ಇಲಿಯ ಸಹಾಯ

ಇಲಿಯ ಸಹಾಯ
Updated on: 

ಬೇಸಿಗೆ ಕಾಲ. ಸಿಂಹವೊಂದು ಮರದ ಕೆಳಗೆ ತಂಪಾದ ನೆರಳಲ್ಲಿ ನಿದ್ದೆ ಮಾಡ್ತಾ ಇತ್ತು. ಆಗ ಬಿಲದಿಂದ ಹೊರಬಂದ ಪುಟಾಣಿ ಇಲಿಯೊಂದು ಮಲಗಿದ್ದ ಸಿಂಹದ ಮೈಮೇಲೆಲ್ಲಾ ಓಡಾಡುತ್ತ... ಹಾರಾಡುತ್ತ ಆಟವಾಡತೊಡಗಿತು. ಇದರಿಂದ ಸಿಂಹಕ್ಕೆ ಎಚ್ಚರವಾಯಿತು. ತನ್ನ ನಿದ್ರಾಭಂಗಕ್ಕೆ ಕಾರಣವಾದ ಆ ಇಲಿಯನ್ನು ಗಬಕ್ಕನೆ ಹಿಡಿದುಕೊಂಡು ಕೋಪದಿಂದ- 'ಎಲಾ ಇಲಿಯೇ... ನನ್ನ ನಿದ್ದೆಯನ್ನು ಹಾಳುಮಾಡಿಬಿಟ್ಟೆಯಲ್ಲಾ! ನಿನಗೆಷ್ಟು ಧೈರ್ಯ? ನಿನ್ನನ್ನು ಕ್ಷಣದಲ್ಲೇ ಕೊಂದುಬಿಡುವೆ...' ಎಂದು ಗರ್ಜಿಸಿತು. ಪಾಪ... ಪೆದ್ದು ಪುಟ್ಟ ಇಲಿ ಹೆದರಿ ಭಯದಿಂದ ತತ್ತರಿಸುತ್ತ- 'ದಯವಿಟ್ಟು ಕ್ಷಮಿಸು ಸಿಂಹರಾಜ! ಅರಿಯದೇ ತಪ್ಪು ಮಾಡಿರುವೆ...' ಎಂದು ಬೇಡಿಕೊಂಡಾಗ ಸಿಂಹಕ್ಕೆ ಕನಿಕರ ಬಂತು. 'ಹೋಗು... ಬದುಕಿಕೋ... ಇನ್ನೆಂದೂ ಇಂಥ ತಪ್ಪು ಮಾಡಬೇಡ...' ಎಂದು ಎಚ್ಚರಿಸಿ ಕೊಲ್ಲದೇ ಬಿಟ್ಟಿತು.
ಇಲಿ ಹರುಷದಿಂದ- 'ನಿನ್ನ ಆಜ್ಞೆಯನ್ನು ಪಾಲಿಸುವೆ. ಪ್ರಾಣಭಿಕ್ಷೆ ನೀಡಿರುವ ನಿನಗೆ ಆಪತ್ತು ಬಂದಾಗ ಸಹಾಯ ಮಾಡಿ ಋಣ ತೀರಿಸುವೆ...' ಎಂದಾಗ ಆ ಮಾತಿಗೆ ಸಿಂಹ ಬಿದ್ದು ಬಿದ್ದು ನಗತೊಡಗಿತು. 'ಪುಟ್ಟ ಪ್ರಾಣಿ ತನಗೆಂಥ ಸಹಾಯ ಮಾಡೀತು...' ಎಂದು ಗೇಲಿ ಮಾಡಿತು.
ಕೆಲ ದಿನ ಕಳೆದವು. ಬೇಟೆಗಾರನೊಬ್ಬ ಬಂದು ನಿದ್ದೆಯಲ್ಲಿದ್ದ ಸಿಂಹಕ್ಕೆ ಬಲೆ ಬೀಸಿ ಕಟ್ಟಿ ಹಾಕಿದ. ರಾತ್ರಿಯಾದ್ದರಿಂದ ಬೆಳಗ್ಗೆ ಬೇಟೆಯನ್ನು ಸಾಗಿಸಿದರಾಯಿತೆಂದು ಊರಿಗೆ ಮರಳಿದ. ಬಲೆಯಲ್ಲಿ ಬಿದ್ದ ಸಿಂಹ ಚೀರಾಡತೊಡಗಿತು. ಸಿಂಹದ ಧ್ವನಿ ಕೇಳಿ ಪುಟ್ಟ ಇಲಿ ಬಂತು. ತನ್ನ ಚೂಪಾದ ಹಲ್ಲುಗಳಿಂದ ಆ ಬಲೆಯನ್ನು ಚೂರು ಚೂರಾಗಿ ಕಡಿದುಹಾಕಿತು. ಸಿಂಹ ಬಲೆಯಿಂದ ಪಾರಾಗಿ ಇಲಿಗೆ ತನ್ನ ಕಾಪಾಡಿದ್ದಕ್ಕಾಗಿ ಅಭಿನಂದನೆ ತಿಳಿಸಿತು.
ನೀತಿ: ಮೂರ್ತಿ ಚಿಕ್ಕದಾದರೂ ಕಾರ್ಯ ಹಿರಿದು.


-ಶಿವುಕುಮಾರ ಪತ್ರಿಮಠ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com