

ಅರವತ್ತಕ್ಕೆ ಅರಳು ಮರಳು ಎನ್ನುವ ಗಾದೆಯೇ ಇದೆ. ವಯಸ್ಸಾದ ಮೇಲೆ ವ್ಯಕ್ತಿಯ ಜ್ಞಾಪಕ ಶಕ್ತಿ ಕುಂದುತ್ತದೆ ಎನ್ನುವುದರ ಸೂಚಕ ಅದು. ವೃದ್ಧಾಪ್ಯ ಆವರಿಸುತ್ತಿದ್ದಂತೆ ನೆನಪಿನ ಸಾಮರ್ಥ್ಯ ತಾನಾಗಿಯೇ ಕಡಿಮೆಯಾಗುತ್ತದೆ ಎನ್ನುವುದು ನಮ್ಮಲ್ಲಿ ಬೆಳೆದುಬಂದಿರುವ ಭಾವನೆ. ಆದರೆ ಆಹಾರ ವಿಧಾನ ಹೇಳುವುದೇ ಬೇರೆ. 60 ದಾಟಿದ ಬಳಿಕ ಆಹಾರ ಸೇವನೆ ಪ್ರಮಾಣ ನಮಗೆ ಗೊತ್ತಿಲ್ಲದಂತೆಯೇ ಕಡಿಮೆ ಆಗಿರುತ್ತದೆ. ಆಹಾರ ಪದ್ದತಿಯೂ ಬದಲಾತ್ತದೆ. ಹೀಗಾಗಿ ಆಹಾರದ ಮೂಲಕ ಮೆದುಳಿಗೆ ಬೇಕಾದ ಥಿಯಾಮಿನ್, ರೈಬೊಫ್ಲೆವಿನ್, ಕೆರೊಟಿನ್ ಮತ್ತು ಕಬ್ಬಿಣದ ಅಂಶ ಸ್ವಲ್ಪಮಟ್ಟಿಗೆ ಕಡಿಮೆ ಆಗುತ್ತದೆ. ಇವುಗಳಲ್ಲಿ ಯಾವುದೇ ಒಂದು ಕಡಿಮೆ ಆದರೂ ಅಥವಾ ಒಟ್ಟಾಗಿ ಎಲ್ಲವೂ ಕಡಿಮೆ ಆದರೂ ನೆನಪಿನ ಶಕ್ತಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹೀಗಾಗಿ ವೃದ್ಧಾಪ್ಯದಲ್ಲಿ ಆಹಾರದ ಬಗ್ಗೆಯೂ ಗಮನ ಇರಿಸಿಕೊಳ್ಲುವುದು ಅಗತ್ಯ.
ಮೆದುಳಿಗೆ ಅಗತ್ಯವಾದ ಪೋಶಕಾಂಶಗಳು ಬೇಕು ಎಂದ ಮಾತ್ರಕ್ಕೆ ವಿಶೇಷ ಆಹಾರ ಪದ್ಧತಿಯನ್ನೇನೂ ಬೆಳಸಿಕೊಳ್ಳಬೇಕಾಗಿಲ್ಲ. ನಮ್ಮ ದೈನಂದಿನ ಆಹಾರದಲ್ಲಿಯೇ ಅವು ದೊರೆಯುತ್ತವೆ. ನರಗಳ ವಿಟಮಿನ್ ಎಂದೇ ಹೇಳಲಾಗುವ ಥಿಯಾಮಿನ್, ಬೀಜಗಳು, ಗೋಧಿ(ಕಾಳು ಮತ್ತು ಹಿಟ್ಟು), ಬೇಳೆ ಕಾಳುಗಳಲ್ಲಿ ಹೇರಳವಾಗಿ ಸಿಗುತ್ತದೆ. ಹಾಲು, ಬಾದಾಮಿ, ಬೇಳೆ ಕಾಳುಗಳಲ್ಲಿ ರೈಬೊಫ್ಲೆವಿನ್ ಹೇರಳವಾಗಿರುತ್ತದೆ. ನಿಮಗೆ ಗೊತ್ತೇ ಇದೆ, ಹಸಿರು ಸೋಪ್ಪು ಮತ್ತು ಹಸಿರು ತರಾಕಾರಿಗಳು, ದಟ್ಟ ಕಿತ್ತಳೆ ಬಣ್ಣದ ಹಣ್ಣು ಮತ್ತು ತರಕಾರಿಗಳಲ್ಲಿ ಕೆರೊಟಿನ್ ಸಮೃದ್ಧವಾಗಿ ಸಿಗುತ್ತದೆ. ಸೋಯಾಬಿನ್, ಹಸಿರು ಸೊಪ್ಪು, ತರಕಾರಿಗಳಲ್ಲಿ ಕಬ್ಬಿಣದ ಅಂಶ ಅಧಿಕ ಪ್ರಮಾಣದಲ್ಲಿರುತ್ತದೆ. ಹೀಗಾಗಿ ವಯಸ್ಸಾಗುತ್ತಿದ್ದಂತೆ ಬೇಳೆಕಾಳು, ಹಸಿರು ಸೊಪ್ಪು ಆಹಾರಗಳ ಸೇವನೆಗೆ ಗಮನ ಕೊಟ್ಟರೆ ಮೆದುಳಿನ ಆರೋಗ್ಯಕ್ಕೆ ಬೇಕಾದ ಬಹುತೇಕ ಪೌಷ್ಠಿಕಾಂಶಗಳು ಸಿಗುತ್ತವೆ. ಇವುಗಳ ಸೇವನೆ ಮೂಲಕ ಅರವತ್ತು ದಾಟಿದ ನಂತರ ನಿಮ್ಮ ಬಳಿ ಅರಳು ಮರಳು ಸುಳಿಯದಂತೆ ನೋಡಿಕೊಳ್ಳಬಹುದು.
ಇನ್ನು ಜ್ಞಾಪಕ ಶಕ್ತಿ ಮೇಲೆ ಪರಿಣಾಮ ಬೀರುವ ಮತ್ತೊಂದು ಬಹುಮುಖ್ಯವಾದ ಖನಿಜ ಅಂದರೆ ಸತು. ಮೆದುಳಿಗೆ ಪೂರೈಕೆಯಾಗುವ ಆಹಾರದಲ್ಲಿ ಸತುವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾದರೆ ಮೆದುಳಿನ ಕಾರ್ಯ ನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ನೆನಪಿನ ಶಕ್ತಿ ಕುಂದುತ್ತದೆ. ಇದು ಇತ್ತೀಚಿನ ಸಂಶೋಧನೆಗಳಿಂದ ದೃಢಪಟ್ಟಿರುವ ಸಮಾಚಾರ ಮತ್ತು ಸ್ವತಃ ಸಂಶೋಧಕರು ಈ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಮತ್ತು ಪುರುಷರು ಇಬ್ಬರಲ್ಲೂ ಮೆದುಳಿನ ಕಾರ್ಯನಿರ್ವಹಣೆಯಲ್ಲಿ ಸತು ಪ್ರಮುಖ ಪಾತ್ರ ವಹಿಸುತ್ತದೆ. ದಿನಕ್ಕೆ ಕನಿಷ್ಠ 15 ಮಿಲಿಗ್ರಾಂ ಸತು ಶರೀರಕ್ಕೆ ಸೇರಬೇಕು ಎನ್ನುವುದು ತಜ್ಞರ ಶಿಫಾರಸು. ಹಣ್ಣಿನ ತಿರುಳು, ಧಾನ್ಯಗಳು. ವಿಶೇಷತಃ ಏಕದಳ ಧಾನ್ಯಗಳಲ್ಲಿ ಸತುವಿನ ಅಂಶ ಇರುತ್ತದೆ. ಆಹಾರ ಪದ್ಧತಿಯಲ್ಲಿ ವ್ಯತ್ಯಾಸ ಎಂದು ಹೇಳುವುದು ಇದೇ ಕಾರಣಕ್ಕೆ. ನಾವು ಸೇವಿಸುವ ಆಹಾರ ದೇಹದ ಪ್ರತೀ ಅಂಗದ ಕಾರ್ಯನಿರ್ವಹಣೆಯಲ್ಲಿ ಪಾತ್ರ ವಹಿಸುತ್ತದೆ ಅಲ್ಲವೆ?
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Advertisement