
If the olive trees knew the hands that planted them, their oil would become tears.
- Mahmoud Darwish,
Palestinian poet
ಆಲಿವ್ ಮರಗಳು ತಲೆತಲಾಂತರಗಳಿಂದಲೂ ಬುದ್ಧಿವಂತಿಕೆ ಮತ್ತು ಶಾಂತಿಯ ಪ್ರತೀಕ. ಹೋಮರನ ಕಾಲದಲ್ಲಿ ಗ್ರೀಕ್ ದೇವತಾ ಗಣದ ಪ್ರಮುಖ ದೇವತೆಯಾದ ಝೀಯಸ್ ಜನರಿಗೆ ಉಪಯುಕ್ತ ಕೊಡುಗೆ ನೀಡುವ ದೇವತೆಗೆ ಅಥೆನ್ಸ್ ನಗರವನ್ನು ನೀಡುವುದಾಗಿ ಹೇಳುತ್ತಾನೆ. ಪೊಸಿಡಾನ್ ಜನರಿಗೆ ಕುದುರೆಯನ್ನು ನೀಡಿದರೆ, ಅಥೆನಾ ತನ್ನ ಭರ್ಚಿಯನ್ನು ನೆಲದ ಮೇಲೆ ಚುಚ್ಚಿ ಆಲಿವ್ ಮರವನ್ನು ಚಿಮ್ಮಿಸಿದಳು. ಜನರು ಅದನ್ನು ಕಂಡು ಪರಮಾನಂದಗೊಂಡರು. ಝೀಯಸ್ ನಗರವನ್ನು ಅಥೆನಾಳಿಗೆ ನೀಡಿ ಅವಳ ಹೆಸರಿನ ಮೇಲೆ ಅದನ್ನು ಅಥೆನ್ಸ್ ಎಂದು ಕರೆದ. ಅಂದಿನಿಂದ ಆಲಿವ್ ಮರ ಗ್ರೀಸ್ ದೇವತೆ ಅಥೆನಾಳ ಪವಿತ್ರ ಮರ ಎಂದು ಪ್ರತೀತಿ.
ಆಲಿವ್ ಮೆಡಿಟರೇನಿಯನ್ ಆಹಾರದ ಪ್ರಮುಖ ಅಂಗ. ಆಲಿವ್ ಮತ್ತು ಅದರ ಎಣ್ಣೆ ಪ್ಯಾಲೆಸ್ಟೃನ್‌ನ ರಾಷ್ಟ್ರೀಯ ಹೆಮ್ಮೆ, ಆ ದೇಶದ ಆರ್ಥಿಕತೆಯ ಬೆನ್ನೆಲುಬು. ಬಂಜರು ಭೂಮಿಯಲ್ಲೂ ಹಣ್ಣು ನೀಡುವ, ಹಸಿರಿನಿಂದ ಕಂಗೊಳಿಸುವ ಮರಗಳಲ್ಲಿ ಒಂದಾದ ಆಲಿವ್ ಪ್ಯಾಲೆಸ್ತೀನೀಯರ ಜೀವನಾಡಿ, ದೇಶದ ಸಂಸ್ಕೃತಿಯ ಕೇಂದ್ರ ಬಿಂದು. ಜೀವನೋಪಾಯಕ್ಕೆ ಅನಿವಾರ್ಯ ಅಂಶ ಮಾತ್ರವಲ್ಲ, ಶಾಂತಿ ಮತ್ತು ಸಮೃದ್ಧಿಯ ಸಂಕೇತವೂ ಹೌದು.
ಪುರಾತನ ಆಲಿವ್ ಮರಗಳು ವೆಸ್ಟ್ ಬ್ಯಾಂಕ್‌ನಲ್ಲಿ ಎಲ್ಲೆಲ್ಲೂ ಇವೆ. ಬೆಟ್ಟ ಗುಡ್ಡಗಳ ಮೇಲೆ, ರಸ್ತೆಗಳ ಇಕ್ಕೆಲ, ಕಣ್ಣು ಹಾಯಿಸಿದಲ್ಲೆಲ್ಲ... ಕಣಿವೆಗಳಲ್ಲಿ ಸಾಲು ಸಾಲಾಗಿ ಕಾಣುವ ಹಸಿರಿನಿಂದ ಕಂಗೊಳಿಸುತ್ತವೆ. ಹಣ್ಣು ಕೊಯ್ಯಲು ಅವುಗಳ ಸುತ್ತ ನೆರೆದ ಕುಟುಂಬಗಳನ್ನು ನೋಡುವುದು ಕಣ್ಣಿಗೆ ಹಬ್ಬವೇ ಸರಿ. 500 ವರ್ಷಕ್ಕೂ ಹಳೆಯ ಮರಗಳು ಇಲ್ಲಿ ಜೀವಂತವಾಗಿವೆ. ಆದರೆ ವಿಶ್ವದ ಅತ್ಯಂತ ಹಳೆಯ- ಐದು ಸಾವಿರ ವರ್ಷ- ಆಲಿವ್ ಮರ ಗ್ರೀಸ್‌ನ ಕ್ರೀಟ್ ದ್ವೀಪದಲ್ಲಿ ಇನ್ನೂ ಹಣ್ಣು ಬಿಡುತ್ತಿದೆ.
ದ್ರವ ರೂಪದ ಚಿನ್ನ ನೀಡುವ ಈ ಮರಗಳು ಸುಮಾರು ಒಂದು ಲಕ್ಷ ಕುಟುಂಬಗಳಿಗೆ ಜೀವನಾಧಾರ. ಹಲವು ಪೀಳಿಗೆಗಳಿಂದ ಆಲಿವ್ ಕಟಾವು ಮಾಡುವ ಕುಟುಂಬಗಳಿಗೆ ಈ ಮರಗಳೇ ಮಕ್ಕಳು, ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ನೀಡಲು ಉಳಿದಿರುವ ಅಮೂಲ್ಯ ಆಸ್ತಿ.
ಸನೌರ್ ಹಳ್ಳಿಯ ರೈತ ಹಜ್ ಬಷೀರ್ ಹಬಯ್ಬೆ ಚಿಕ್ಕವನಿರುವಾಗ ತನ್ನ ತಂದೆಯಿಂದ ಆಲಿವ್ ನೆಡುವುದು ಮಕ್ಕಳನ್ನು ಸಾಕಿದಂತೆ ಎನ್ನುವ ಪಾಠ ಕಲಿತ. ನೆಟ್ಟ ಮೇಲೆ ಅವುಗಳನ್ನು ಮಕ್ಕಳ ಹಾಗೆ ನೋಡಿಕೊಳ್ಳಬೇಕು, ಹದಿನಾರು ವರ್ಷವರೆಗೆ ನೀರು ನೀಡಿ ಆರೈಕೆ ಮಾಡಬೇಕು. ಆಮೇಲೆ ತಮ್ಮನ್ನು ತಾವೇ ಅವು ನೋಡಿಕೊಳ್ಳುತ್ತವೆ, ನಮ್ಮನ್ನೂ, ನಮ್ಮ ಮಕ್ಕಳನ್ನೂ ಜೀವನ ಪೂರ್ತಿ ನೋಡಿಕೊಳ್ಳುತ್ತವೆ ಎಂದು ಹೇಳುತ್ತಾನೆ ಆತ. ಬಷೀರ್‌ನ ಹದಿನಾರು ಮಂದಿಯ ಕುಟುಂಬವನ್ನು ಈಗ ಸಾಕುತ್ತಿರುವುದು ಅವನು ಬಾಲ್ಯದಲ್ಲಿ ನೆಟ್ಟ ಆಲಿವ್‌ಗಳೇ.
ಆಲಿವ್ ಸುಗ್ಗಿ ಕಾಲ
ವಾರ್ಷಿಕ ಆಲಿವ್ ಸುಗ್ಗಿ ಬಂತೆಂದರೆ, ಪ್ರತಿ ಕುಟುಂಬದಲ್ಲೂ ಸಂತಸ, ಹಬ್ಬದ ವಾತಾವರಣ. ಹೊರಗೆ ದುಡಿಯುತ್ತಿರುವ ಹಿರಿಯರು ಕೆಲಸಕ್ಕೆ ರಜೆ ಹಾಕಿ ಆಲಿವ್ ಕಟಾವು ಮಾಡಲು ಕುಟುಂಬಕ್ಕೆ ನೆರವಾಗಲು ಹಳ್ಳಿಗಳಿಗೆ ಬರುತ್ತಾರೆ. ಪ್ರತಿಯೊಬ್ಬ ಪ್ಯಾಲೆಸ್ಟೃನ್ ಪ್ರಜೆಯಲ್ಲೂ ಒಬ್ಬ ರೈತ ಅಡಗಿದ್ದಾನೆನ್ನುವುದು ಅರಿವಾಗುವುದು ಆಗಲೇ.
ಅಲ್ ರಮಿ ಹಳ್ಳಿಯ ರೈತ ಅಬು ಫಾದಿ ಅಮಿನ್‌ನ ಎಲ್ಲಾ ಹದಿಮೂರು ಮಕ್ಕಳೂ ಆಲಿವ್ ಸುಗ್ಗಿಗಾಗಿ ಕಾತುರದಿಂದ ಕಾಯುತ್ತಾರೆ. ಸುಗ್ಗಿ ಬಂತೆಂದರೆ ನಮಗೆಲ್ಲಾ ಸಂತಸ. ಎಲ್ಲಾ ಮರಗಳ ಕೆಳಗೆ ಒಟ್ಟಿಗೆ ಸೇರುತ್ತೇವೆ, ಮುಂಜಾವಿನಿಂದ ಸಂಜೆಯವರೆಗೆ ಆಲಿವ್‌ಗಳನ್ನು ಕೀಳುತ್ತಾ, ಒಟ್ಟಿಗೆ ಸಮಯ ಕಳೆಯುತ್ತೇವೆ, ಹಾಡುತ್ತೇವೆ, ಒಟ್ಟಿಗೆ ಮರಗಳ ಕೆಳಗೆ ಕುಳಿತು ಊಟ ಮಾಡುತ್ತೇವೆ. ಈ ಮರಗಳು ನಮಗೆ ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿಯೂ ಪವಿತ್ರ . ನನ್ನ ತಾತ ಆಲಿವ್ ಎಣ್ಣೆ ಮತ್ತು ಹಣ್ಣು ತಿಂದು ನೂರು ವರ್ಷ ಬದುಕಿದ್ದ. ಹೀಗಿರುವಾಗ ಈ ಮರಗಳನ್ನು ನಾನು ಹೇಗೆ ಮರೆಯಲಿ ಎಂದು ಅಬು ಫಾದಿ ಹೆಮ್ಮೆಯಿಂದ ಹೇಳುತ್ತಾನೆ.
ಸಾವಿರಾರು ಕುಟುಂಬಗಳು ಬೆಳ್ಳಂಬೆಳಗ್ಗೆ ತಮ್ಮ ಆಲಿವ್‌ಗಳ ಸುತ್ತ ನೆರೆದು ಹಣ್ಣುಗಳನ್ನು ಬಿಡಿಸಲು ತೊಡಗುತ್ತವೆ. ಇತ್ತೀಚಿಗೆ ಕೆಲವು ಸಂಸ್ಥೆಗಳು ಆಲಿವ್ ಕಟಾವು ಮಾಡಲು ಸ್ವಯಂಸೇವಕರನ್ನು ಅಕ್ಟೋಬರ್ ಕೊನೆಯ ವಾರದಿಂದ ನವೆಂಬರ್ ಮೊದಲ ವಾರದವರೆಗೆ (7-15 ದಿನ) ಹಳ್ಳಿಗಳಿಗೆ ಕಳುಹಿಸಿಕೊಡುತ್ತಿವೆ. ಮರದ ಸುತ್ತ ಟಾರ್ಪಲಿನ್ ಹಾಸಿ, ಏಣಿ ಹಾಕಿ ಮರದ ಮೇಲೆ ನಿಂತು ಆಲಿವ್ ಬಿಡಿಸಲು ತೊಡಗುತ್ತಾರೆ. ಇಲ್ಲವೇ ಪ್ಲಾಸ್ಟಿಕ್ ಬಾಚಣಿಕೆಯಂಥ ಸಾಧನ ಬಳಸಿ ಹಣ್ಣುಗಳನ್ನು ಮೆಲ್ಲಗೆ ಕೆಳಗೆ ಬೀಳಿಸುತ್ತಾರೆ. ಸಂಜೆಯಾಗುತ್ತಿದ್ದಂತೆ ಆಲಿವ್‌ಗಳನ್ನು ಚೀಲಕ್ಕೆ ತುಂಬಿ ಟ್ರಾಕ್ಟರ್ ಇಲ್ಲವೇ ಕತ್ತೆಗಳ ಮೇಲೆ ಹೊರಿಸಿ ಹಳ್ಳಿಗೆ ಕಳುಹಿಸುತ್ತಾರೆ. ಆ ರಾತ್ರಿ, ಇಡೀ ಹಳ್ಳಿ ಆಲಿವ್ ಒತ್ತು ಯಂತ್ರದ ಬಳಿ ಜಮಾಯಿಸುತ್ತದೆ.
ವರ್ಷಕ್ಕಾಗುವಷ್ಟು ಎಣ್ಣೆ
ಆಲಿವ್ ಕೊಯ್ದ ಬಳಿಕ ಆಕ್ಸಿಡೀಕರಣವಾಗಿ ಅವುಗಳಲ್ಲಿನ ಆಮ್ಲತೆ ಏರಿಕೆಯಾಗುವ ಮುನ್ನ ಎಣ್ಣೆ ತೆಗೆಯಬೇಕು. ಆದ್ದರಿಂದಲೇ ಕೊಯ್ದ ರಾತ್ರಿಯೇ ಹಣ್ಣುಗಳು ಎಣ್ಣೆ ತೆಗೆಯುವ ಗಾಣದತ್ತ ಪಯಣ ಬೆಳೆಸುತ್ತವೆ. ಪ್ರತಿ ಹಳ್ಳಿಯಲ್ಲೂ ಗಾಣಗಳಿವೆ. ಪ್ರತಿ ಕುಟುಂಬ ತಮ್ಮ ಕೊಯ್ಲನ್ನು ಇಲ್ಲಿಗೆ ತಂದು, ವರ್ಷಕ್ಕಾಗುವಷ್ಟು ಎಣ್ಣೆ ತೆಗೆದುಕೊಂಡು ಹೋಗುತ್ತವೆ.
ಇತ್ತೀಚಿಗೆ ಹಲವು ಆಧುನಿಕ ಯಂತ್ರಗಳು ಬಂದಿದ್ದು, ರೈತರ ಸಂಘಗಳ ಮೂಲಕ ಒಟ್ಟಿಗೆ ಎಣ್ಣೆ ತೆಗೆದು, ರಫ್ತು ಸಹ ಮಾಡಲಾಗುತ್ತಿದೆ. ಆ ಸಮಯದಲ್ಲಿ ಅಲ್ಲಿಗೆ ಹೊರಗಿನಿಂದ ಬರುವ ನೂರಾರು ಸ್ವಯಂಸೇವಕರು ಮತ್ತು ಪ್ರವಾಸಿಗರು ತಾಜಾ ಆಲಿವ್ ಎಣ್ಣೆ ಕೊಂಡುಕೊಳ್ಳುತ್ತಾರೆ. ಇಲ್ಲಿನ ಎಣ್ಣೆ ಅತ್ಯುತ್ತಮ ಎನ್ನುವ ಕಾರಣಕ್ಕೆ ಜನ ಆಲಿವ್ ತೈಲ ಖರೀದಿಸಲಿ, ಬದಲಾಗಿ ಇದು ಪ್ಯಾಲೆಸ್ತೀನಿಯನ್ ಎಣ್ಣೆ ಎಂದಲ್ಲ, ಎನ್ನುವ ಆಸಿರ ಅಲ್ ಶಮಾಲಿಯಾ ಹಳ್ಳಿಯ ರೈತ ಅಬು ಆಸಿಮ್‌ನ ಕಣ್ಣುಗಳಲ್ಲಿ ಏನೋ ಒಂದು ಥರದ ಆತ್ಮವಿಶ್ವಾಸ. ಆ ಎಣ್ಣೆ ಮಾರಾಟದ ಮೇಲೆಯೇ ಅವರ ಜೀವನ ನಿಂತಿದೆ.
ಆಲಿವ್ ಬಾಟಲಿಗಳ ಮೇಲೆ 'ಫಸ್ಟ್ ಕೋಲ್ಡ್ ಪ್ರೆಸ್' ಏನೆಂದು ಅರ್ಥವಾಗದಿದ್ದರೆ ಅದಕ್ಕೆ ಉತ್ತರವಿಲ್ಲಿದೆ: ಯಾವುದೇ ಬಿಸಿಯಿಲ್ಲದೆ, ಬಿಸಿ ನೀರನ್ನು ಬಳಸದೆ ಆಲಿವ್ ಹಣ್ಣುಗಳಿಂದ ಎಣ್ಣೆ ತೆಗೆದರೆ ಅದರ ಮೌಲ್ಯ ಮತ್ತು ಗುಣಮಟ್ಟ ಹೆಚ್ಚುತ್ತದೆ. ಆಧುನಿಕ ಯಂತ್ರಗಳು ಗಾಳಿಯಲ್ಲಿರುವ ಆಮ್ಲಜನಕ ಆಲಿವ್ ಎಣ್ಣೆಯನ್ನು ಆಕ್ಸಿಡೀಕರಣ ಮಾಡದಂತೆ ನೈಟ್ರೋಜನ್ ಬಳಸಿ ಎಣ್ಣೆ ತೆಗೆಯುತ್ತವೆ. ಇನ್ನು 'ಎಕ್ಸ್‌ಟ್ರಾ ವರ್ಜಿನ್ ಆಲಿವ್ ಆಯಿಲ್' ಎಂದರೆ ಹಣ ದುಪ್ಪಟ್ಟು. ಅದದಕ್ಕೆ ರೈತರು ಹಣ್ಣುಗಳನ್ನು ಕೈಯಿಂದಲೇ ಬಿಡಿಸಬೇಕು, ಯಾವುದೇ ಸಾಧನ ಬಳಸಿ ಕೆಳಗೆ ಬೀಳಿಸುವ ಹಾಗಿಲ್ಲ. ಹಣ್ಣು ಕಿತ್ತ ಬಳಿಕ ಕೂಡಲೇ ಅವುಗಳನ್ನು, ದಾರಿಯಲ್ಲಿ ಎಲ್ಲೂ ಜಜ್ಜಿ ಹೋಗದಂತೆ ಎಚ್ಚರ ವಹಿಸಿ ಗಾಣಕ್ಕೆ ತಲುಪಿಸಿ, ಎಣ್ಣೆ ತೆಗೆಯಬೇಕು.
ಆಲಿವ್ ಎಣ್ಣೆ ಸ್ಯಾಚುರೇಟೆಡ್ ಕೊಬ್ಬಿನ ಹಾಗೆ ಕೊಲೆಸ್ಟರಾಲ್ ಹೆಚ್ಚಿಸುವುದಿಲ್ಲ, ಬದಲಾಗಿ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲ. ಹಾಗೆಂದ ಮಾತ್ರಕ್ಕೆ ನೆಲ್ಲಿಕಾಯಿಯನ್ನೋ, ಮಾವಿನ ಕಾಯಿಯನ್ನೋ ಮರದಿಂದ ಕಿತ್ತು ತಿನ್ನುವ ಹಾಗೆ ಆಲಿವ್ ಹಣ್ಣುಗಳನ್ನು ನೇರವಾಗಿ ತಿನ್ನಲಾಗುವುದಿಲ್ಲ. ಅವುಗಳು ತಿನ್ನಲು ಯೋಗ್ಯವಾಗಬೇಕಾದರೆ ಉಪ್ಪು ನೀರಿನಲ್ಲಿ ಸಂಸ್ಕರಿಸಬೇಕು. ಸಂಸ್ಕರಿಸಿದ ಬಳಿಕವೂ ಆಲಿವ್‌ಗಳಲ್ಲಿ 20 ಶೇ. ತೈಲವಿರುತ್ತದೆ.
ನೀರಿಲ್ಲದೆ ಸಾಯುವ ಮರಗಳು
ಆಲಿವ್ ಮರಗಳು ಸಾಮಾನ್ಯವಾಗಿ ಎರಡು ವರ್ಷಗಳ ಚಕ್ರವನ್ನು ಹೊಂದಿರುತ್ತವೆ. ಒಂದು ವರ್ಷ ಅಕಾಲ (ಷಲಟೌನ್) ಋತುವಾದರೆ, ನಂತರದ ವರ್ಷ ಉತ್ತಮ (ಮಾಸ್) ಋತು. ಆಲಿವ್‌ಗಳ ಗಾತ್ರ ಮಣ್ಣಿನಲ್ಲಿ ದೊರೆಯುವ ತೇವಾಂಶವನ್ನು ಅವಲಂಬಿಸಿರುತ್ತದೆ. ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲಿಗಳಿಂದ ದೊರೆಯುವ ನೀರು ಬಹಳ ಅಲ್ಪವಾಗಿರುವುದರಿಂದ ಹಣ್ಣುಗಳ ಗಾತ್ರ ಇತರ ದೇಶಗಳಿಗಿಂತ ಕಡಿಮೆ, ನೀರಿಲ್ಲದೆ ಹಲವು ಮರಗಳು ಸಾಯುತ್ತವೆ ಎಂದು ರೈತರು ವಿಷಾದಿಸುತ್ತಾರೆ.
ರಮಲ್ಲಾ ಬಳಿಯಿರುವ ಬಿಲ್ಲಿನ್ ಗ್ರಾಮದ ಆಲಿವ್ ಕಟಾವಿಗೆ ಎರಡು ಬಾರಿ ತೆರಳಿದ್ದ ಅಮೆರಿಕದ ಪತ್ರಕರ್ತೆ ರಿನೇ ಲೂಯಿಸ್ ಪ್ರಕಾರ, ಇಸ್ರೇಲಿ ವಸಾಹತುಗಾರರು ಪ್ಯಾಲೇಸ್ತೀನೀಯರಿಗೆ ಕೊಡುವ ತೊಂದರೆಯನ್ನು ಕಣ್ಣಾರೆ ನೋಡಿಯೇ ಅರಿಯಬೇಕು. ಪ್ರತಿ ವರ್ಷ ಆಲಿವ್ ಸುಗ್ಗಿ ಬಂತೆಂದರೆ ಅವರು ತೊಂದರೆ ಕೊಡಲು ಪ್ರಾರಂಭಿಸುತ್ತಾರೆ. ಹಣ್ಣು ಮಾರಿ ಲಾಭ ಪಡುವುದು ಅವರ ಉದ್ದೇಶವಲ್ಲ, ಬದಲಾಗಿ ಪ್ಯಾಲೆಸ್ತೀನೀಯರ ಜೀವನವನ್ನು ನರಕ ಮಾಡುವುದು.
ಆಲಿವ್ ಮರಗಳು ಪ್ಯಾಲೆಸ್ತೀನ್ ಮತ್ತು ಅಲ್ಲಿನ ಜನರನ್ನು ಹದ್ದುಬಸ್ತಿನಲ್ಲಿಡಲು ಇಸ್ರೇಲಿನ ಕೈಯಲ್ಲಿರುವ ಅಸ್ತ್ರವಾಗಿ ಮಾರ್ಪಟ್ಟಿವೆ. ವಿಶ್ವಸಂಸ್ಥೆ ವರದಿಯ ಪ್ರಕಾರ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆಯಿರುವ ಗೋಡೆಯಿಂದಾಗಿ ಹಲವು ಸಮಸ್ಯೆಗಳು ಪ್ಯಾಲೆಸ್ತೀನ್ ರೈತರ ಮೇಲೆರಗಿವೆ. ಗೋಡೆಯ 66 ದ್ವಾರಗಳಲ್ಲಿ 44 ಮಾತ್ರ ಸುಗ್ಗಿಯ ಕಾಲದಲ್ಲಿ ರೈತರಿಗೆ ತೆರೆಯಲ್ಪಡುತ್ತವೆ. ವರ್ಷದ ಉಳಿದ ಕಾಲಗಳಲ್ಲಿ ಇವು ಮುಚ್ಚಿದ್ದು ರೈತರು ತಮ್ಮ ಮರಗಳಿಗೆ ನೀರು ಪೂರೈಸುವುದು, ಆರೈಕೆ ಮಾಡುವುದು ಕನಸಿನ ಮಾತು. ತಮ್ಮ ಆಲಿವ್ ತೋಟಗಳಿಗೆ ಹೋಗಿ ಬರಲು ರೈತರು ಕೋರುವ ಭೇಟಿ ಪರವಾನಗಿಗಳಲ್ಲಿ ಶೇ.40ರಷ್ಟು ತಿರಸ್ಕೃತವಾಗುತ್ತವೆ. ಸಮಸ್ಯೆ ಹೀಗಿರುವಾಗ, ವಿದೇಶೀಯರನ್ನು ಸ್ವಯಂಸೇವಕರಾಗಿ ಅಲ್ಲಿಗೆ ಕರೆಸಿಕೊಳ್ಳುವ ಉದ್ದೇಶವಾದರೂ ಏನು? ಬಿಲ್ಲಿನ್ ಗ್ರಾಮದ ರೈತ ಜಬೇರ್ ಅಬು ರಹಮ ಹೇಳುವಂತೆ, ವಿದೇಶಿಯರು ಸ್ವಯಂಸೇವಕರಾಗಿ ಬಂದರೆ, ಇಸ್ರೇಲಿ ಸೈನಿಕರು ದಾಳಿ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ವಿದೇಶಿಯರಿದ್ದಾಗ ದಾಳಿ ಮಾಡಿದರೆ ಆ ದೇಶಗಳ ಜೊತೆಗಿನ ಬಾಂಧವ್ಯ ಕೆಡಬಹುದೆಂಬ ಭಯವೂ ಇದಕ್ಕೆ ಕಾರಣ.
ಜರುವಾ ಹಬ್ಬ
ಪ್ರತಿ ನವೆಂಬರ್ 1ರಂದು ಜರುವಾ ಹಬ್ಬದೊಡನೆ ಆಲಿವ್ ಕಟಾವು ಮುಗಿಯುತ್ತದೆ. ಪ್ಯಾಲೆಸ್ತೀನ್ ಫೇರ್ ಟ್ರೇಡ್ ಅಸೋಸಿಯೇಷನ್ ಈ ಹಬ್ಬವನ್ನು ಆಯೋಜಿಸುತ್ತದೆ. ದೊಡ್ಡ ಒಲೆಯಲ್ಲಿ ಆಲಿವ್ ಕೊಂಬೆಗಳನ್ನು ಹಾಕಿ ಆ ಬೆಂಕಿಯಲ್ಲಿ ಮಹಿಳೆಯರು ಸಾಂಪ್ರದಾಯಿಕ ತಬೌನ್ ರೊಟ್ಟಿ ತಯಾರಿಸುತ್ತಾರೆ. ಅತಿಥಿಗಳಿಗೆ ಗಾಣದಿಂದ ತೆಗೆದ ತಾಜಾ ಎಣ್ಣೆಯಲ್ಲಿ ಅದ್ದಿ ತಿನ್ನಲು ಬಿಸಿ ಬಿಸಿ ತಬೌನ್ ರೊಟ್ಟಿಗಳನ್ನು ನೀಡುತ್ತಾರೆ. ಮಧ್ಯಾಹ್ನಕ್ಕೆ ಮುಸಖಾನ್ ಎನ್ನುವ ಊಟ ಕೊಡುತ್ತಾರೆ. ಅದರ ಮೇಲೆ ಈರುಳ್ಳಿ, ಸುಮ್ಯಾಕ್ ಮತ್ತು ಬಾದಾಮಿಯಲ್ಲಿ ಹುರಿದ ಮಸಾಲೆಯುಕ್ತ ಕೋಳಿಮಾಂಸ ಹಾಕಿ ನೀಡುತ್ತಾರೆ. ವಿಸ್ಕೋನ್ಸಿನ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದ ನಾಸೆರ್ ಅಬು ಫರ್ಹಾನ ಕನಸಿನ ಕೂಸಾದ ಪಿಎಫ್‌ಟಿಎ ಅಡಿಯಲ್ಲಿ 43 ರೃತರ ಸಹಕಾರ ಸಂಘಗಳಿವೆ.
- ಚೈತ್ರಾ ಅರ್ಜುನಪುರಿ
arjunpurichaitra@gmail.com
Advertisement