
ಬಿ.ಇ.ನಲ್ಲಿ ಮೊದಲ ವರ್ಷ ನಾವು ಚಿಕ್ಕಮಗಳೂರಿಗೆ ಟ್ರಿಪ್ ಹೋಗಿದ್ವಿ. ಹೋಗುವಾಗ ಎಲ್ಲವೂ ಸರಿ ಇತ್ತು. ಎಲ್ಲರೂ ಚೆನ್ನಾಗಿಯೇ ಇದ್ದರು. ಆದರೆ, ಬರುವಾಗ ಮಾತ್ರ ಮನಸ್ಸುಗಳ ನಡುವೆ ಕಂದಕ ಏರ್ಪಟ್ಟಿತ್ತು. ವಾಪಸ್ಸಾಗುವಾಗ ಹುಡುಗಿಯೊಬ್ಬಳು ಮದ್ಯ ಸೇವಿಸಿದ್ದು ಕೆಲವರ ಅಸಮಾಧಾನಕ್ಕೆ ಕಾರಣ. ಆ ಸಿಟ್ಟು ಎಲ್ಲಿಯವರೆಗೆ ಹೋಗಿತ್ತು ಅಂದ್ರೆ ಅದು ಕ್ಲಾಸ್‌ನೊಳಗೂ ಕಾಲಿಟ್ಟು ತರಗತಿಯಲ್ಲಿ ಎರಡು ಬಣಗಳು ಸೃಷ್ಟಿಯಾಗಿ ಬಿಟ್ಟಿದ್ದವು. ಒಂದು ರೀತಿಯಲ್ಲಿ ಈ ಟ್ರಿಪ್ ನಮ್ಮ ಮನ- ಮನೆ ಒಡೆದಿತ್ತು.
ಎಂ.ಟೆಕ್ ಮೊದಲ ಸೆಮ್‌ನಲ್ಲೂ ಹೀಗೆಯೇ ಒಂದು ಟೂರು. ಈ ಬಾರಿ ಇದ್ದದ್ದು ಹುಡುಗರಷ್ಟೆ. ಗುಂಪಿನಲ್ಲಿದ್ದ ಎಲ್ಲರೂ 'ಗುಂಡೆಸೆತ'ದಲ್ಲಿ ಅನುಭವಿಗಳಾಗಿದ್ದರಿಂದ ಮೊದಲ ವರ್ಷದ ಬಿ.ಇ.ಯಲ್ಲಾದ ಕಹಿ ಅನುಭವವೇನೂ ಈ ಬಾರಿ ಆಗಲಿಲ್ಲ. ಮದ್ಯಪಾನವೇ ಎಲ್ಲರನ್ನು ಬೆಸೆಯುವ ಸಾಧನವಾಯ್ತು. ಗುಂಡು ಏರಿಸಿಕೊಂಡವರೆಲ್ಲರೂ ಉತ್ತಮ ಸ್ನೇಹಿತರಾದರು.
ಕಾಲೇಜು ಲೈಫ್‌ನ ಟ್ರಿಪ್ಪುಗಳೆಂದರೆ ಹೀಗೇನೆ. ಅದರ ಮಜಾನೇ ಬೇರೆ. ಬೈಕ್‌ನಲ್ಲಿ ಹುಡುಗರು- ಹುಡುಗಿಯರ ಜಾಲಿ ರೈಡ್, ಇಡೀ ತರಗತಿ ಒಟ್ಟಾಗಿ ವರ್ಷಕ್ಕೊಂದು ಬಾರಿ ಹೋಗೋ ಪ್ರವಾಸದ ಅನುಭವ ಅವಿಸ್ಮರಣೀಯ. ಇಲ್ಲಿ ಹೇಗೆ ಪ್ರೇಮ, ಪ್ರೀತಿ, ವಿಶ್ವಾಸ, ಗೆಳೆತನ ಬೆಳೆಯುತ್ತದೋ ಅದೇ ರೀತಿ ಕೆಲವೊಮ್ಮೆ ಸಣ್ಣಪುಟ್ಟ ಎಡವಟ್ಟಿನಿಂದಾಗಿ ಅನಾಹುತಗಳು ಸಂಭವಿಸಿ ಸೂತಕ ಮನೆ ಮಾಡಿ ಬಿಡುವುದೂ ಉಂಟು.
ಬಿ.ಇ. ಅಂತಿಮ ಸೆಮ್‌ನಲ್ಲಿದ್ದಾಗ ಸಿವಿಲ್ ವಿಭಾಗದ ಫೈನಲ್ ಸೆಮ್ ವಿದ್ಯಾರ್ಥಿ ಸಕಲೇಶಪುರದ ಬಳಿಯ ಜಲಪಾತದಲ್ಲಿ ಈಜಲು ಹೋಗಿ ಮೃತಪಟ್ಟಿದ್ದ. ಆಗ ಇನ್ನು ಮುಂದೆ ಟ್ರಿಪ್ ಸಹವಾಸವೇ ಬೇಡ ಅಂತ ನಿರ್ಧರಿಸಿಬಿಟ್ಟಿದ್ದೆವು.
ಇದೇ ಕಾರಣಕ್ಕೆ ಕಾಲೇಜಿನಿಂದಲೂ ಟ್ರಿಪ್‌ಗೆ ಅನುಮತಿ ನೀಡುತ್ತಿರಲಿಲ್ಲ. ಹಾಗೇನಾದರೂ ಹೋದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಅಂತ ನೋಟಿಸ್ ಬೋರ್ಡ್‌ನಲ್ಲೂ ಎಚ್ಚರಿಕೆ ನೀಡಲಾಗುತ್ತಿತ್ತು. ಆದರೆ, ಎಷ್ಟಾದ್ರೂ ಇದು ಹುಚ್ಚುಕೋಡಿ ಮನಸ್ಸು. ಎಷ್ಟೇ ಅಡೆ ತಡೆ ಇದ್ದರೂ 'ಸುತ್ತೋಣು ಬಾರಾ' ಅಂತ ಗೆಳೆಯ- ಗೆಳತಿಯರನ್ನು ಕರೆಯುತ್ತದೆ. ರೆಡಿ ಮಾಡಿ ಬಿಡುತ್ತದೆ.
-ಎಚ್.ಕೆ. ಶರತ್
Advertisement