ಹೊಸ ಪಾತ್ರದಲ್ಲಿ ಜೈಪಾಲ ರೆಡ್ಡಿ

ಹೊಸ ಪಾತ್ರದಲ್ಲಿ ಜೈಪಾಲ ರೆಡ್ಡಿ
Updated on

ಕೇಂದ್ರದ ವಿಜ್ಞಾನ-ತಂತ್ರಜ್ಞಾನ ಸಚಿವ ಸುದಿನಿ ಜೈಪಾಲ ರೆಡ್ಡಿ ಅವರು ಕಳೆದ ಒಂದು ವರ್ಷದಿಂದಲೂ ಬಹಿರಂಗವಾಗಿ ಮಾತನಾಡುವುದನ್ನು ತುಂಬಾ ಕಡಿಮೆ ಮಾಡಿದ್ದಾರೆ. ವಾಸ್ತವದಲ್ಲಿ ಅವರ ಪ್ರವೃತ್ತಿ ವಾಚಾಳಿತನ. ದೀರ್ಘಕಾಲ ಭಿನ್ನ ಭಿನ್ನ ರಾಜಕೀಯ ಪಕ್ಷಗಳ ವಕ್ತಾರರಾಗಿ ಕೆಲಸ ಮಾಡಿ, ಅವರು ರಾಜಕೀಯದಲ್ಲಿ ಹೆಸರು ಪಡೆದಿದ್ದು ತಮ್ಮ ಭಾಷಾ ಪ್ರೌಢಿಮೆ ಹಾಗೂ ತರ್ಕಬದ್ಧ ಮಾತಿನ ಮೂಲಕ.
ಅಂತಹ ವ್ಯಕ್ತಿ, ಈಗ ಇದ್ದಕ್ಕಿದ್ದಂತೆ ಒಂದು ರೀತಿಯಲ್ಲಿ ಮೌನವೃತ್ತಕ್ಕೆ ಶರಣಾಗಿದ್ದೇಕೆ? ಆ ಪ್ರಶ್ನೆಗೆ ಈಗ ಕೇಂದ್ರ ಸರ್ಕಾರದ ಒಳಗಡೆ, ಆಳುವ ಪಕ್ಷದಲ್ಲಿ ಯಾರೂ ಉತ್ತರ ಕೊಡುವುದಿಲ್ಲ, ಭ್ರಷ್ಟಚಾರ ವಿರೋಧಿ ಆಂದೋಲನದ ಕಾರ್ಯಕರ್ತರ ಪ್ರಚಾರ, ಜೈಪಾಲ ರೆಡ್ಡಿ ಹಿಂದೆ ಪೆಟ್ರೋಲಿಯಂ ಸಚಿವರಾಗಿದ್ದಾಗ, ಮುಖೇಶ್ ಅಂಬಾನಿ ಅವರ ವಿರುದ್ಧ ಆ ಮಂತ್ರಾಲಯ ಹಲವಾರು ದೋಷಪೂರಿತ ವ್ಯವಹಾರಗಳನ್ನು ಆರೋಪಿಸಿ, ಸುಮಾರು 7,000 ಕೋಟಿ ರುಪಾಯಿಗಳ ದಂಡವನ್ನು ವಿಧಿಸಿತ್ತು. ಆ ಸಂಬಂಧದಲ್ಲಿ ಅಂಬಾನಿ ಉದ್ಯಮ ಸಮುದಾಯ ತಂದ ಒತ್ತಡಕ್ಕೆ ಕೇಂದ್ರದ ಪ್ರಭುತ್ವ ಮಣಿದು ಜೈಪಾಲ ರೆಡ್ಡಿ ಅವರನ್ನು ಪೆಟ್ರೋಲಿಯಂ ಖಾತೆಯಿಂದ, ವಿಜ್ಞಾನ-ತಂತ್ರಜ್ಞಾನ ಮಂತ್ರಾಲಯಕ್ಕೆ ಸ್ಥಳಾಂತರ ಮಾಡಿತು ಎನ್ನುವ ಆರೋಪವಿದೆ. ಅದನ್ನು ಸ್ವಯಂ ಜೈಪಾಲ ರೆಡ್ಡಿ ಅವರೇ ನಿರಾಕರಿಸಿದ್ದಾರೆ.
 ಆದರೆ, ಆ ಸಮಯದಿಂದಲೇ ಅವರು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರದಲ್ಲೂ ತಮ್ಮ ಅಭಿಪ್ರಾಯಗಳನ್ನು ಪ್ರಕಟಿಸುತ್ತಿಲ್ಲ ಎನ್ನುವುದು ನಿಜ. ಕೇಂದ್ರ ಸರ್ಕಾರದ ಮಂತ್ರಿಗಳಲ್ಲಿ ತಮ್ಮ ಖಾತೆಯನ್ನು ಬಿಟ್ಟು ಇತರ ಖಾತೆಗಳ ಸಂಬಂಧದಲ್ಲಿ ಅವರು ಮೌನಿ.
ಅವರ ಈ ಮೌನವೃತ್ತಕ್ಕೆ ಇನ್ನೂ ಒಂದು ಪ್ರಮುಖವಾದ ಕಾರಣವಿದೆ. ಈಗ ಆಂಧ್ರಪ್ರದೇಶದ ವಿಭಜನೆಯಾಗಿ, ತೆಲಂಗಾಣದ ರಚನೆ ಅನಿವಾರ್ಯ ಎನ್ನುವ ಸ್ಥಿತಿಯಲ್ಲಿ ನೂತನ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಈಗಾಗಲೇ ಜೈಪಾಲ ರೆಡ್ಡಿ ಅವರನ್ನೇ ಆರಿಸಿದೆ ಎನ್ನುವ ವರದಿಗಳೂ ಪ್ರಕಟವಾಗಿವೆ. ರೆಡ್ಡಿ ಅವರಿಗೆ ಇಂತಹ ಸನ್ನಿವೇಶದಲ್ಲಿ ಯಾವುದೇ ರೀತಿಯ ವಿವಾದಗಳಿಗೂ ಸಿಕ್ಕಿ ಬೀಳುವುದು ಇಷ್ಟವಿದ್ದಂತೆ ಇಲ್ಲ. ಮೌನವೃತ್ತಕ್ಕೆ ಅದೂ ಒಂದು ಕಾರಣ.
ಮಾಜಿ ನಿಜಾಮ ಸೀಮೆಗೆ ಸೇರಿದ ನಲಗೊಂಡ, ಮೆಹಬೂಬ್ ನಗರ ಪ್ರದೇಶಗಳಿಂದ ಬಂದ ಜೈಪಾಲ ರೆಡ್ಡಿ ಅವರ ರಾಜಕೀಯ ಜೀವನ ವರ್ಣಮಯವಾದದ್ದು. ನಾಲ್ಕು ಬಾರಿ ವಿಧಾನಸಭೆಗೆ, ಐದು ಬಾರಿ ಲೋಪ ಸಭೆಗೆ ಆಯ್ಕೆಯಾಗಿದ್ದಾರೆ.
ಬಾಲ್ಯದಿಂದಲೇ ಅವರಿಗೆ ಕಾಲುಗಳ ಬಳಕೆಯಲ್ಲಿ ತೊಂದರೆ ಇತ್ತು. ಊರುಗೋಲುಗಳನ್ನು ಹಿಡಿದೇ ಚುರುಕಾಗಿ ಓಡಾಡುತ್ತಾರೆ. ಚಿಂತನೆ-ಮಾತಿನಲ್ಲಂತೂ ಬಲು ಚೂಟಿ. ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಂ.ಎ ಪದವಿಧರ. ವೃತ್ತಿಯಲ್ಲಿ ಕೃಷಿಕ (ಅಂದರೆ ಭೂಮಾಲಿಕ). ಇಂಗ್ಲಿಷ್- ಉರ್ದು-ಹಿಂದಿ-ತೆಲುಗು ಭಾಷೆಗಳಲ್ಲಿ ಪಾಂಡಿತ್ಯವಿದೆ. ಅವರ ಇಂಗ್ಲಿಷ್ ಜ್ಞಾನ ಆಳವಾದದ್ದು-ವಿಸ್ತಾರವಾದದ್ದು.
  ಸಾರ್ವಜನಿಕ ಜೀವನದಲ್ಲಿ ದಶಕಗಳ ಕಾಲ ಆಳುವ ಪಕ್ಷದಲ್ಲಿ ಮಂತ್ರಿಯಾಗಿ, ಅಥವಾ ವಿರೋಧ ಪಕ್ಷದಲ್ಲಿನ ಪ್ರಮುಖ ಸದಸ್ಯರಾಗಿ ಕೆಲಸ ಮಾಡಿ, ಸಾಕಷ್ಟು ಪ್ರಖರ ರೀತಿಯಲ್ಲಿ ಪ್ರಭಾವಲಯವನ್ನು ಸೃಷ್ಟಿಸಿಕೊಂಡಿದ್ದರೂ ಇದುವರೆಗೆ ಅವರ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪವೂ ಬಂದಿಲ್ಲ.
  ತುರ್ತು ಪರಿಸ್ಥಿತಿಯಲ್ಲಿ ಕಾಂಗ್ರೆಸ್ಸನ್ನು ತ್ಯಜಿಸಿದ ಜೈಪಾಲ ರೆಡ್ಡಿ, ಅನಂತರ ಜನತಾ ಪಾರ್ಟಿಯಲ್ಲಿದ್ದವರು. ಜಾರ್ಜ್ ಫರ್ನಾಂಡಿಸ್ ಅವರ ಅತ್ಯಂತ ಆತ್ಮೀಯರಲ್ಲಿ ಒಬ್ಬರು. ಆಂಧ್ರಪ್ರದೇಶದಲ್ಲಿ ಇಂದಿರಾ ಗಾಂಧಿ ಸರ್ಕಾರ ಎನ್.ಟಿ.ಆರ್. ಅವರ ತೆಲುಗುದೇಶಂ ಪಕ್ಷದ ಸರ್ಕಾರವನ್ನು ಪದಚ್ಯುತಿಗೊಳಿಸಿ, ನಾದೆಂಡ್ಲೆ ಭಾಸ್ಕರರಾವು ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದಾಗ, ದೊಡ್ಡ ಹೋರಾಟವನ್ನೇ ನಡೆಸಿದವರು ಜೈಪಾಲ ರೆಡ್ಡಿ. ತೆಲಗುದೇಶಂ ಹಾಗೂ ಸಂಗಾತಿ ಪಕ್ಷಗಳ ಶಾಸಕರನ್ನು ಭದ್ರವಾಗಿ ಬೆಂಗಳೂರು- ಮೈಸೂರುಗಳಲ್ಲಿ ರಕ್ಷಿಸುವ ಹೊಣೆ ಹೊತ್ತು, ರಾಜಕೀಯವಾಗಿ ಪದಚ್ಯುತ ನಾಯಕನ ಪರವಾಗಿ ದೇಶದ ಎಲ್ಲ ಕಡೆ ಅನುಕೂಲಕರವಾದ ವಾತಾವರಣ ಸೃಷ್ಟಿಸಲು ಹೆಣಗಿದವರು, ಅದರಲ್ಲಿ ಯಶಸ್ವಿಯೂ ಆದರು.
 ಕಾಂಗ್ರೆಸ್ ಬಿಟ್ಟ ಇಪ್ಪತ್ತೊಂದು ವರ್ಷಗಳ ಅನಂತರ, ಎರಡು ಸಂಯುಕ್ತ ರಂಗಗಳ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿ, ಆ ಸರ್ಕಾರಗಳ ಪತನದ ಅನಂತರ ಮತ್ತೆ ಕಾಂಗ್ರೆಸ್ಸಿಗೆ ಹಿಂತಿರುಗಿದರು. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, ಒಮ್ಮೆ ಆಗಿನ ಲೋಕಸಭೆಯ ಪ್ರತಿಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಐತಿಹಾಸಿಕ ಸ್ವರೂಪದ ಅವಿಶ್ವಾಸ ಸೂಚಕ ನಿರ್ಣಯವನ್ನು ಮಂಡಿಸಿ, ಅದರ ಬೆಂಬಲವಾಗಿ ಒಂಬತ್ತು ಅಂಶಗಳ ಆರೋಪ ಪಟ್ಟಿಯನ್ನು ಸದನದ ಮುಂದೆ ಇಟ್ಟಿದ್ದರು. ತೆಹಲ್ಕಾ ಡಾಟ್ ಕಾಮ್ ಸರ್ಕಾರದ ಹಲವು ಭ್ರಷ್ಟಾಚಾರದ ಹಗರಣಗಳನ್ನು ಸಚಿತ್ರವಾಗಿ ಅನಾವರಣಗೊಳಿಸಿದ ಕಾಲ ಅದು. ಆ ಕಾಲದಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಜೈಪಾಲ ರೆಡ್ಡಿ ಅವರು ಮಾಡಿದ ಭಾಷಣ, ಒಂಬತ್ತು ಅಂಶಗಳ ಆರೋಪಗಳನ್ನು ಎಳೆಎಳೆಯಾಗಿ ಕೇಳಿದವರ ಮನಸ್ಸಿನಲ್ಲಿ ನೇರವಾಗಿ ನಾಟುವಂತೆ ಬಿಡಿಸಿಟ್ಟ ರೀತಿ-ನೀತಿ, ಲೋಕಸಭೆಯ ಇತಿಹಾಸದಲ್ಲೇ ಒಂದು ಅಪರೂಪದ ದಾಖಲೆ. ಆಗಿನ ಕಾಲದ ಹಿರಿಯ ವಿಶ್ಲೇಷಕರು, ಜೈಪಾಲ ರೆಡ್ಡಿ ಅವರ ಭಾಷಣವನ್ನು 1962ರಲ್ಲಿ ಚೀನೀ ಆಕ್ರಮಣದ ಸಂದರ್ಭದಲ್ಲಿ, ಅಂದಿನ ರಕ್ಷಣಾ ಸಚಿವ ವಿ.ಕೆ. ಕೃಷ್ಣ ಮೆನನ್ ಅವರನ್ನು ಗುರಿಯಾಗಿಟ್ಟುಕೊಂಡು ಆಚಾರ್ಯ ಕೃಪಲಾನಿ ಮಾಡಿದ ಭಾಷಣಕ್ಕೆ ಹೋಲಿಸಿದ್ದೂ ಉಂಟು.
 1998ರಲ್ಲಿ ಜೈಪಾಲರೆಡ್ಡಿ ಅವರಿಗೆ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿಯೂ ಲಭಿಸಿತ್ತು. ಈಗಲೂ ಇಡೀ ದೇಶದಲ್ಲಿ ಹಿರಿಯ ರಾಜಕಾರಣಿಗಳಲ್ಲಿ ಪತ್ರಕರ್ತ ಸ್ನೇಹಿ ಎಂದು ಬಣ್ಣಿಸಬಹುದಾದ ಕೆಲವೇ ವ್ಯಕ್ತಿಗಳಲ್ಲಿ ಜೈಪಾಲ ರೆಡ್ಡಿ ಅವರು ಮೊದಲ ಸಾಲಿನಲ್ಲೇ ನಿಲ್ಲುತ್ತಾರೆ. ದೇಶದ ಎಲ್ಲ ಪ್ರಮುಖ ನಗರಗಳಲ್ಲೂ (ಬೆಂಗಳೂರೂ ಸೇರಿದಂತೆ) ಪತ್ರಕರ್ತರ ಸಮುದಾಯದಲ್ಲಿ ಜೈಪಾಲ ರೆಡ್ಡಿ ಅವರನ್ನು ಮಿತ್ರ ಅಥವಾ ಸಂಗಾತಿ ಎಂದು ಪರಿಗಣಿಸಬಹುದಾದ ವ್ಯಕ್ತಿಗಳಿದ್ದಾರೆ. ಅದಕ್ಕೇ ಜೈಪಾಲ ರೆಡ್ಡಿ ರಾಷ್ಟ್ರೀಯ ಪತ್ರಕರ್ತರ ಮೇಳಗಳಲ್ಲಿ ಹೆಚ್ಚಾಗಿ ಪಾಲುಗೊಳ್ಳುವುದು.
ಮೂಲತಃ ಅವರ ಚಿಂತನೆ ವಾಮಪಂಥೀಯ ಚಿಂತನೆಯೇ. ಆದರೆ, ಈಗ ಬದಲಾದ ಜಾಗತಿಕ ರಾಜಕೀಯ ಸನ್ನಿವೇಶದಲ್ಲಿ, ರಷ್ಯಾ- ಚೀನಾಗಳೂ ಸುಧಾರಣೆಯ ಮಹಾಯಾತ್ರೆಯಲ್ಲಿ ಸೇರಿಕೊಂಡಿರುವಾಗ, ಸಹಜವಾಗಿಯೇ ರೆಡ್ಡಿ ಅವರ ಚಿಂತನೆಯೂ ಬದಲಾಗಿದ್ದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ. ಈಗಿನ ಶಕ್ತಿ ರಾಜಕಾರಣದ ಹಲ್ಲಾಹಲ್ಲಿಯಲ್ಲಿ ಜೈಪಾಲ ರೆಡ್ಡಿ ಅವರಂತಹ ಸಜ್ಜನ- ಸಾತ್ವಿಕ ನಾಯಕರು ಕಾಣಿಸಿಕೊಳ್ಳುವುದು ದುರ್ಲಭ. ಅವರೇನೂ ಸಮುದಾಯದ ನಾಯಕರಲ್ಲ. ಚಳವಳಿಗಳ ಮೂಲಕ ರಾಜಕೀಯ ನಡೆಸಿದವರಲ್ಲ.
 ಉದ್ದೇಶಿತ ತೆಲಂಗಾಣ ರಾಜ್ಯಕ್ಕೆ ಜೈಪಾಲ ರೆಡ್ಡಿ ಅವರಿಗಿಂತ ಉತ್ತಮ, ಅನುಭವಸ್ಥ ಮೊದಲ ಮುಖ್ಯಮಂತ್ರಿ ಸಿಗುವುದು ಕಷ್ಟ. ಅದು ರೆಡ್ಡಿ ಅವರಿಗೂ ಗೊತ್ತು.

- ಸತ್ಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com