ಕಾಪಿಬುದ್ಧಿ

ಕಾಪಿಬುದ್ಧಿ
Updated on: 

ನೂತನವಾಗಿ ಏನನ್ನಾದ್ರೂ ಮಾಡಲು ಬುದ್ಧಿ ಬಳಸಲೇಬೇಕು. ತಲೆ ಸಿಡಿಸಿಕೊಳ್ಳಲೇಬೇಕು. ಎಂಜಿನಿಯರಿಂಗ್ ಹುಡುಗರಾಗಿ ಆಗಾಗ್ಗೆ ನಮ್ಮ ಗ್ರೂಪ್‌ನಲ್ಲಿ ಮಾತಾಡಿಕೊಳ್ಳುವ ಮಾತೇ ಇದು. ಪ್ರಾಜೆಕ್ಟ್‌ಗಳನ್ನು ಮಾಡುವಾಗ ಇರುವ ಸುಲಭ ಆಯ್ಕೆ ಎಂದರೆ ಇದ್ದುದನ್ನೇ ಸ್ವಲ್ಪ ಬದಲಾಯಿಸಿಬಿಡುವುದು. ಆದರೆ, ಹೊಸದಾಗಿಯೇ ಏನನ್ನಾದರೂ ಮಾಡುವುದು ತುಂಬಾ ಕಠಿಣ.
ಯಾವುದೇ ರಂಗದಲ್ಲಾದರೂ ಕೆಲವು ಕಾಪಿ ಮಾಡುವ ವ್ಯಕ್ತಿಗಳು ಇದ್ದೇ ಇರುತ್ತಾರೆ. ಈ ಕಾಪಿ ಮಾಡುವ ಖಯಾಲಿಗೆ ಕಾರಣಗಳೆಂದರೆ, ಪರಿಸ್ಥಿತಿಯ ಒತ್ತಡದಿಂದ ಪಾರಾಗಲು, ಇಲ್ಲವೇ ಅವರಿಗೆ ಯಶಸ್ಸು ದೊರೆತಂತೆ ತಮಗೂ ದೊರೆಯಬೇಕೆಂಬ ಚಪಲ. ಆದರೆ ಕೆಲವರು ನಿಜವಾದ ಆಸ್ಥೆ ವಹಿಸಿ ನೂತನವಾದವುಗಳನ್ನೇ ಬಿಡುಗಡೆಗೆ ತರುತ್ತಾರೆ. ಇನ್ನು ಒಂದು ಗಮನಿಸಬೇಕಾದ ಅಂಶವೇನೆಂದರೆ, ಈ ನಕಲು ಮಾಡಿದವು ಬಹಳಷ್ಟು ಬಾರಿ ತಿರಸ್ಕಾರಕ್ಕೋ,ಅವಗಣನೆಗೋ ಗುರಿಯಾಗುತ್ತವೆ. ಉದಾಹರಣೆಗೆ ಪಾರ್ಲೆ-ಜಿ ಕಂಪನಿಯ ಉತ್ಪನ್ನಗಳು ಯಶಸ್ಸು ಪಡೆಯಲಾಂಭಿಸಿದಾಗ ಅದೇ ಹೆಸರಿನ ಮೇಲೆ ನಾನಾ ಉತ್ಪನ್ನಗಳು ಮಾರುಕಟ್ಟೆಗೆ ಬಂದವು. ಆದರೆ ಪಾರ್ಲೆ-ಜಿ ಕಂಪನಿಯನ್ನು ಮೀರಿಸಲಾಗಲಿಲ್ಲ. ಹಾಗೆಯೇ ವಾಟ್ಸ್ ಆ್ಯಪ್, ಟೆಲಿಗ್ರಾಂ, ಹೈಕ್ ಇವುಗಳಲ್ಲಿ ಹೆಚ್ಚಿನ ವ್ಯತ್ಯಾಸವಿರದೇ ಇದ್ದರೂ ಹೆಚ್ಚಾಗಿ ವಾಟ್ಸ್ ಆ್ಯಪ್ ಅನ್ನೇ ನೆಚ್ಚಲು ಅದು ಮೊದಲು ಬಿಡುಗಡೆಯಾದದ್ದು.
ಇತ್ತೀಚಿನ ನಕಲಿನ ಕುರಿತು ಹೇಳಲೇಬೇಕೆನಿಸುತ್ತದೆ. ಅದು ಕಾಂಗ್ರೆಸ್‌ಗೆ ಸಂಬಂಧಿಸಿದ್ದು. ಕೈ ಪಕ್ಷ ಬಿಜೆಪಿಯ ಘೋಷವಾಕ್ಯ 'ನಾನು ಅಲ್ಲ, ನಾವು' ಎಂಬುದನ್ನೇ ತಮ್ಮ ಪಕ್ಷದ ಚುನಾವಣಾ ಘೋಷವಾಕ್ಯವಾಗಿ ಮಾಡಿಕೊಂಡಿದೆ. ಬಿಜೆಪಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ 'ಯಾರ ಘೋಷವಾಕ್ಯ ಯಾರದ್ದೂ ಅಲ್ಲ' ಎಂಬ ನುಣುಚಿಕೊಳ್ಳುವ ಹೇಳಿಕೆ ಕಾಂಗ್ರೆಸ್‌ನಿಂದ ಬಂತು. ಅಲ್ಲ ರೀ, ಪಕ್ಷಕ್ಕೆ ಒಂದು ಸ್ವಂತ ಘೋಷವಾಕ್ಯವನ್ನು ಸಿದ್ಧಮಾಡಲಾಗದವರು ಅದು ಹೇಗೆ ದೇಶಕ್ಕಾಗಿ ಹೊಸ ಯೋಜನೆಗಳನ್ನು ಸಿದ್ಧಪಡಿಸುತ್ತಾರೆ?
ಈ ನಕಲಿ ಜಾಯಮಾನ ಸ್ಯಾಮ್‌ಸಂಗ್ ಕಂಪನಿಯನ್ನೂ ಬಿಟ್ಟಿಲ್ಲ. ಅವರು ಆ್ಯಪಲ್ ಕಂಪನಿಯ ಆ್ಯಪ್‌ಗಳನ್ನು ನಕಲಿ ಮಾಡಿದಕ್ಕಾಗಿ ದಂಡ ತೆತ್ತಿದ್ದು ಹಳೇ ಕತೆ. ಆದರೆ, ಒಂದು ತಿಳಿದುಕೊಳ್ಳಿ. ಈ ಜಗತ್ತಿನಲ್ಲಿ ಎಲ್ಲವೂ ನಕಲಿ ಅಲ್ಲ. ಉದಾಹರಣೆಗೆ, ಗಾಂಧೀಜಿಯವರ ಅಹಿಂಸಾ ತತ್ವಗಳನ್ನು ಅನುಸರಿಸಿ ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾದಲ್ಲಿ ಯಶಸ್ಸು ಸಾಧಿಸಿದರು. ಕೆಲವು ವಿದ್ಯಾರ್ಥಿ ಟಾಪರ್ಸ್‌ಗಳನ್ನು ಅನುಸರಿಸಿದ ವಿಧಾನಗಳನ್ನು ತಾವೂ ಅನುಸರಿಸಿ ಯಶಸ್ಸು ಸಾಧಿಸುವುದನ್ನು ನೋಡುತ್ತೇವೆ.
ಮತ್ತೊಬ್ಬರ ಕೆಲಸಗಳ ಸಾರಾಂಶವನ್ನು ಕಾಪಿ ಮಾಡಬಹುದೇ ವಿನಾ, ವಿಧಾನವನ್ನು ನಕಲಿ ಮಾಡಕೂಡದು. ಹೇಗೆಂದರೆ, ಗಾಂಧೀಜಿಯವರು ಹೋರಾಡಿದ ಹಾದಿ ಅಹಿಂಸಾ ಮಾರ್ಗ. ಅದನ್ನೇ ನೆಲ್ಸನ್ ಮಂಡೇಲಾ ಅನುಸರಿಸಿದರೇ ಹೊರತು, ಗಾಂಧೀಜಿ ಮಾಡಿದಂತೆ 'ಉಪ್ಪಿನ ಸತ್ಯಾಗ್ರಹ'ವನ್ನಾಗಲಿ, 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಮುಂತಾದ ಮಾರ್ಗಗಳನ್ನು ಮಂಡೇಲಾ ಅನುಸರಿಸಲಿಲ್ಲ. ಹಾಗೆಯೇ ವಿದ್ಯಾರ್ಥಿ ಟಾಪರ್ಸ್ ವಿಚಾರವೂ ಹಾಗೆಯೇ.
ಈ ಅಂಶಗಳಿಂದ ವಿದಿತವಾಗುವುದೇನೆಂದರೆ, ತಿರುಳನ್ನು ಬಳಸಿಕೊಂಡು ಸ್ವಂತದ್ದನ್ನು ಮಾಡಬೇಕೇ ವಿನಾ ಇದ್ದುದನ್ನೇ ತೆಗೆದುಕೊಂಡು ಬಳಸುವುದಲ್ಲ. ಸ್ವಂತಿಕೆಯನ್ನು ಸ್ವಲ್ಪ ಮಟ್ಟಿಗಾದರೂ ಇಟ್ಟುಕೊಳ್ಳಬೇಕು.

= ವಿಕ್ರಂ ಪತ್ತಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com