
ದಕ್ಷಿಣ ಕೊರಿಯಾವು ಮುಕ್ಕಾಲು ಪಾಲು ಸಮುದ್ರಕ್ಕೂ, ಕಾಲು ಪಾಲು ಉತ್ತರ ಕೊರಿಯಾಕ್ಕೂ ಅಂಟಿಕೊಂಡಿರುವ ರಾಷ್ಟ್ರ. ಅಭಿವೃದ್ಧಿ ಹೊಂದಿರುವ ಜತೆಗೆ ಪ್ರಕೃತಿ ಸೌಂದರ್ಯವನ್ನೂ ಹೊಂದಿದೆ. ಇಲ್ಲಿನ ಬೆಟ್ಟ ಗುಡ್ಡ ನದಿ ಕಾಡುಗಳನ್ನು ಇಂದಿಗೂ ರಕ್ಷಿಸಿಕೊಂಡು ಬಂದಿದ್ದಾರೆ. ಇಲ್ಲಿಗೆ ಬಂದವರು ಬಹು ಎತ್ತರಕ್ಕೆ ನಿಂತಿರುವ ಸಾಲು ಬೆಟ್ಟಗಳು, ಬುಡದಲ್ಲಿ ಹರಿವ ನದಿಗಳು, ಋತುಗಳು ಬದಲಾದಂತೆ ಬಣ್ಣ ಬದಲಿಸುವ ತರುಲತೆಗಳನ್ನು ಕಾಣಬಹುದು. ಮುಂಜಾನೆಯ ಕಿರಣಗಳು ಇಲ್ಲಿ ಹರಡಿಕೊಂಡಾಗ ಅದಮ್ಯವಾದ ಶಾಂತಿ, ಕಾಂತಿಯ ಅನುಭವವಾಗುತ್ತದೆ. ಆದ್ದರಿಂದಲೇ ಇಲ್ಲಿಗೆ 'ಮಾರ್ನಿಂಗ್ ಕಾಮ್' ಎಂಬ ಹೆಸರೂ ಇದೆ.
ಇಲ್ಲಿಯ ಇನ್ನೊಂದು ವಿಶೇಷ, ಇಲ್ಲಿನ ಜನಸಂಖ್ಯೆಯಲ್ಲಿ ಕಾಲು ಭಾಗ ಜನ ಸಾಕುಪ್ರಾಣಿಗಳನ್ನು ಹೊಂದಿದ್ದಾರೆ. ಪ್ರಕೃತಿಯಲ್ಲಿರುವ ಪ್ರಾಣಗಳಿಗೂ ಆಶ್ರಯದಾತರಾಗಿದ್ದಾರೆ. ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಡಾಂಗ್ ಡೆಮೋನ್ ಎಂಬ ಪ್ರಾಚೀನ ಮಾರುಕಟ್ಟೆ ಇದೆ. ಇಲ್ಲಿನ ಒಂದು ಚಿಕ್ಕ ಬೀದಿಯಲ್ಲಿ ನಾನಾ ದೇಶದ ಪ್ರಾಣಿ ಪಕ್ಷಿಗಳನ್ನು ಮಾರುತ್ತಾರೆ. ಪ್ರತಿನಿತ್ಯ ಇವನ್ನು ಸಾವಿರಾರು ಜನ ಕೊಂಡೊಯ್ಯುತ್ತಾರೆ.
ಇಲ್ಲಿ ಮಾರುವ ಪಕ್ಷಿಗಳನ್ನು ಪಂಜರದಲ್ಲಿಟ್ಟಿರುವುದಿಲ್ಲ. ಹೊರಗಡೆಯೇ ಇಟ್ಟು ಪ್ರದರ್ಶಿಸುತ್ತಾರೆ. ಅವು ಹಾರಿಹೋಗುವುದಿಲ್ಲವೇ, ಯಾರಾದರೂ ತರಬೇತಿ ಕೊಟ್ಟು ಅಲ್ಲಿ ಕೂರಿಸಿರಬಹುದೇ ಎಂಬ ಅನುಮಾನ ನಮ್ಮಲ್ಲಿ ಮೂಡುತ್ತದೆ. ಆದರೆ ಇವುಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿದರೆ ಗೊತ್ತಾಗುತ್ತದೆ- ಅವುಗಳ ರೆಕ್ಕೆಗಳನ್ನು ಕತ್ತರಿಸಿದ್ದಾರೆಂಬುದು. ಇದನ್ನೇ 'ವಿಂಗ್ ಟ್ರಿಮ್ಮಿಂಗ್' ಅಥವಾ 'ವಿಂಗ್ ಕ್ಲಿಪ್ಪಿಂಗ್' ಎಂದು ಕರೆಯುತ್ತಾರೆ.
ಈ ವಿಂಗ್ ಟ್ರಿಮ್ಮಿಂಗ್ ಬಗ್ಗೆ ಇಂದು ತಿಳಿದುಕೊಳ್ಳುವುದು ಸುಲಭ. ಅದರ ಬಗ್ಗೆ ಅಂತರ್ಜಾಲದಲ್ಲಿ ಸಾಕಷ್ಟು ಚಿತ್ರ, ವಿವರಗಳು ಸಿಗುತ್ತವೆ. ಅದರಿಂದಾಗಿಯೇ ವಿಂಗ್ ಟ್ರಿಮ್ಮಿಂಗ್ ಬಳಕೆಯೂ ಹೆಚ್ಚಾಗಿದೆ!
ಈ ಪದ್ಧತಿಯನ್ನು ಮೊದಲು ಗಾಯಗೊಂಡ ಪಕ್ಷಿಗಳಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ರಂಗದಲ್ಲಿ ಉಪಯೋಗಿಸುತ್ತಿದ್ದರು. ನಂತರ ಅವುಗಳನ್ನು ಪಂಜರದಿಂದ ಹೊರಗೆ ತರಬೇಕೆನಿಸಿದಾಗ, ಅದು ಹಾರಿ ತಪ್ಪಿಸಿಕೊಳ್ಳದಿರಲೆಂದು ಕತ್ತರಿಸಲು ಶುರುವಾಯಿತು. ಇಂದು ಅಮೆರಿಕ, ಕೊರಿಯಾ, ಯುರೋಪ್‌ಗಳಲ್ಲೆಲ್ಲ ಈ ಪದ್ಧತಿಯನ್ನು ಬಳಸಲಾಗುತ್ತಿದೆಯಂತೆ.
ವಿಂಗ್ ಟ್ರಿಮ್ಮಿಂಗ್ ಅಂದರೆ, ಮುಖ್ಯ ರೆಕ್ಕೆಯ ರಕ್ತನಾಳಗಳಿಲ್ಲದ ಪುಕ್ಕಗಳನ್ನು ಕ್ರಮಬದ್ಧವಾಗಿ ಕತ್ತರಿಸುವುದು. ಇದು ಹಕ್ಕಿಯ ಹಾರಾಡುವ ಶಕ್ತಿಯನ್ನು ಉಡುಗಿಸುತ್ತದೆ. ಕೆಲವೊಮ್ಮೆ ಅಡ್ಡಕಸುಬಿಗಳು ರಕ್ತನಾಳವಿರುವ ಪುಕ್ಕಗಳನ್ನೂ ಕತ್ತರಿಸುವುದುಂಟು. ಇದರಿಂದ ಗಾಯವಾಗುವುದಷ್ಟೇ ಅಲ್ಲದೆ ರಕ್ತ ಸೋರಿ ಸಾಯುವ ಹಕ್ಕಿಗಳೂ ಬಹಳ. ಒಂದೇ ರೆಕ್ಕೆಯನ್ನು ಕತ್ತರಿಸಿ ಬಿಡುವವರುಂಟು. ಆಗ ಇನ್ನೊಂದರ ಮೂಲಕ ಹಾರಲು ಪ್ರಯತ್ನಿಸಿ ಕೆಳಗೆ ಬಿದ್ದು ಗಾಯ ಮಾಡಿಕೊಳ್ಳುವ ದೃಶ್ಯವನ್ನೂ ಇಲ್ಲಿನವರು ಮಜವಾಗಿಯೇ ವೀಕ್ಷಿಸುತ್ತಾರೆ.
ವಿಂಗ್ ಟ್ರಿಮ್ಮಿಂಗ್ ಮಾಡಿದ ಹಕ್ಕಿಗಳು ಸ್ವಲ್ಪ ಸಮಯದಲ್ಲಿ ಮತ್ತೆ ಪುಕ್ಕಗಳನ್ನು ಬೆಳೆಸಿಕೊಳ್ಳುತ್ತವೆ ಎಂದು ಕೆಲವರು ವಾದಿಸುತ್ತಾರೆ. ಆದರೆ ಎಂದೂ ಅದು ಮೊದಲಿನಂತೆ ಹಾರಲು ಸಾಧ್ಯವಾಗುವುದಿಲ್ಲ. ಜೀವನಾದ್ಯಂತ ಅದು ಹಾರುವುದನ್ನು ಮರೆಯುವ ಸಾಧ್ಯತೆಯೇ ಹೆಚ್ಚು. ಜತೆಗೆ ಇತರ ಸಾಕುಪ್ರಾಣಿಗಳಾದ ಬೆಕ್ಕು- ನಾಯಿಗಳಿಗೆ ಸುಲಭದ ತುತ್ತಾಗುತ್ತವೆ. ಹಾರುವುದರಿಂದ ಸಿಗುವ ವ್ಯಾಯಾಮ ಸಿಗದೆ ಹೋಗುವುದರಿಂದ ಹೃದಯ ಕಾಯಿಲೆಗೂ ತುತ್ತಾಗುತ್ತವೆ.
ಮನುಷ್ಯನ ಸಂಖ್ಯೆ ಭೂಮಿಯಲ್ಲಿ ಮಿತಿ ಮೀರಿ ಬೆಳೆಯುತ್ತಿರುವುದರಿಂದ ಹಕ್ಕಿಗಳ ಆವಾಸಸ್ಥಾನವಾದ ಕಾಡುಗಳು ನಾಶವಾಗುತ್ತಿವೆ. ಮೊಬೈಲ್ ತರಂಗ- ಅಣು- ಉಷ್ಣ- ಧೂಳು- ಹೊಗೆ, ವಿಷಕಾರಿ ರಾಸಾಯನಿಕಗಳಿಂದಾಗಿ ಇರುವ ಹಕ್ಕಿ ಜಾತಿಗಳೂ ಕ್ಷೀಣವಾಗುತ್ತಿವೆ. ಈ ವಿನಾಶದಲ್ಲಿ ವಿಂಗ್ ಟ್ರಿಮ್ಮಿಂಗ್‌ನ ಕೊಡುಗೆಯೂ ಇದೆ.
ಪಕ್ಷಿಗಳು ಮಾನವನ ಜೀವನದಲ್ಲಿ ಎಂಥ ಮಹತ್ವದ ಪಾತ್ರ ವಹಿಸಿವೆ ಎಂದು ಆಲೋಚಿಸಬೇಕು. ಪ್ರಾಚೀನ ಕಾಲದಿಂದಲೂ ಮನುಷ್ಯ ಹಕ್ಕಿಗಳಂತೆ ಆಕಾಶದಲ್ಲಿ ಸ್ವತಂತ್ರವಾಗಿ ಹಾರಾಡಲು ಪ್ರಯತ್ನಿಸುತ್ತಿದ್ದಾನೆ. ಆದರೆ ಯಂತ್ರದ ಸಹಾಯವಿಲ್ಲದೆ ಅದು ಅವನಿಗೆ ಇಂದಿಗೂ ಸಾಧ್ಯವಿಲ್ಲ. ವಿಮಾನದಲ್ಲಿ ಹಕ್ಕಿಯ ಹಾರುವಿಕೆಯ ತಂತ್ರವನ್ನೇ ಬಳಸಿದ್ದಾನೆ. ಪ್ರತಿದಿನ ಹಕ್ಕಿಗಳು ತಮ್ಮ ಚಿಲಿಪಿಲಿ, ಬಣ್ಣ, ಹಾರುವಿಕೆ, ಪರಾಗಸ್ಪರ್ಶ, ಆಹಾರ ಸರಪಣಿಯಿಂದ ನಿಸರ್ಗಕ್ಕೆ ಜೀವ ತುಂಬುತ್ತವೆ. ಮನುಷ್ಯನಿಂದ ಸಾಧ್ಯವಾದಷ್ಟು
ದೂರವೇ ಇರುವ ಅವು ನಮಗೆಂದೂ ಕೇಡು ಬಯಸಿದವಲ್ಲ. ಅಂಥ ಹಕ್ಕಿಗಳಿಗೆ ನಾವು ಕೊಟ್ಟದ್ದು ಮಾತ್ರ- ರೆಕ್ಕೆ ಕತ್ತರಿಸುವ ಶಿಕ್ಷೆ, ಸ್ವಾತಂತ್ರ್ಯ
ಹರಣ!
- ಚಿತ್ರ, ಲೇಖನ: ಮಹೇಶ್ವರಪ್ಪ ಎನ್.
shanumahesh@gmail.com
Advertisement