ಫೇಕ್ ಲುಕ್

ಕೆಲ ತಿಂಗಳ ಹಿಂದಷ್ಟೇ ಅವರಿಬ್ಬರು ಮುಖಾಮುಖಿಯಾಗಿದ್ದರು. ಕ್ರಮೇಣ ಸ್ನೇಹಿತರಾದರು,..
ಫೇಕ್ ಲುಕ್
Updated on: 

ಕೆಲ ತಿಂಗಳ ಹಿಂದಷ್ಟೇ ಅವರಿಬ್ಬರು ಮುಖಾಮುಖಿಯಾಗಿದ್ದರು. ಕ್ರಮೇಣ ಸ್ನೇಹಿತರಾದರು, ಪ್ರೇಮಿಗಳಾದರು ಮತ್ತು ಮದುವೆಯೂ ಆದರು. ಮೂರೇ ತಿಂಗಳಿಗೆ ಅವಳಿಗೆ ಅದೇನ್ ಅನಿಸಿತೋ...ಅವನು ತನ್ನನ್ನು ಬಲವಂತವಾಗಿ ಕರೆದೊಯ್ದು ಮದುವೆಯಾದ ಎಂದು ಪೊಲೀಸರಿಗೆ ದೂರು ನೀಡಿದಳು. ಪೊಲೀಸರು ಮನೆ ಬಳಿ ಬಂದು ರಂಪ ಮಾಡಿ ಅವನನ್ನು ಠಾಣೆಗೊಯ್ದರು. ಇದನ್ನು ಕಂಡು ಆಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾದ ಆತನ ಅಪ್ಪ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು. ಪತಿ ಅಗಲಿಕೆ, ಪುತ್ರನ ಪರಿಸ್ಥಿತಿ ಎರಡನ್ನೂ ಕಂಡ ತಾಯಿ ಕೂಡ ಆಘಾತಕ್ಕೀಡಾಗಿ ಆಸ್ಪತ್ರೆ ಸೇರಿದರು...
ಹೀಗೆ ಎಲ್ಲೋ ಇದ್ದ ಯುವಕ- ಯುವತಿಯನ್ನು ಮುಖಾಮುಖಿಯಾಗಿಸಿ ಇಷ್ಟೆಕ್ಕೆಲ್ಲಾ ರಂಪಾಟಕ್ಕೆ ಕಾರಣವಾದದ್ದು ಬೇರಾರೂ ಅಲ್ಲ, ಫೇಸ್‌ಬುಕ್. ಅರ್ಥಾತ್ ಮುಖಪುಸ್ತಕ!
ಹೌದು.. ಈ ಮುಖಪುಸ್ತಕದ ಒಂದೊಂದೇ ಪುಟಗಳನ್ನು ತೆರೆಯುತ್ತಾ ಹೋದರೆ ಇಂತಹ ದಾರುಣ ಅಧ್ಯಾಯಗಳಿಗೆ ಬರ ಇಲ್ಲ. ಆದರೆ ಅವುಗಳಲ್ಲಿ ಬೆಳಕಿಗೆ ಬರುವುದು ಮಾತ್ರ ಕೆಲವೇ ಕೆಲವು. ಇತ್ತೀಚೆಗಷ್ಟೇ ಮಡಿಕೇರಿಯಲ್ಲಿ ನಡೆದ ಮೇಲಿನ ಘಟನೆ ಅಂಥವುಗಳಿಗೊಂದು ತಾಜಾ ಉದಾಹರಣೆ.
ವಿಷಯ ಏನೆಂದರೆ ಬಹುತೇಕ ಎಲ್ಲರೂ ಟೈಂಪಾಸ್‌ಗೆಂದು ಬಳಸುತ್ತಿರುವ ಫೇಸ್‌ಬುಕ್ ಎಂತೆಂಥದೋ ಟೈಂಗಳನ್ನು ಫೇಸ್ ಮಾಡಬೇಕಾದಂತಹ ಸನ್ನಿವೇಶ ಸೃಷ್ಟಿಸುತ್ತಿದೆ. ಮುಖಪುಸ್ತಕ ತನಗೆ ಮುಖಾಮುಖಿಯಾದವರಲ್ಲಿ ಕೆಲವರ ನೆಮ್ಮದಿ ಕಸಿದುಕೊಂಡರೆ, ಮತ್ತೆ ಕೆಲವರ ಬದುಕನ್ನೇ ಕಿತ್ತುಕೊಂಡಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಫೇಸ್‌ಬುಕ್ ಆಗಿ ಉಳಿಯದೇ ಫೇಕ್‌ಬುಕ್ ಆಗಿರುವುದು.
ಆಗಷ್ಟೇ ಕಂಡ ಮುಖದ ಹಿಂದಿನ ಗುಣ, ಆಗಷ್ಟೇ ತೆರೆದ ಪುಸ್ತಕದ ಮುಂದಿನ ಪುಟದಲ್ಲಿನ ವಿಷಯ ಏನು ಎಂಬುದನ್ನು ತಕ್ಷಣಕ್ಕೆ ನಿರ್ಧರಿಸುವುದು ಹೇಗೆ ಕಷ್ಟವೊ ಹಾಗೆಯೇ 'ಮುಖಪುಸ್ತಕ'ದಲ್ಲಿರುವ ಮುಖದ ಹಿಂದಿನ ವ್ಯಕ್ತಿತ್ವ ಕೂಡ.
ಏಕೆಂದರೆ ಇಲ್ಲಿ ನೈಜ ಮುಖಗಳಿಗಿಂತ ಮುಖವಾಡಗಳೇ ಹೆಚ್ಚು. ಒಂದು ವೇಳೆ ಮುಖಪುಸ್ತಕದಲ್ಲಿ ಕಂಡ ಮುಖ ನಿಜವಾಗಿದ್ದರೂ ಆ ಮುಖ ಮುಖೇನ ವ್ಯಕ್ತವಾಗುವ ಭಾವನೆಗಳು ಬಹಳಷ್ಟು ಬಾರಿ ನಿಜವಾಗಿರುವುದಿಲ್ಲ. ಕಾರಣ, ಆ ವ್ಯಕ್ತಿಗೆ ಭಾವನೆ ಮುಖ್ಯವಾಗಿರುವುದಿಲ್ಲ. ಇಂತಹ ಮುಖೇಡಿ ಮನುಷ್ಯರು ಭಾವನೆಗಳೊಂದಿಗೆ ಆಡುವ ಚೆಲ್ಲಾಟ ಮುಖಾಮುಖಿಯಾದ ಮತ್ತೊಬ್ಬರಿಗೆ ಸಂಕಟವನ್ನು ತಂದೊಡ್ಡುತ್ತವೆ. ಕೆಲವೊಮ್ಮೆ ಅವು ಸಂಕಟವಾಗುಳಿಯದೇ ಬದುಕಿಗೆ ಕಂಟಕವಾದ ಉದಾಹರಣೆಗಳೂ ಇವೆ ಮತ್ತು ಇಂಥ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಅದರಲ್ಲಿ ನೀವೂ ಒಬ್ಬರಾಗಬಾರದೆಂದರೆ ಕೆಲ ಎಚ್ಚರಿಕೆಗಳನ್ನು ಪಾಲಿಸುವುದು ಮುಖ್ಯ.

  • ನಿಮ್ಮ ಫೇಸ್‌ಬುಕ್ ಖಾತೆಗೆ ಬರುವ ಫ್ರೆಂಡ್ ರಿಕ್ವೆಸ್ಟ್‌ಗಳಿಗೆ ಸಂಬಂಧಿತ ಪ್ರೊಫೈಲನ್ನು ಸರಿಯಾಗಿ ಪರಿಶೀಲಿಸಿದ ಬಳಿಕವೇ ಫ್ರೆಂಡ್‌ಶಿಪ್‌ಗೆ ಒಪ್ಪಿಗೆ ನೀಡಿ.
  • ವಿದ್ಯಾಭ್ಯಾಸ, ವೃತ್ತಿ, ವಿಳಾಸ, ಭಾವಚಿತ್ರ ಮುಂತಾದ ಕನಿಷ್ಠ ವಿವರ ಇರದ ಪ್ರೊಫೈಲ್‌ಗಳ ವ್ಯಕ್ತಿಗಳ ಜತೆ ಸ್ನೇಹ ಬೇಡ.
  • ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ ವ್ಯಕ್ತಿಯ ರಿಕ್ವೆಸ್ಟ್‌ಗೆ ಓಕೆ ಎನ್ನುವ ಮುನ್ನ ಆತನ ಸ್ನೇಹಿತರ ವಲಯ ಅಥವಾ ಗ್ರೂಪ್‌ಗಳ ಪ್ರೊಫೈಲ್ ವೀಕ್ಷಿಸಿ, ನಿರ್ಧರಿಸಿ.
  • ಸ್ನೇಹಿತರಾದ ಮೇಲೆ ಅವರ ಜತೆ ತೀರಾ ಖಾಸಗಿ ವಿಷಯಗಳ ವಿನಿಮಯ ಬೇಡ. ಅದರಲ್ಲೂ ಫೇಸ್‌ಬುಕ್‌ನ ವಿರುದ್ಧ ಲಿಂಗೀಯ ಸ್ನೇಹಿತರ ಜತೆ ಅತಿ ಸಲುಗೆ ಬೇಡ.
  • ಯುವತಿಯರು ಫೇಸ್‌ಬುಕ್‌ನಲ್ಲಿ ತಮ್ಮ ಭಾವಚಿತ್ರ ಹಾಕದಿರುವುದು, ಅಪರಿಚಿತರ ಜತೆ ಚರ್ಚೆಗೆ ಇಳಿಯದಿರುವುದೇ ಒಳಿತು.
  • ಪೋಸ್ಟ್ ಮಾಡುವ ಸ್ಟೇಟಸ್ ಇತಿಮಿತಿಯೊಳಗೆ ಇರಲಿ. ವೈಯಕ್ತಿಕ ಗೋಳಾಟ, ತೊಳಲಾಟ, ವೈಯಕ್ತಿಕ ದ್ವೇಷವೇ ಸ್ಟೇಟಸ್ ಆಗದಿರಲಿ. ಬದುಕು ತೆರೆದ ಪುಸ್ತಕದಂತಿರಬೇಕು ಎಂದು ಮುಖಪುಸ್ತಕದಲ್ಲಿ ಎಲ್ಲವನ್ನೂ ತೆರೆದಿಡಬೇಡಿ.
  • ನೀವು ಮಾಡಿದ ಪೋಸ್ಟ್, ಶೇರ್‌ಗಳಿಗೆ ಅವರಿವರ ಲೈಕ್‌ಗಳ ಬಗ್ಗೆ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡರೆ ಮಾನಸಿಕ ನೆಮ್ಮದಿ ಕೆಡುತ್ತದೆ.
  • ಹೊಸದಾಗಿ ಪರಿಚಯವಾದ ಫೇಸ್‌ಬುಕ್ ಸ್ನೇಹಿತರ ಪ್ರಥಮ ಭೇಟಿ ನಿಮ್ಮ ಸ್ನೇಹಿತರ ಸಮ್ಮುಖದಲ್ಲಿ ನಿಮ್ಮ ಪರಿಚಯದ ಸ್ಥಳದಲ್ಲೇ ಆಗುವಂತಿರಲಿ.
  • ಫೇಸ್‌ಬುಕ್ ಬರಿ ಮನರಂಜನೆ, ಕಾಲಕಳೆಯುವುದು ಮಾತ್ರವಲ್ಲ, ನೀವು ವ್ಯವಹಾರದಲ್ಲಿದ್ದರೆ ಮಾರ್ಕೆಟಿಂಗ್ ಮಾಧ್ಯಮವಾಗಿಯೂ ಬಳಸಬಹುದು. ನಿಮ್ಮಲ್ಲಿರುವ ಪಾಸಿಟಿವ್ ಅಂಶಗಳನ್ನು ಸ್ಟೇಟಸ್ ಮೂಲಕ ಅಭಿವ್ಯಕ್ತಪಡಿಸಿ.
  • ಅಷ್ಟಕ್ಕೂ ಫೇಸ್‌ಬುಕ್ ಎಂಬ ಬಿಡುವಿದ್ದಾಗ ಸಮಯ ಕಳೆಯಲಷ್ಟೇ ಇರುವ ಸಾಮಾಜಿಕ ತಾಣ. ಹಾಗಂತ ಸದಾ ಅದರಲ್ಲೇ ಸಮಯ ಕಳೆಯಬೇಡಿ.
13 ಲಕ್ಷಕ್ಕೆ ಬಿತ್ತು ಟೋಪಿ
ಪ್ರಾಣವನ್ನೇ ಕಳಕೊಂಡಳು
- ರವಿಕಾಂತ ಕುಂದಾಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com