
ಸಾಧಕನೋ, ಪ್ರತಿಭಾವಂತನೋ ಗೊತ್ತಿಲ್ಲ. ವೇದಿಕೆಗೆ ಹತ್ತಿ ಬಹುಮಾನ ತೆಗೆದುಕೊಳ್ಳುತ್ತಿರಬೇಕಾದರೆ, ಸಭಾಂಗಣದಲ್ಲಿರುವವರೆಲ್ಲ ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಪ್ರೋತ್ಸಾಹಿಸುತ್ತಿರುತ್ತಾರೆ. ಆದರೆ, ಆ ಬಹುಮಾನ ಪಡೆಯಲು ಅವನು ಪಟ್ಟಿರಬಹುದಾದ ಶ್ರಮದ ಬಗ್ಗೆ, ಅವನು ನಡೆದ ದಾರಿ ಬಗ್ಗೆ ಎಷ್ಟು ಮಂದಿಗೆ ತಿಳಿಯುವ ಆಸಕ್ತಿ ಇದೆ? ಅದಕ್ಕೇ ಹೇಳುವುದು... ಯಾವತ್ತೂ ಸಭೆಯಲ್ಲಿ ಕುಳಿತು ಚಪ್ಪಾಳೆ ಹೊಡೆಯುವಲ್ಲಿಗೆ ಸೀಮಿತರಾಗಿಬಿಡಬೇಡಿ. ಒಂದು ದಿನ ನೀವೂ ಅದೇ ವೇದಿಕೆಗೆ ಹತ್ತಿ ಬಹುಮಾನ ಪಡೆಯುವವರಾಗುವತ್ತ ಕೆಲಸ ಮಾಡಿ...
-
ನರೇಂದ್ರ ಮೋದಿ ದೇಶದ ಯುವ ಹೃದಯಗಳನ್ನು ಗೆದ್ದವರು. ಅಧಿಕಾರ ವಹಿಸಿ ತಿಂಗಳು ಕಳೆಯುವುದರೊಳಗೆ ಮೋದಿ ಆಡಳಿತದಲ್ಲಿ ತಾವು ವಿಭಿನ್ನ ಎಂಬುದನ್ನು ತೋರಿಸಿದರು. ಮೋದಿ ಗಾಂಭೀರ್ಯ, ಅತಿರಂಜಿತವಾಗಿರದ ಕಾರ್ಯವೈಖರಿ, ಜಾಣ್ಮೆಯ ಮಾತುಗಳು, ಪ್ರೌಢ ಭಾಷಣ ಹಾಗೂ ಅವರ ಕಠಿಣ ನಿಲುವುಗಳಿಗೆ ಯುವಕರಿಂದ ಸಾಕಷ್ಟು ಮೆಚ್ಚುಗೆ ಸಿಕ್ಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಆದರೆ, ಯೋಚಿಸಿ ಮೋದಿ ಸಂಪುಟದಲ್ಲಿರುವವರು, ನಾವು ಆರಿಸಿ ಕಳುಹಿಸಿದವರ ಪೈಕಿ ತುಂಬಾ ಮಂದಿ ಸಂಸದರು, ಹಳಬರೇ ತಾನೆ. ಟಿಪಿಕಲ್ ರಾಜಕಾರಣಿಗಳೇ ಮೋದಿ ಜೊತೆಗಿರುವವರು ತಾನೆ. ಅವರೂ ಬದಲಾಗಬೇಡವೇ? ಅಷ್ಟೇ ಯಾಕೆ ಬದಲಾವಣೆಗೆ ಸ್ವತಃ ನಾವೂ ಒಗ್ಗಿಕೊಳ್ಳಬೇಡವೇ?
-
ಅಯ್ಯೋ ಮಳೆ, ಕೆಸರು, ರಾಡಿ, ಚಳಿಯೆಂದು ಅಸಹನೆ ತೋರುವುದರಿಂದ ಏನು ಪ್ರಯೋಜನ? ಮಳೆ ಪ್ರಕೃತಿ ನಿಮಯ... ಆ ಕುಳಿರ್ಗಾಳಿ, ಮುಖಕ್ಕೆ ರಾಚುವ ತಂಪು ನೀರು, ತುಂಬಿ ಹರಿವ ನದಿ, ತೊರೆ, ಹಸಿರು ಹೊದ್ದುಕೊಳ್ಳುವ ಪ್ರಕೃತಿ ನೆನೆಸಿದರೆ ಮಳೆಯೆಷ್ಟು ಸುಂದರ ಎನಿಸದಿರದು... ಬದುಕೂ ಹಾಗೆ, ವಿಷಯವೊಂದನ್ನು ವಿಭಿನ್ನವಾಗಿ ನೋಡುವುದರಲ್ಲಿ, ಯೋಚಿಸುವುದರಲ್ಲಿ ಖುಷಿ, ಸಾಧನೆ, ಸಂತೃಪ್ತಿಗೆ ಮಾರ್ಗ ಸಿಗುವುದು. ಮರುಭೂಮಿಯಲ್ಲಿ ಅಲ್ಪ ನೀರು ಸಿಕ್ಕಾಗ ಎಳನೀರು ಸಿಗಲಿಲ್ಲ ಎಂದು ರೋಧಿಸದೆ, ಸಿಕ್ಕ ನೀರು ಕುಡಿದು ಬದುಕುವುದು ಬದುಕುವ ಜಾಣ್ಮೆ... ಸಿಕ್ಕ ಅವಕಾಶ, ಸಿಕ್ಕ ಅನುಕೂಲ ನಮ್ಮ ಗುಣನಡತೆಗಳಿಗೆ ಪೂರಕವಾಗಿರದಿದ್ದರೆ, ಅವುಗಳ ಜೊತೆಗೆ ನಾವು ಬದುಕುವುದು ಕಲಿತಾಗ ಬದುಕು ಸಹನೀಯವಾಗುವುದು ನಮಗೇ ಹೊರತು, ಸಮಾಜಕ್ಕಲ್ಲ...
-
ಸ್ವಲ್ಪ ಚಿಂತಿಸಿ... ಮೋದಿಯೋ, ಸಚಿನ್ನೋ, ಕಲಾಂ, ಮದರ್ ಥೆರೆಸಾ, ಅಮೀರ್ ಖಾನ್... ಹೀಗೆ ಸೆಲೆಬ್ರಿಟಿಗಳೆಲ್ಲರೂ ಭಿನ್ನವಾಗಿ ಚಿಂತಿಸಿ, ಅದನ್ನು ಮೈಗೂಡಿಸಿಕೊಂಡಿದ್ದರಿಂದಲೇ ಇಂದು ಸ್ಟಾರ್‌ಗಳು. ಆರ್ಕುಟ್ ಬಂದಲ್ಲಿಗೇ ಸಾಮಾಜಿಕ ನೆಟ್‌ವರ್ಕ್ ಸೀಮಿತವಾಗಲಿಲ್ಲ. ಫೇಸ್‌ಬುಕ್ ಬಂತು, ಜನ ಅದ್ಭುತ ಅಂದುಕೊಂಡ್ರು, ನಂತರ ಬಂದ ವಾಟ್ಸ್‌ಆ್ಯಪ್ ಮತ್ತೂ ಹೆಚ್ಚಿನ ಸಾಧ್ಯತೆಗಳನ್ನು ತೋರಿಸಿಕೊಟ್ಟಿತು... ಹೀಗೆ ಒಂದು ಕಂಡು ಹಿಡಿದರೆ, ಇನ್ನೊಂದಕ್ಕೆ ಅವಕಾಶ ಇಲ್ಲ ಎಂದು ಅರ್ಥವಲ್ಲ. ಅದನ್ನು ಶೋಧಿಸುವ ದೃಷ್ಟಿ ಬೇಕು. ಅಲ್ಪತೃಪ್ತಿ, ಬದಲಾವಣೆಗೆ ತೆರೆದುಕೊಳ್ಳದೇ ಇದ್ದರೆ, ಜಗತ್ತು ಇಷ್ಟೆಲ್ಲ ಬದಲಾಗಲು ಸಾಧ್ಯವೇ ಇರುತ್ತಿರಲಿಲ್ಲ.
-
ವಾಟ್ಸ್‌ಆ್ಯಪ್ ಲೈಕ್ ಮಾಡಲು, ಫಾರ್ವರ್ಡ್ ಮಾಡುವಲ್ಲಿಗೆ ಮಾತ್ರ ಸೀಮಿತವಲ್ಲ. ಅದರಲ್ಲಿ ಎಷ್ಟೋ ಸಾಮಾಜಿಕ ಕಳಕಳಿ, ಸಾಮಾನ್ಯ ಜ್ಞಾನ ವಿನಿಮಯ, ಮಾಹಿತಿ ಪ್ರಸಾರವೂ ಸಾಧ್ಯ. ಅಂಥ ಸಾಧ್ಯತೆಗಳೂ ಬದಲಾವಣೆಗೆ ರಹದಾರಿಗಳು.
-
ಬಸ್ಸಿಗೆ ಕಲ್ಲು ಹೊಡೆಯುವುದು, ಟಾಯ್ಲೆಟಿನಲ್ಲಿ ಕವನ ಬರೆಯುವುದು, ಅವರಿವರಿಗೆ ಟೀಸ್ ಮಾಡುವ ಭಿನ್ನ ಚಿಂತನೆಗಳ ಬದಲಿಗೆ ಬದುಕು ಅರಳಿಸುವ, ಕೆಲಸವನ್ನು ಸುಧಾರಿಸುವ, ಅಕ್ಕಪಕ್ಕದವರಿಗೆ ಸ್ವಲ್ಪವಾದರೂ ಸಹಾಯವಾಗಬಲ್ಲ ಚಿಂತನೆಗಳಿಗೆ ಯಾಕೆ ನಾವು ತೆರೆದುಕೊಳ್ಳುವುದಿಲ್ಲ? ಯಾರೋ ಮಾಡಿದ ದಾರಿಯಲ್ಲಿ ನಡೆಯುವುದು ಸಾಧನೆಯಲ್ಲ. ಜಾರದಂತೆ, ದಾರಿ ತಪ್ಪದಂತೆ ಜಾಗ್ರತೆ ಇದ್ದರೆ ಸಾಕು. ಆದರೆ, ನಾವು ರಚಿಸಿದ ದಾರಿಯಲ್ಲಿ ಇನ್ನೆಷ್ಟೋ ಜನ ನಡೆಯುವಂತೆ ಮಾಡುವ ಭಾಗ್ಯ ಸಿಕ್ಕರೆ, ಅದಕ್ಕಿಂತ ಸಾರ್ಥಕ ಭಾವ ಬೇರೆ ಬೇಕೆ?
ಯಾರಲ್ಲೋ ಕಂಡ ಬದಲಾವಣೆಗೆ ಚಪ್ಪಾಳೆ ತಟ್ಟುವಲ್ಲಿಗೆ ಬದಲಾವಣೆ ಮುಗಿಯದು... ನಮ್ಮ ಬದಲಾವಣೆಗೆ ಜಗತ್ತು ಚಪ್ಪಾಳೆ ತಟ್ಟುವಲ್ಲಿವರೆಗೆ ನಮ್ಮ ಸಂಕಲ್ಪ ಮುಂದುವರಿಯಬೇಕು. ಅಲ್ಲಿಯವರೆಗೆ ಆ ಗುರಿ ತಲಪುವ ವರೆಗೆ ಮಾತ್ರ ಲಕ್ಷ್ಯ ಇರಬೇಕು. ಆಗ ಚಪ್ಪಾಳೆ ತಾನೇ ತಾನಾಗಿ ಮೊರೆಯುತ್ತದೆ.
= ಕೃಷ್ಣಮೋಹನ ತಲೆಂಗಳ
Advertisement