ಸರ್ಪಾರಾಧನೆ

ಸರ್ಪಾರಾಧನೆ
Updated on

ಪಶ್ಚಿಮ ಘಟ್ಟಗಳ ಸಾಲು ಮತ್ತು ಭೋರ್ಗರೆಯುವ ಸಮುದ್ರದ ನಡುವಿನಲ್ಲಿರುವ ತುಳುನಾಡು, ಆರಾಧನಾ ರಂಗಕಲೆಗಳಾದ ನಾಗಾರಾಧನೆ ಹಾಗೂ ಭೂತಾರಾಧನೆಗೆ ಪ್ರಸಿದ್ಧ. ಇಲ್ಲಿರುವ ಬಾಕುಡರ ನಾಗಾರಾಧನೆಯ ಪದ್ಧತಿಯ ಬಗ್ಗೆ ಯಾರೂ ಇನ್ನೂ ಬೆಳಕು ಚೆಲ್ಲಿಲ್ಲ. ಬಾಕುಡರು ತುಳುನಾಡಿನ ಮೂಲನಿವಾಸಿಗಳು. ತಮ್ಮನ್ನು ದಿರಡೇರ್ ಎಂದು ಕರೆದುಕೊಳ್ಳುತ್ತಾರೆ. ಈ ಮಣ್ಣಿನ ಹಕ್ಕುದಾರರು ನಾವು ಎಂದು ಹೇಳುತ್ತಾರೆ. ದಿರಡೇರ್ ಎಂಬುದು ದ್ರಾವಿಡ ಶಬ್ದದ ಪರಿವರ್ತಿತ ರೂಪವೇ ಇರಬಹುದು. ಬಯಲಿನ ಬದಿಗಳಲ್ಲಿ ಮನೆ ಕಟ್ಟಿ ಬೇಸಾಯ ಮಾಡುವ ಇವರನ್ನು ಬೈಲ ಬಾಕುಡರು ಎಂದು ಕರೆಯುತ್ತಾರೆ.
ಬಾಕುಡರು ನಾಗಾರಾಧಕರು. ನಾಗ ಇವರಿಗೆ ಕುಲ ದೈವ. ಕಾಸರಗೋಡು ಜಿಲ್ಲೆಯ ಇಚಲಂಗೋಡಿನಿಂದ ಆರಂಭಿಸಿ ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯ ವರೆಗೆ ಇವರ ಹದಿನೆಂಟು ಸ್ಥಾನಗಳಿವೆ. ಇಲ್ಲಿ ಅವರು ನಾಗನನ್ನು ಆರಾಧಿಸುತ್ತಾರೆ. ಕೊಡೆಂಚಿರ್‌ನಲ್ಲಿ ನಾಗ ಉದ್ಭವಿಸಿದ್ದಾನೆ, ಹಾಗಾಗಿ ಕೊಡೆಂಚಿರ್ ಮೊದಲ ಸ್ಥಾನ ಎಂದು ಪರಿಗಣಿಸುತ್ತಾರೆ. ಅಡ್ಕಕೊನೆಯ ಸ್ಥಾನ.

ನಾಗಾರಾಧನಾ ಪದ್ಧತಿಗಳು
ತುಳುನಾಡಿನಲ್ಲಿ ಬಹು ವಿಧ ನಾಗಾರಾಧನೆ ಪ್ರಚಲಿತ. ಸರ್ಪಸಂಸ್ಕಾರ, ನಾಗ ಪ್ರತಿಷ್ಠಾಪನೆ, ಬ್ರಹ್ಮ ಸಮಾರಾಧನೆ, ಸುಬ್ರಹ್ಮಣ್ಯ ಆರಾಧನೆ, ಬ್ರಹ್ಮಚಾರಿ ಆರಾಧನೆ ಮೊದಲಾಗಿ ವೈದಿಕ ರೂಪದಿಂದ ಆರಾಧಿಸುತ್ತಾರೆ. ಅಂತೆಯೇ ನಾಗಮಂಡಲ, ಡಕ್ಕೆ ಬಲಿ, ಆಶ್ಲೇಷ ಬಲಿ, ನಾಗದರ್ಶನ, ತಂಬಿಲ, ಹಾಲಿಟ್ಟು ಸೇವೆ ತಾಂತ್ರಿಕ ಮೂಲ ಪದ್ಧತಿಗಳು. ತನು ಎರೆಯುವುದು, ಕಂಚಿಲು ಸೇವೆ, ಕಾಡ್ಯನಾಟ, ಪಾಣರಾಟ, ಬೆರ್ಮರೆ ಸೇವೆ, ಮಡೆಸ್ನಾನ, ಬೆರ್ಮರೆ ಕೋಲ, ಮೂರಿಲು ಆರಾಧನೆ, ಸರ್ಪಕೋಲ, ನಾಗಕೋಲಗಳು ಜನಪದ ಮೂಲ ಆರಾಧನಾ ಪದ್ದತಿಗಳು.
ನೇರವಾಗಿ ನಾಗನನ್ನೇ ಉದ್ದೇಶಿಸಿ ತುಳುನಾಡಿನ ದೈವದ ನೆಲೆಯಲ್ಲಿ ಕೋಲ ಕೊಟ್ಟು ಆರಾಧಿಸುವ ಸಂಪ್ರದಾಯ ಬಾಕುಡರದು. ಇದನ್ನು ಸರ್ಪಕೋಲ, ನಾಗನಲಿಕೆ, ಬೆರ್ಮರ್ ನಲಿಕೆ ಎಂದು ಕರೆಯುತ್ತಾರೆ. ಪ್ರಾಚೀನ ಕಾಲದಲ್ಲಿ ಸರ್ಪವನ್ನು ಮಾತ್ರ ಆರಾಧಿಸುತ್ತಿದ್ದ ಸಮುದಾಯ ಇದು.

ಬಾಕುಡರ ಸರ್ಪಕೋಲ
ಕೋಲದ ದಿನ ಮನೆ ಮಂದಿ ತೆಂಗಿನ ಹಸಿ ಎಲೆಯಲ್ಲಿ ಮಲಗುವ ಸಂಪ್ರದಾಯವಿದೆ. ಅಂದರೆ ಬಾಕುಡರು ಹಸಿ ಮಡಲಿನಲ್ಲಿ ಮಲಗುತ್ತಿದ್ದ ಕಾಲದಿಂದಲೇ ಸರ್ಪಾರಾಧನೆ ಮಾಡುತ್ತಿದ್ದರು ಎಂದು ತಿಳಿಯಬಹುದು.

ಕೋಲದಲ್ಲಿ ಐದು ಶಕ್ತಿಗಳನ್ನು ಆರಾಧಿಸುತ್ತಾರೆ: ಎಲ್ಯಕ್ಕೇರ್ (ಸಣ್ಣ ಉಳ್ಳಾಲ್ತಿ), ನೇಲ್ಯಕ್ಕೇರ್ (ದೊಡ್ಡ ಉಳ್ಳಾಲ್ತಿ), ಎಲ್ಯಣ್ಣೆರ್ (ಬಿಳಿಯ ಸಂಕಪಾಲ), ನೇಲ್ಯಣ್ಣೆರ್(ಕರಿಯ ಸಂಕಪಾಲ), ಕೃಷ್ಣಸರ್ಪ (ಮರಿ) ಸಣ್ಣ ಉಳ್ಳಾಲ್ತಿ ಮತ್ತು ದೊಡ್ಡ ಉಳ್ಳಾಲ್ತಿಯರು ನಾಗ ಯಕ್ಷಿಯರು ಎಂದು ಹಿರಿಯ ಸಂಶೋಧಕ ಡಾ.ವೆಂಕಟರಾಜ ಪುಣಿಂಚಿತ್ತಾಯ ಹೇಳಿದ್ದಾರೆ.
ಬಿಳಿಯ ಸಂಕಪಾಲ ಮತ್ತು ಕರಿಯ ಸಂಕಪಾಲ ನಾಗ ಸ್ವರೂಪಿಗಳಾಗಿದ್ದು ಇವರಿಗೆ 30-40 ಅಡಿ ಎತ್ತರದ ನಾಗಮುಡಿ ಹಿಡಿಯುತ್ತಾರೆ. ತ್ರಿಶಂಕು ಆಕಾರ ಹೊಂದಿರುವ ಇದು ತುಂಬಾ ಭಾರ. ಸಾವಿರ ಅಡಿಕೆ ಹಾಳೆ ಉಪಯೋಗಿಸಿ ತಯಾರಿಸುತ್ತಾರೆ. ಮುಡಿಯಲ್ಲಿ ನೂರಾರು ನಾಗನ ಹೆಡೆ ಚಿತ್ರಿಸುತ್ತಾರೆ. ಪಾತ್ರಿಯ ಆಕಡೆ ಈ ಕಡೆಯಿಂದ ಜನರು ಹಿಡಿದುಕೊಳ್ಳುತ್ತಾರೆ. ಬಿಳಿಯ ಸಂಕಪಾಲನನ್ನೇ ನಾಗರಾಜನೆಂದು ಭೂತದ ನೆಲೆಯಲ್ಲಿ ಆರಾಧಿಸುತ್ತಾರೆ. ನೆಲ್ಯಕ್ಕೇರ್ ನಾಗರಾಜರ ತಾಯಿ, ಎಲ್ಯಕ್ಕೇರ್ ನಾಗರಾಜರ ಸನ್ನಿಧಿಗೆ ಸೇರಿ ದೈವತ್ವ ಪಡೆದ ಪಳ್ಳಿ ತೋಕುರು ಬಾಕುಡೆತಿ. ಈ ನಾಲ್ಕು ಸರ್ಪರೂಪಿ ದೈವಗಳಿಗೆ ಕೋಲ ಕೊಡುತ್ತಾರೆ. ಆಚರಣೆಯಲ್ಲಿ ನಾಲ್ಕು ಮಂದಿ ಕಾರ್ನಪ್ಪಾಡರು (ಮುಖ್ಯಸ್ಥರು) ಪಾತ್ರ ವಹಿಸುತ್ತಾರೆ. ಇವರನ್ನು ನಾಲಜ್ಜಿ ಕಾರ್ನೆರ್ ಎಂದು ಕರೆಯುತ್ತಾರೆ. ನಲಿಕೆ ಜನಾಂಗದವರು ಭೂತ ಕಟ್ಟುತ್ತಾರೆ.

ಕೃಷ್ಣ ಸರ್ಪ ಕೋಲ
ಕೋಲದ ಕೊನೆಯ ಹಂತ ಕೃಷ್ಣ ಸರ್ಪ ಕೋಲ. ಗದ್ದೆಯ ನಡುವೆ ಆಳೆತ್ತರದ ಹಸಿ ಮಾವು ಮತ್ತು ಹಲಸಿನ ಗೆಲ್ಲು ಹುಗಿದು ಕೃತಕ ಮರ ನಿರ್ಮಿಸುತ್ತಾರೆ. ಇದನ್ನು ಕುಕ್ಕಂಬಿಲ ಎಂದು ಕರೆಯುತ್ತಾರೆ. ಕರಿಯ ಸಂಕಪಾಲ ಮೂರು ಹೆಡೆಯ ನಾಗನನ್ನು ದ್ಯೋತಿಸುವ ಅಡಿಕೆ ಹಾಳೆಯ ಮುಖವಾಡವನ್ನು ಬಾಯಿಯಲ್ಲಿ ಕಚ್ಚಿ ಹಿಡಿದು ಹಾವಿನಂತೆ ತೆವಳುತ್ತಾ ಕುಕ್ಕಂಬಿಲಕ್ಕೆ ಬರುತ್ತಾರೆ. ಒಬ್ಬ ಭೂತಮಾಧ್ಯಮರು ಬ್ರಾಹ್ಮಣ ಮಂತ್ರವಾದಿಯ ಪಾತ್ರ ನಿರ್ವಹಿಸುತ್ತಾನೆ. ಕೃಷ್ಣಸರ್ಪ ಪಾತ್ರಧಾರಿಯ ಮೇಲೆ ಅಕ್ಕಿ ಕಾಳು ಎರಚಿ ಸಿಡಿದೇಳುವಂತೆ, ಭುಸುಗುಟ್ಟುವಂತೆ ಮಾಡುತ್ತಾನೆ. ಕೊನೆಯಲ್ಲಿ ಕೃಷ್ಣಸರ್ಪ ಸೋತು ಶರಣಾಗುವ ಅಭಿನಯ ಇರುತ್ತದೆ. ಮಂತ್ರವಾದಿಯೊಬ್ಬ ಸರ್ಪವನ್ನು ಸ್ವಾಧೀನಪಡಿಸಿಕೊಂಡು ಕರೆದೊಯ್ಯುವ ಪರಿಕಲ್ಪನೆ ಅದ್ಭುತವೂ ರಮ್ಯವೂ ಆಗಿದೆ. ಇದನ್ನು ಮರಿಕ್ಕಳಗಾವುನೆ ಎಂದು ಕರೆಯುತ್ತಾರೆ. ಈ ಕೋಲ ಬಹಳ ಆಕರ್ಷಕ, ರೋಮಾಂಚಕಾರಿ.

ಈ ನಡುವೆ ಕುಂಡಂಗೇರ್ ಎಂಬ ಯಕ್ಷಗಾನದ ಕೋಡಂಗಿಗಳಂತೆ ಇರುವ ಎರಡು ಹಾಸ್ಯಪಾತ್ರಗಳ ಸಂಭಾಷಣೆ, ಅಭಿನಯ ಇರುತ್ತದೆ. ಇದೊಂದು ಅಪರೂಪದ ಜಾನಪದ ಅಭಿವ್ಯಕ್ತಿ. ನಲಿಕೆಯ ಹೆಂಗಸರು ಇದನ್ನು ನಿರ್ದೇಶಿಸುತ್ತಾರೆ. ಇವರ ಮುಖ್ಯಸ್ಥೆ ಹಾಡುತ್ತಾಳೆ ಮತ್ತು ಪಾತ್ರಗಳೊಡನೆ ಸಂಭಾಷಣೆ ನಡೆಸುತ್ತಾಳೆ.

ನಾಗ ಪಾಡ್ದನದ ಕಥೆ
ನಾಗ ಕೋಲದ ಸಂದರ್ಭ ಕರಿಯ ಸಂಕಪಾಲ ಮತ್ತು ಬಿಳಿಯ ಸಂಕಪಾಲರ ಹುಟ್ಟು ಮತ್ತು ಬಾಕುಡರಲ್ಲಿ ಸರ್ಪಾರಾಧನೆ ಬೆಳೆದು ಬಂದ ಕಥೆಯನ್ನು ಪಾಡ್ದನದಲ್ಲಿ ಹೇಳುತ್ತಾರೆ. ಕೊಡೆಂಚಿರ್ ಎಂಬ ಪ್ರದೇಶ ಕುಂಬಳೆ - ಮ ಂಜೇಶ್ವರ ಸಮೀಪ ಇದೆ. ಹಿಂದೆ ಬೈಲ ಬಾಕುಡ ಮತ್ತು ಬಾಕುಡೆತಿ ಇಲ್ಲಿ ಗದ್ದೆ ಬದಿ ಹೋಗುತ್ತಿರುವಾಗ ಒಂದು ಹುತ್ತದಿಂದ ಮಗು ಅಳುವ ಸದ್ದನ್ನು ಕೇಳುತ್ತಾರೆ. ನೋಡಿದರೆ ಹೆಣ್ಣು ಮಗು. ಮಗುವನ್ನು ಮನೆಗೆ ಕರೆ ತಂದು ದೈಯಾರ್ ಎಂದು ಕರೆದರು. ಅವಳು ಯುವತಿ ಆದಾಗ ಅಲೌಕಿಕ ಗರ್ಭ ಧರಿಸುತ್ತಾಳೆ. ಎಪ್ಪತ್ತೇಳು ಸಾವಿರ ಹೆಡೆಯ ಕರಿಯ ಸಂಕಪಾಲ, ಬಿಳಿಯ ಸಂಕಪಾಲ ಎಂಬ ಇಬ್ಬರು ನಾಗರಾಜರಿಗೆ ಜನ್ಮ ನೀಡಿ ಮರಣವನ್ನಪ್ಪುತ್ತಾಳೆ. ನಾರ್ಯದ ನೇಲ್ಯ ಸಂಕರಮೆ ಮತ್ತು ಎಲ್ಯ ಸಂಕರಮೆ ಎಂಬವರ ತಂಗಿ ಪಳ್ಳಿ ತೋಕುರು ಬಾಕುಡೆತಿಗೆ ಕರಿಯ ಸಂಕಪಾಲ ಕಾಣಿಸಿಕೊಂಡು, ನನ್ನ ಆರಾಧನೆ ಮಾಡು ಎನ್ನುತ್ತಾನೆ. ಹಾಗೆಯೇ ಆಕೆ ಕೊಡೆಂಚಿರ್‌ನಲ್ಲಿ ಸ್ಥಾನ ಕಟ್ಟಿಸಿ ಕಾಳಿಂಗಸರ್ಪವನ್ನು ಆರಾಧಿಸುತ್ತಾಳೆ. ಅಂದಿನಿಂದ ಬಾಕುಡರಲ್ಲಿ ಸರ್ಪಾರಾಧನೆ ಬೆಳೆದು ಬಂತು. ಪಳ್ಳಿ ತೋಕುರು ಬಾಕುಡೆದಿಯೇ ಮುಂದೊಂದು ದಿನ ಮಾಯಕವನ್ನು ಸೇರಿ, ಎಲ್ಯಕ್ಕೇರ್ ಎಂದು ಆರಾಧಿಸಲ್ಪಡುತ್ತಾಳೆ. ಇದೇ ಸಂದರ್ಭ ಹೇಳುವ ಇನ್ನೊಂದು ಪಾಡ್ದನದಲ್ಲಿ ಬಾಕುಡ ಸಮುದಾಯಕ್ಕೆ ಭೂಮಿಯ ಒಡೆತನ ಸಿಕ್ಕಿದ ಕಥಾನಕವಿದೆ.

-ಡಾ.ಲಕ್ಷ್ಮೀ  ಜಿ  ಪ್ರಸಾದ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com