

ಭಾರತದಲ್ಲಿ ಐಟಿ ಕ್ರಾಂತಿಯಾಗಿದೆ. ಸಾಮಾಜಿಕ ಜಾಲ ತಾಣಗಳು ಹಾಗೂ ಆನ್‌ಲೈನ್ ಮ್ಯಾಟ್ರಿಮೋನಿಯಲ್ ಸೈಟ್‌ಗಳು ಬೆಳವಣಿಗೆ ಆಗಿವೆ. ಕುಗ್ರಾಮದ ಹೆಣ್ಣುಮಕ್ಕಳೂ ದೊಡ್ಡ ಮೊತ್ತದ ಸಂಬಳ ಎಣಿಸುತ್ತಿದ್ದಾರೆ. 30- 35ನೇ ವಯಸ್ಸಿನೊಳಗೆ ರು. 20ರಿಂದ 30 ಲಕ್ಷದ ಫ್ಲ್ಯಾಟ್ ಕೊಂಡುಕೊಳ್ಳುತ್ತಿದ್ದಾರೆ. ಐಷಾರಾಮಿ ಬದುಕು ನಡೆಸುತ್ತಿದ್ದಾರೆ. ಆದರೆ, ಮದುವೆ ವಿಚಾರಕ್ಕೆ ಬಂದಾಗ ಮಾತ್ರ ಬಹುತೇಕ ಭಾರತೀಯ ಯುವಜನರು ಸಂಪ್ರದಾಯವಾದಿಗಳಾಗುತ್ತಾರಂತೆ. ಬಹುತೇಕರು ಕುಟುಂಬ ಸದಸ್ಯರು ಆಯ್ಕೆ ಮಾಡಿದವರ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಇಷ್ಟಪಡುತ್ತಾರಂತೆ. ಅದರಲ್ಲೂ ಸ್ವಂತ ಕಾಲಮೇಲೆ ನಿಂತ ಬಹುತೇಕ ಹುಡುಗಿಯರಿಗೆ ಅರೇಂಜ್ಡ್ ಮ್ಯಾರೇಜ್ ಇಷ್ಟವಂತೆ. ತಮ್ಮ ಜೀವನ ಸಂಗಾತಿಯನ್ನು ಅಪ್ಪ- ಅಮ್ಮನೇ ಆಯ್ಕೆ ಮಾಡಲಿ ಎಂಬುದು ಅವರ ಬಯಕೆ ಎನ್ನುತ್ತದೆ ದಿ ತಾಜ್ ಗ್ರೂಪ್ ಆಫ್ ಹೋಟೆಲ್ಸ್ ನಡೆಸಿದ ಸರ್ವೆ. ಹಾಗೆ ನೋಡಿದರೆ ಈ ವಿಚಾರದಲ್ಲಿ ಪುರುಷರೇ ಪರವಾಗಿಲ್ಲ. ಮದುವೆ ವಿಚಾರದಲ್ಲಿ ಅವರು ಮಹಿಳೆಯರಿಗಿಂತ ತುಸು ಹೆಚ್ಚೇ ಸ್ವತಂತ್ರರಾಗಿರಲು ಬಯಸುತ್ತಾರೆ ಎನ್ನುತ್ತದೆ ಸರ್ವೆ.