

ಎಂಜಿನಿಯರಿಂಗ್, ಡಾಕ್ಟರ್ ಪದವಿಗಳೆಲ್ಲ ಈಗ ಮೂಲೆಗೆ ಸೇರಿದವು. ಕೃಷಿ ಹಾಗೂ ಗ್ರಾಮೀಣ ಗೃಹ ವಿಜ್ಞಾನ ವ್ಯಾಸಂಗದತ್ತ ಈಗ ಒಲವು ಹೆಚ್ಚು. ಧಾರವಾಡದ ಕೃಷಿ ವಿವಿ ಆವರಣದಲ್ಲಿರುವ ಗ್ರಾಮೀಣ ಗೃಹ ವಿಜ್ಞಾನ ಕಾಲೇಜು, ಗ್ರಾಮೀಣ ವಿಜ್ಞಾನ ವಿಷಯದಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳನ್ನು ಕೈ ಬೀಸಿ ಕರೆಯುತ್ತಿದೆ.
ಸಾಕಷ್ಟು ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಒದಗಿಸಿಕೊಡುವ ಈ ಗ್ರಾಮೀಣ ಗೃಹ ವಿಜ್ಞಾನಕ್ಕೂ ಸಿಇಟಿ ಕೌನ್ಸೆಲಿಂಗ್ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಪದವಿ, ಸ್ನಾತಕೋತ್ತರ ಹಾಗೂ ಸಂಶೋಧನೆ ವಿಷಯದಲ್ಲಿ ವಿದ್ಯಾರ್ಥಿಗಳು ಅಧ್ಯಯನಿಸಬಹುದು. ಈ ಕೋರ್ಸ್ ಮುಗಿಸಿದ ಬಳಿಕ ಕೆಲಸವೂ ಖಾತ್ರಿ.
ಏನೇನು ಅಧ್ಯಯನ?
ಗೃಹ ವಿಜ್ಞಾನದ ಐದು ವಿಭಾಗಗಳಾದ ಮಾನವ ವಿಕಾಸ ಮತ್ತು ಕುಟುಂಬ ಅಧ್ಯಯನ, ಆಹಾರ ವಿಜ್ಞಾನ ಮತ್ತು ಪೋಷಣೆ, ವಸ್ತ್ರ ಮತ್ತು ಉಡುಪು ವಿನ್ಯಾಸ, ಕುಟುಂಬ ಸಂಪನ್ಮೂಲ ನಿರ್ವಹಣೆ ಹಾಗೂ ವಿಸ್ತರಣೆ ಮತ್ತು ಸಂವಹನ ನಿರ್ವಹಣೆ ವಿಷಯಗಳನ್ನು ಅಭ್ಯಸಿಸಬಹುದು. ಕೃಷಿ, ಕೃಷಿಯೇತರ ವಿಷಯಗಳನ್ನೂ ಅಧ್ಯಯನಿಸಬಹುದು. ಸ್ನಾತಕ ಪದವಿಯ ಅನಂತರ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆನ್ನಿಸಿದರೆ, ಐದೂ ವಿಭಾಗಗಳಲ್ಲಿ ಎರಡು ವರ್ಷದ ಸ್ನಾತಕೋತ್ತರ ಮತ್ತು ಮೂರು ವರ್ಷದ ಪಿಎಚ್ಡಿ ಪದವಿಗೆ ಪ್ರವೇಶ ಪಡೆಯಬಹುದು.
ಪ್ರವೇಶಕ್ಕೆ ಅರ್ಹತೆ
ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಪಾಸಾಗಿರಬೇಕು. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳನ್ನು ಪರಿಗಣಿಸಲಾಗುವುದು. ಸಿಇಟಿ ಕಡ್ಡಾಯವಾಗಿ ಬರೆದಿರಬೇಕು. ಈ ಪದವಿ ಪ್ರವೇಶಕ್ಕೆ ರೈತರ ಮಕ್ಕಳಿಗಾಗಿಯೇ ಶೇ.40ರಷ್ಟು ಸೀಟುಗಳನ್ನು ಮೀಸಲಿರಿಸಿರುವುದು ವಿಶೇಷ.
ಆಸಕ್ತ ವಿದ್ಯಾರ್ಥಿಗಳು ಗ್ರಾಮೀಣ ಗೃಹ ವಿಜ್ಞಾನ ಮಹಾವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಧಾರವಾಡ- 0836 -2443704 ಅಥವಾ ಜಾಲತಾಣ - ಢಿಢಿಢಿ.್ಡಛಡಜ.ಜಜ್ಡ ಸಂಪರ್ಕಿಸಬಹುದು.
ಯಾವ್ಯಾವ ಉದ್ಯೋಗ?
ಈ ಕೋರ್ಸ್ ಮುಗಿಸಿದವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆ, ಬಾಲವಾಡಿ ಅಂಗನವಾಡಿ ತರಬೇತಿ ಕೇಂದ್ರಗಳು, ಶಿಶುಪಾಲನಾ ಕೇಂದ್ರಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಆಸ್ಪತ್ರೆಗಳಲ್ಲಿ ಡಯಟೀಶಿಯನ್ಸ್, ಆಹಾರ ಮತ್ತು ಪೋಷಣಾ ಸಲಹೆಗಾರರು, ಆಹಾರ ಸಂಸ್ಕರಣೆ ಉದ್ದಿಮೆ ಸಲಹೆಗಾರರು, ಆಹಾರ ಗುಣಮಟ್ಟ ಪ್ರಯೋಗಾಲಯ, ಕೈಮಗ್ಗ ಮತ್ತು ಜವಳಿ ಇಲಾಖೆ, ವಸ್ತ್ರ ಮತ್ತು ಉಡುಪು ಗುಣಮಟ್ಟ ಪರೀಕ್ಷಣಾ ಪ್ರಯೋಗಾಲಯಗಳು, ಒಳಾಂಗಣ, ವಾಣಿಜ್ಯ ಹಾಗೂ ಪೀಠೋಪಕರಣಗಳ ವಿನ್ಯಾಸಕರು, ಸಮೂಹ ಮಾಧ್ಯಮ ಸಂಸ್ಥೆಗಳನ್ನು ಸೇರಬಹುದು. ವಿಸ್ತರಣಾ ಕಾರ್ಯಕರ್ತರು, ಇನ್ನಿತರ ಸರ್ಕಾರಿ ಮತ್ತು ಸರ್ಕಾರೇತರ ಸಂಘ-ಸಂಸ್ಥೆಗಳು, ಉಪನ್ಯಾಸಕರು, ಸಂಶೋಧಕರಿಗಾಗಿ ವೃತ್ತಿ ಜೀವನ ಆರಂಭಿಸಲು ಅವಕಾಶ ಕಲ್ಪಿಸುತ್ತದೆ. ಅಲ್ಲದೇ, ಜಿಲ್ಲಾ ತರಬೇತಿ ಕೇಂದ್ರ, ಗಗನ ಸಖಿಯರು, ಉಪನೋಂದಣಿ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಲು ಅವಕಾಶವಿದೆ.
- ಚಿತ್ರ ಲೇಖನ: ಬಸವರಾಜ ಹಿರೇಮಠ