಬೇತು ಹೊಂದಿ ಭಾರತಕ್ಕೆ ಹಿಂದಿರುಗಿ ಗ್ರಾಮಸುಧಾರಣಾ ಕಾರ್ಯದಲ್ಲಿ ತೊಡಗಿದರು. ಸಾವಿರದ ಒಂಬೈನೂರ ಮೂವತ್ತೊಂಬತ್ತನೆಯ ಕಾಂಗ್ರೆಸ್ ಮಂತ್ರಿಮಂಡಲದ ಕಾಲದಲ್ಲಿ, ಶ್ರೀಮತಿ ವಿಜಯಲಕ್ಷ್ಮೀ ಮಂತ್ರಿಗಳಿಗೆ ಆಪ್ತಕಾರ್ಯದರ್ಶಿನಿಯಾಗಿದ್ದರು. ಈಗ ಮದುವೆಯಾಗಿ ಪತಿದೇವನೊಂದಿಗೂ ಮಕ್ಕಳೊಂದಿಗೂ ಸಂಸಾರ ಜೀವನವನ್ನು ನಡೆಸುತ್ತಿದ್ದಾರೆ. ಹೀಗೆ ಇವರ ಕಾರ್ಯಕ್ಷೇತ್ರಗಳು ವಿಶಾಲವಾಗಿದ್ದು, ಇವರ ಅನುಭವಗಳು ಆಳವೂ ತೀವ್ರವೂ ಆದುವಾಗಿದೆ.'

1. ರಸ್ತೋಗಿ ಎಂಬುದು ಮನೆತನದ ಹೆಸರೋ, ಕೈ ಹಿಡಿದ ಪತಿಯ ಹೆಸರೋ?

2.ಕೊಡಗರ ಹೆಣ್ಣು ಮುತ್ತಮ್ಮ ಎಂಬ ಕಥಾ ಸಂಕಲನವಲ್ಲದೆ, ಬೇರೆ ಏನಾದರೂ ಬರೆದಿದ್ದಾರೆಯೋ? ಪುಸ್ತಕ ರೂಪದಲ್ಲಿ ಬಂದಿದೆಯೋ?

3.ಆಕೆಯ ಬಗ್ಗೆ ಹೆಚ್ಚಿನ ಮಾಹಿತಿ, ಭಾವಚಿತ್ರ ಸಿಗಬಹುದೆ ಎಂದು ಹುಡುಕಿದೆ. ಬೆಂಗಳೂರು ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜು, ಮಹಿಳಾ ಅಧ್ಯಯನ ವಿಭಾಗ ಪ್ರಕಟಿಸಿರುವ 'ಕರ್ನಾಟಕದ ಮಹಿಳೆಯರು ಆಧುನಿಕ ಕನ್ನಡ ಲೇಖಕಿಯರು' ಸಂಪುಟ1, 1990 ಹಾಗೂ 1993ರ ಆವೃತ್ತಿಗಳಲ್ಲಿಯೂ ಪದ್ಮಾವತಿ (ಚಿನ್ನಪ್ಪ) ರಸ್ತೋಗಿ ಅವರ ಬಗ್ಗೆ ಮಾಹಿತಿ ಇಲ್ಲ. ಮಾಹಿತಿ ಸಿಗದವರ ಪಟ್ಟಿಯಲ್ಲಿ ಅವರ ಹೆಸರಿದೆ.

4. ಕುವೆಂಪು ಅವರು ಬಿಟ್ಟ ಜಾಗವನ್ನೂ ಭರ್ತಿ ಮಾಡಿದರೆ, ಉತ್ತರ ಭಾರತದ ಕನ್ಯಾಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿದವರು ಎಂದರೆ, ಸ್ವತಃ ಲೇಖಕಿಯಾಗಿರುವುದು, ಗೊರೂರರು ಬರೆದಿರುವಂತೆ ಇವರ ಕಾರ್ಯಕ್ಷೇತ್ರಗಳು ವಿಶಾಲವಾಗಿರುವುದು, ಗ್ರಾಮ ಸುಧಾರಣಾ ಕಾರ್ಯದಲ್ಲಿ ತೊಡಗಿದ್ದರು ಇವೆಲ್ಲವನ್ನು ಗಮನಿಸಿದೆ ಇವರೇ ಅವರು, ಅವರೇ ಇವರು ಎನ್ನುವಂತಾಗುತ್ತದೆ.

5.  ಕುವೆಂಪು ಮೆಚ್ಚಿದ, ಅವರನ್ನು ಮೆಚ್ಚಿದ ಹೆಣ್ಣು ಮಗಳು ಆಕೆ ಎಂಬುದಕ್ಕಿಂತ 1934ರಲ್ಲಿಯೇ ಇಂಗ್ಲೆಂಡಿಗೆ ಹೋಗಿ ಸಾಮಾಜಿಕ ವಿಜ್ಞಾನದಲ್ಲಿ 3 ವರ್ಷ ತರಬೇತು ಪಡೆದು ಬಂದದ್ದು, ವಿಜಯಲಕ್ಷ್ಮೀ (ಪಂಡಿತರಿಗೇ) ಆಪ್ತ ಕಾರ್ಯದರ್ಶಿನಿಯಾಗಿದ್ದರು. ಇವೆಲ್ಲ ನೋಡಿದರೆ ಬಾಗಲೋಡಿ ದೇವರಾಯ ಹಾಗೂ ಎಚ್.ವೈ. ಶಾರದಾ ಪ್ರಸಾದ್ ಅಂತಹವರು ನೆನಪಾಗುತ್ತಾರೆ.

6.  ಇಂತಹ, ರಾಜ್ಯ ಹಾಗೂ ಅಂತಾರಾಷ್ಟ್ರೀಯ ಹೆಣ್ಣು ಮಗಳ ಬಗ್ಗೆ ನಾವು ಇಷ್ಟು ಅಲಕ್ಷ್ಯ ವಹಿಸಿಬಿಟ್ಟೆವೆ? ಆಕೆಯ ಕುಟುಂಬದವರು ಎಲ್ಲಿಯಾದರೂ ಇದ್ದಾರೆಯೇ? ಆಕೆ ಎಷ್ಟು ಕಾಲ ಬದುಕಿದ್ದರು? ಆಕೆಯ ಬದುಕಿನ ಹೆಜ್ಜೆಗಳೇನು?

ಈವರೆಗೆ ಕೊಡಗಿನ ಗೌರಮ್ಮನ ಬಗ್ಗೆ ಸಾಂಸ್ಕೃತಿಕ ಲೋಕಕ್ಕೆ ಗೊತ್ತು. ಆದರೆ ಪದ್ಮಾವತಿ (ಚಿನ್ನಪ್ಪ) ರಸ್ತೋಗಿ ಅಂತಹ ಬಹುಮುಖ ಪ್ರತಿಭಾವಂತೆ ಬಗ್ಗೆ ನಮಗೆ ಏನೂ ತಿಳಿಯದಾಯಿತೆ? ಗಾಂಧೀ ಜೀವನದಲ್ಲಿ ಕಾಣಿಸಿಕೊಂಡ ಸರಳಾದೇವಿ ಚೌಧರಿ, ಜಿ.ಎನ್. ಬಾಲಸುಬ್ರಹ್ಮಣ್ಯ ಅವರ ಜೀವನದಲ್ಲಿ ಕಾಣಿಸಿಕೊಂಡ ಭಾರತರತ್ನ ಎಂ.ಎಸ್. ಸುಬ್ಬಲಕ್ಷ್ಮೀ ಅವರಂತೆ, ಮಹಾಕವಿ ರಾಷ್ಟ್ರಕವಿ ರಸಋಷಿಯ ಬದುಕಿನಲ್ಲಿ ಕಾಣಿಸಿಕೊಂಡ ಆ ತಾಯಿಗೆ ನಮೋನಮಃ.

-ಪುಸ್ತಕಮನೆ ಹರಿಹರ ಪ್ರಿಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com