

ಇಂದಿನ ಯುವಜನರು ತಾವು ಕೈ ಹಾಕುವ ಎಲ್ಲದರಲ್ಲೂ ಮೊದಲಿಗರಾಗಬೇಕು ಎಂದು ಹಂಬಲಿಸುತ್ತಾರೆ. ರಾತ್ರೋರಾತ್ರಿ ದುಡಿದು ಹಣವಂತರಾಗಲು ತಯಾರಿ ನಡೆಸುತ್ತಾರೆ. ಈ ಪ್ರಕ್ರಿಯೆಯೇ ಅವರೊಳಗೆ ಗೊಂದಲಗಳನ್ನು ಹುಟ್ಟಿಹಾಕುತ್ತದೆ...
ಸುನೀಲನ ಹಣೆಯ ಮೇಲಿನ ನೆರಿಗೆಗಳು, ಇಳಿ ಬಿದ್ದ ಕಣ್ಣುಗಳನ್ನು ನೋಡಿದರೆ ಮನದಲ್ಲಿ ನಡೆಯುತ್ತಿರುವ ಕೋಲಾಹಲ ಯಾರಿಗಾದರೂ ಎದ್ದು ಕಾಣುತ್ತಿತ್ತು. ಏನಾಯ್ತು ಸುನೀಲ ಎಂದು ಕೇಳಿದ್ದೇ ತಡ ಮನದ ಮೂಲೆಯಲ್ಲಿ ನಿತ್ಯ ಏಳುವ ಗೊಂದಲಗಳ ಸರಮಾಲೆಯನ್ನೇ ಬಿಚ್ಚಿಟ್ಟ.
ನಾನು ಓದಿನಲ್ಲಿ ಆಯ್ಕೆ ಮಾಡಿಕೊಂಡಿರುವ ದಾರಿ ಸರೀನಾ? ಅಪ್ಪ, ಅಮ್ಮ ಹೇಳಿದ, ಎಲ್ಲವನ್ನೂ ಧಿಕ್ಕರಿಸಿ ತೆಗೆದುಕೊಂಡ ಆಯ್ಕೆಗಳು ಮುಂದೆ ಕೈ ಕೊಡಬಹುದಾ? ಉದ್ಯೋಗಕ್ಕೆ ಅಲೆಯುವಾಗ ಇದೇ ಮುಖ್ಯ ಸಮಸ್ಯೆಯಾಗಿ ಪರಿಣಮಿಸಬಹುದಾ? ಮನ ಮೆಚ್ಚಿದ ಗೆಳತಿ ನಾನಿರುವ ಹಾಗೆಯೇ ನನ್ನನ್ನು ಒಪ್ಪಿಕೊಳ್ತಾಳಾ? ಹಿಂದಿನ ಗೊಡ್ಡು ಮದುವೆ ಸಂಪ್ರದಾಯಕ್ಕಿಂತ ಮದುವೆಯಾಗದೇ ಜೊತೆಯಲ್ಲಿರುವುದೇ ಲೇಸಾ?
ಅಪ್ಪ, ಅಮ್ಮ ಹಾಕಿದ ಆಲದ ಮರಕ್ಕೆ ತಲೆಕೊಡಲು ನಾನು ಸಿದ್ಧನಿಲ್ಲ. ನನ್ನದೇ ದಾರಿ ಆಯ್ದುಕೊಳ್ಳಲು ನನಗಿಷ್ಟ. ಆದರೆ ಹೆತ್ತವರು ಹಾಕಿರುವ ಪರಿಧಿ ನನ್ನಲ್ಲಿ ಗೊಂದಲದ ಬಿರುಗಾಳಿ ಎಬ್ಬಿಸಿದೆ ಎಂದ.
ಇದಕ್ಕೆಲ್ಲ ಕಾರಣ ಏನಿರಬಹುದು? ಬೆಳೆಯುತ್ತಿರುವಾಗ ಆಗುತ್ತಿರುವ ಹಾರ್ಮೋನ್ಗಳ ಉತ್ಪತ್ತಿಯಿಂದ ಆಗುತ್ತಿರುವ ದೈಹಿಕ ಮತ್ತು ಮಾನಸಿಕ ಬದಲಾವಣೆಯೇ ಅಥವಾ ಹೆಚ್ಚುತ್ತಿರುವ ಲೈಂಗಿಕ ಆಸಕ್ತಿ ಅಥವಾ ಕುತೂಹಲವೇ? ಯುವ ಮನಸ್ಸಿನ ಮೆದುಳಿನ ಕಾರ್ಯದಲ್ಲಾಗುತ್ತಿರುವ ಬದಲಾವಣೆಯೇ? ಅಪ್ಪ ಅಮ್ಮ ಅಡ್ಡದಾರಿ ತುಳಿಯಬಾರದೆಂದು ತೋರುತ್ತಿರುವ ಅತಿಯಾದ ಕಾಳಜಿಯೇ ಅಥವಾ ತಪ್ಪು ಮಾಡಿದಾಗ ತೋರುವ ಅಸಹನೆಯೇ? ಎಷ್ಟೆಲ್ಲ ಪ್ರಶ್ನೆಗಳು ಅವನ ಪ್ರಶ್ನೆಗಳೊಂದಿಗೇ ಸೇರಿದವೇ ಹೊತು ಉತ್ತರ ಸಿಗಲಿಲ್ಲ ಅಲ್ವೇ?
ನಿಜ ಹೇಳಬೇಕೆಂದರೆ, ಮೇಲಿನ ಎಲ್ಲ ಕಾರಣಗಳು ಯುವಜನರಲ್ಲಿ ಗೊಂದಲ ಸೃಷ್ಟಿಸುವ ಒಂದು ಭಾಗವಷ್ಟೇ. ಮುಖ್ಯ ಕಾರಣಗಳೇ ಬೇರೆ. ಇಂದಿನ ಯುವಜನರು ತಾವು ಕೈ ಹಾಕುವ ಎಲ್ಲದರಲ್ಲೂ ಮೊದಲಿಗರಾಗಬೇಕು ಎಂದು ಹಂಬಲಿಸುತ್ತಾರೆ. ರಾತ್ರೋರಾತ್ರಿ ದುಡಿದು ಹಣವಂತರಾಗಲು ತಯಾರಿ ನಡೆಸುತ್ತಾರೆ. ಹೀಗೆ ಮಾಡಲು ಹೋಗಿ ಇಷ್ಟವಿಲ್ಲದಿದ್ದರೂ ಹೆಸರು, ಹಣ ಕೊಡುವ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಅಪ್ಪ, ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಹಾಗಾಗಿ ಮಕ್ಕಳಿಗೆ ಪ್ರೀತಿ ತೋರಿಸುವವರೇ ಇರುವುದಿಲ್ಲ. ರಾತ್ರಿ ಮನೆಗೆ ಬಂದ ಅಪ್ಪ, ಅಮ್ಮ ಓದಿನ ವಿಚಾರದಲ್ಲಿ ಪಕ್ಕದ ಮನೆಯ ಹುಡುಗನ ಜತೆ ಮಾಡುವ ಹೋಲಿಕೆ ಮಕ್ಕಳಲ್ಲಿ ಒಂದು ರೀತಿಯ ಭಯ ಮೂಡಿಸುತ್ತದೆ. ಇದರಿಂದ ಅವರ ಮನಸ್ಸೆಂಬ ಅರಮನೆಯಲ್ಲಿ ಹೆಜ್ಜೆ ಹೆಜ್ಜೆಗೂ ಗೊಂದಲವೇ ಕಾಣಸಿಗುತ್ತದೆ.
ಕಾಲೇಜಿನಲ್ಲಿರುವಾಗ ಸ್ನೇಹಿತರಂತೆ ತಾವೂ ದುಡ್ಡು ಖರ್ಚು ಮಾಡಬೇಕು, ಅವರ ಹಾಗೆಯೇ ಗರ್ಲ್/ ಬಾಯ್ಫ್ರೆಂಡ್ ಹೊಂದಬೇಕು ಎಂಬ ಕನಸು ಕಾಣುತ್ತಾರೆ. ಹೀಗೆ ಸುತ್ತಾಡುವ ಹಂತದಲ್ಲಿದ್ದ ಪ್ರೀತಿ ಕಾಲುಜಾರಿ ಮದುವೆಯ ಹಂತ ತಲುಪಿದಾಗ ಶಿಕ್ಷಣ ಸರಿಯಾಗಿ ಮುಗಿಸದೆ ಒಪ್ಪುವ ಕೆಲಸವೂ ಇಲ್ಲದೆ ಇಂದು ನಾಳೆಗಳು ಪ್ರಶ್ನೆಗಳಲ್ಲಿಯೇ ಸರಿದು ಹೋಗುತ್ತದೆ. ಕೊನೆಗೊಮ್ಮೆ ತಾನು ಮಾಡಿದ್ದು ತಪ್ಪಾ ಅಥವಾ ಸರಿಯಾ ಎನ್ನುವ ಪ್ರಶ್ನೆ ಕೂಡ ಗೊಂದಲದ ಉತ್ತರದಲ್ಲೇ ಕೊನೆಯಾಗುತ್ತದೆ.
= ಜಮುನಾರಾಣಿ