ಸೈಕಾಲಜಿ ಪಯಣ

ಮನಃಶಾಸ್ತ್ರ (ಸೈಕಾಲಜಿ) ಅಂದ್ರೆ ಏನು? ಪದವಿ ಪೂರ್ವ ತರಗತಿಯಲ್ಲಿರುವಾಗ ನನ್ನನ್ನು...
ಸೈಕಾಲಜಿ ಪಯಣ
Updated on: 

ಮನಃಶಾಸ್ತ್ರ (ಸೈಕಾಲಜಿ) ಅಂದ್ರೆ ಏನು? ಪದವಿ ಪೂರ್ವ ತರಗತಿಯಲ್ಲಿರುವಾಗ ನನ್ನನ್ನು ಗಂಭೀರವಾಗಿ ಕಾಡುತ್ತಿದ್ದ ಪ್ರಶ್ನೆ ಇದು. ಆಗ ಮನಃಶಾಸ್ತ್ರ ಬಗ್ಗೆ ಅಧ್ಯಯನಿಸಬೇಕೆಂಬ ದೊಡ್ಡ ಆಸೆ ಹುಟ್ಟಿಕೊಂಡಿತ್ತು. ಆಗಲೇ ನಾನು ನಿರ್ಧರಿದ್ದು ಮುಂದೆ ಮನಃಶಾಸ್ತ್ರದಲ್ಲೇ ಭವಿಷ್ಯ ಕಂಡುಕೊಳ್ಳಬೇಕೆಂದು. ಯಾವತ್ತು ಈ ನಿರ್ಧಾರ ಮನಸ್ಸಲ್ಲಿ ಗಟ್ಟಿಯಾಯಿತೋ ಅವತ್ತಿನಿಂದಲೇ ಮನಃಶಾಸ್ತ್ರ ಕೋರ್ಸ್ ಇರುವ ಕಾಲೇಜುಗಳನ್ನು ಹುಡುಕಲು ಶುರುಮಾಡಿದೆ.
ಆವಾಗಲೇ ನನಗೆ ನೆನಪಾದದ್ದು ಅಜ್ಜಿಮನೆಯ ದಾರಿಯಲ್ಲಿದ್ದ ಉಜಿರೆಯ ಎಸ್‌ಡಿಎಂ ಕಾಲೇಜು. ಬೋರ್ಡ್ ನೋಡಿದ್ದೆ. ಗೆಳೆಯರ ಮೂಲಕ ವಿಚಾರಿಸಿದಾಗ ಅಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎನ್ನುವ ಮಾಹಿತಿ ಗೊತ್ತಾಯ್ತು. ಪದವಿ ಶಿಕ್ಷಣಕ್ಕೆ ಕೂಡ ಅಲ್ಲೇ ಸೇರಿಕೊಂಡೆ. ನನ್ನ ಪದವಿಯ ಮೊದಲನೇ ಸಬ್ಜೆಕ್ಟ್ ಸೈಕಾಲಜಿ ಆಗಿತ್ತು. ಡಾ. ಕರೀಂ ಮಗ್ದುಂ ಅವರು ಕ್ಲಾಸ್ ತಗೊಂಡಿದ್ರು. ಆವಾಗ ಅವರು ಹೇಳಿದ ಮಾತು ನನಗೆ ಇಂದಿಗೂ ನೆನಪಿದೆ. ಒಳ್ಳೆಯ ಮನಃಶಾಸ್ತ್ರಜ್ಞರಾಗೋಕೆ ಉತ್ತಮ 'ಅಬ್ಸರ್ವೇಷನ್‌' ಕಲೆ ಇರಬೇಕು ಅಂತ. ಡಾ. ಕರೀಂ ಹಾಗೂ ಇತರೆ ಟೀಚರ್‌ಗಳು ಹೇಳಿದ್ದನ್ನು ಚೆನ್ನಾಗಿ ಕಲಿತು ಪಾಲಿಸ್ತಾ ಹೋದೆ. ನನ್ನ ಪದವಿಯೂ ಮುಗಿಯಿತು. ಮುಂದೆ ಪಿ.ಜಿ. ಸೇರುವ ಆಸಕ್ತಿಯನ್ನು ಪೋಷಕರ ಮುಂದೆ ವ್ಯಕ್ತಪಡಿಸಿದಾಗ 'ನಿನ್ಗೇನ್ ಇಷ್ಟಾನೋ ಅದನ್ನೇ ಮಾಡು' ಅಂದ್ರು. ಆದ್ರೆ ಕೆಲವರು ಮಾತ್ರ ಬೇಡ ಮನಃಶಾಸ್ತ್ರಕ್ಕೆ ಏನೂ ಸ್ಕೋಪ್ ಇಲ್ಲ ಅಂದ್ರು. ನಾನು ಅದ್ಯಾವುದನ್ನೂ ತಲೆಗೆ ಹಾಕಿಕೊಳ್ಳಲಿಲ್ಲ. ಉಜಿರೆಯ ಮನಃಶಾಸ್ತ್ರ ವಿಭಾಗದ ಡಾ. ಮಂಜುಳಾ (ಎಚ್‌ಒಡಿ) ಅವರಲ್ಲಿ ಫೋನ್ ಮೂಲಕ ವಿಚಾರಿಸಿದಾಗ ಬಂದು ಅಡ್ಮಿಷನ್ ಪ್ರೊಸೆಸ್ ಮುಗಿಸ್ಕೊಳ್ಳಿ ಅಂದ್ರು. ನನಗೆ ತುಂಬಾನೆ ಖುಷಿ ಆಯ್ತು.
ಕಾಲೇಜಿಗೆ ಸೇರ್ಕೊಂಡಾಯ್ತು. ಆಗಸ್ಟ್‌ನಲ್ಲಿ ಕಾಲೇಜು ಶುರು. ಮೊದಲ ದಿನಾನೆ ಓರಿಯೆಂಟೇಷನ್ ಪ್ರೋಗ್ರಾಂ. ಅಲ್ಲಿ ನಮ್ಮನ್ನು ನಾವೇ ಇಂಟ್ರೊಡ್ಯೂಸ್ ಮಾಡ್ಕೋಬೇಕಿತ್ತು. ನನ್ಗೆ ಭಯ ಅಂದ್ರೆ ಭಯ. ಆದ್ರೂ ಹೇಗೋ ನನ್ ಕರ್ಮ ಅಂದ್ಕೊಂಡು ಇಂಟ್ರೊಡಕ್ಷನ್ ಮಾಡಿ ಮುಗಿಸಿದೆ. ನಂತ್ರ ಇದ್ದಿದ್ದೆ ಮೂವಿ ರಿವ್ಯೂವ್. ನನ್ ಜೀವನದಲ್ಲಿ ಟೈಟಾನಿಕ್ ಬಿಟ್ರೆ ಬೇರೆ ಯಾವ ಇಂಗ್ಲಿಷ್ ಮೂವಿಯನ್ನೂ ನೋಡಿರಲಿಲ್ಲ. ಇತರೆ ಚಿತ್ರಗಳನ್ನು ನೋಡಿಕೊಂಡು ಹೇಗೋ ಕಷ್ಟಪಟ್ಟು ಸ್ವಲ್ಪ ಸ್ವಲ್ಪ ಅರ್ಥ ಮಾಡಿಕೊಂಡೆ. ಮುಂದೆ ಎಲ್ಲರ ಮುಂದೆ ಅಭಿಪ್ರಾಯ ಹೇಳಬೇಕಿತ್ತು. ನಮ್ಮ ಗುಂಪಿನಿಂದ ನನ್ನನ್ನೇ ಕಳುಹಿಸಿದ್ರು. ಅಯ್ಯೋ ಕರ್ಮವೇ ಅಂದ್ಕೊಂಡೆ. ನಮ್ ಸೀನಿಯರ್ಸ್ ತುಂಬಾನೆ ಪ್ರೋತ್ಸಾಹ ಕೊಟ್ರು. ಧೈರ್ಯವಾಗಿ ಮುಗಿಸಿಬಿಟ್ಟೆ.
ಆಮೇಲ್ ಶುರು ಆಗಿದ್ ಸೆಮಿನಾರ್ಸ್, ಚರ್ಚೆ ಫೋರಂ, ಚಲನಚಿತ್ರ ವಿಮರ್ಶೆ, ಮಾನವ ಸಂಪನ್ಮೂಲ ಚಟುವಟಿಕೆ, ಕ್ಲಾಸ್ ಸೆಮಿನಾರ್, ರಿಪೋರ್ಟ್ ಸಬ್‌ಮಿಷನ್... ಇದೆಲ್ಲರದ ನಡುವೆ ಇಂಗ್ಲಿಷ್‌ನಲ್ಲಿ ಮಾತಾಡ್ಬೇಕು. ನಾನು ಇಂಗ್ಲಿಷ್ ಮೀಡಿಯಂನಿಂದ ಬಂದಿದ್ರೂ ಅಷ್ಟಾಗಿ ಯಾರ ಜತೆಗೂ ಇಂಗ್ಲಿಷ್ ಮಾತನಾಡಿರಲಿಲ್ಲ. ಅದೇ ದೊಡ್ಡ ಕಂಟಕವಾಗಿ ಬಿಟ್ಟಿತು ನೋಡಿ. ಒಂದು ಹಂತದಲ್ಲಿ ಕೋರ್ಸ್ ಬಿಡುವ ಯೋಚನೆಯೂ ಬಂತು. ಆದರೆ, ಮನೆಯಲ್ಲಿ ಏನು ಉತ್ತರ ಹೇಳೋದು? ಆಗ ನನಗೆ ಹೊಳೆದ ಐಡಿಯಾ ಏನು ಗೊತ್ತಾ? ಯಾವುದಾದರೂ ಬೋರ್ಡ್ ಇಲ್ಲದ ಬಸ್ ಹತ್ತಿ ಎಲ್ಲಿಗಾದರೂ ಹೋಗಿಬಿಡೋದು. ಸಂಜೆ ಹಾಸ್ಟೆಲ್‌ನಲ್ಲಿ ಟೀ ಕುಡಿಯುವ ವರೆಗೂ ನನ್ನ ತಲೆಯಲ್ಲಿ ಇದೇ ಯೋಚನೆ. ಆದರೆ, ಡಿಗ್ರಿಯಲ್ಲಿ ಒತ್ತಡ ನಿರ್ವಹಣೆ, ಸಮಯ ಪರಿಪಾಲನೆ, ಗುರಿ ತಲುಪುವುದು, ಧನಾತ್ಮಕ ಚಿಂತನೆ, ನಿರ್ಧಾರ ತೆಗೆದುಕೊಳ್ಳುವ ಕುರಿತು ಓದಿದ್ದೆ. ಅದನ್ನು ನೆನಪು ಮಾಡಿಕೊಳ್ಳುತ್ತಲೇ ಒಂದು ನಿರ್ಧಾರಕ್ಕೆ ಬಂದೆ. ಏನಾದ್ರೂ ಆಗ್ಲಿ ಒಳ್ಳೆಯ ಮನಃಶಾಸ್ತ್ರಜ್ಞೆ ಆಗಿಯೇ ಸಿದ್ಧ ಎಂದು ತೀರ್ಮಾನಿಸಿದೆ. ಅವತ್ತಿನಿಂದಲೇ ಮನಃಶಾಸ್ತ್ರದಿಂದ ನನ್ನ ಮನಸ್ಸಿನ ಪರಿವರ್ತನೆ ಯಾತ್ರೆ ಶುರುವಾಯ್ತು.
ನನ್ನ ಸಾಮರ್ಥ್ಯಗಳನ್ನು ಗುರುತಿಸಿಕೊಂಡೆ. ಅದರಂತೆ ಪ್ರಯತ್ನ ಆರಂಭಿಸಿದೆ. ಸಣ್ಣಪುಟ್ಟ ಸಮಸ್ಯೆಗಳು ಎದುರಾದರೂ ಗೆಳೆಯರು, ಶಿಕ್ಷಕರು, ಪೋಷಕರ ನೆರವಿನಿಂದ ಅವುಗಳನ್ನು ನಿವಾರಿಸಿಕೊಂಡೆ. ಎಂಎಸ್‌ಸಿ ದ್ವಿತೀಯ ವರ್ಷದ ಪರೀಕ್ಷೆ ಮೇ 28ರಂದು ಮುಗೀತು. ಅದರ ಮರುದಿನವೇ ದೀಪಾ ಮೇಡಂ ಅವರಿಂದ ಕರೆ ಬಂತು. ಮಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕಿ ಹುದ್ದೆ ಖಾಲಿ ಇದೆ.
ಇಂಟರ್‌ವ್ಯೂ ಅಟೆಂಡ್ ಮಾಡು ಅಂದ್ರು. ಫೇಸ್ ಮಾಡಿದೆ. ಕೊನೆಗೆ ಯಾವಾಗ ಕೆಲಸಕ್ಕೆ ಸೇರ್ಕೊಳ್ತೀರಾ ಅಂದ್ರು... ನಾಡಿದ್ದೇ ಅಂದೆ. ಈಗ ನಾನು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಉಪನ್ಯಾಸಕಿ. ಜತೆಗೆ ಕೌನ್ಸೆಲಿಂಗ್ ಕೂಡ ಮಾಡ್ತೇನೆ. ಆಪ್ತಸಮಾಲೋಚನೆ ಅಂದ್ರೆ ನನ್ಗೆ ಇಷ್ಟ. ಮನಃಶಾಸ್ತ್ರದಿಂದ ನನಗಷ್ಟೇ ಅಲ್ಲ ನನ್ನ ಮೂಲಕ ಬೇರೆಯವರ ಬದುಕಿಗೂ ನೆರವು ಸಿಗುತ್ತಿದೆ ಎನ್ನುವುದು ನನ್ನ ನಂಬಿಕೆ. ನನ್ನ ಈ ಮನಃಶಾಸ್ತ್ರದ ಯಾತ್ರೆ ನನ್ನಂಥ ಲಕ್ಷಾಂತರ ಮಂದಿಗೂ ಸಹಾಯ ಆಗುತ್ತೆ ಅನ್ನೋ ಆಶಾಭಾವನೆ ನನ್ನದು.

- ಮಾನಸ ಡಿ. ಉಜಿರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com