ಜಲಪಾಠ!

ಮತ್ತೆ ಬೇಸಿಗೆ ಬಂದಿದೆ. ನೆತ್ತಿ ಸುಡುವ ಬಿಸಿಲಿನ ನಡುವೆ ಹನಿ ನೀರಿಗಾಗಿ ಹಾಹಾಕಾರ ಶುರುವಾಗಿದೆ.
ಜಲಪಾಠ!
Updated on: 

ಮತ್ತೆ ಬೇಸಿಗೆ ಬಂದಿದೆ. ನೆತ್ತಿ ಸುಡುವ ಬಿಸಿಲಿನ ನಡುವೆ ಹನಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಉರಿಯುವ ಗೋಳ ಸೂರ್ಯನ ಅಟ್ಟಹಾಸಕ್ಕೆ ಜಲಮೂಲವೆಲ್ಲ ಬತ್ತುವುದು, ಜನ ಹನಿ ನೀರಿಗಾಗಿ ಪರಿತಪಿಸುವುದು ಬೇಸಿಗೆಯ ಮಾಮೂಲಿ ಚಿತ್ರಣ. ಈ ಸಂದರ್ಭದಲ್ಲೇ ನೀರಿಗಾಗಿ ಹೋರಾಟ, ಭಾಷಣಗಳು ಹುಟ್ಟಿಕೊಳ್ಳುವುದು. ಬೇಸಿಗೆಯಲ್ಲಿ ತೀವ್ರ ಕಾವು ಪಡೆಯುವ ಈ ಹೋರಾಟಗಳು ಜೂನ್ ತಿಂಗಳ ಮೊದಲ ಮಳೆಗೇ ಸತ್ತು ಹೋಗುತ್ತವೆ.
ದೇಶವನ್ನು ಭವಿಷ್ಯದಲ್ಲಿ ಗಂಭೀರವಾಗಿ ಕಾಡಲಿರುವ ಈ ನೀರಿನ ಸಮಸ್ಯೆ ಕುರಿತು ಸರ್ಕಾರ ಪ್ರತಿವರ್ಷ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇದೆ. ದೇಶದ ಭವಿಷ್ಯದ ಪ್ರಜೆಗಳಾದ ಮಕ್ಕಳು ಬಾಲ್ಯದಲ್ಲೇ ನೀರಿನ ಮಹತ್ವ ಅರಿತುಕೊಳ್ಳಬೇಕು ಎನ್ನುವ ಉದ್ದೇಶದಿಂದ ಪಠ್ಯದಲ್ಲೂ ನೀರುಳಿತಾಯದ ಪಾಠ ಸೇರಿಸಿದೆ. ದುರದೃಷ್ಟವಶಾತ್ ಇದು ಪರೀಕ್ಷೆಗಷ್ಟೇ ಸೀಮಿತವಾಗಿ ಬಿಟ್ಟಿದೆ. ಬಹುತೇಕ ಅದರಲ್ಲೂ ನಗರ ಪ್ರದೇಶಗಳಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ನೀರುಳಿತಾಯದ ಮಹತ್ವ ಪಠ್ಯಕ್ಕಷ್ಟೇ ಸೀಮಿತ. ಪ್ರಾಯೋಗಿಕ ಶಿಕ್ಷಣದ ಕುರಿತು ಅವು ತಲೆಕೆಡಿಸಿಕೊಳ್ಳುವುದೇ ಇಲ್ಲ.
ಆದರೆ, ಬೆಂಗಳೂರಿನ ಹೊರವಲಯದ ವರ್ತೂರಿನಲ್ಲಿರುವ ವಾಗ್ದೇವಿ ವಿಲಾಸ ಗುರುಕುಲ ಉಳಿದ ಶಿಕ್ಷಣ ಸಂಸ್ಥೆಗಳಿಂದ ಹೊರತಾಗಿ ನಿಲ್ಲುತ್ತದೆ. ಇಲ್ಲಿ ಮಕ್ಕಳಿಗೆ ಜಲಪಾಠ ಕಡ್ಡಾಯ.
10 ಇಂಗು ಗುಂಡಿಗಳು
ಐದರಿಂದ ಪಿಯುಸಿವರೆಗೆ ಶಿಕ್ಷಣ ನೀಡುತ್ತಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ನೀರುಳಿಸುವುದು, ನೀರಿಂಗಿಸುವುದು ಹೇಗೆನ್ನುವುದನ್ನು ಪ್ರಾಯೋಗಿಕವಾಗಿ ಹೇಳಿಕೊಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಆವರಣದಲ್ಲಿ ಮಳೆ ಕೊಯ್ಲಿಗಾಗಿಯೇ 10 ಇಂಗು ಬಾವಿ, ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಇವೆಲ್ಲ ವೈಜ್ಞಾನಿಕವಾಗಿ ನಿರ್ಮಿತ ಬಾವಿಗಳು. ಈ ಇಂಗು ಬಾವಿಗಳಿಂದ ವರ್ಷಕ್ಕೆ ಅಂದಾಜು 50 ಸಾವಿರ ಘನ ಅಡಿಗಳಷ್ಟು ಮಳೆ ನೀರು ಇಂಗಿಸಲಾಗುತ್ತದೆ. ಬೆಂಗಳೂರಿನ ಬಹುತೇಕ ಶಾಲೆಗಳಲ್ಲಿ ಸರಿಯಾದ ಆಟದ ಮೈದಾನವೇ ಇಲ್ಲ. ಅಂಥದ್ದರಲ್ಲಿ ಈ ಗುರುಕುಲ ಇಂಗು ಬಾವಿಗಳನ್ನು ನಿರ್ಮಿಸುವ ಮೂಲಕ ಇತರೆ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ.
ಈ ಜಲಪಾಠ 6 ವರ್ಷಗಳಿಂದ ನಿರಂತರವಾಗಿ ಮುಂದುವರಿದಿದೆ. ನೀರಿಂಗಿಸುವ, ಅದನ್ನು ಭೂಗರ್ಭಕ್ಕೆ ಇಳಿಸುವ ಹಾಗೂ ಅಂತರ್ಜಲ ಮಟ್ಟ ಕಾಯ್ದುಕೊಳ್ಳುವ ಕುರಿತು ಜಲತಜ್ಞರನ್ನೂ ಕರೆಸಿ ಪಾಠ ಮಾಡುವುದುಂಟು. ಪತ್ರಕರ್ತ ಶ್ರೀಪಡ್ರೆಯವರೂ ಇಲ್ಲಿ ಜಲಪಾಠ ಮಾಡಿಹೋಗಿದ್ದರು. ಈ ಶಿಕ್ಷಣ ಸಂಸ್ಥೆಯ ವಿಶೇಷತೆ ಇಷ್ಟಕ್ಕೇ ಮುಗಿಯುವುದಿಲ್ಲ. ನೀರಿನ ಪಾಠದ ಜತೆಗೆ ಪರಿಸರ ಕಾಳಜಿ, ಮಾನವೀಯತೆ ಮತ್ತು ಸಂಸ್ಕಾರ ಬೆಳೆಸುವ ಪ್ರಯೋಗಾತ್ಮಕ ಶಿಕ್ಷಣಕ್ಕೂ ಇಲ್ಲಿ ಆದ್ಯತೆ ಇದೆ. ಅರ್ಧ ಎಕರೆ ಜಾಗದಲ್ಲಿ ನಿರ್ಮಿಸಲಾಗಿರುವ ಸೈನ್ಸ್ ಪಾರ್ಕ್ ಈ ಗುರುಕುಲದ ಮತ್ತೊಂದು ಆಕರ್ಷಣೆ.  ಸಂಪರ್ಕ: 9686577172.

-ಕಿರಣ್ ಹೆಗಡೆ ಮೆಣಸಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com