
ಕಲರ್ ಕಲರ್ ವಾಟ್ ಕಲರ್, ಹೇ ರೆಡ್ ಮಗಾ.., ಹೇ ವೈಟ್ ನೋಡೋ... ಬಿಡು ಮಚ್ಚಾ ಅಲ್ಲಿ ನೋಡೋ ಗ್ರೀನ್ ಸಿಗ್ನಲ್ ಕೊಡ್ತಾ ಇದೆ!
ಕಾರಿಡಾರ್‌ನಲ್ಲಿ ಗೆಳೆಯರೆಲ್ಲ ಸೇರಿಕೊಂಡು ಮಾಡುತ್ತಿದ್ದ ತರಹೇವಾರಿ ತರ್ಲೆಗಳ ಒಂದು ಸ್ಯಾಂಪಲ್‌ನಲ್ಲಿ ಇದು ಮೊದಲನೆಯದ್ದು. ಎರಡು ವರ್ಷದ ಕಾಲೇಜು ಲೈಫ್‌ನಲ್ಲಿ ನಾವು ಮಾಡದ ತರ್ಲೆ, ಕೀಟಲೆಗಳೇ ಇರಲಿಕ್ಕಿಲ್ಲ. ಕಾಲೇಜು ಜೀವನದ ಪ್ರತಿಯೊಂದು ದಿನವನ್ನೂ ಎಂಜಾಯ್ ಮಾಡುತ್ತಿದ್ದವರು ನಾವು. ದಿನಗಳು ಹೇಗೆ ಉರುಳಿತು ಗೊತ್ತೇ ಆಗಲಿಲ್ಲ. ನೋಡ ನೋಡುತ್ತಿದ್ದಂತೆಯೇ ಈ ಎರಡು ವರ್ಷದ ಮಧುರ ಕ್ಷಣ ಕಳೆದು ಈಗ ಅಂತಿಮ ಪರೀಕ್ಷೆ ಬರೆಯಲು ಸಿದ್ಧರಾಗಿದ್ದೇವೆ. ಈ ಲೈಫ್ ಎಷ್ಟು ಬೇಗ ಮುಗೀತಲ್ವಾ? ಕಾಲೇಜು ಸ್ಟಾಫ್ ರೂಂ, ಲೈಬ್ರರಿ... ಹೀಗೆ ಕ್ಯಾಂಪಸ್‌ನೊಳಗಿನ ಪ್ರತಿ ವಸ್ತು, ವ್ಯಕ್ತಿಗಳೂ ಇನ್ನು ಕೆಲವೇ ದಿನಗಳಲ್ಲಿ ನೆನಪಿನ ಪುಟ ಸೇರಲಿದ್ದಾರಲ್ವಾ...? ನೆನೆಸಿಕೊಂಡಾಗಲೆಲ್ಲ ಮನಸ್ಸು ಆರ್ದ್ರವಾಗುತ್ತದೆ.
ಈ ಎರಡು ವರ್ಷದಲ್ಲಿ ನಾವು ಪಟ್ಟ ಖುಷಿ ಅಷ್ಟಿಷ್ಟಲ್ಲ. ಉಳಿದೆಲ್ಲರಿಗಿಂತ ಮೊದಲೇ ನಾವು ಕ್ಯಾಂಪಸ್‌ನಲ್ಲಿ ಹಾಜರಿರುತ್ತಿದ್ದೆವು. ಕ್ಲಾಸ್ ರೂಂಗೆ ಕಾಲಿಡುತ್ತಿದ್ದದ್ದು ಮಾತ್ರ ಲೇಟ್! ಕ್ಯಾಂಪಸ್‌ನಲ್ಲಿ ನಮ್ಮದೇ ಆದ ಗುಂಪಿತ್ತು. ಈ ಗುಂಪು ಇಡೀ ಕಾಲೇಜಿಗೇ ಫೇಮಸ್. ಅದು 'ಅಡ್ಡಾ ಬಾಯ್ಸ್'. ಕಾಲೇಜಿಗೆ ಬರೋ ಹುಡುಗೀರನ್ನು ಪ್ರತಿದಿನ ಸ್ವಾಗತ ಮಾಡೋದು ಈ ಗುಂಪು ಚಾಚೂ ತಪ್ಪದೆ ಮಾಡುತ್ತಿದ್ದ ಕೆಲಸ. ಕ್ಯಾಂಟೀನ್ ಕಾರಿಡಾರ್‌ಗಳಲ್ಲಿ ಕೂತು ಹೋಗೋ ಬರೋ ಹುಡುಗೀರು, ಹುಡುಗರನ್ನು ರೇಗಿಸೋದು ಈ ಗುಂಪಿನ ಪ್ರತಿದಿನದ ಕಾಯಕ.
ನಾವು ಇಲ್ಲಾಂದ್ರೆ ಇಡೀ ಕಾಲೇಜಿಗೇ ಕಾಲೇಜು ಬೋರ್ ಹೊಡೆಯುತ್ತಿತ್ತು. ನಮ್ಮ ಹಾರಾಟ, ಕೂಗಾಟ ಇಡೀ ಕಾಲೇಜು ಮಂದಿಗೆಲ್ಲ ಪರಿಚಿತ. ಆದ್ರೆ ನಾವೆಷ್ಟೇ ಕಾಡಿಸಿದ್ರೂ ಯಾರೂ ಬೇಜಾರಂತೂ ಮಾಡ್ಕೊಳ್ಳುತ್ತಿರಲಿಲ್ಲ!
ಕಾಲೇಜಿನಲ್ಲಿ ಎಲ್ಲ ವಿಭಾಗದವರು ಟ್ರೆಡಿಷನಲ್ ಡೇ ಮಾಡುತ್ತಾರೆ. ನಾವೂ ಯಾರಿಗೇನು ಕಮ್ಮಿ ಇಲ್ಲ ಅನ್ನೋ ರೀತಿ ಇಡೀ ಕಾಲೇಜೇ ನೆನಪಿಟ್ಟುಕೊಳ್ಳುವಂಥ ರೀತಿಯಲ್ಲಿ ಮಾಡಿದ್ವಿ. ಎಲ್ಲರೂ ರಾಮ, ಲಕ್ಷಣ, ಭೀಮ, ಅರ್ಜುನ, ಛತ್ರಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣ, ವೀರ ಮದಕರಿ ನಾಯಕ, ಶಕುನಿ ಪಾತ್ರಗಳನ್ನು ಹಾಕಿಕೊಂಡು ಕಾಲೇಜಿನ ತುಂಬಾ ಮೆರವಣಿಗೆ, ಹುಡುಗೀರ ಗುಂಪಿನ ಬಳಿ ಹೋಗಿ ಮಾಡ್ರನ್ ಡ್ರಾಮಾ ಮಾಡಿದ್ದು, ಕಾಲೇಜು ಗೇಟ್ ಬಳಿ ಶಿವಾಜಿ ಮತ್ತು ಮದಕರಿ ನಾಯಕರ ಕತ್ತಿವರಸೆ ತೋರಿಸಿದ್ದು... ಒಂದಾ ಎರಡಾ...? ಪ್ರತಿಯೊಂದರಲ್ಲೂ
ನಾವೇ ಬೇರೆ ನಮ್ಮ ಸ್ಟೈಲೇ ಬೇರೆ!
ಹಾಗಂತ ನಾವು ಯಾರಿಗೂ ತೊಂದರೆ ಮಾಡಿದವರಲ್ಲ. ಕಾಲೇಜಲ್ಲಿ ಏನೇ ಸಮಸ್ಯೆ ಇದ್ರೂ ಒಗ್ಗಟ್ಟಾಗಿ ಎದುರಿಸುತ್ತಿದ್ದೆವು. ನಮ್ಮ ಬದುಕಿನ ಪಾಲಿಗೆ ಗೋಲ್ಡನ್ ಲೈಫೇ ಆಗಿದ್ದ ಈ ಕಾಲೇಜು ಬದುಕಿಗೆ ಗುಡ್‌ಬೈ ಹೇಳುವ ದಿನ ಸಮೀಪಿಸುತ್ತಿದೆ. 'ಅಡ್ಡಾ ಬಾಯ್ಸ್' ಅವರವರ ಬದುಕಿನ 'ಅಡ್ಡಾ'ಗಳಿಗೆ ಹೋಗೋ ದಿನ ಸಮೀಪಿಸುತ್ತಿದೆ. ಈ ನೋವಿನಿಂದಲೇ ಮನಸ್ಸು 'ಐ ಮಿಸ್ ಯು ಅಡ್ಡಾ ಬಾಯ್ಸ್...' ಎನ್ನುತ್ತಿದೆ.
= ಶಿವಕುಮಾರ ಕೆ. ಗಂಗಾವತಿ, ದಾವಣಗೆರೆ ವಿ.ವಿ.
Advertisement