ಎಲ್ಲ ಅವಳನ್ನೇ ನೋಡ್ತಾರೆ...

ಎಲ್ಲ ಅವಳನ್ನೇ ನೋಡ್ತಾರೆ...
Updated on: 

ಗೌರಿ ಸ್ಕೂಲಿನಲ್ಲಿ ಆಟ, ಓದು ಎಲ್ಲದರಲ್ಲೂ ಅತಿ ಹೆಚ್ಚು ಅಂಕ ಗಳಿಸಿ ಕಾಲೇಜು ಮೆಟ್ಟಿಲು ಹತ್ತಿದಾಕೆ. ಅದೇನಾಯಿತೋ ಮೊದಲ ಸೆಮಿಸ್ಟರಿನಲ್ಲೇ ಮುಗ್ಗರಿಸಿದಳು.
ಇದಕ್ಕೆ ಕಾರಣ ಕೇಳಿದರೆ ನನಗಿಂತ ಸ್ವಲ್ಪ ಚಂದಗಿರುವ ಮಾಲಾಳನ್ನೇ ಎಲ್ಲರೂ ಓಲೈಸಿ ಗೆಳೆತನ ಬಯಸುವರು. ನನ್ನ ಪ್ರತಿಭೆಯು ಸ್ನೇಹಕ್ಕೆ ಸಹಾಯವಾಗುತ್ತಿಲ್ಲ ಎನ್ನುವುದೇ ಅವಳ ಕೊರಗು. ಇದರ ಜೊತೆಗೆ ಎಲ್ಲರನ್ನೂ ಸೆಳೆಯುವ ಮಾಲಾಳ ಚೆಲ್ಲು ಚೆಲ್ಲು ವ್ಯಕ್ತಿತ್ವಕ್ಕೆ ಕಾಲೇಜು ಲೆಕ್ಚರರ್ ಕೂಡ ತಲೆ ಬಾಗಿದ್ದರು. ಅವಳನ್ನೇ ಎಲ್ಲದರಲ್ಲೂ ಕೇಂದ್ರಬಿಂದುವನ್ನಾಗಿಸಿದ್ದರು. ಇದರಿಂದ ಬೇಸತ್ತ ಗೌರಿ ತನ್ನ ಪ್ರತಿಭೆಗೆ ಇಲ್ಲಿ ನೀರು ಹಾಕಿ ಪ್ರೋತ್ಸಾಹಿಸುವವರಿಲ್ಲ ಎಂದು ಅಸಹನೆ ಬೆಳೆಸಿಕೊಂಡಳು. ಅದನ್ನು ಓದಿನ ಮೇಲೆ ತೋರಿಸಿ ನಾಪಾಸಾದಳು. ಮನೆಯಲ್ಲಿ ಕಾಲೇಜಿಗೆ ಹೋಗುವುದಿಲ್ಲ ಎಂದು ರಚ್ಚೆ ಹಿಡಿದು ಕುಳಿತಳು.
ತುಸು ಕುಳ್ಳಗೆ, ಗುಂಡಗೆ ಇದ್ದ ರಾಹುಲ್ ತಾನೊಬ್ಬ ನಟನಾಗಬೇಕೆಂದು ಫಿಲ್ಮ್ ಇನ್‌ಸ್ಟಿಟ್ಯೂಟ್ ಸೇರಿಕೊಂಡ ಹುಡುಗ. ಆದರೆ ಎಲ್ಲರಿಗೂ ಅವನಿಗಿಂತ ತುಸು ಎತ್ತರ, ಸಪೂರ ಮತ್ತು ಆಕರ್ಷಕವಾಗಿರುವ ವಿನಯನೇ ಅಚ್ಚುಮೆಚ್ಚು. ತನಗೆ ಪ್ರತಿಭೆಯಿದ್ದರೂ ಅವಕಾಶಗಳು ಸಿಗುತ್ತಿಲ್ಲ. ದಾರಿಯಲ್ಲಿ ಹೋಗುವಾಗ ಎದುರಾಗುವ ಎಲ್ಲ ಹುಡುಗಿಯರು ಅವನನ್ನೇ ತಿರುಗಿ ನೋಡಿಕೊಂಡು ಹೋಗುತ್ತಾರೆ. ಇವನ ಜೊತೆ ನಡೆದರೆ ತಾನೊಂದು ದೃಷ್ಟಿಬೊಟ್ಟು. ನೋಡುತ್ತಿದ್ದ ಫಿಲ್ಮ್ ಹೀರೋಗಳು ಕನಸಿನ ಲೋಕದಲ್ಲಿ ಅವನನ್ನು ಹೀರೋ ಮಾಡಿದ್ದರೆ, ವಾಸ್ತವ ಮಾತ್ರ ಅವನನ್ನು ಖಿನ್ನತೆಗೆ ದೂಕುತ್ತಿತ್ತು. ತಾನು ಸುಂದರನಾಗಿದ್ದರೆ ಎಲ್ಲವನ್ನೂ ಸಾಧಿಸಬಹುದಿತ್ತು ಎಂಬ ಭ್ರಮೆ ಅದೆಷ್ಟೋ ಬಾರಿ ಆತ್ಮಹತ್ಯೆ ಬಗ್ಗೆ ಯೋಚಿಸುವಂತೆ ಮಾಡಿತ್ತು.
ಕಾಲೇಜು ಮೆಟ್ಟಿಲಿಗೆ ಕಾಲಿಡುತ್ತಿದ್ದಂತೆ ಅದೇಕೋ ಇರುವ ಉತ್ಸಾಹವೆಲ್ಲಾ ಕುಂದಿ ಹಿಂಜರಿಕೆಯ ಪ್ರಪಾತದಲ್ಲಿ ಬೀಳುವವರು ಜಾಸ್ತಿ. ಇನ್ನೊಬ್ಬರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವ ಪ್ರಕ್ರಿಯೆಯಿಂದ ಕೀಳರಿಮೆ ಶುರುವಾದಾಗ ಮನಸ್ಸು ಘಾಸಿಗೆ ಒಳಗಾಗುತ್ತದೆ. ಲಇಲ್ಲಿ ಹದಿಹರೆಯಕ್ಕೆ ಕಾಲಿಟ್ಟ ಮಕ್ಕಳು ಹಾಕುವ ಬಟ್ಟೆಯಿಂದ ಹಿಡಿದು ತಮ್ಮಲ್ಲಿ ಅಡಗಿರುವ ಟ್ಯಾಲೆಂಟಿನವರೆಗೆ ತಮ್ಮ ಓರಗೆಯವರೊಡನೆ ಹೋಲಿಸಿಕೊಂಡು ತಮ್ಮಲ್ಲಿರುವುದು ಕಡಿಮೆ ಎಂದು ತಾವಿಟ್ಟ ಹೆಜ್ಜೆಗಳನ್ನು ಹಿಂದಕ್ಕಿಡುತ್ತಾರೆ. ಆತ್ಮವಿಶ್ವಾಸ ಕಳೆದುಕೊಂಡು ಪಲಾಯನಗೊಳ್ಳುತ್ತಾರೆ. ಪ್ರಯತ್ನ ಪಡದೆ ಅವಕಾಶಗಳು ತಾನಾಗಿಯೇ ಬಂದು ಮಡಿಲಿಗೆ ಬೀಳಬೇಕು ಎನ್ನುವ ಅತಿ ಆಸೆಯಿಂದಾಗಿ ಹದಿಹರೆಯದ ಮಕ್ಕಳಿಗೆ ತಮಗಿಂತ ಮೇಲಿರುವ ಯಾವುದೇ ಸಹಪಾಟಿಗಳನ್ನು ಕಂಡರೂ ಒಂಥರಾ ಸಿಟ್ಟು, ದ್ವೇಷ.
ಆದರೆ ಟಾಪರ್‌ಗಳು ಎನಿಸಿಕೊಳ್ಳುವ ಈ ಮಕ್ಕಳಲ್ಲಿ ಯಾವುದೇ ಅದ್ಭುತ ಎನಿಸಿಕೊಳ್ಳುವುದಿರುವುದಿಲ್ಲ. ಪ್ರಯತ್ನ ಮತ್ತು ಅವಕಾಶಗಳ ಸದುಪಯೋಗ ಅವರನ್ನು ಎತ್ತರಕ್ಕೆ ತಂದು ನಿಲ್ಲಿಸಿರುತ್ತದೆ. ಹಿಂಜರಿಕೆಯನ್ನು ಪಕ್ಕಕ್ಕೆ ಸರಿಸಿ ಸ್ನೇಹ ಹಸ್ತ ಚಾಚಿದರೆ ಅವರಿಗೂ ಅದು ಅರ್ಥವಾಗುತ್ತದೆ.
ಈ ರೀತಿಯ ಮನೋಭಾವವನ್ನು ಗೆದ್ದು ಬರಲು ಹೆತ್ತವರೂ ಕೈಜೋಡಿಸುವ ಅವಶ್ಯಕತೆ ಇದೆ. ಗ್ರಾಮೀಣ ಪ್ರದೇಶದಿಂದ ಬಂದ, ಕನ್ನಡ ಮೀಡಿಯಂನಲ್ಲಿ ಕಲಿತ ಮಕ್ಕಳಲ್ಲಿ ಈ ಕೀಳರಿಮೆ ಹೆಚ್ಚು. ನಮಗಿಂತ ಬೇರೆಯವರು ಚೆನ್ನಾಗಿದ್ದಾರೆ, ಹೆಚ್ಚು ಬುದ್ಧಿವಂತರು, ಇಂಗ್ಲಿಷ್ ಭಾಷೆ ಮೇಲೆ ಹಿಡಿತ ಹೊಂದಿದವರು ಎಂದು ತಮ್ಮನ್ನು ತಾವೇ ಮೂಲೆಗುಂಪಾಗಿಸಿಕೊಳ್ಳುತ್ತಾರೆ.
ಅವಕಾಶಗಳು ಇರುವುದು ನಮ್ಮ ಕೈಯಲ್ಲೆ. ಅವುಗಳನ್ನು ಸೃಷ್ಟಿಸಿಕೊಳ್ಳುವ ಜಾಣತನ ನಮ್ಮಲ್ಲೇ ಇರಬೇಕು. ಬೇರೆಯವರ ಆಗುಹೋಗುಗಳ ಬೆನ್ನತ್ತಿ ಚಿಂತೆಯ ಸಂತೆಯಲ್ಲಿ ಕೂರುವುದು ಯಾವುದೇ ವಿದ್ಯಾರ್ಥಿಗೆ ಬೇಡದ ಸಂಗತಿ. ಬಣ್ಣ, ಸೌಂದರ್ಯ, ಬಟ್ಟೆ, ಸೌಕರ್ಯ, ಅನುಕೂಲ ಎಲ್ಲವೂ ನಿಗದಿತ ಹಂತದವರೆಗೆ. ನಂತರ ಉಳಿಯುವುದು ಪ್ರತಿಭೆ ಮತ್ತು ಕೆಲಸ ಎನ್ನುವುದು ನೆನಪಿನಲ್ಲಿರಬೇಕಾದ ಅಂಶ. ದುಡ್ಡು, ಸೌಂದರ್ಯವನ್ನು ನಿವಾಳಿಸಿ ಬಿಸಾಕುವ ಶಕ್ತಿ ನಿಮ್ಮ ಬುದ್ಧಿ ಮತ್ತು ಪ್ರತಿಭೆಗೆ ಇದೆ. ಅದನ್ನು ಸದುಪಯೋಗ ಮಾಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಈ ರೀತಿ ಯೋಚನೆಗಳನ್ನು ಬೆಳೆಸಿಕೊಂಡ ಮಕ್ಕಳು ಮುಂದೆ ಉದ್ಯೋಗ ಮತ್ತು ವೈವಾಹಿಕ ಜೀವನದಲ್ಲೂ ತೊಂದರೆಗೊಳಗಾಗುತ್ತಾರೆ. ಇದಕ್ಕೆ ಹೆತ್ತವರು, ಬೆಳೆದು ಬಂದ ಪರಿಸರ, ಅನುಭವಿಸಿದ ಘಟನೆಗಳು, ಸಂಭವಿಸಿದ ಅವಘಡಗಳು ಕಾರಣಗಳಿರಬಹುದು.
ಖಿನ್ನತೆಗೆ ಬಿದ್ದ ಮಕ್ಕಳನ್ನು ಸೂಕ್ತ ಸಮಯದಲ್ಲಿ ಪತ್ತೆ ಹಚ್ಚಿ ಅವರು ಇಷ್ಟಪಡುವ ವ್ಯಕ್ತಿಗಳ ಮೂಲಕ ಅಥವಾ ಕೌನ್ಸೆಲರ್ ಮೂಲಕ ತಿಳಿಹೇಳಿದರೆ ಬದಲಾವಣೆ ತರಬಹುದು. ಇಲ್ಲದಿದ್ದರೆ ಜೀವನದುದ್ದಕ್ಕೂ ಅವರನ್ನು ಖಿನ್ನತೆ ಕಾಡುತ್ತದೆ. ಅವಕಾಶಗಳು ಎಲ್ಲರ ಬಾಳಿನಲ್ಲೂ ಬರುತ್ತವೆ. ಅದನ್ನು ಗುರುತಿಸಿ ಹಿಂಜರಿಕೆ, ಕೀಳರಿಮೆ ತೊರೆದು ನಮ್ಮದಾಗಿಸಿಕೊಳ್ಳುವ ತಾಳ್ಮೆ, ಜಾಣತನ ಬೇಕು.



- ಜಮುನಾ ರಾಣಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com