
ಎಷ್ಟೋ ಕನಸುಗಳಲ್ಲಿ ನೀನಿದ್ದೆ, ಬದುಕು ರಂಗವಲ್ಲಿಯಾಗಿತ್ತು. ಎಷ್ಟೋ ಹಾಡುಗಳಲ್ಲಿ ನೀನಿದ್ದೆ ಬದುಕು ಸಂಗೀತದಂತೆ ತೋರುತ್ತಿತ್ತು... ಗೆಳೆಯಾ ಮನಸಿನ ಪುಟದಲ್ಲಿ ನಿನ್ನ ಹೆಸರು ಬರೆಯುವಾಗ ಯೋಚಿಸಿಯೇ ಇರಲಿಲ್ಲ, ಮುಂದೊಂದು ದಿನ ಆ ಹೆಸರನ್ನು ಕಾಟು ಹೊಡೆಯುವ ಸಂದರ್ಭವೂ ಬರಬಹುದೆಂದು. ಊಹಿಸಿಯೂ ಇರಲಿಲ್ಲ ಜೀವಕ್ಕಿಂತ ಹೆಚ್ಚಾಗಿದ್ದ ನೀನು ಒಂದಿನ ಅಪರಿಚಿತನಂತಾಗಬಹುದೆಂದು.
ಬದುಕು ಎಷ್ಟು ಕ್ರೂರ ಅಲ್ವಾ...? ನಿನ್ನಿಂದ ನಾನೋ, ನನ್ನಿಂದ ನೀನೋ ದೂರಾಗಿದ್ದಂತೂ ನಿಜ. ಸಿಟ್ಟಿನಿಂದಲೂ ಅಲ್ಲ, ಜಗಳದಿಂದಲೂ ಅಲ್ಲ. ಆದರೆ ನಾವಿಬ್ಬರೂ ಜೊತೆಗಿರಲು ಕಾರಣವೂ ಇರಲಿಲ್ಲ. ದೂರಾದ ಕ್ಷಣದಲ್ಲಿ ಮನಸ್ಸು ಯಾರೊಂದಿಗೂ ಹೇಳಿಕೊಳ್ಳದೇ ಒಳಗೊಳಗೆ ಅತ್ತಿತ್ತು... ಕಣ್ಣೀರ ಜತೆಗೆ ನಿನ್ನ ನೆನಪುಗಳೂ ಬತ್ತಿ ಹೋಗುವುದೆಂದು ಅಂದುಕೊಂಡಿದ್ದೆ. ಆದರೆ, ಹೋಗಿದ್ದು ಕಣ್ಣೀರು ಮಾತ್ರ.
ಅಂದೇ ನಿರ್ಧರಿಸಿಬಿಟ್ಟೆ. ಇನ್ಮುಂದೆ ಯಾರನ್ನೂ ಹಚ್ಕೋಬಾರದೆಂದು. ಏಕೆಂದರೆ ಮನಸಿನ ಗಾಯ ವಾಸಿಯಾಗಲು ಪ್ರಪಂಚದಲ್ಲಿ ಯಾವುದೇ ಔಷಧ ಇಲ್ಲ ಎನ್ನುವುದು ಅರ್ಥವಾಗಿ ಬಿಟ್ಟಿತ್ತು. ಬಹುಶಃ 'ಅತಿಯಾದರೆ ಅಮೃತವೂ ವಿಷ'ವೆಂಬ ಗಾದೆ ನನಗಾಗಿಯೇ ಕಟ್ಟಿದ್ದಾರೇನೋ ಅನಿಸುತ್ತಿತ್ತು. ಚಳಿಯಲ್ಲಿ, ಮಳೆಯಲ್ಲಿ, ಬಿಸಿಲಲ್ಲಿ ಎಲ್ಲದರಲ್ಲೂ ನಿನ್ನದೇ ನೆನಪು. ನಿನ್ನ ಮರೆಯಬೇಕಂದುಕೊಳ್ಳುತ್ತಲೇ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿರುವೆ. ಯಾಕೋ ಗೊತ್ತಿಲ್ಲ... ಯಾರ್ಯಾರದೋ ನಗೆಯಲ್ಲಿ ನಿನ್ನ ನೆನಪು ಒತ್ತರಿಸಿ ಬರುತ್ತಿತ್ತು. ನಿನ್ನ ನೆನಪಾದರೆ ನನ್ನ ನಗುವೇ ಮಾಸಿಬಿಡುತ್ತಿತ್ತು. ಎಷ್ಟರಮಟ್ಟಿಗೆ ಅಂದರೆ ನಿನ್ನ ನೆನಪುಗಳೆಂದರೆ ಈಗ ವಾಕರಿಕೆ ಬರುವಷ್ಟು!
ನೀ ಜೊತೆಗಿದ್ದರೆ ನೆನಪುಗಳಿಗೂ ಅರ್ಥವಿರುತ್ತಿತ್ತು. ನೀನಿಲ್ಲದ ಒಂಟಿತನಕ್ಕೆ ಯಾಕೆ ಈ ನೆನಪುಗಳು ಬೇಕು? ಈಗ ಒಂಟಿತನವೇ ಖುಷಿಯೆನಿಸುತ್ತಿದೆ. ಒಂಟಿತನವನ್ನು ಒಪ್ಪಿಕೊಳ್ಳಲು ಮೊದಮೊದಲು ಕಷ್ಟವಾಗುತ್ತಿತ್ತು. ಈಗ ಅದರಲ್ಲಿ ನಾನೊಬ್ಬಳೆ ನನ್ನೊಬ್ಬಳದ್ದೇ ಭಾವನೆ, ಅದೇ ಖುಷಿ ಎಂಬಷ್ಟು ಒಗ್ಗಿಕೊಂಡಿದ್ದೇನೆ.
ಪದೇಪದೆ ನೆನಪಾಗಿ ನನ್ನ ಖುಷಿ, ನಗು, ಹೊಸತನದ ಬದುಕು ಕಿತ್ತುಕೊಳ್ಳದಿರು. ನನ್ನಲ್ಲಿ ನಾ ಮಾತ್ರ ಸಾಕು. ನಿನ್ನ ಸಹವಾಸದ ಹಂಗ್ಯಾಕೆ ಬೇಕು? ಹೃದಯದಿಂದ ನಿನ್ನ 'ಡಿಲೀಟ್' ಮಾಡಿಯಾಗಿದೆ. ಮತ್ತೆ ನನ್ನೆದೆಯೊಳಗೆ ಹಿಂದಿರುಗಲು ನನ್ನಲ್ಲಿ ಯಾವುದೇ 'ರೀ ಸೈಕಲ್‌ಬಿನ್' ಕೂಡ ಇಲ್ಲ ರೀಸ್ಟೋರ್ ಮಾಡಲು.
ನೆನಪಾಗದಿರು. ನಗುವ ಕಣ್ಣುಗಳನ್ನು ಮತ್ತೆ ಒದ್ದೆ ಮಾಡದಿರು.
= ಪದ್ಮಾ ಭಟ್ ಇಡಗುಂದಿ,
ಎಂಸಿಜೆ ವಿಭಾಗ, ಎಸ್‌ಡಿಎಂ ಕಾಲೇಜು, ಉಜಿರೆ
Advertisement