

ಜಗತ್ತು ಒಂದು ಗ್ರಾಮದಂತಾಗಿದೆ. ಆದರೆ, ಮಾನವೀಯ ಸಂಬಂಧಗಳು ಎಂದೂ ತಲುಪಲು ಸಾಧ್ಯವಿಲ್ಲದಷ್ಟು ದೂರಾಗಿವೆ ಎನಿಸುತ್ತಿದೆ. ಭೌತಿಕವಾಗಿ ಹತ್ತಿರವಾದಾಗ ಮಾನಸಿಕವಾಗಿ ದೂರವಾಗುವುದು ಮನುಷ್ಯನ ಸಹಜ ಸ್ವಭಾವವೇ ಎಂಬ ಅನುಮಾನ ಶುರುವಾಗಿದೆ. ಅಂತರ್ಜಾಲ ಈ ಜಗತ್ತನ್ನು ಆವರಿಸಿದ ಮೇಲೆ ಯುವಜನತೆ ಸಾಂಸ್ಕೃತಿಕ ಹೊರಳಿಕೆಯಲ್ಲಿದ್ದಾರೆ. ಅವರ ಮುಂದೆ ಅಸಂಖ್ಯ ಆಯ್ಕೆಗಳಿವೆ. ಅಷ್ಟೇ ಗೊಂದಲಗಳೂ ಇವೆ. ಮೊಬೈಲ್, ಕಂಪ್ಯೂಟರ್, ಟ್ಯಾಬ್, ಲ್ಯಾಪ್ಟಾಪ್ ಜತೆ ತಾಸುಗಟ್ಟಲೆ ಕಳೆಯುವ ಅವರು ಆ ಸಾಧನಗಳನ್ನು ಕಲಿಕೆಗೆ ಬಳಸಿಕೊಳ್ಳಲು ವಿಫಲರಾಗುತ್ತಿದ್ದಾರೆ.
ಅಸಂಖ್ಯ ತಾಣಗಳು
ಫೇಸ್ಬುಕ್, ಟ್ವಿಟರ್, ಗೂಗಲ್ ಪ್ಲಸ್, ಸ್ಕೂಸ್ಟ್, ಟ್ವೂ, ನೆಟ್ಲಾಗ್, ಸ್ಕೈಪ್, ಫ್ಲಿಕರ್, ಯೂಟ್ಯೂಬ್, ಲಿಂಕ್ಡ್ ಇನ್, ಟಂಬ್ಲರ್, ಫೋಕಸ್, ಬೆಬೋ, ಮೈ ಲೈಫ್, ಝೋರ್ಪಿಯಾ, ಝಿಂಗ್, ಇಬಿಬೋ, ಮೈಸ್ಪೇಸ್- ಇತ್ಯಾದಿ ಸಾಮಾಜಿಕ ಜಾಲತಾಣಗಳು ಯುವ ಮನಸ್ಸುಗಳನ್ನು ದೊಡ್ಡ ಸಂಖ್ಯೆಯಲ್ಲಿ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಇಂಥವು ಇನ್ನೂ ಹೊಸದಾಗಿ ಅಂತರ್ಜಾಲಕ್ಕೆ ಲಗ್ಗೆಯಿಡುತ್ತಲೇ ಇವೆ. ಅವುಗಳ ಸರಣಿಗೆ ಕೊನೆಯೇ ಇಲ್ಲ. ಆದರೆ, ಈ ಸಾಮಾಜಿಕ ಜಾಲ ತಾಣಗಳದು ಒಂದು ವಿಚಿತ್ರ ಲೋಕ. ಭ್ರಾಮಕ ಎಂದರೂ ತಪ್ಪಿಲ್ಲ. ಅಲ್ಲಿ ಕನಸುಗಳಿಗೆ ರೆಕ್ಕೆ ಮೂಡುತ್ತವೆ. ಆದರೆ, ಮನಸ್ಸು ದಿಕ್ಕು ತಪ್ಪುತ್ತದೆ.
ಸುದ್ದಿಗೆ ಬರವಿಲ್ಲ...
ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಸಂವಹನ ಕ್ಷಣದಲ್ಲಾಗುತ್ತದೆ. ಚಿತ್ರ, ವಿಡಿಯೋಗಳಿಗೂ ಅವಕಾಶ ವಿಪುಲ. 2006ರಲ್ಲಿ ಜನ್ಮತಳೆದ ಟ್ವಿಟರ್, ಈಗ ಪ್ರಸಿದ್ಧಿಯ ಉತ್ತುಂಗದಲ್ಲಿರುವ ಫೇಸ್ಬುಕ್ ಇದಕ್ಕೆ ಉತ್ಕೃಷ್ಟ ನಿದರ್ಶನ. ಅದರಲ್ಲಿ ಸುದ್ದಿಗಳ ಹರಿವಿಗೂ ಬರವಿಲ್ಲ. ಗಾಸಿಪ್ಗಳಿಗೆ ಎಣೆಯಿಲ್ಲ. ನಿಮ್ಮ ಭಾವನೆಗಳು, ಮೂಡ್ಗಳನ್ನು ಜಾಗತಿಕವಾಗಿ ಪರಿಚಯಿಸುವ ಜಾಲತಾಣಗಳು ನಿಮ್ಮ ವ್ಯಕ್ತಿತ್ವಕ್ಕೆ ಒಂದು ಕನ್ನಡಿಯೇ ಆಗಿಬಿಡುತ್ತವೆ. ಗೆಳೆಯರೊಂದಿಗೆ ನಿಮ್ಮ ನೋವು, ನಲಿವು, ಚಿಂತೆ, ಬೇಸರ, ಸಂಭ್ರಮ- ಇತ್ಯಾದಿ ಭಾವನೆಗಳನ್ನು ಹಂಚಿಕೊಳ್ಳಬಹುದು. ಅವರ ಲೈಕ್, ಕಾಮೆಂಟುಗಳನ್ನು ನೋಡಿ ಖುಷಿ ಅಥವಾ ಸಮಾಧಾನ ಪಟ್ಟುಕೊಳ್ಳಬಹುದು. ನೀವೇನಾದರೂ ಸಮಸ್ಯೆ ಹೇಳಿಕೊಂಡರೆ ಪುಕ್ಕಟೆ ಪರಿಹಾರಗಳೂ ಲಭ್ಯ. ಹುಡುಗಿಯೊಬ್ಬಳು ಫೀಲಿಂಗ್ ಸ್ಯಾಡ್, ಬೋರ್ ಎಂದು ತನ್ನ ಸ್ಟೇಟಸ್ ಅಪ್ಡೇಟ್ ಮಾಡಿದರೆ ಸಾಕು, ನೂರಾರು ಅನುಕಂಪಗಳು ವ್ಯಕ್ತವಾಗುತ್ತವೆ! ಆದರೆ, ಹುಡುಗನ ಪಾಲಿಗೆ ಅದು ಅಸಾಧ್ಯ.
ಕಾದಿದೆ ಅಪಾಯ
ವಿಚಿತ್ರ ನೋಡಿ, ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಮುಳುಗಿದವರು ಪಕ್ಕದಲ್ಲಿ ಕುಳಿತವರನ್ನೂ ಮರೆತು ಎಲ್ಲೋ ದೂರದಲ್ಲಿ ಕುಳಿತು ಚಾಟ್ ಮಾಡುವ ವ್ಯಕ್ತಿ ಜತೆ ತಾಸುಗಟ್ಟಲೆ ಹರಟುತ್ತಾರೆ. ಆತ ಅಥವಾ ಆಕೆಯ ಹಿನ್ನೆಲೆ ಅರಿಯದೆ ತಮ್ಮ ಖಾಸಗಿ ವಿಚಾರಗಳನ್ನೂ ಬಿಚ್ಚಿಡುತ್ತಾರೆ. ಇಂಥ ಸಂದರ್ಭಗಳಲ್ಲಿ ನಕಲಿ ಖಾತೆಗಳಿಂದ ಅಥವಾ ವಂಚಕರಿಂದ ಮೋಸ ಹೋಗುವ ಸಾಧ್ಯತೆ ಹೆಚ್ಚು. ಹೀಗಾಗಿ, ಖಾಸಗಿ ವಿಚಾರಗಳನ್ನು ಹಂಚಿಕೊಳ್ಳಲು ಅದು ಅಪಾಯಕಾರಿ ಜಾಗವೂ ಆದೀತು. ನಿಮ್ಮ ವೈಯಕ್ತಿಕ ವಿಚಾರಗಳು ಅಪಾತ್ರರ ಕೈಗೆ ಸಿಕ್ಕರೆ ಅವುಗಳ ದುರ್ಬಳಕೆಯೂ ಆದೀತು.
ಆ ಕ್ಷಣಕ್ಕೆ ತಮಾಷೆಗೆಂದು ಹಾಕಿದ ಸ್ಟೇಟಸ್ ಅಪ್ಡೇಟ್ ಅಥವಾ ಫೋಟೋ ಸಲುವಾಗಿ ಆಮೇಲೆ ಮರುಗಬೇಕಾದೀತು. ಹೀಗಾಗಿ, ಪೋಸ್ಟ್ ಮಾಡುವ ಮೊದಲೇ ತುಸು ಯೋಚಿಸಿ. ನಿಮ್ಮ ಪರಿಚಿತರು ಅಲ್ಲದಿದ್ದರೆ ಫ್ರೆಂಡ್ ಅಥವಾ ಫಾಲೋ ರಿಕ್ವೆಸ್ಟ್ಗಳನ್ನು ಒಪ್ಪಿಕೊಳ್ಳಬೇಡಿ. ಯಾರಾದರೂ ಅಶ್ಲೀಲ ಸಂದೇಶ, ಚಿತ್ರಗಳನ್ನು ಟ್ಯಾಗ್ ಮಾಡಿದರೆ ಮುಜುಗರ ಆಗುತ್ತದೆ. ಅನುಚಿತ ಅಥವಾ ಅಸಭ್ಯವಾಗಿ ವರ್ತಿಸಿದ ಖಾತೆದಾರರನ್ನು ಬ್ಲಾಕ್ ಮಾಡಲು ಹಿಂಜರಿಕೆ ಬೇಡ.
ಅವಕಾಶ ಅನೇಕ
ಪ್ರೊಫೈಲ್ ರಚಿಸಿ ಫೋಟೋ, ವಿಡಿಯೋ ಹಾಕುವುದು ಮಾತ್ರವಲ್ಲ... ಕ್ಷಣಮಾತ್ರದಲ್ಲಿ ಸಂದೇಶ ಕಳುಹಿಸಲು, ಟ್ಯಾಗ್ ಮಾಡಲು, ಇವೆಂಟ್ಗಳ ಬಗ್ಗೆ ಗಮನ ಸೆಳೆಯಲು, ನಿಮ್ಮ ಆಸಕ್ತಿಯ ಗ್ರೂಪ್ಗಳನ್ನು ರಚಿಸಲು ಮತ್ತು ಸೇರಲು, ಸಂಗೀತ ಇತ್ಯಾದಿಗಳನ್ನು ಹಂಚಿಕೊಳ್ಳಲು, ವಿಚಾರ, ಸಂದೇಹಗಳನ್ನು ಚರ್ಚಿಸಲು ಸಾಮಾಜಿಕ ಜಾಲ ತಾಣ ಅವಕಾಶ ಕಲ್ಪಿಸುತ್ತವೆ. ಗೆಳೆಯರ ಬಳಗದ ಜತೆಗೆ ಸಂವಹನ ಮಿತವ್ಯಯಕಾರಿಯಾಗಿ ಹಾಗೂ ಸುಲಭವಾಗಿ ಸಾಧ್ಯವಾಗುತ್ತದೆ. ಹೊಸ ಗೆಳೆಯರನ್ನು ಹುಡುಕಲು, ಬಳಗವನ್ನು ಬೆಳೆಸಲು ಅವಕಾಶವಾಗುತ್ತದೆ. ಹಿರಿಯ ನಾಗರಿಕರಿಗೂ ಸಮಾಜದ ಜತೆಗೆ ಬೆರೆಯಲು ವೇದಿಕೆ ಸಿಗುತ್ತದೆ. ಒಂಟಿತನ, ಬೇಸರ ಹೋಗಲಾಡಿಸುತ್ತದೆ.
ಸತ್ಯ-ಮಿಥ್ಯೆ ಗೊಂದಲ
ಮಾಹಿತಿಯಂತೆ ಸುಳ್ಳುಗಳೂ ಜಾಲತಾಣಗಳಲ್ಲಿ ಬೇಗನೆ ಹರಡುತ್ತವೆ. ಯುವಜನತೆ ಹಾಗೂ ಉದ್ಯೋಗಿಗಳು ಅವುಗಳನ್ನು ಬಳಸುವುದರಲ್ಲಿ ಹೆಚ್ಚು ವೇಳೆ ವ್ಯಯಿಸುವುದರಿಂದ ಉತ್ಪಾದಕತೆ ಹಾಗೂ ಕಲಿಕೆಗೆ ಪೆಟ್ಟು. ಅಧ್ಯಯನಕ್ಕಿಂತ ವೇಳೆ ವ್ಯಯವೇ ಹೆಚ್ಚು. ಅಲ್ಲಿ ಇರುವುದೆಲ್ಲ ನಿಜವಲ್ಲ. ನಿಜದಂತಿರುವ ಸುಳ್ಳುಗಳೇ ಜಾಸ್ತಿ. ಸಾಮಾಜಿಕ ಜಾಲತಾಣ ಪ್ರಪಂಚವನ್ನು ನೋಡುವ ಕಿಟಕಿ. ಅದರ ಮೂಲಕವೇ ಪ್ರಪಂಚವೂ ನಮ್ಮನ್ನು ಗಮನಿಸುತ್ತಿರುತ್ತದೆ ಎಂಬುದನ್ನು ನೆನಪಿಡಿ. ಜಾಲತಾಣದಲ್ಲಿ ಎಚ್ಚರದಿಂದ ಅಡ್ಡಾಡಿ, ಜಾಲಿ ಮುಳ್ಳುಗಳಿಂದ ಚುಚ್ಚಿಸಿಕೊಳ್ಳದೆ ಜಾಲಿಯಾಗಿರಿ.
- ಅನಂತ ಹುದೆಂಗಜೆ
hudengaje@gmail.com