

ಕರ್ನಾಟಕ ಪತ್ರಿಕೋದ್ಯಮಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಮೈಸೂರು ವಿಶ್ವವಿದ್ಯಾನಿಲಯ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ವಿವಿಯ ವೆಬ್ಸೈಟ್ನಲ್ಲಿ 'ಗಂಗೋತ್ರಿ ನ್ಯೂಸ್ ಚಾನೆಲ್' ಅಪ್ಲೋಡ್ ಆಗಿದೆ.
ಮಾನಸಗಂಗೋತ್ರಿಯ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಸತತ ಎರಡು ತಿಂಗಳ ಕಾಲ ಶ್ರಮಿಸಿ 'ಗಂಗೋತ್ರಿ- ವಾಯ್ಸ್ ಆಫ್ ದಿ ಯೂನಿವರ್ಸಿಟಿ' ಎಂಬ ಸ್ಲೋಗನ್ನೊಂದಿಗೆ ರೂಪಿಸಿದ್ದಾರೆ. ಮೈಸೂರು ವಿವಿ 2016ಕ್ಕೆ ಶತಮಾನ ಪೂರೈಸಲಿರುವ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲು ಈ ಚಾನೆಲ್ ಬಳಸಿಕೊಳ್ಳುವುದು ಒಂದು ಕಡೆ. ಹೊಸ ಪ್ರಯೋಗದ ಹೆಮ್ಮೆ ಮತ್ತೊಂದು ಕಡೆ.
ಮೈಸೂರು ವಿವಿಯ ಅಧಿಕೃತ ವೆಬ್ಸೈಟ್ www.uni-mysore.ac.in ನಲ್ಲಿ ಅಥವಾ www.uni-mysore.ac.in/varsitytv/ni.html ಮುಖಾಂತರವೂ ನೇರವಾಗಿ ಚಾನೆಲ್ ವೀಕ್ಷಿಸಬಹುದು. ಆರಂಭದಲ್ಲಿ ಎಂ.ಆರ್. ಪ್ರೀತಿ ಸುದ್ದಿ ನಿರೂಪಕಿಯಾಗಿ ಪ್ರವೇಶಿಸುತ್ತಾರೆ. ನಂತರ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ. ಮಹೇಶ್ಚಂದ್ರ ಗುರು, ಪ್ರಾಧ್ಯಾಪಕರಾದ ಪ್ರೊ.ಎನ್. ಉಷಾರಾಣಿ, ಡಾ.ಕೆ.ಜೆ. ಜೋಸೆಫ್, ಪ್ರೊ. ನಿರಂಜನ ವಾನಳ್ಳಿ, ಡಾ.ಸಿ.ಕೆ. ಪುಟ್ಟಸ್ವಾಮಿ, ಡಾ.ಎನ್. ಮಮತ ಶುಭ ಕೋರಿದ್ದಾರೆ. ನಂತರ 33 ನಿಮಿಷಗಳ ಸುದ್ದಿ ಪ್ಯಾಕೇಜ್ಪ್ರಸಾರವಾಗುತ್ತದೆ.
-ಜೆ. ಮಹದೇವ