ಸದಾ ಸರ್ಕಾರದ ಅತಿಥಿ ಶರದ್ ಪವಾರ್

ಸದಾ ಸರ್ಕಾರದ ಅತಿಥಿ ಶರದ್ ಪವಾರ್
Updated on

ಹಲವಾರು ವರ್ಷಗಳ ಕಾಲ ಲೋಕಸಭೆಯ ಸದಸ್ಯರಾಗಿ, ಕೇಂದ್ರ ಮಂತ್ರಿಯಾಗಿದ್ದು, ಒಮ್ಮೆ ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡಿದ್ದ ಶರದ್ ಪವಾರ್ ಅವರ ಪಕ್ಷದ ಹೆಸರು ರಾಷ್ಟ್ರೀಯತಾ ಕಾಂಗ್ರೆಸ್ ಎಂದಿದ್ದರೂ ದೆಹಲಿಯಲ್ಲಿ ಅವರನ್ನು ಬಹುಮಂದಿ ರಾಷ್ಟ್ರೀಯ ನಾಯಕರೆಂದು ಒಪ್ಪುವುದಿಲ್ಲ.
ಮೂಲತಃ ಶರದ್‌ಪವಾರ್ ಮರಾಠಾ ಸರದಾರ. ಸಾರ್ವಜನಿಕ ಜೀವನದಲ್ಲಿ, ರಾಜಕೀಯ ರಂಗದಲ್ಲಿ, ಸಿಕ್ಕಿದ ಅವಕಾಶಗಳನ್ನೆಲ್ಲ ಚೆನ್ನಾಗಿ ಬಳಸಿಕೊಂಡು ತಮ್ಮ ಸ್ವಂತ ಉತ್ಕರ್ಷ ಹಾಗೂ ಕುಟುಂಬದವರ ಏಳಿಗೆಯನ್ನು ಸಾಧಿಸಿರುವ ನಾಯಕ ಅಷ್ಟೇ. ಅವರೇ ಹದಿನಾಲ್ಕು ವರ್ಷಗಳಿಂದಲೂ ಅಧ್ಯಕ್ಷರಾಗಿರುವ ಭಾರತ ರಾಷ್ಟ್ರೀಯತಾ ಕಾಂಗ್ರೆಸ್ ಲೋಕಸಭೆಗೆ ಆರು ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿಲ್ಲ.
ಆದರೆ ಹಿಂದೆ ಕಾಂಗ್ರೆಸ್ಸಿನಲ್ಲಿ ಹಲವಾರು ಪ್ರಮುಖ ಸ್ಥಾನಗಳಲ್ಲಿ ಕೆಲಸ ಮಾಡಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ, ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ, ಕೇಂದ್ರ ಮಂತ್ರಿ, ಒಮ್ಮೆ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ- ಹೀಗೆ ಸದಾಕಾಲ ಒಂದಲ್ಲ ಒಂದು ಸ್ಥಾನ ಹಿಡಿದು ಸರ್ಕಾರದ ಅತಿಥಿಯಾಗಿಯೇ ಮುಂದುವರಿದಿದ್ದಾರೆ.
ಎಲ್ಲಿ ಯಾವ ಸ್ಥಾನ ಖಾಲಿಯಾದರೂ, ಅವಕಾಶ ಸಿಕ್ಕರೆ ನಾನೇಕೆ ಆ ಸ್ಥಾನ ತುಂಬಬಾರದು ಎನ್ನುವುದು ಅವರ ಮಂತ್ರ. ಒಂದು ಉದಾಹರಣೆಯನ್ನು ಗಮನಿಸಿ: ಶರದ್ ಪವಾರ್ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಆಗ ಕೇಂದ್ರ ಮಂತ್ರಿಯಾಗಿ ಪ್ರತಿ ವಾರಾಂತ್ಯ ದುಬೈಗೆ ಹೋಗಿ ಬರುತ್ತಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಕಾರ್ಯಾಲಯ ಇರುವುದು ಅಲ್ಲಿ. ಅಂತಹ ಉನ್ನತ ಸ್ಥಾನವನ್ನು ಕಂಡ ವ್ಯಕ್ತಿ, ಈಗ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ನಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ.
ರಾಜೀವ ಗಾಂಧಿ ಹತ್ಯೆಯಾದಾಗ ಲೋಕಸಭೆ ಚುನಾವಣೆಯಲ್ಲಿ ಸುಮಾರು ಅರ್ಧ ಭಾಗದಷ್ಟು ಮತದಾನ ಮುಗಿದಿತ್ತು. ಪ್ರಚಾರಕ್ಕೆ 21 ದಿನಗಳ ವಿರಾಮವಿತ್ತು. ಇನ್ನು ಮತದಾನ ನಡೆಯದೇ ಇದ್ದ ಕಡೆಗಳಲ್ಲಿ, ಆರಿಸಿದ ಅನೇಕ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಶರದ್ ಪವಾರ್‌ರ ಹೆಸರಿನಲ್ಲಿ ಹಣದ ನೆರವನ್ನು ಒದಗಿಸಲಾಗಿತ್ತು.

ಉದ್ದೇಶ ಸ್ಪಷ್ಟ: ಕಾಂಗ್ರೆಸ್ಸಿಗೆ ಬಹುಮತ ಸಿಕ್ಕಿದರೆ, ಪ್ರಧಾನಿ ಪೀಠಕ್ಕೆ ಸ್ಪರ್ಧೆಯಾದರೆ, ತಮ್ಮ ಪರವಾಗಿ ಕೆಲವರು ಇರಬೇಕು ಎನ್ನುವುದೇ. ಆ ಪರಿಸ್ಥಿತಿ ನಿರ್ಮಾಣವಾಗಲಿಲ್ಲ. ಶರದ್ ಪವಾರ್ ನರಸಿಂಹರಾಯರ ಮಂತ್ರಿ ಮಂಡಲವನ್ನು ಸೇರಬೇಕಾಯಿತು.
ಸೀತಾರಾಮ್ ಕೇಸರಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ, ಸದ್ದುಗದ್ದಲವಿಲ್ಲದೇ ನರಸಿಂಹರಾಯರ ಕಾಲೆಳೆಯುತ್ತಿದ್ದ ಸಮಯದಲ್ಲಿ, ಶರದ್ ಪವಾರ್ ಕೇಸರಿಯ ಪದಚ್ಯುತಿಗೆ ಪ್ರಯತ್ನಿಸಿದ್ದೂ ಉಂಟು. ಅದರ ಸುಳಿವನ್ನು ತಿಳಿದ ಅನೇಕರು ತಡಮಾಡದೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಸೋನಿಯಾ ಗಾಂಧಿ ಅವರನ್ನು ಪ್ರತಿಷ್ಠಾಪಿಸಿದರು.
ಸದ್ಯಕ್ಕೆ, ಮೇಲ್ನೋಟಕ್ಕೆ, ಈಗ ಶರದ್ ಪವಾರ್ ಪ್ರಧಾನಿಯಾಗುವ ಕನಸು ಕಾಣದೇ ಇರಬಹುದು. ಅವರಿಗೀಗ 72 ವಯಸ್ಸು. ಆರೋಗ್ಯವೂ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ. ಇತ್ತೀಚೆಗೆ ಅವರ ಆರೋಗ್ಯ ಕುರಿತಂತೆಕೆಲವು ಪ್ರತಿಕೂಲ ವರದಿಗಳು ಪ್ರಕಟವಾದಾಗ, ಅದನ್ನು ನಿರಾಕರಿಸುತ್ತಲೇ ಅವರು ಕೊಡಗಿನ ಮಡಿಕೇರಿಯಲ್ಲಿ ವಾರದ ವಿಶ್ರಾಂತಿ ಪಡೆದರು. ಇನ್ನು ಮುಂದೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಪ್ರಕಟಿಸಿದ್ದಾರೆ. ಆದರೆ ರಾಜಕೀಯದ ನಿವೃತ್ತಿಯ ಮಾತಾಡಿಲ್ಲ. ರಾಜ್ಯಸಭೆಯ ಆಶ್ರಯ ಇದ್ದೇ ಇದೆ.
ಈಗಿನ ಸಂಯುಕ್ತ ಪ್ರಗತಿಪರ ಕೂಟದಲ್ಲಿ ರಾಷ್ಟ್ರೀಯತಾ ಕಾಂಗ್ರೆಸ್ ಒಂದು ಅಂಗಪಕ್ಷವಾಗಿದ್ದರೂ, ಅಲ್ಲಿ ಅದೇನೂ ದೊಡ್ಡ ಶಕ್ತಿಯಲ್ಲ. ಆದರೆ ಆ ಪಕ್ಷಕ್ಕೆ ಎರಡು ಮಂತ್ರಿ ಸ್ಥಾನಗಳು ಸಿಕ್ಕಿವೆ. ಮಹಾರಾಷ್ಟ್ರದಲ್ಲಿ ಆಳುತ್ತಿರುವುದು ರಾಷ್ಟ್ರೀಯತಾ ಕಾಂಗ್ರೆಸ್, ರಾಷ್ಟ್ರೀಯ ಕಾಂಗ್ರೆಸ್‌ಗಳ ಕೂಟ. ಅಲ್ಲಿ ಶರದ್‌ಪವಾರ್ ಪಕ್ಷಕ್ಕೆ ಶಕ್ತಿ ಇದೆ.
 ಕಳೆದ ವಾರ ಮಹಾರಾಷ್ಟ್ರದ ಸಾಂಗ್ಲಿ ಸೀಮೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ಶರದ್ ಪವಾರ್‌ರ ಸೋದರನ ಪುತ್ರ, ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದಲ್ಲಿ ಕೆಲಸ ಮಾಡುತ್ತಿರುವ ರಾಷ್ಟ್ರೀಯತಾ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸಂಗಾತಿ ಪಕ್ಷ ಕಾಂಗ್ರೆಸ್ ನಿರ್ಣಾಯಕವಾಗಿ ಸೋಲಿಸಿದೆ. ಸಾಂಗ್ಲಿ, ಪಶ್ಚಿಮ ಮಹಾರಾಷ್ಟ್ರದಲ್ಲಿ, ಮರಾಠಾ ಸಾಮ್ರಾಜ್ಯ ಪ್ರಬಲ ಕೇಂದ್ರ. ಅಲ್ಲಿ ಸಂಗಾತಿ ಪಕ್ಷಗಳ ಸೆಣಸಾಟದಲ್ಲಿ ಕಾಂಗ್ರೆಸ್ ಗೆದ್ದಿರುವುದು ಶರದ್ ಪವಾರ್- ಅಜಿತ್ ಪವಾರ್ ಅವರಿಗೆ ನುಂಗಲಾರದ ತುತ್ತು. ಸಾಂಗ್ಲಿಯಲ್ಲೇ ಹೀಗಾದರೆ, ಇನ್ನು ರಾಷ್ಟ್ರೀಯತಾ ಕಾಂಗ್ರೆಸ್ಸಿನ ಶಕ್ತಿ ಕಡಿಮೆ ಇರುವ ಕೊಂಕಣ ಸೀಮೆ, ಮರಾಠಾವಾಡ, ವಿದರ್ಭ ಹಾಗೂ ಉತ್ತರ ಮಹಾರಾಷ್ಟ್ರಗಳಲ್ಲಿನ ಪಾಡೇನು ಎನ್ನುವ ಚಿಂತೆ ಪಕ್ಷದ ಪ್ರಮುಖರನ್ನು ಕಾಡುತ್ತಲೇ ಇರಬೇಕು.
ಆ ಕಾರಣದಿಂದಲೇ ಕಳೆದ ವಾರ ಹಲವಾರು ಬಹಿರಂಗ ಸಭೆಗಳಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಕೆಲವು ಕಾಂಗ್ರೆಸ್ ನಾಯಕರನ್ನು ಹೀನಾಮಾನ ತೆಗಳಿರುವುದು. ಈ ವಿಚಾರದಲ್ಲಿ ಶರದ್ ಪವಾರ್ ತುಟಿಕ್‌ಪಿಟಿಕ್ ಎಂದಿಲ್ಲ. ಸದ್ಯಕ್ಕೆ ಅವರ ಗಮನ ಕೇಂದ್ರೀಕೃತವಾಗಿರುವುದು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನದ ಚುನಾವಣೆಯ ಮೇಲೆ.
ದೇಶದ ವಿಖ್ಯಾತ ನಿರಶನ ಸತ್ಯಾಗ್ರಹಿ, ರಾಣಿಗಾಂವಸಿದ್ಧಿಯ ಸಂತ ಅಣ್ಣಾ ಹಜಾರೆ ಮಹಾರಾಷ್ಟ್ರದಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಆರಂಭಿಸಿದಾಗ, ಅದರ ಗುರಿ ಶರದ್ ಪವಾರ್ ಅವರೇ ಆಗಿದ್ದರು. ಅವರ ವಿರುದ್ಧ ಬಗೆ ಬಗೆಯ ಆರೋಪಗಳಿವೆ. ಅವಕ್ಕೆಲ್ಲ ಸಾಕು ಬೇಕಾದಷ್ಟು ಪ್ರಚಾರವೂ ಸಿಕ್ಕಿದೆ. ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರದ ಆರೋಪಗಳ ಜತೆಯಲ್ಲೇ ದಾವೂದ್ ಇಬ್ರಾಹಿಂ ಅವರಂತಹ ಭೂಗತ ದೊರೆಗಳ ಸಂಪರ್ಕವಿರುವ, ನಕಲಿ ಸ್ಟಾಂಪ್ ಪೇಪರ್, ಮುದ್ರಣ- ಹಂಚಿಕೆಯ ಹಗರಣದ ತೇಲಗಿಯ ಸಂಬಂಧವಿರುವ ಆರೋಪಗಳೂ ಇದ್ದವು. ನಿವೇಶನ ಹಂಚಿಕೆ, ಭೂ ಕಬಳಿಕೆಯ ಹಗರಣಗಳ ಆರೋಪಗಳೂ ಬೇಕಾದಷ್ಟಿವೆ. ಆದರೆ ಯಾವ ಹಗರಣದಲ್ಲೂ ಸಾಕ್ಷ್ಯ - ಆಧಾರ ಸಿಕ್ಕಿಲ್ಲ. ನಿಜ ಹೇಳಬೇಕೆಂದರೆ ಯಾವ ಹಗರಣದ ತನಿಖೆಯೂ ಸಮರ್ಪಕವಾಗಿ ನಡೆಯಲೇ ಇಲ್ಲ.

ಶರದ್ ಪವಾರ್ ಈಗಿನ ಬೇಡಿಕೆ: ಅವರನ್ನು ಕೇಂದ್ರ ಸಚಿವ ಸಂಪುಟದಲ್ಲಿ ನಂಬರ್ ಟೂ ಎಂದು ಪರಿಗಣಿಸಬೇಕು. ಅದನ್ನು ಯಾರೂ ಒಪ್ಪುತ್ತಿಲ್ಲ.
ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆಯನ್ನು ನಡೆಸಿರುವ ಕಾಂಗ್ರೆಸ್, ಈ ಬಾರಿ ತನ್ನ ಚುನಾವಣೆ ಪ್ರಣಾಳಿಕೆಯ ಬಹು ಭಾಗವನ್ನು ಆಹಾರ ಭದ್ರತಾ ವ್ಯವಸ್ಥೆಯ ಕಾಯಿದೆಯ ಪೋಷಣೆಗಳಿಂದಲೇ ತುಂಬಿಸಲು ನಿರ್ಧರಿಸಿದೆ.
ಆದರೆ ಈ ಕಾಯಿದೆಯ ಜಾರಿಗೆ ಅಗತ್ಯವಾದ ವ್ಯವಸ್ಥೆ ಮಾಡಬೇಕಾದ ಮಂತ್ರಾಲಯ ಎಂದರೆ ಕೃಷಿ ಮತ್ತು ಆಹಾರ ಮಂತ್ರಾಲಯ. ಅದರ ಅಧಿಪತಿ ಶರದ್ ಪವಾರ್. ಅವರು ಮೊದಲು ಆಹಾರ ಭದ್ರತಾ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದರು. ಈಗ ಸುಗ್ರೀವಾಜ್ಞೆ ಜಾರಿಗೆ ಬಂದ ಅನಂತರ ಸುಮ್ಮನಾಗಿದ್ದಾರೆ.
ಒಮ್ಮೆ ಅವರನ್ನು ಎದುರಾದ ಪ್ರಶ್ನೆ: ನಿಮ್ಮ ರಾಜಕೀಯ ಸಿದ್ಧಾಂತ ಯಾವುದು?
ಉತ್ತರ: ನನ್ನ ಮಾರ್ಗದರ್ಶಿ ಯಶವಂತ ರಾವ್ ಚವಾಣ್ ಮಾನತೀಂದ್ರನಾಥ ರಾಯ್. ಅವರು ಕ್ರಾಂತಿಕಾರಿ ಮಾನವತಾವಾದದಲ್ಲಿ ನಂಬಿಕೆಯನ್ನಿಟ್ಟಿದ್ದರು.
ಇಂತಹ ತಂತ್ರವನ್ನು ಅವರು ಅನೇಕ ಬಾರಿ ಬಳಸಿದ್ದಾರೆ. ಶರದ್ ಪವಾರ್ ಆಗರ್ಭ ಶ್ರೀಮಂತರೇನೂ ಅಲ್ಲ. ಒಂದು ರೈತ ಸಹಕಾರ ಸಂಘದ ನೌಕರ ಗೋವಿಂದರಾವ್ ಅವರ ಹತ್ತು ಮಕ್ಕಳಲ್ಲಿ ಒಬ್ಬರು. ಅಂತಹ ವ್ಯಕ್ತಿ ಭಾರತೀಯ ರಾಜಕಾರಣದ ಶೃಂಗದಲ್ಲೇ ಚೆಲ್ಲಾಟವಾಡಿದ್ದು ಪವಾಡ ಸದೃಶವಾದದ್ದೆ.
 ಮುಂದೇನು: ಅವರಿಗೇ ಗೊತ್ತಿಲ್ಲ.

- ಸತ್ಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com