'ಕ್ಯೂರಿಯಾಸಿಟಿ ಕಿಲ್ಡ್ ದ ಕ್ಯಾಟ್' ಎಂಬ ಆಂಗ್ಲ ಗಾದೆಯಿದೆ. ಇದರ ನಿಜವಾದ ಅರ್ಥ ನಮಗೆ ಅರ್ಥವಾದದ್ದು ರಸಾಯನಶಾಸ್ತ್ರ ಪ್ರಯೋಗ ಶಾಲೆಯಲ್ಲಿ! ಮೊದಲ ಬಾರಿಗೆ ಆ ಬಣ್ಣ ಬಣ್ಣದ ಗಾಜಿನ ಬಾಟಲಿಗಳನ್ನು ನೋಡಿದಾಗ ಯಾವುದೋ ವಿಸ್ಮಯ ಜಾದೂ ನೋಡಲು ಬಂದ ಮಕ್ಕಳಂತೆ ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದೆವು. ಯಾವಾಗ ಅವುಗಳನ್ನು ಬಳಸಲು ನಮಗೆ ಅನುಮತಿ ಸಿಕ್ಕಿತೋ, ಆಗಿನಿಂದಲೇ ನಮ್ಮ ಪ್ರಯೋಗ ಆರಂಭವಾಯಿತು. ನಾನು ನನ್ನ ಸಹಪಾಠಿ, ಉಪನ್ಯಾಸಕರಿಗೆ ಕಾಣದಂತೆ ಟೆಸ್ಟ್- ಟ್ಯೂಬ್ನಲ್ಲಿ ಸ್ವಲ್ಪ ಸ್ವಲ್ಪ ದ್ರವ್ಯಗಳನ್ನು ಬೆರೆಸುತ್ತಿದ್ದೆವು. ಯಾವ ದ್ರವ್ಯಕ್ಕೆ ಯಾವುದನ್ನು ಬೆರೆಸಿದರೆ ಏನಾಗುತ್ತದೆ ಎಂದು ಒಂದು ಚೀಟಿಯಲ್ಲಿ ಬರೆದಿಟ್ಟುಕೊಳ್ಳುತ್ತಿದ್ದೆವು. ಪಠ್ಯಪುಸ್ತಕದಲ್ಲಿ ಇದರ ಬಗ್ಗೆ ಮಾಹಿತಿಯಿತ್ತು. ಆದರೆ ಅದನ್ನು ಅನುಸರಿಸಲು ಮನಸ್ಸು ಕೇಳುತ್ತಿರಲಿಲ್ಲ. ಪ್ರಯೋಗವಂದರೆ ಅಡುಗೆ ಮಾಡಿದಷ್ಟು ಸರಳವೆನ್ನಿಸುತ್ತಿತ್ತು ಆಗ...
ನಮ್ಮ ಈ ಕುತೂಹಲ ಅನೇಕ ವಿಚಿತ್ರ ಪ್ರಯೋಗಗಳಿಗೆ ದಾರಿ ಮಾಡಿಕೊಟ್ಟಿತು. ಕೆಲವೊಮ್ಮೆ ಬುಸ್ಸ್ ಎಂದು ಹೊಗೆ ಬಂದರೆ, ಕೆಲವೊಮ್ಮೆ ಇಡೀ ಪ್ರಯೋಗಶಾಲೆ ದುರ್ನಾತಮಯ! ಪ್ರತಿ ವಿಭಾಗದಲ್ಲಿ ವಾಶ್-ಬೇಸಿನ್ ಇದ್ದುದರಿಂದ ಕೂಡಲೇ ಕೈ ತೊಳೆದು ಮುಗ್ಧರಂತೆ ನಿಂತುಕೊಳ್ಳುತ್ತಿದ್ದೆವು. ಹಾಗಾಗಿ ಉಪನ್ಯಾಸಕರು ಶಬ್ದ ಕೇಳಿ ಓಡಿ ಬಂದಾಗ ಎಲ್ಲರೂ ಯಾರು ಎಲ್ಲಿ ಅಂತ ಅತ್ತ-ಇತ್ತ ನೋಡುತ್ತಿದ್ದರು. ಒಗ್ಗಟ್ಟಿನಲ್ಲಿ ಬಲವಿತ್ತು. ಈ ಪ್ರಯೋಗದ ಬಗ್ಗೆ ಯಾರೊಬ್ಬರೂ ಬಾಯಿ ಬಿಡುತ್ತಿರಲಿಲ್ಲ. ಏಕೆಂದರೆ ತರಗತಿಯಲ್ಲಿ ಇದ್ದ ಸಂಶೋಧಕರು ನಾವಿಬ್ಬರೇ ಅಲ್ಲ ನಮ್ಮಂತೆ ಹಲವರಿದ್ದರು! ದಿನಕ್ಕೊಂದು ಪ್ರಯೋಗ ಮಾಡುತ್ತಿದ್ದ ನಾವು ಸಿಕ್ಕಿ ಬಿದ್ದದ್ದು ಒಂದೇ ಬಾರಿ! ಅದೇ ಕೊನೆಯ ಪ್ರಯೋಗ. ಗಡಿಬಿಡಿಯಲ್ಲಿ ಕಾನ್ಸನ್ಟ್ರೇಟೆಡ್ ಸಲ್ಫ್ಯೂರಿಕ್ ಆಮ್ಲದ ಬಾಟಲಿಯನ್ನು ನಮ್ಮ ಸಂಶೋಧನಾ ಚೀಟಿಯ ಮೇಲಿಟ್ಟು ಬಿಟ್ಟೆವು. ಆ ಚೀಟಿಯಲ್ಲಿ ದೊಡ್ಡ ರಂಧ್ರವಾಯಿತು! ಜತೆಗೆ ನಾವು ಕಂಡುಹಿಡಿದ ಪ್ರಯೋಗಗಳಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ ಬರೆದಿಟ್ಟದ್ದು ಎಲ್ಲ ಮಾಯವಾಯಿತು. ಅದು ಇನ್ನೂ ಇರುತ್ತಿದ್ದಿದ್ದರೆ ನಾವು ವಿಜ್ಞಾನದಲ್ಲಿ ಹೆಸರು (ಹಾಳು) ಮಾಡುತ್ತಿದ್ದೆವೋ ಏನೋ...?
ಈ ಪ್ರಯೋಗಗಳು ಕೇವಲ ಪಿಯುಸಿಗೆ ಸೀಮಿತವಾಗಿರಲಿಲ್ಲ. ಎಂಜಿನಿಯರಿಂಗ್ನಲ್ಲೂ ಮುಂದುವರಿಯಿತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದ ಕಾರಣ ಅಲ್ಲೂ ಉಪನ್ಯಾಸಕರಿಗೆ ನಮ್ಮ ಕಿತಾಪತಿ ಗೊತ್ತಾಗುತ್ತಿರಲಿಲ್ಲ. ಬೆಸುಗೆಗೆ ಬಳಸುವ ವೆಲ್ಡಿಂಗ್ ಮತ್ತು ಸೋಲ್ಡರಿಂಗ್ ಗನ್ನಿಂದ ಜೋಡಿಸುವುದಕ್ಕಿಂತ ಮುರಿದದ್ದೇ ಜಾಸ್ತಿ. ಕಾರ್ಪೆಂಟರಿಯಲ್ಲಿ ಕೇವಲ ಚೌಕ, ತ್ರಿಕೋನ ಮತ್ತು ಉರುಳು ಆಕಾರದ ವಸ್ತು ಮಾಡುವ ಬದಲು ಪುಟ್ಟ ಕುರ್ಚಿ, ಲಟ್ಟಣಿಗೆಯಂಥ ಮಕ್ಕಳ ಆಟಿಕೆ ಮಾಡಿದ್ದೇ ಜಾಸ್ತಿ. ಮೆಕಾನಿಕಲ್ ವರ್ಕ್ಶಾಪ್ನಲ್ಲಿ, ಕಂಪ್ಯೂಟರ್ ಲ್ಯಾಬ್ನಲ್ಲಿ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಲ್ಯಾಬ್ನಲ್ಲಿ ಬಹಳಷ್ಟು ಸಂಶೋಧಿಸಿದ್ದೇವೆ. ಆದರೆ, ಅದನ್ನು ಮೊದಲೇ ಯಾರೋ ವಿಜ್ಞಾನಿಗಳು ಕಂಡುಹಿಡಿದಿದ್ದರಿಂದ ಪೇಟೆಂಟ್ಗಾಗಿ ಅರ್ಜಿ ಸಲ್ಲಿಸಲಾಗಲಿಲ್ಲ ಅನ್ನುವುದು ವಿಪರ್ಯಾಸ!
ಅದಿತಿಮಾನಸ ಟಿ.ಎಸ್.