
ಯವ್ವನದ ಗೋಳು ಇದೇ ಇರಬೇಕು; ಆತ ನೂರಾರು ತರುಣಿಯರನ್ನು ನೋಡುತ್ತಾನೆ. ಅವರಲ್ಲಿ ಹತ್ತಾರು ಚೆಲುವೆಯರಿಗಾದರೂ ಲೈನ್ ಹೊಡೆಯುತ್ತಾನೆ, ಕಾಳು ಹಾಕುತ್ತಾನೆ. ಅವರಲ್ಲಿ ಒಬ್ಬಳು ಅಪ್ಪಿ ತಪ್ಪಿ ಈತನ ಬಲೆಗೆ ಬಿದ್ದರೆ ಅದೃಷ್ಟ.
ಇಲ್ಲವಾದರೆ ಆತ ವಿಧಿಯನ್ನು ದೂಷಿಸುವುದಿಲ್ಲ, ತನ್ನ ರೂಪ ಯವ್ವನ ಧನ ಗುಣಗಳಿಗೆ ಮನಸೋಲದ ತರುಣಿಯರು ತರುಣಿಯರೇ ಅಲ್ಲ. ಅವರಲ್ಲಿ ಮನುಷ್ಯತ್ವವೇ ಇಲ್ಲ ಎಂಬುದು ಅವನ ಕನವರಿಕೆ.
ಇದು ಹೀಗೇ ಒಬ್ಬ ಹೆಣ್ಣುಪೋತನೊಬ್ಬನ ಹಳಹಳಿಕೆ ಇರಬೇಕು. ಆದರೆ ಅದು ಹೇಗೋ ಸಂಸ್ಕೃತ ಸುಭಾಷಿತಗಳ ಮಧ್ಯೇ ಸೇರಿಕೊಂಡುಬಿಟ್ಟಿದೆ. ನೀವೂ ಓದಿ ಆನಂದಿಸಿ.
ಅಧರಃ ಕರಃ ಕಪೋಲಃ ಸ್ತನಯುಗಲಂ ನಾಭಿಮಂಡಲಂ ರಮಣಮ್
ಸ್ರ್ರೀಜನಸಾಮಾನ್ಯಂ ಹೃದಯಂ ಯದ್ಯಸ್ಯಾ ತತ್ ತಸ್ಯಾಃ
ಕನ್ನಡಿ ಕೆನ್ನೆಗಳು, ಬಾಳೆದಿಂಡು ಕೈಗಳು, ತೊಂಡೆ ತುಟಿಗಳು, ಕುಂಭ ಕುಚಯುಗಳ, ಸುಳಿ ಹೊಕ್ಕುಳು, ಮರಳ ದಿಣ್ಣೆ ಜಘನಗಳು ಎಲ್ಲ ಸ್ತ್ರೀಯರಲ್ಲೂ ಇರುತ್ತವಪ್ಪಾ ಇರುತ್ತವೇ! ಆದರೆ ಹೃದಯವು ಕೆಲವರಲ್ಲಿ ಮಾತ್ರವೇ ಇರುತ್ತದೆ, ಎಲ್ಲರಲ್ಲೂ ಇರುವುದಿಲ್ಲ.
ಅಂದರೆ ಈತನಿಗೆ ಯಾರು ಸ್ನೇಹವನ್ನೂ ಪ್ರೀತಿಯನ್ನೂ ತೋರುತ್ತಾಳೋ ಆಕೆಗೆ ಮಾತ್ರ ಹೃದಯವಿರುತ್ತದೆ- ಈತನ ಬಗ್ಗೆ ಮಿಡಿಯುವ ಹೃದಯವಿರುತ್ತದೆ ಎಂಬ ತಾತ್ಪರ್ಯ. ಆ ದೃಷ್ಟಿಯಿಂದ ನೋಡಿದರೆ ಈ ಸೂಕ್ತಿ ಅಕ್ಷರಶಃ ನಿಜವಾದುದೇ ಆಗಿದೆ.
ಹರಿಹರ
Advertisement