ಹಾಸ್ಟೆಲ್ನಲ್ಲೋ, ಗೆಳೆಯರ ಜತೆಗೆ ರೂಂ ಮಾಡಿಕೊಂಡಿರುತ್ತೀರಿ. ಹೇಳುವವರು ಕೇಳುವವರು ಯಾರೂ ಇಲ್ಲ. ಇಷ್ಟೇ ಗಂಟೆಗೆ ಮಲಗಬೇಕು, ಇಷ್ಟೇ ಗಂಟೆಗೆ ಏಳಬೇಕು ಎಂದು ಬಯ್ಯುವವರೂ ಇಲ್ಲ ಅಂದುಕೊಂಡು ರಾತ್ರಿಯೆಲ್ಲ ಜಾಗರಣೆ ಮಾಡುತ್ತಿದ್ದೀರಾ...? ರಾತ್ರಿಯಿಡೀ ಫಿಲ್ಮ್ ನೋಡುವುದೋ, ಗೆಳೆಯರ ಜತೆಗೆ ಹರಟೆ ಹೊಡೆಯುವುದು ಅಥವಾ ಮೊಬೈಲ್ನಲ್ಲಿ ಮಾತನಾಡುವ ಅಭ್ಯಾಸ ಇಟ್ಟುಕೊಂಡಿದ್ದೀರಾ? ಯುವಕರೆ ಜೋಕೆ! ರಾತ್ರಿ ಜಾಗರಣೆ ಯುವಕರಾಗಿದ್ದಾಗ ದೊಡ್ಡ ಸಮಸ್ಯೆಯೇನೂ ಅನಿಸದು ಆದರೆ, ನಿದ್ರೆಯ ಕೊರತೆಯಿಂದಾಗಿ ಕಣ್ಣಿನ ಸುತ್ತ ಹಾಗೂ ಮುಖದಲ್ಲಿ ನೆರಿಗೆ ಕಾಣಿಸುತ್ತದೆ, ಚರ್ಮ ಪೇಲವವಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಇದರಿಂದ ನೀವು ಸಣ್ಣವಯಸ್ಸಿನಲ್ಲೇ ಮುದುಕರಂತೆ ಕಾಣುತ್ತೀರಿ ಎನ್ನುತ್ತಾರೆ ಅವರು.