
ದೇಶದ ರಾಜಕೀಯವನ್ನು ಅತ್ಯುನ್ನತ ಸ್ಥಾನದಿಂದಲೇ ಪ್ರವೇಶಿಸಿದವರು ಅನೇಕರಿದ್ದಾರೆ. ವಿಖ್ಯಾತ ಅರ್ಥಶಾಸ್ತ್ರ ತಜ್ಞ ಡಾ॥ವಿ.ಕೆ.ಆರ್.ವಿ. ರಾವ್, ಅಂತಾರಾಷ್ಟ್ರೀಯ ಖ್ಯಾತಿಯ ಶಶಿ ತರೂರು, ಸಾಮಾಜಿಕ ಆಡಳಿತ ತಜ್ಞ ಜೈರಾಮ್ ರಮೇಶ್- ಇಂತಹವರ ಪಟ್ಟಿ ದೊಡ್ಡದು.
ತುಂಬಾ ಹಿಂದೆ ಕಮ್ಯುನಿಸ್ಟರು ಡಾ॥ ಮೇಘನಾಥ ಸಹ, ಅಂಧ ಶ್ರೇಷ್ಠ ವಕೀಲ ಡಾ॥ ಸಾಧನ ಚಂದ್ರ ಗುಪ್ತ ಅವರನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳಿಸಿದ್ದರು.
ಈಗ ಆ ಪರಂಪರೆಯಲ್ಲಿ ಕಾಂಗ್ರೆಸ್ ಮತ್ತೆ ಪ್ರವೇಶಿಸಿದೆ. ತಂತ್ರಜ್ಞ, ಉದ್ಯಮಿ, ಆಡಳಿತಗಾರ, ಚಿಂತನಶೀಲ- ಇಂತಹ ಹಲವಾರು ಗುಣವಾಚಕಗಳನ್ನು ಏಕಕಾಲದಲ್ಲಿ ಬಳಸುವ ಅರ್ಹತೆ ಇರುವ 'ಕರ್ನಾಟಕದ ಸಿರಸಿಯ ಮೂಲದ' ನಂದನ್ ನಿಲೇಕಣಿ ಅವರನ್ನು ಲೋಕಸಭೆಗೆ ತರುವ ಚಿಂತನೆ ಕಾಂಗ್ರೆಸ್ಸಿನಲ್ಲಿ ಪ್ರಕಟವಾಗಿದೆ.
ದಕ್ಷಿಣ ಬೆಂಗಳೂರು ಕ್ಷೇತ್ರದ (ಈಗಿನ ಪ್ರತಿನಿಧಿ ಅನಂತಕುಮಾರ್) ಕಾಂಗ್ರೆಸ್ ಸ್ಪರ್ಧಿಯಾಗಿ, ಲೋಕಸಭೆ ಚುನಾವಣೆಗೆ ಇನ್ಫೋಸಿಸ್ ಹೀರೋ ನಂದನ್ ನೀಲೆಕಣಿ ಅವರ ಆಯ್ಕೆಯ, ವದಂತಿ ಆಧರಿತ ವರದಿ ಪ್ರಕಟವಾದ ಕೂಡಲೇ, ತತ್‌ಕ್ಷಣದಲ್ಲೇ ಪ್ರಕಟವಾದ ಪ್ರತಿಕ್ರಿಯೆ ನಿಜಕ್ಕೂ ಮಿಂಚಿನಂತಹದ್ದೇ. ಅದರಲ್ಲಿ ಬಹುತೇಕವಾಗಿ 'ಆಯ್ಕೆಯ' (ಅದಿನ್ನೂ ಆಗಿಲ್ಲ) ಸಮರ್ಥನೆಯೇ ಹೆಚ್ಚು.
ಒಬ್ಬ ವ್ಯಕ್ತಿ ಲೋಕಸಭೆಯ ಅಭ್ಯರ್ಥಿಯಾಗಬಹುದೆನ್ನುವ ವಿಚಾರಕ್ಕೆ ಇಷ್ಟೊಂದು ಅಬ್ಬರದ ಪ್ರಚಾರವೇಕೆ? ಅದರಲ್ಲೇನು ಹೆಚ್ಚುಗಾರಿಕೆ? ಇದಕ್ಕೆಲ್ಲ ಕಾರಣ ನಂದನ ನಿಲೇಕಣಿ ಅವರ ವಿಶಿಷ್ಟ ವ್ಯಕ್ತಿತ್ವ. ಸದ್ದು-ಗದ್ದಲವಿಲ್ಲದೇ, ಅನಗತ್ಯವಾಗಿ ಪ್ರಚಾರಕ್ಕಾಗಿ ಹಾತೊರೆಯದೇ, ಸಾಮಾನ್ಯರಲ್ಲಿ ಸಾಮಾನ್ಯ ಎನ್ನುವಂತಹ ಈ ವ್ಯಕ್ತಿಯ ಸಾಧನೆ ಅಸಾಧಾರಣವಾದದ್ದು.
ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರತಿಭಾವಂತ ವಿದ್ಯಾರ್ಥಿ. ಪುಣೆಯ ಪತ್ನಿ ಕಂಪ್ಯೂಟರ್ಸ್ ಸಿಸ್ಟಮ್ಸ್ ಸೇರಿದಾಗ ಇನ್ಫೋಸಿಸ್‌ನ ಎನ್.ಆರ್. ನಾರಾಯಣಮೂರ್ತಿ ಅವರ ಸಂಪರ್ಕ. ನಾರಾಯಣ ಮೂರ್ತಿ ಪ್ರಥಮ ಭೇಟಿಯಲ್ಲೇ ನಂದನ್‌ರ ಕಾರ್ಯಶೀಲತೆ, ನಾಯಕತ್ವ ಹಾಗೂ ಪಾರದರ್ಶಕ ಪ್ರಾಮಾಣಿಕತೆಯ ಗುಣಗಳನ್ನು ಗುರ್ತಿಸಿದ್ದರು.
ನಾರಾಯಣ ಮೂರ್ತಿ, ನಂದನ್ ಹಾಗೂ ಇತರ ಐವರು ಬೆಂಗಳೂರಿಗೆ ಬಂದು ಇನ್ಫೋಸಿಸ್ ಸ್ಥಾಪಿಸಿದಾಗ ಅದು ಎಲ್ಲ ಅರ್ಥದಲ್ಲೂ ಸಂಯುಕ್ತ ಪ್ರಯತ್ನದ ಪ್ರಯೋಗವೇ. ಆರಂಭದ ದಿನಗಳಲ್ಲಿ ನಂದನ್ ಇನ್ಫೋಸಿಸ್ ಷೇರುಗಳನ್ನು ನೂರು ರುಪಾಯಿ ಬೆಲೆಗೆ ಮುಂಬೈನಲ್ಲಿ ಮಾರಲು ಹೋಗಿದ್ದೂ ಉಂಟು.
ಇನ್ಫೋಸಿಸ್ ಬೆಳೆಯಿತು. ಹೆಮ್ಮರವಾಯಿತು. ಅದರ ಜತೆಯಲ್ಲೇ ನಂದನ್ ಬೆಳೆದರು. ಸಂಸ್ಥೆಯ ಶೃಂಗದ ಅಧಿಕಾರವನ್ನು ಪಡೆದರು. ಜವಾಬ್ದಾರಿಯನ್ನೂ ನಿರ್ವಹಿಸಿದರು. ಇನ್ನು ಅಲ್ಲಿ ತಾವೇ ನಿಂತು ಮಾಡಬೇಕಾದ ಕೆಲಸವೇನೂ ಇಲ್ಲ ಎನ್ನುವ ಭಾವನೆ ಮೂಡಿದ ಸಮಯದಲ್ಲಿ, ಪ್ರಧಾನಿ ಮನಮೋಹನ ಸಿಂಗ್ ಅವರೇ ದೇಶದಲ್ಲಿನ ಎಲ್ಲ ಪ್ರಜೆಗಳಿಗೂ ಗುರುತಿನ ಚೀಟಿಯನ್ನು ನೀಡುವ 'ಆಧಾರ್' ಯೋಜನೆಗೆ ಪ್ರಮುಖರಾಗಲು ಕರೆದಾಗ, ದೆಹಲಿಗೆ ಹೋದರು. ಸಚಿವ ಸಂಪುಟದ ಸದಸ್ಯರ ಸ್ಥಾನ-ಮಾನ. ಆದರೆ ಆ ಯೋಜನೆಯಲ್ಲಿ ನಿಜವಾಗಲೂ ವಿಶ್ವಾಸವನ್ನಿಟ್ಟಿದ್ದವರು ಕೆಲವೇ ಮಂದಿ. ಕಾಂಗ್ರೆಸ್ಸಿನಲ್ಲಿ ಅನೇಕ ಮಂತ್ರಿಗಳೂ ಇದು ಮುಗಿಯುವ ಕೆಲಸವಲ್ಲ ಎಂದು ಭಾವಿಸಿದ್ದರು. ಲೇವಡಿ ಮಾಡಿದ್ದರು. ಒಂದು ಹಂತದಲ್ಲಿ ನಂದನ್ ಆ ಕೆಲಸವನ್ನು ಕೈ ಬಿಡಲು ನಿರ್ಧರಿಸಿದ್ದೂ ಆಗಿತ್ತಂತೆ. ಹಾಗಾಗಲಿಲ್ಲ. ಹಟ ಹಿಡಿದು ಕೆಲಸ ಮಾಡಿದರು. ಎಲ್ಲವೂ ಸರಿಯಾಗಿದೆ ಎನಿಸಿದಾಗ ಬೇರೆ ಏನಾದರೂ ಮಾಡಬಹುದೆಂದು ಯೋಚಿಸುತ್ತಿದ್ದಾಗಲೇ ಅವರ ಪಾಲಿಗೆ ಬಂದಿದ್ದು ಬಡವರು- ಕಡು ಬಡವರಿಗೆ ಸರ್ಕಾರ ಒದಗಿಸುವ ಎಲ್ಲ ಬಗೆಯ ಸಬ್ಸಿಡಿಯನ್ನು ನೇರವಾಗಿ ವ್ಯಕ್ತಿಗಳಿಗೇ ತಲುಪುವಂತೆ ಮಾಡುವ ಯೋಜನೆ. ಈ ಚಿಂತನೆ ಮೂಡಿದ್ದು ಸೋನಿಯಾ ಗಾಂಧಿ ಅವರ ತಲೆಯಲ್ಲಿ. ನಂದನ್ ಅದಕ್ಕೊಂದು ದಾರಿ ಕಾಣಿಸಿದರು.
ಆ ಸಮಯದಲ್ಲೇ ಮತ್ತೆ ಇನ್ಫೋಸಿಸ್‌ಗೆ ಬನ್ನಿ ಎಂದು ನಾರಾಯಣಮೂರ್ತಿಯವರ ಕರೆ. ಬೇಡ ಎಂದರು ನಂದನ್. ಈ ಹಂತದಲ್ಲಿ ರಾಹುಲ್ ಗಾಂಧಿ ಅವರಿಂದ ಬಂದ ಸಲಹೆ; ಲೋಕಸಭೆಗೇಕೆ ಸ್ಪರ್ಧಿಸಬಾರದು? ಅದಕ್ಕೆ 'ಆಯಿತು' ಎಂದು ನಂದನ್ ಇನ್ನೂ ಹೇಳಿಲ್ಲ. ಕಾಂಗ್ರೆಸ್ಸೂ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಿಲ್ಲ. ಈಗ ನಂದನ್ ನಿಲೇಕಣಿಗೆ 58 ವರ್ಷ. ಬೆಂಗಳೂರು ಅವರಿಗೆ ಚಿರಪರಿಚಿತ ಊರು. ಅವರ ತಂದೆ ಮೋಹನ ರಾವ್ ನಿಲೇಕಣಿ ಬೆಂಗಳೂರಿನ ಮೈಸೂರು ಮಿನರ್ವ ಮಿಲ್ಸ್‌ನ ಜನರಲ್ ಮ್ಯಾನೇಜರ್ ಆಗಿದ್ದವರು. ನಂದನ ಮನೋಹರ ನಿಲೇಕಣಿ ಓದಿದ್ದೂ ಈ ಊರಿನ ಬಿಷಪ್ ಕಾಟನ್ಸ್ ಶಾಲೆಯಲ್ಲಿ. ಧಾರವಾಡದ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಪಿ.ಯು. ಶಿಕ್ಷಣ. ಅನಂತರ ಮುಂಬೈ ಐಐಟಿಗೆ.
ಯೌವ್ವನದ ಬಹುಭಾಗವನ್ನು ನಂದನ್ ಬೆಂಗಳೂರಿನಲ್ಲೇ ಕಳೆದಿದ್ದಾರೆ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ, ಬೆಂಗಳೂರಿನ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸಲು ನಾಗರಿಕ ಸಮಾಜದ್ದೇ ಆದ ಬೆಂಗಳೂರು ಅಜೆಂಡಾ ಟಾಸ್ಕ್‌ಪೋರ್ಸ್‌ನಂತಹ ವಿನೂತನ ಕಲ್ಪನೆಯನ್ನು ಜಾರಿಗೆ ತರಲು ಪ್ರಯತ್ನಿಸಿ ದೊಡ್ಡ ಹೆಸರನ್ನೇನೋ ಗಳಿಸಿದ್ದರು. ಆ ಸಂಸ್ಥೆಗೂ ಭಾರಿ ಪ್ರಚಾರ ಸಿಕ್ಕಿತ್ತು. ಆದರೆ ಸ್ವಲ್ಪ ಕಾಲದ ಅನಂತರ ಸಂಸ್ಥೆ ತನ್ನ ಅಸ್ತಿತ್ವದ ಉದ್ದೇಶವನ್ನೇ ಮರೆತಿತು. ಅನೇಕ ತಿಂಗಳ ಕಾಲ ಸಂಸ್ಥೆಯ ಕಾರ್ಯಾಲಯದ ಬಾಡಿಗೆ, ಸಿಬ್ಬಂದಿಯ ವೇತನವನ್ನು ಸ್ವಂತ ಹಣದಿಂದಲೇ ಪೂರೈಸಿ, ಕೊನೆಗೆ ಸಂಸ್ಥೆಯ ಬಾಗಿಲಿಗೆ ಒಲ್ಲದ ಮನಸ್ಸಿನಿಂದ ಬೀಗ ಹಾಕಿಸಿದರು, ನಂದನ್. ಅದಾದ ನಂತರವೂ ನಿಲೇಕಣಿ ಇನ್ಫೋಸಿಸ್‌ನಲ್ಲೇ ಇದ್ದರು. ಅವರು ದೆಹಲಿಗೆ ಹೊರಟಿದ್ದು 2009ರಲ್ಲಿ.
ಈಗಲೂ ನಂದನ್ ನಿಲೇಕಣಿ ಕೇಂದ್ರ ಸರ್ಕಾರದ ತಂತ್ರಜ್ಞಾನ ಸಮಿತಿಯ ಅಧ್ಯಕ್ಷ. ಒಂದು ಬೃಹತ್ ಉದ್ಯಮಿಯಾಗಿ ಯಶಸ್ಸು ಗಳಿಸಿದ್ದಾಗಿದೆ. ಸರ್ಕಾರದ ಒಂದು ಅತಿ ನೂತನ ಪ್ರಯೋಗದ ಪ್ರಮುಖರಾಗಿ, ನೌಕರ- ಅಧಿಕಾರಿಶಾಹಿಗಳ ಜತೆ ಹೆಣಗಿ, ದೊಡ್ಡ ರೀತಿಯಲ್ಲೇ ಹೊಗಳಿಸಿಕೊಂಡಿದ್ದಾರೆ. ಪದ್ಮಭೂಷಣ ಪಡೆದಿದ್ದಾರೆ. ಈಗ ನಂದನ್‌ಗೆ ಹೊಸ ಪರ್ವದ ಹೊಸ್ತಿಲಲ್ಲಿ ನಿಲ್ಲುವ ಯೋಗ ಬಂದಿರುವಂತಿದೆ. ಮುಂದೆ ಕಾಲಿಟ್ಟರೆ, ಭಾರತೀಯರ ಸಾರ್ವಭೌಮಾಧಿಕಾರ ಪ್ರತಿನಿಧಿಸುವ ಲೋಕಸಭೆ ಪ್ರವೇಶದ ಅವಕಾಶ ಕಂಡು ಬಂದಿದೆ.
ರೋಹಿಣಿ, ನಂದನ್ ಮೆಚ್ಚಿ ಮದುವೆಯಾದ ಪತ್ನಿ. ಪತಿ, ಖ್ಯಾತಿಯ ಶಿಖರವನ್ನು ಮುಟ್ಟುವುದಕ್ಕೆ ತುಂಬಾ ಹಿಂದೆಯೇ ಬೆಂಗಳೂರಿನಲ್ಲಿ ಹೆಸರು ಮಾಡಿದ್ದ ಪತ್ರಕರ್ತೆ. ಸಂಡೇ ಇಂಗ್ಲಿಷ್ ಸಾಪ್ತಾಹಿಕದ ಪ್ರತಿಭಾವಂತ ವರದಿಗಾರ್ತಿ. ಅನಂತರ ದಿನಗಳಲ್ಲಿ ಲೇಖಕಿ. ಸಮಾಜಮುಖಿಯಾಗಿ ಕೆಲಸ ಮಾಡುವ ಹವ್ಯಾಸ. ದಂಪತಿಗೆ ಇಬ್ಬರು ಮಕ್ಕಳು. ಇಬ್ಬರೂ ಅಮೆರಿಕದಲ್ಲಿ ಕಲಿಯುತ್ತಿದ್ದಾರೆ.
ಈಗ ನಂದನ್ ನಿಲೇಕಣಿ ಅವರ ಸ್ವಂತ ಗಳಿಕೆಯ ಸಂಪತ್ತು ಅಪಾರ. ಅದೆಷ್ಟೋ ಸಾವಿರ ಕೋಟಿ ರುಪಾಯಿಗಳ ಮೌಲ್ಯದ ಶ್ರೀಮಂತ. ಆದರೆ ಅವರು ಅದರಿಂದಲೇ ಪ್ರಖ್ಯಾತರಾಗಲಿಲ್ಲ. ಅವರ ವ್ಯಕ್ತಿತ್ವ- ಸಾಧನೆಯೇ ಹೆಗ್ಗಳಿಕೆ. ದೇಶದ ಪ್ರತಿಷ್ಠಿತ ಸಂಸ್ಥೆಗಳ ಜತೆ ಅವರಿಗೆ ನಿಕಟವಾದ ಸಂಪರ್ಕವಿದೆ. ಇಂಡಿಯನ್ ಕೌನ್ಸಿಲ್ ಆಫ್ ರಿಸರ್ಚ್ ಆನ್ ನ್ಯಾಷನಲ್ ಕೌನ್ಸಿಲ್ ಎಕನಾಮಿಕ್ ರಿಲೇಷನ್ಸ್, ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್‌ಗಳಂತಹ ಸಂಸ್ಥೆಗಳಲ್ಲೂ ಅವರ ಹೆಸರಿದೆ. ನಂದನ್ ಗಳಿಸಿರುವ ಪ್ರಶಸ್ತಿಗಳು ಅಸಂಖ್ಯಾತ.
ಒಂದರ್ಥದಲ್ಲಿ ಅವರು 58 ವರ್ಷಗಳಲ್ಲಿ ಸಾಧಿಸಬಹುದಾದ್ದನ್ನೆಲ್ಲ ಸಾಧಿಸಿರುವ ಸಾಧಕ. ಮುಂದೇನು? ಮುಂದಿನ ವರ್ಷದ ಭವಿಷ್ಯ ನೋಡಬೇಕು.
- ಸತ್ಯ
Advertisement