

ಭಾರತೀಯ ವಿಜ್ಞಾನ ಜಗತ್ತಿನ ಬಹುತೇಕ ಮಹಾನ್ ಪುರುಷರನ್ನು ಹುಟ್ಟುಹಾಕಿದ, ಉತ್ಕೃಷ್ಟ ವೈಜ್ಞಾನಿಕ ಚಿಂತನೆಗಳನ್ನು ದೇಶಕ್ಕೆ ನೀಡಿದ ಹೆಗ್ಗಳಿಕೆ ಬೆಂಗಳೂರಿನ ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನದ್ದು. ದೇಶದ ಈ ಅಗ್ರಗಣ್ಯ ಶಿಕ್ಷಣ ಸಂಸ್ಥೆಯ ನಿರ್ಮಾಣದ ಹಿಂದೆ ಜೆಮೆಶೆಡ್ ಜಿ ಟಾಟಾ ಅವರ ಅವಿಶ್ರಾಂತ ಶ್ರಮವಿದೆ.
ಜೆಮ್ಶೆಡ್ ಜಿ ನಸ್ಸರವಾಂಜಿ ಟಾಟಾ, 19ನೇ ಶತಮಾನದ ಅಂತ್ಯದಲ್ಲಿ ಭಾರತದಲ್ಲಿ ವಿಜ್ಞಾನದ ವಿಶ್ವವಿದ್ಯಾನಿಲಯ ಅಭಿವೃದ್ಧಿಗೊಳಿಸಲು ಮೊದಲು ಮುಂದಾದವರು. ಆ ಕಾಲದಲ್ಲೇ ಅವರು, 'ಈ ಸಂಸ್ಥೆ ಎಲ್ಲ ತಲೆಮಾರಿಗೂ ಸಹಾಯವಾಗುತ್ತದೆ. ದೇಶದಲ್ಲಿ ಸ್ಪರ್ಧೆಯೊಂದನ್ನು ಹುಟ್ಟು ಹಾಕುತ್ತದೆ' ಎಂಬ ಭರವಸೆ ಹೊಂದಿದ್ದರು. ಭಾರತ ಒಂದು ವೈಜ್ಞಾನಿಕ ಸಂಶೋಧನೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಸ್ವಂತ ವಿಶ್ವವಿದ್ಯಾನಿಲಯ ಹೊಂದಿರಬೇಕು. ಅಲ್ಲಿ ಮಹಾನ್ ಚಿಂತಕರು ತಮ್ಮ ಹೊಸ ಆಲೋಚನೆಗಳನ್ನು ಹುಟ್ಟುಹಾಕಿ ಪ್ರಯೋಗ ಮಾಡಬೇಕೆಂಬ ಕನಸು ಜೆಮ್ಶೆಡ್ ಜಿ ಅವರದಾಗಿತ್ತು.
ರೇ ಪ್ರೇರಣೆ
ಅದು 1889ನೇ ಇಸ್ವಿ. ಜೆಮ್ಶೆಡ್ ಜಿ ಟಾಟಾ ಬಾಂಬೆಯ ಜನಪ್ರಿಯ ಗವರ್ನರ್ ಲಾರ್ಡ್ ರೇ ಅವರೊಂದಿಗೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದರು. ಆಗ ರೇ, 'ವಿಶ್ವವಿದ್ಯಾನಿಲಯಗಳು ಪರೀಕ್ಷೆ ನಡೆಸುವ ಘಟಕಗಳಾಗಿ ಉಳಿದರೆ ಶಿಕ್ಷಣ ಅಭಿವೃದ್ಧಿಗೊಳ್ಳುವುದಿಲ್ಲ. ನೈಜ ವಿವಿಗಳು ಕಲಿಕೆ, ಸಂಶೋಧನೆ, ಟೀಕೆಗೆ ತಾಜಾತನ ನೀಡುತ್ತವೆ. ಅದು ಮುಂದಿನ ಪೀಳಿಗೆಗೆ ಶಕ್ತಿ ತುಂಬಲು, ಸ್ವಾವಲಂಬನೆ ನೀಡಲು ಸಹಕಾರಿ' ಎಂದು ತಿಳಿಸಿದ್ದರು. ರೇ ಮಾತುಗಳಿಂದ ಸ್ಫೂರ್ತಿ ಪಡೆದ ಜೆಮ್ಶೆಡ್ ಜಿ, ತಮ್ಮ ಆಲೋಚನೆಗೆ ಸ್ಪಷ್ಟ ಸ್ವರೂಪ ನೀಡುವ, ಜಾಗತಿಕ ಗುಣಮಟ್ಟಗಳನ್ನು ಪೂರೈಸುವ ಉನ್ನತ ವಿಜ್ಞಾನ ವಿಶ್ವವಿದ್ಯಾಲಯದ ಕನಸಿನ ಯೋಜನೆಗೆ ಅಂದೇ ಚಾಲನೆ ನೀಡಿದ್ದರು.
1898ರಲ್ಲಿ ಜೆಮ್ಶೆಡ್ ಜಿ ಐಐಎಸ್ಸಿಯ ಸ್ಥಾಪನೆ ನಿಟ್ಟಿನಲ್ಲಿ ಒಂದು ಹೆಜ್ಜೆ ಇಟ್ಟರು. ಐಐಎಸ್ಸಿಗಾಗಿ ಮುಂಬೈಯಲ್ಲಿ 14 ಕಟ್ಟಡಗಳು ಮತ್ತು 4 ನಿವೇಶನಗಳ ನಿರ್ಮಾಣಕ್ಕೆ ಹಣ ಒದಗಿಸಲು ತಮ್ಮ ಸಂಪತ್ತಿನ ಅರ್ಧದಷ್ಟನ್ನು ನೀಡುವ ವಾಗ್ದಾನ ಮಾಡಿದರು.
ನೊಬೆಲ್ ಪುರಸ್ಕೃತ ವಿಲಿಯಂ ರಾಮ್ಸೆ ಇಂಥ ಸಂಸ್ಥೆ ಸ್ಥಾಪನೆಗೆ ಬೆಂಗಳೂರು ಸೂಕ್ತ ಎಂದು ನಿರ್ಧರಿಸಿದ ಬಳಿಕ ನಾಲ್ವಡಿ ಕೃಷ್ಣರಾಜ ಒಡೆಯರ್ ಸರ್ಕಾರದ ಕೆ.ಶೇಷಾದ್ರಿ ಅಯ್ಯರ್ ಬೆಂಗಳೂರಿನಲ್ಲಿ 371 ಎಕರೆ ಭೂಮಿಯನ್ನು ನೀಡಲು ಮುಂದೆ ಬಂದರು. 5 ಲಕ್ಷವನ್ನು ನಿರ್ಮಾಣಕ್ಕೆ ದೇಣಿಗೆ ನೀಡಿದರು ಮತ್ತು ವಾರ್ಷಿಕ 50 ಸಾವಿರ ದೇಣಿಗೆ ಭರವಸೆ ಇತ್ತರು. ಯೋಜನೆ ಕೈಗೆತ್ತಿಕೊಳ್ಳುವ ವೇಳೆಗೆ ದುರಾದೃಷ್ಟವಶಾತ್ ಜೆಮ್ಶೆಡ್ಜಿ ವಿಧಿವಶರಾಗಿದರು. ರತನ್ ಮತ್ತು ದೊರಬ್ ಟಾಟಾ ನಂತರದಲ್ಲಿ ಯೋಜನೆಯನ್ನು ಮುಂದುವರಿಸಿದರು.
ಮಹಾರಾಜರಿಂದ ಶಂಕು
1911ರಲ್ಲಿ ಐಐಎಸ್ಸಿಗೆ ಮೈಸೂರು ಮಹಾರಾಜರು ಶಂಕು ಸ್ಥಾಪನೆ ನೆರವೇರಿಸಿದರು. ಇದೇ ವರ್ಷ ಜುಲೈನಲ್ಲಿ ಮೊದಲ ಬ್ಯಾಚ್ನ ವಿದ್ಯಾರ್ಥಿಗಳು ಪ್ರವೇಶ ಪಡೆದರು. ಮೊದಲು ಸಾಮಾನ್ಯ ಮತ್ತು ಅಪ್ಲೈಡ್ ಕೆಮಿಸ್ಟ್ರಿ, ಆರ್ಗಾನಿಕ್ ಕೆಮಿಸ್ಟ್ರಿ ಮತ್ತು ಎಲೆಕ್ಟ್ರೋ ಟೆಕ್ನಾಲಜಿಗಳಿಗೆ ಪ್ರವೇಶ ನೀಡಲಾಯಿತು. ಅಲ್ಲಿಂದ ನಂತರ ಐಐಎಸ್ಸಿ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳವಣಿಗೆ ಹೊಂದಿದ್ದು, ಈಗ 2000ಕ್ಕೂ ಹೆಚ್ಚು ಸಂಶೋಧಕರು ವಿಜ್ಞಾನ ಮತ್ತು ತಂತ್ರಜ್ಞಾನದ ಮುಂಚೂಣಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದೊಂದು ಶತಮಾನದಲ್ಲಿ ಐಐಎಸ್ಸಿ ತನ್ನ ಶೈಕ್ಷಣಿಕ ಸೇವೆಯನ್ನು ಬಯೋಕೆವುಸ್ಟ್ರಿಯಿಂದ ಹಿಡಿದು ಏರೋಸ್ಪೇಸ್ ಎಂಜಿನಿಯರಿಂಗ್ ವರೆಗೆ ಸ್ನಾತಕೋತ್ತರ ಪದವಿ, ಪಿಎಚ್ಡಿ ಕಾರ್ಯಕ್ರಮಗಳ ವರೆಗೆ ವಿಸ್ತರಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಗಣಿತ, ಕೆಮಿಕಲ್ ಬಯೋಲಜಿ ಅರ್ಥ್ ಸಿಸ್ಟಮ್ ಸೈನ್ಸ್, ನ್ಯಾನೋ ಸೈನ್ಸ್ ಮತ್ತು ನ್ಯಾನೋ ಟೆಕ್ನಾಲಜಿಗಳಲ್ಲಿ ಪಿಎಚ್ಡಿ ಪದವಿಯನ್ನು ಉತ್ತೇಜಿಸುತ್ತಿದೆ.
ಸಂಶೋಧನೆಯತ್ತ ಕೇಂದ್ರೀಕೃತ
ಸಂಸ್ಥೆಯ ಪ್ರಮುಖ ಧ್ಯೇಯ ಸಂಶೋಧನೆ. ಐಐಎಸ್ಸಿ ಬೋಧಕ ವೃಂದ ದೇಶದ ವಿಜ್ಞಾನ ವಲಯದಲ್ಲಿನ ಸಮರ್ಥ ಹೆಸರುಗಳನ್ನು ಹೊಂದಿದೆ. ಅವರಲ್ಲಿ ಸಿ.ವಿ. ರಾಮನ್ ಒಬ್ಬರು. ಇವರು ಸಂಸ್ಥೆಯ ಮೊದಲ ನಿರ್ದೇಶಕರಾಗಿ, 1933ರಲ್ಲಿ ಭೌತಶಾಸ್ತ್ರ ವಿಭಾಗಕ್ಕೆ ಚಾಲನೆ ಕೊಟ್ಟವರು. ಸತೀಶ್ ಧವನ್, ಜೆ.ಸಿ. ಘೋಷ್, ಹೋಮಿ ಬಾಬಾ, ಜಿ.ಎನ್. ರಾಮಚಂದ್ರನ್, ಹರಿಶ್ಚಂದ್ರ, ಎಸ್. ರಮೇಶನ್, ವಿಕ್ರಂ ಸಾರಾಭಾಯಿ, ಬ್ರಹ್ಮ ಪ್ರಕಾಶ್, ಎ. ರಾಮಚಂದ್ರನ್, ಸಿಎನ್ಆರ್ ರಾವ್ ಮತ್ತು ಆರ್. ನರಸಿಂಹನ್ರಂಥ ಮಹಾನ್ ವಿಜ್ಞಾನಿಗಳು ಐಐಎಸ್ಸಿ ಬೆಳವಣಿಗೆಯಲ್ಲಿ ಶ್ರಮಿಸಿದ್ದಾರೆ.
ಸಹಭಾಗಿತ್ವದ ಉತ್ತಮ ಉದಾಹರಣೆ
ಆರಂಭದಲ್ಲಿ ಸಂಸ್ಥೆ ಟಾಟಾ ಹಾಗೂ ಮೈಸೂರು ಸರ್ಕಾರದಿಂದ (ಇಂದಿನ ಕರ್ನಾಟಕ ಸರ್ಕಾರ) ನಡೆಯುತ್ತಿತ್ತು. ಇದು ಸರ್ಕಾರಿ- ಖಾಸಗಿ ಸಹಭಾಗಿತ್ವದ ಯೋಜನೆಗೆ ಮೊದಲ ಉದಾಹರಣೆ. ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅನ್ನು ಮೊದಲು ಇಂಪೀರಿಯಲ್ ಯೂನಿವರ್ಸಿಟಿ ಆಫ್ ಇಂಡಿಯಾ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಮಾರಿಸ್ ಸ್ಟ್ರವೇರ್ಸ್ ಸಂಸ್ಥೆಯ ಮೊದಲ ನಿರ್ದೇಶಕರಾಗಿದ್ದರು. ಸರ್.ಎಂ. ವಿಶೇಶ್ವರಯ್ಯ 3 ದಶಕಗಳ ಕಾಲ ಸಂಸ್ಥೆಯ ಆಡಳಿತ ಮಂಡಳಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಈ ಸಂಸ್ಥೆ ವಿಜ್ಞಾನಿ ಸಿ.ವಿ. ರಾಮನ್ಗೆ ಲೈಟ್ ಸ್ಕ್ಯಾಟರಿಂಗ್ ಸಂಶೋಧನೆಗೆ ಅವಕಾಶ ಮಾಡಿಕೊಟ್ಟಿತು. ಇದೇ ಸಂಶೋಧನೆ 1930ರಲ್ಲಿ ನೊಬೆಲ್ ಗೆದ್ದುಕೊಂಡಿತು.
-ಚೇತನ್ ಡಿ.