ಸಾಂತ್ವನಕ್ಕೆ ಸೈಟ್

ಸಾಂತ್ವನಕ್ಕೆ ಸೈಟ್
Updated on: 

ನೋವಿಲ್ಲದ ಜೀವ ಎಲ್ಲಿದೆ? ಪ್ರೀತಿಸಿ ಕೈ ಕೊಟ್ಟ ಸಂಗಾತಿ, ಏನೋ ಒತ್ತಡಕ್ಕೆ ಸಿಲುಕಿ ಆತ್ಮೀಯರಿಗೆ ಹೇಳಿದ ಗುಡ್ ಬೈ, ಅಪ್ಪ- ಅಮ್ಮನಿಂದ ಮುಚ್ಚಿಟ್ಟ ಸತ್ಯ, ಸ್ನೇಹಿತರು ಮಾಡಿದ ವಂಚನೆ, ಕಾಲೇಜು- ಕಚೇರಿಯಲ್ಲಿ ನಡೆದ ಕಹಿ ನೆನಪು... ಹೀಗೆ ಹೇಳಿಕೊಳ್ಳಲಾಗದ ಒಂದಲ್ಲಾ ಒಂದು ವಿಚಾರ ಪ್ರತಿಯೊಬ್ಬರ ಮನಸ್ಸಲ್ಲೂ ಇರುತ್ತದೆ. ಅದು ಪ್ರತಿ ಘಳಿಗೆ ಮನಸ್ಸನ್ನು ಕೊರೆಯುತ್ತಿರುತ್ತದೆ.
ಅನೇಕ ವೇಳೆ ನಮ್ಮ ಸುತ್ತಮುತ್ತ ಸಾಕಷ್ಟು ಗೆಳೆಯರಿರುತ್ತಾರೆ, ಬಂಧುಗಳಿರುತ್ತಾರೆ. ಆದರೆ, ಇಂಥ ಅನೇಕ ನೋವುಗಳನ್ನು ಹಂಚಿಕೊಳ್ಳಬೇಕು, ಹೃದಯ ಹಗುರ ಮಾಡಿಕೊಳ್ಳಬೇಕು ಅಂದಾಗ ಅವರಲ್ಲಿ ಯಾರೂ ನಮ್ಮವರಾಗಿ ಕಾಣುವುದಿಲ್ಲ. ಈ ಪರಿಸ್ಥಿತಿಯಲ್ಲಿ ನಮ್ಮ ನೋವನ್ನು ಹೇಳಿ ಹಗುರ ಮಾಡಿಕೊಳ್ಳುವುದಾದರೂ ಹೇಗೆ? ನಮ್ಮ ನಿಮ್ಮ ನಡುವಿನ ಹಲವರ ಈ ತೊಳಲಾಟಕ್ಕೆ ಉತ್ತರವಾಗಿ ವೆಬ್‌ಸೈಟ್ ಒಂದು ಈಗ ಹುಟ್ಟಿಕೊಂಡಿದೆ. ಲಖನೌದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಪದವೀಧರ ವಿದ್ಯಾರ್ಥಿಗಳಾದ ಸುಮಂತ್ ಗಾಜ್ಬೀಯೆ, ರಿತಿಕಾ ಶರ್ಮಾ, ಲೀಮಾ ಜೇಮ್ಸ್ ಮತ್ತು ಗೌರವ್ ರಾಜನ್ ಗೋಟ ಸೇರಿ 'ಶೇರಿಂಗ್ ದರ್ದ್ ಡಾಟ್ ಕಾಮ್‌' (ಝಛ್ಠ್ಝಟ್ಜಿಜಛ್ಠಜ.್ಛ್ಟಟ) ಎಂಬ ವೆಬ್‌ಸೈಟ್ ಆರಂಭಿಸಿದ್ದಾರೆ. ಸದ್ಯ 33,972ಕ್ಕೂ ಹೆಚ್ಚು ಮಂದಿ ಈ ವೆಬ್‌ಸೈಟ್‌ನ ಸದಸ್ಯರು.
ಉದ್ಯೋಗ ಮತ್ತು ಭವಿಷ್ಯದ ಕುರಿತಾದ ಸಮಸ್ಯೆಗಳಿಗೆ, ಕೌಟುಂಬಿಕ ಮತ್ತು ಸಾಮಾಜಿಕವಾಗಿ ತೊಂದರೆ ಅನುಭವಿಸುತ್ತಿರುವವರಿಗೆ, ಪ್ರೀತಿ ಮತ್ತು ಸಂಬಂಧಗಳಲ್ಲಿ ಉಂಟಾದ ನೋವು, ವಿವಾಹದ ಚಿಂತೆ, ಮಾದಕ ವ್ಯಸನದಿಂದ ಹೊರಬರಲಾಗದೆ ಒದ್ದಾಡುತ್ತಿರುವವರು, ಒಬ್ಬಂಟಿತನ ಮತ್ತು ಇತರೆ ಯಾವುದೇ ರೀತಿಯ ನೋವು ಅನುಭವಿಸುತ್ತಿರುವವರು ಈ ವೆಬ್‌ಸೈಟ್‌ನಲ್ಲಿ ತಮ್ಮ ದುಃಖ ಹೇಳಿಕೊಂಡು ಸಾಂತ್ವನ ಪಡೆದುಕೊಳ್ಳಬಹುದು.
ಈ ವೆಬ್‌ಸೈಟ್ ಮೂಲಕ ಯಾರು ಬೇಕಾದರೂ ಸೂಕ್ತ ಕೌನ್ಸೆಲಿಂಗ್ ಪಡೆಯಬಹುದು. ಇಷ್ಟೇ ಅಲ್ಲ, ಅಗತ್ಯಬಿದ್ದರೆ ಆನ್‌ಲೈನ್ ಮೂಲಕ ತೆರಪಿಸ್ಟ್‌ಗಳ ನೆರವನ್ನೂ ನೀಡಲಾಗುತ್ತದೆ. ಆದರೆ, ನಿಮ್ಮ ಹೆಸರು ವಿಳಾಸವನ್ನು ಗೌಪ್ಯವಾಗಿಡಲಾಗುತ್ತದೆ.
ಶೇರಿಂಗ್ ದರ್ದ್ ಡಾಟ್ ಕಾಮ್‌ನ ಸ್ಥಾಪಕರಲ್ಲೊಬ್ಬರಾದ ಮುಂಬೈಯ ರಿತಿಕಾ ಶರ್ಮಾ ಒಂದು ಕಾಲದಲ್ಲಿ ಒಂಬ್ಬಂಟಿತನದ ಸಮಸ್ಯೆಯಿಂದ ಬಳಲುತ್ತಿದ್ದರಂತೆ. ತಮ್ಮ ನೋವನ್ನು ಯಾರಲ್ಲೂ ಹಂಚಿಕೊಳ್ಳಲಾಗದೆ ಒದ್ದಾಡುತ್ತಿದ್ದರಂತೆ. ಇದೇ ಅವರಿಗೆ ಶೇರಿಂಗ್ ದರ್ದ್ ಡಾಟ್ ಕಾಮ್ ಆರಂಭಿಸಲು ಮೂಲ ಪ್ರೇರಣೆ. ಇದಕ್ಕೆ ಪ್ರೋತ್ಸಾಹ ನೀಡಿದ್ದು ಸೈಕಾಲಜಿಸ್ಟ್ ಡಾ. ಕಾನನ್ ಕ್ಹಾಟು ಚಿಕ್ಕಲ್ (ಉಖ. ಓಆಃಆಃ ಓಏಆಖಿಆ್ಖ ಈಏಐಓಆಔ).
ವೈಬ್‌ಸೈಟ್ ಪ್ರಾರಂಭಿಸುವುದಕ್ಕೂ ಮುನ್ನ ಮಾಡಿದ ಅಧ್ಯಯನಕ್ಕೆ ಸಾರ್ವಜನಿಕರಿಂದಲೂ ಉತ್ತಮ ಅಭಿಪ್ರಾಯ ಸಿಕ್ಕಿತು. 1,156 ಮಂದಿ ಸರ್ವೆಗೆ ಸಹಕರಿಸಿದರು ಮತ್ತು ಶೇ. 94.8 ಮಂದಿ ನೋವಿನಲ್ಲಿರುವವರಿಗೆ ಸಹಾಯ ನೀಡಲು ಮುಂದಾದರು. ಯಾವುದೇ ವೆಬ್‌ಸೈಟ್ ಪ್ರಾರಂಭಿಸಿದಾಗ ಅದರಲ್ಲಿ ಒಳ್ಳೆಯದು- ಕೆಟ್ಟದು ಎಂಬುದು ಇದ್ದೇ ಇರುತ್ತದೆ. ಹೀಗಾಗಿ ಯಾರಾದರೂ ಇಲ್ಲಿ ತಮ್ಮ ನೋವನ್ನು ಹಂಚಿಕೊಂಡಾಗ ಕೆಲವರು ತುಂಬಾ ನೋವಾಗುವ ರೀತಿಯಲ್ಲಿ ಕಮೆಂಟ್‌ಗಳನ್ನು ಹಾಕುವುದುಂಟು. ಹಾಗಾಗಿ ಯಾವುದೇ ವಿಷಯವಾಗಿರಲಿ ನಾವು ಅದನ್ನು ಓದಿ, ಅದರಲ್ಲಿ ಅಗತ್ಯವಿಲ್ಲದ, ಗೌಪ್ಯವಾಗಿ ಇಡಬಹುದಾದ ವಿಷಯಗಳನ್ನು ಎಡಿಟ್ ಮಾಡಿಯೇ ವೆಬ್‌ಸೈಟ್‌ಗೆ ಹಾಕುತ್ತೇವೆ ಎನ್ನುತ್ತಾರೆ ಸುಮಂತ್ ಗಾಜ್ಬೀಯೆ.

- ವಿದ್ಯಾ ಇರ್ವತ್ತೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com