ಚಿಟ್ಟೆ ಗೂಡು

ಪುಟ್ಟ ಗ್ರಾಮದಲ್ಲೊಂದು ಕಿರಿಯ ಪ್ರಾಥಮಿಕ ಶಾಲೆಯಿತ್ತು. ಅಲ್ಲಿ ಇಬ್ಬರು ಶಿಕ್ಷಕರಿದ್ದರು. ಮಕ್ಕಳಿಗೆ...
ಚಿಟ್ಟೆ ಗೂಡು
Updated on: 

ಪುಟ್ಟ ಗ್ರಾಮದಲ್ಲೊಂದು ಕಿರಿಯ ಪ್ರಾಥಮಿಕ ಶಾಲೆಯಿತ್ತು. ಅಲ್ಲಿ ಇಬ್ಬರು ಶಿಕ್ಷಕರಿದ್ದರು. ಮಕ್ಕಳಿಗೆ ಅವರನ್ನು ಕಂಡರೆ ತುಂಬಾ ಪ್ರೀತಿ. ಶಿಕ್ಷಕರಿಗೂ ಅಷ್ಟೇ, ಮಕ್ಕಳೆಂದರೆ ಪ್ರಾಣ. ಒಂದು ದಿನ ಈ ಮಕ್ಕಳು, ಶಿಕ್ಷಕರು ಶಾಲಾಪ್ರವಾಸಕ್ಕೆ ಹೊರಟರು. ಆ ಊರಿಗೆ ಬಲು ಸಮೀಪದಲ್ಲಿ ಒಂದು ನದಿ ಹರಿಯುತ್ತಿತ್ತು. ಅದರ ಆಸುಪಾಸಿನಲ್ಲಿ ದಟ್ಟ ಮರಗಿಡಗಳಿದ್ದವು. ಮರಗಳ ಕೆಳಗೆ ಕುಳಿತು ಶಿಕ್ಷಕರು, ಮಕ್ಕಳು ತಾವು ತಂದಿದ್ದ ತಿಂಡಿಯನ್ನು ಪರಸ್ಪರ ಹಂಚಿಕೊಂಡು ತಿಂದರು. ಪಕ್ಕದಲ್ಲಿ ಇದ್ದ ಹೊಲ- ಗದ್ದೆ, ಗಿಡ- ಮರ ನೋಡಿ ಖುಷಿಪಟ್ಟರು.
ಶಾಲಾ ಮಕ್ಕಳಲ್ಲಿ ಬಸವ ಮತ್ತು ರಾಮ ಎಂಬ ಸ್ನೇಹಿತರಿದ್ದರು. ತಿಂಡಿ ತಿಂದ ಮೇಲೆ ಇವರಿಬ್ಬರೂ ಅತ್ತ ಇತ್ತ ನೋಡುತ್ತ, ಆನಂದಿಸುತ್ತ, ನಡೆಯುತ್ತಿದ್ದರು. ಮರದ ಕೊಂಬೆಯಲ್ಲಿ ಚಿಟ್ಟೆಯೊಂದು ಗೂಡಿನಿಂದ ಹೊರ ಬರುವುದನ್ನು ನೋಡಿ ಎಲ್ಲರನ್ನೂ ಕೂಗಿ ಕರೆದರು. ಅದನ್ನು ಶಿಕ್ಷಕರು ಮಕ್ಕಳೊಂದಿಗೆ ಬಂದು ನೋಡಿದರು. ಮಕ್ಕಳೆಲ್ಲರನ್ನು ಅಲ್ಲಿಯೇ ಕೂರಿಸಿಕೊಂಡು ಪತಂಗದ ಹುಳು ಹೇಗೆ ಚಿಟ್ಟೆಯಾಗುತ್ತದೆ ಎಂದು ವಿವರಿಸಿ, ಅದು ಗೂಡಿನಿಂದ ಹೊರಬರಲು ಹೇಗೆ ಶ್ರಮಿಸುತ್ತಿದೆ ಎಂಬುದನ್ನು ತೋರಿಸಿದರು. ಯಾರೂ ಇದನ್ನು ಮುಟ್ಟಬಾರದು, ಇಲ್ಲಿಂದ ಎಲ್ಲರೂ ಹೊರಟು ಬನ್ನಿ ಎಂದು ಹೇಳಿದರು. ಆದರೆ, ಮಕ್ಕಳು ಚಿಟ್ಟೆ ಗೂಡಿನಿಂದ ಹೇಗೆ ಹೊರಬರುತ್ತದೆಂದು ಆಸಕ್ತಿಯಿಂದ ನೋಡುತ್ತಾ ಅಲ್ಲಿಯೇ ನಿಂತರು. ಅಷ್ಟರಲ್ಲಿ ಬಸವನಿಗೆ ಆ ಚಿಟ್ಟೆಯ ಬಗ್ಗೆ ಕನಿಕರವುಂಟಾಯಿತು. ಗೂಡನ್ನು ಒಡೆದರೆ ಅದು ಸುಲಭವಾಗಿ ಹೊರಬರುತ್ತದೆ ಎಂದುಕೊಂಡು, ನಿಧಾನವಾಗಿ ಗೂಡನ್ನು ಸೀಳಿದನು. ಗೂಡಿನಿಂದ ಹೊರಬಂದ ಚಿಟ್ಟೆ ಸ್ವಲ್ಪ ಹೊತ್ತಿಗೆ ಸತ್ತು ಹೋಯಿತು. ಮಕ್ಕಳೆಲ್ಲಾ ಗಾಬರಿಯಿಂದ 'ಸಾರ್, ಸಾರ್, ಚಿಟ್ಟೆ ಸತ್ತು ಹೋಯಿತು' ಎಂದು ಕೂಗಿದರು. ಶಿಕ್ಷಕರು ಬಂದು ನೋಡಿ 'ಚಿಟ್ಟೆಗೆ ಸಹಾಯ ಮಾಡಲೆಂದು ಬಸವ ಗೂಡನ್ನು ಒಡೆದ. ಇದು ಅದಕ್ಕೆ ಮಾಡಿದ ಸಹಾಯವಲ್ಲ. ಬದಲಿಗೆ ಬಸವ ಅದನ್ನು ಸಾಯಿಸಿದ' ಎಂದರು. ಮಕ್ಕಳೆಲ್ಲಾ 'ಅದು ಹೇಗೆ ಸಾರ್?' ಎಂದು ಪ್ರಶ್ನಿಸಿದರು.
ಶಿಕ್ಷಕರು 'ಮಕ್ಕಳೇ, ಒಂದು ಹುಳು ಚಿಟ್ಟೆಯಾಗಿ ತನ್ನ ಗೂಡಿನಿಂದ ಹೊರಬರಲು ಪರಿಶ್ರಮಪಡಬೇಕಾಗುತ್ತದೆ. ಅದು ಪ್ರಕೃತಿಯ ನಿಯಮ. ಹೀಗೆ ಶ್ರಮಪಡುವುದರಿಂದ ಅದರ ರೆಕ್ಕೆ ಬಲಿಷ್ಠಗೊಳ್ಳುವುದಕ್ಕೆ ಮೊದಲೇ ಅದರ ಗೂಡನ್ನು ಒಡೆದ. ಅದಕ್ಕೆ ಅದು ಸತ್ತು ಹೋಯಿತು' ಎಂದು ಹೇಳಿದರು. ಆಗ ಬಸವ 'ತಪ್ಪಾಯಿತು ಸಾರ್, ಕ್ಷಮಿಸಿ. ನಾವೂ ಕಷ್ಟಪಟ್ಟು ಓದಿದರೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯ ಅಲ್ಲವೇ?' ಎಂದನು. ಶಿಕ್ಷಕರಿಗೆ ಸಂತೋಷವಾಯಿತು. ಮಕ್ಕಳೆಲ್ಲಾ ಸಂಜೆಯವರೆಗೂ ಆ ಪ್ರಕೃತಿಯ ಮಡಿಲಲ್ಲಿ ಆಡಿಕೊಂಡು ಊರು ಸೇರಿದರು.

- ಎಂ.ಎಸ್. ಶಿವಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com