
ಎನಿಡ್ ಬ್ಲೈಟನ್. ನನ್ನಂತೆ ಅದೆಷ್ಟೋ ಜನರ ಬಾಲ್ಯವನ್ನು ಸೊಗಸಾಗಿಸಿದಾಕೆ ಈಕೆ. ಬ್ಲೈಟನ್‌ಳ ಪುಸ್ತಕಗಳನ್ನು ಪಠ್ಯಕ್ಕಿಂತ ಹೆಚ್ಚು ಭಕ್ತಿಯಿಂದ ಓದುತ್ತಿದ್ದೆವು. 'ಬಿಂಕಲ್ ಆ್ಯಂಡ್ ಫ್ಲಿಪ್', 'ಅಮೇಲಿಯಾ ಜೇನ್', 'ಫಾರವೇ ಟ್ರೀ', 'ದ ಫೈವ್ ಫೈಂಡ್ ಔಟರ್ಸ್', 'ದ ಸೀಕ್ರೆಟ್ ಸೆವನ್', 'ಮ್ಯಾಲರಿ ಟವರ್ಸ್', 'ದ ಫೇಮಸ್ ಫೈವ್'... ಈಕೆ ಬರೆದ ಪುಸ್ತಕಗಳು ಒಂದೋ-ಎರಡೋ!
ಈಕೆಯ ಕಥೆಗಳಲ್ಲಿ ವಿಭಿನ್ನ ಪಾತ್ರಗಳಿದ್ದವು. ಆದರೆ ಆ ಪಾತ್ರಗಳ ಒಂದಲ್ಲ ಒಂದು ಗುಣ ನಮ್ಮಲ್ಲಿದ್ದಂತವೇ. ಎಷ್ಟೋ ವೇಳೆ ನಾವೇ ಆ ಪಾತ್ರಗಳಾಗುತ್ತಿದ್ದೆವು. ನಮ್ಮ ಅಪ್ಪ-ಅಮ್ಮಂದಿರ ಕಾಲದ ಮಕ್ಕಳಿಂದ ಹಿಡಿದು ಮುಂದಿನ ಪೀಳಿಗೆಯ ಮಕ್ಕಳೂ ಓದಿ ಸಂತಸ ಪಡುವಷ್ಟು ಮಧುರ ಬರಹ. 'ದ ಫೇಮಸ್ ಫೈವ್' ಫೇಮಸ್ ಆದರೂ ನನಗೆ ಪ್ರಿಯವಾದ ಪುಸ್ತಕವೆಂದರೆ ಮ್ಯಾಲರಿ ಟವರ್ಸ್. ಕಾರಣ ಇಷ್ಟೆ- ಆ ಕಥೆ ಹಾಸ್ಟೆಲ್‌ನಲ್ಲಿ ನಡೆಯುವ ಘಟನೆಗಳನ್ನಾಧರಿಸಿತ್ತು.
ಬಾಲ್ಯದಿಂದ ಹಾಸ್ಟೆಲ್ ಸೇರಬೇಕೆಂಬುದು ನನ್ನ ಆಸೆಯಾಗಿತ್ತು. ನನ್ನ ಮೇಲಿದ್ದ ಆಪಾರ ಪ್ರೀತಿಯಿಂದಲೋ ಅಥವಾ ನನ್ನ ಮೇಲಿನ ನಂಬಿಕೆ ಕೊರತೆಯಿಂದಲೋ ಏನೋ ಪೋಷಕರು ನನ್ನನ್ನು ಹಾಸ್ಟೆಲ್‌ಗೆ ಕಳುಹಿಸಲಿಲ್ಲ. ಅದೇ ಮುದ್ದಿನ ಮಗನಾಗಿದ್ದ ನನ್ನ ತಮ್ಮನನ್ನು 6ನೇ ತರಗತಿಗೆ ಹಾಸ್ಟೆಲ್ ಸೇರಿಸಿಬಿಟ್ಟರು!
ಆತ ಹಾಸ್ಟೆಲ್‌ನಿಂದ ನಮಗೆ ಬರೆದ ಪತ್ರ ಓದಿದಾಗಲೆಲ್ಲ ಅಪ್ಪ- ಅಮ್ಮ ಬೇಸರಪಡುತ್ತಿದ್ದರು. ಒಮ್ಮೆ ಬಟ್ಟೆ- ತಿಂಡಿ- ಇತ್ಯಾದಿ ಕಳುವಾದರೆ ಮತ್ತೊಮ್ಮೆ ಯಾರಾದರೂ ಸುಳ್ಳು ದೂರು ನೀಡಿ ಅವನನ್ನು ತೊಂದರೆಗೆ ಸಿಲುಕಿಸುತ್ತಿದ್ದರು. ಹೀಗೆ ಪ್ರತಿ ಬಾರಿಯೂ ಕಷ್ಟಗಳ ಬಗ್ಗೆ ಬರೆದು ಕಳುಹಿಸುತ್ತಿದ್ದರೂ ಅವನು ಅಲ್ಲಿ ಖುಷಿಯಿಂದ ಕಾಲ ಕಳೆಯುತ್ತಿದ್ದ, ಚೆನ್ನಾಗಿ ಓದುತ್ತಾ- ಆಟವಾಡುತ್ತಾ ಇದ್ದ. ಅಪ್ಪ- ಅಮ್ಮ ಮಾತ್ರ ಅವನನ್ನು ಅಲ್ಲಿಂದ ಬಿಡಿಸಿ ತಂದರೆ ಸಾಕು ಎನ್ನುವಷ್ಟರ ಮಟ್ಟಿಗೆ ಖಿನ್ನತೆಗೆ ಒಳಗಾಗಿದ್ದರು. ಆದರೆ ನಾನು ಮಾತ್ರ ಅವನ ಪತ್ರ ಓದಿದಾಗಲೆಲ್ಲ ಹೊಟ್ಟೆಕಿಚ್ಚು ಪಡುತ್ತಿದ್ದೆ. ಏಕೆಂದರೆ 'ಮ್ಯಾಲರಿ ಟವರ್ಸ್' ಪುಸ್ತಕದಲ್ಲಿ ಎನಿಡ್ ಬ್ಲೈಟನ್ ಏನೆಲ್ಲ ಬರೆದಿದ್ದಳೋ ಅದೆಲ್ಲ ಅವನ ಹಾಸ್ಟೆಲ್‌ನಲ್ಲಿ ನಡೆಯುತ್ತಿತ್ತು! ಅವನಿಗಾಗುತ್ತಿರುವ ಅನುಭವ ನನಗಿಲ್ಲವಲ್ಲ ಎಂಬುದು ನನ್ನ ಅಸೂಯೆಗೆ ಕಾರಣ.
ಅವನು ವಂಶೋದ್ಧಾರಕನಲ್ಲವೇ? ಹಾಗಾಗಿ ಈ ತಾರತಮ್ಯ ಎಂದೆಲ್ಲ ಆಪಾದಿಸಿದರೂ ನನ್ನ ಮಾತಿಗೆ ಯಾರೂ ಸೊಪ್ಪು ಹಾಕಲಿಲ್ಲ. ಎಷ್ಟೇ ಇಮೋಷನಲ್ ಬ್ಲ್ಯಾಕ್‌ಮೇಲ್ ಮಾಡಿದರೂ, ಲಾಗ ಹಾಕಿದರೂ ಹಾಸ್ಟೆಲ್‌ಗೆ ನನ್ನನ್ನು ಕಳುಹಿಸಲೇ ಇಲ್ಲ. ಬರುವ ವರ್ಷ ಖಂಡಿತ ಕಳುಹಿಸುತ್ತೇವೆ ಎಂದು ಆಸೆ ತೋರಿಸಿ 10ನೇ ತರಗತಿವರೆಗೂ ದಾಟಿಸಿಬಿಟ್ಟರು. ಅದಾದ ಬಳಿಕ ನಾನೇ ಹಾಸ್ಟೆಲ್ ಸೇರುವ ಆಸೆ ಬಿಟ್ಟು ಬಿಟ್ಟೆ.
ಎಂಜಿನಿಯರಿಂಗ್ ಕೊನೆಯ ವರ್ಷ ತಲುಪಿದಾಗ ಕುಟುಂಬ ಸಮೇತರಾಗಿ ಬೇರೆ ಊರಿಗೆ ಹೋದೆವು. ಆಗ ಅನಿವಾರ್ಯವಾಗಿ ಕೊನೆಯ ವರ್ಷವಾದರೂ ಹಾಸ್ಟೆಲ್‌ನಲ್ಲಿದ್ದು ಆಸೆ ಈಡೇರಿಸಿಕೊಳ್ಳಲಿ ಎಂದು ಪೋಷಕರು ಅನುಮತಿ ನೀಡಿಯೇ ಬಿಟ್ಟರು. ನನಗೆ ಹೇಳ ತೀರದ ಸಂತಸ. ಆದರೆ, ಹಾಸ್ಟೆಲ್‌ಗೆ ಬಿಡುವಾಗ ಮದುವೆ ಮಾಡಿಕೊಡುತ್ತಿರುವಷ್ಟು ದುಃಖ ಪೋಷಕರಲ್ಲಿತ್ತು! ಬರೀ ಒಂದೇ ವರ್ಷವಾದರೂ ಪರವಾಗಿಲ್ಲ, ಹಾಸ್ಟೆಲ್ ಸೇರಿದೆನಲ್ಲ ಎನ್ನುವ ಖುಷಿ ನನಗೆ.
ನನ್ನ ತಮ್ಮ ಹಾಸ್ಟೆಲ್‌ನಲ್ಲಿ ಅನುಭವಿಸಿದ ಕಷ್ಟವನ್ನೆಲ್ಲ ನಾನೂ ಅನುಭವಿಸಿದೆ. ಆದರೆ ನನಗೆ ಕಿಂಚಿತ್ತೂ ಬೇಸರವಿಲ್ಲ. ಯಾಕೆಂದರೆ ನಾನು ಅನೇಕ ಸಾಹಸ ಮಾಡಿದ್ದೆ. ಕರೆಂಟು ಹೋದಾಗಲೆಲ್ಲ ಅಕ್ಕಪಕ್ಕದ ರೂಮಿನ ಹುಡುಗಿಯರ ಕೋಣೆ ಬಾಗಿಲು ಬಡಿದು ಹೆದರಿಸುತ್ತಿದ್ದೆ. ಫೋನಿನಲ್ಲಿ ಮಾತನಾಡಲೆಂದು ಟೆರೆಸ್‌ಗೆ ಬಂದವರನ್ನು ಬಾಗಿಲ ಹಿಂದಿನಿಂದ ಜಿಗಿದು ಹೆದರಿಸುತ್ತಿದ್ದೆ. ಪಪ್ಪಾಯ ಮರದಲ್ಲಿ ಬೆಕ್ಕೊಂದು ಸಿಕ್ಕಿ ಬಿದ್ದು ದಿನವಿಡೀ ಅಳುತ್ತಿದ್ದಾಗ ನಾವೆಲ್ಲ ಸೇರಿ ಕ್ಯಾಟ್ ರೆಸ್ಕ್ಯು ಮಿಷನ್ ಕೂಡಾ ಕೈಗೊಂಡಿದ್ದೇವೆ.(ನಾವು ಎಷ್ಟು ಸರ್ಕಸ್ ಮಾಡಿದರೂ ನಮ್ಮ ಬಳಿ ಬರದ ಬೆಕ್ಕು ರಾತ್ರಿಯಾಗುತ್ತಿದ್ದಂತೆ ತಾನಾಗೇ ಮರದಿಂದ ಸುಲಭವಾಗಿ ಇಳಿದು ಹೋಯಿತು. ಅದು ಬೇರೆ ವಿಷಯ!) ಕ್ಯಾಂಟೀನ್ ಊಟ ತಿಂದು ಬೇಸತ್ತಾಗ ನಾವೇ ಮ್ಯಾಗಿ ನೂಡಲ್ಸ್ ಮಾಡಿ, ಅದಕ್ಕೆ ತರಕಾರಿ ಮತ್ತು ನಮ್ಮದೇ ಎಕ್ಸ್‌ಟ್ರಾ ಮಸಾಲೆ ಸೇರಿಸಿಕೊಂಡು ತಿನ್ನುತ್ತಿದ್ದೆವು. ವಾರ್ಡನ್‌ಗೆ ತಿಳಿಯದಂತೆ ಅಡ್ಡ ಹೆಸರು ಇಟ್ಟು ಅವರ ಮುಂದೆಯೇ ಆ ಹೆಸರು ಕೂಗುತ್ತಿದ್ದೆವು!
ಪರೀಕ್ಷೆಗಾಗಿ ಓದಲು ನೀಡಿದ ರಜೆಗಳಲ್ಲಿ ಪೋಷಕರಲ್ಲಿ ರೀಲು ಬಿಟ್ಟು, ಹಾಸ್ಟೆಲ್‌ನಲ್ಲಿ ಸಂಗೀತ ಕಛೇರಿ, ಅಂತ್ಯಾಕ್ಷರಿ, ಶಬ್ದ ಬಂಡಿ, ನಾಟಕ, ನೃತ್ಯ ಅಂತೆಲ್ಲ ಅಧಿಕ ಪ್ರಸಂಗಗಳನ್ನು ಮಾಡಿ ಕಾಲ ಕಳೆದೆವು. ಆದರೂ ಪುಣ್ಯಕ್ಕೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಕಾರಣ ಪೋಷಕರಿಗೆ ಓದಿನ ಬಗೆಗಿನ ನಮ್ಮಲ್ಲಿರುವ ಆ ಶ್ರದ್ಧೆ- ಭಕ್ತಿ ನಿಜವೆಂದು ಭಾಸವಾಯಿತು. ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಆ ಒಂದು ವರ್ಷ ಕಳೆಯಿತು. ಎನಿಡ್ ಬ್ಲೈಟನ್ ಬರೆದ ಕಥೆಯಂತೆ ವೈರಿಗಳಾಗಿದ್ದವರು ಕೊನೆಗೆ ಆಪ್ತರಾದರು. ಈಗಲೂ ನಾವು ಆ ದಿನಗಳ ಬಗ್ಗೆ ಮಾತನಾಡಿ ಹುಚ್ಚರಂತೆ ನಗುವುದುಂಟು. ಮುದುಕಿಯರಾದ ಬಳಿಕ ಖಂಡಿತವಾಗಿ ಆ ಕಸರತ್ತುಗಳನ್ನು ಮಾಡಲು ಸಾಧ್ಯವಿಲ್ಲ. ಹಾಗಾಗಿ ಹಾಸ್ಟೆಲ್‌ನಲ್ಲಿ ಕಳೆದ ಆ ಕ್ಷಣಗಳನ್ನು ನೆನೆದಾಗಲೆಲ್ಲ ಏನೋ ಸಾಧನೆ ಮಾಡಿದ ಹೆಮ್ಮೆ!
ಥ್ಯಾಂಕ್ಸ್ ಟು ಎನಿಡ್ ಬ್ಲೈಟನ್, ಈಕೆ ನಮ್ಮ ಬಾಲ್ಯವನ್ನು ನಮಗೆ ಮರಳಿಸಿದಾಕೆ.
= ಅದಿತಿಮಾನಸ ಟಿ.ಎಸ್.
Advertisement