ಯಾರಮ್ಮಾ ಮೋಡಣ್ಣನಿಗೆ
ಅಷ್ಟೊಂದು ಬೈದವರು?
ಪಾಪ, ಬೆಳಿಗ್ಗೆಯಿಂದ
ಸುರಿಸುತ್ತಿದ್ದಾನೆ ಕಣ್ಣೀರು!
ಆ ಸೂರ್ಯಂಗೆ
ಕೊಡೆಯಿಲ್ಲ, ಕೋಟಿಲ್ಲ
ನೆನೀತಾನೆ ಮಳೇಲಿ ದಿನವಿಡೀ!
ಆದ್ರೂ ಆಗಲ್ವ ನೆಗಡಿ?
ಆಕಾಶಜ್ಜನ ಅರಮನೇಲಿ
ಮೋಡಣ್ಣರ ಬಡಿದಾಟ
ಗುಡುಗಪ್ಪನ ಆರ್ಭಟ
ಮಿಂಚಮ್ಮನ ಹಾರಾಟ
ನಮಗದು ಮಳೆಯಾಟ!
-ಡಾ. ಕೆ.ಎಸ್. ಚೈತ್ರಾ, ಬೆಂಗಳೂರು
ಮಳೆಗಾಲದ ಹಾಡು
ರಪ ರಪ ರಪ ರಪ
ಬೀಳಲು ಮಳೆಯು
ನೀರಲಿ ನೆನೆಯಿತು
ಸುಂದರ ಇಳೆಯು
ಕಲ ಕಲ ಎನುತಲಿ
ನದಿಗಳು ಹರಿಯೆ
ಜುಳು ಜುಳು ಝರಿಗಳು
ನದಿಯಲಿ ಬೆರೆಯೆ
ಥಕ ಥಕ ಥಕ ಥಕ
ಮೋಡದ ಮಿಡಿತ
ಮಿಂಚನು ತೂರುತ
ಹನಿಗಳ ಇಳಿತ
ಹುಯ್ಯೋ ಹುಯ್ಯೋ
ಹೇ ಮಳೆರಾಯಾ
ಭೂಮಿಗೆ ಹರುಷವ
ಹನಿಸು ಈ ಸಮಯಾ
- ಗುರುರಾಜ ಬೆಣಕಲ್