ಕನ್ನಡಪ್ರಭ ವಾರ್ತೆ, ಬೆಂಗಳೂರು, ಆ.27-
ಐಪಿಎಲ್ ಖ್ಯಾತಿ ಸ್ಫೂರ್ತಿಯಿಂದ ತರಾತುರಿಯಲ್ಲಿ ಹುಟ್ಟಿದ್ದೇ ಕೆಪಿಎಲ್. ಆದರೆ ಇದು ಕರ್ನಾಟಕ ಪ್ರೀಮಿಯರ್ ಲೀಗ್ ಆಗುವ ಬದಲು ಕರ್ನಾಟಕ ಪೈರೇಟೆಡ್ ಲೀಗ್ ಆಗಿ, ಎರಡೇ ವರ್ಷಕ್ಕೆ ಕೊನೆಯುಸಿರೆಳೆದಿದೆ! ಪರಿಣಾಮವಾಗಿ ಜನ ಇದನ್ನು ಕರ್ನಾಟಕ ಪಾಪರ್ ಲೀಗ್ ಎಂದು ಕರೆಯಲಾರಂಭಿಸಿದ್ದಾರೆ !
ಕೆಎಸ್‌ಸಿಎ ಆಡಳಿತ ನಡೆಸುತ್ತಿದ್ದವರ ಬೇಜವಾಬ್ದಾರಿತನ ಮತ್ತು ಪಕ್ಷಪಾತದ ವರ್ತನೆಯೇ ಕೆಪಿಎಲ್ ಸೋಲಿಗೆ ಮೂಲ ಕಾರಣ ಎಂಬುದರಲ್ಲಿ ಯಾವುದೇ ಅನುಮಾನಗಳು ಉಳಿದಿಲ್ಲ. ಕೆಪಿಎಲ್ ಆರಂಭದಿಂದ ಅಂತ್ಯದವರೆಗಿನ ದಾಖಲೆಗಳು 'ಕನ್ನಡಪ್ರಭ'ಕ್ಕೆ ಲಭ್ಯವಾಗಿದ್ದು, ಅವುಗಳನ್ನು ಪರಿಶೀಲಿಸಿದಾಗ ಕೆಎಸ್‌ಸಿಎ ಹಿಂದಿನ ಆಡಳಿತ ಮಂಡಳಿಯೇ ಇದಕ್ಕೆ ಕಾರಣ ಎಂಬ ಅಂಶಗಳು ಪತ್ತೆಯಾಗಿವೆ.
ಐಪಿಎಲ್ ನೆರಳಲ್ಲಿ ಭರ್ಜರಿ ಪ್ರಚಾರದೊಂದಿಗೆ ಆರಂಭವಾಗಿದ್ದ ಕೆಪಿಎಲ್ ಎರಡೇ ವರ್ಷಕ್ಕೆ ಮಗುಚಿಕೊಂಡಿದೆ. ಐಪಿಎಲ್ ಯಶಸ್ಸಿನಿಂದ ಪ್ರೇರಿತವಾದ ಕೆಎಸ್‌ಸಿಎ 2009ರಲ್ಲಿ ಅದನ್ನೇ ನಕಲು ಮಾಡಿ ಕೆಪಿಎಲ್ ಆರಂಭಿಸಿತು. ಆದರೆ ಪಂದ್ಯಾವಳಿಗಳನ್ನು ಸಮರ್ಥವಾಗಿ ಆಯೋಜಿಸಲು ಮಾತ್ರ ವಿಫಲವಾಯಿತು.
ಅನುಮತಿ ಪಡೆದಿಲ್ಲ!: ಕೆಎಸ್‌ಸಿಎ ಆಡಳಿತ ಮಂಡಳಿ ಅವಧಿ 3 ವರ್ಷ. ಆದರೆ ಅಂದು ಅಸ್ತಿತ್ವದಲ್ಲಿದ್ದ ಬೃಜೇಶ್ ಪಟೇಲ್ ನೇತೃತ್ವದ ಕೆಎಸ್‌ಸಿಎ ಆಡಳಿತ ಮಂಡಳಿ 5 ವರ್ಷಗಳ ತನಕ ಕೆಪಿಎಲ್ ಆಯೋಜಿಸುವ ನಿರ್ಧಾರ ಕೈಗೊಂಡಿತು. ಅಂದರೆ ತನ್ನ ಅಧಿಕಾರಾವಧಿ ಮುಗಿದ ನಂತರವೂ ಪಂದ್ಯಾವಳಿ ಆಯೋಜಿಸುವ ಭರವಸೆ ನೀಡಿತ್ತು. ತನ್ನ ಅಧಿಕಾರಾವಧಿಯನ್ನೂ ಮೀರಿದ ಭರವಸೆ ಕೊಡುವಾಗ ಅಥವಾ ಅಂತಹ ಯೋಜನೆಗಳನ್ನು ರೂಪಿಸುವಾಗ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒಪ್ಪಿಗೆ ಪಡೆಯಬೇಕಿತ್ತು.
ಆದರೆ ಬೃಜೇಶ್ ಪಟೇಲ್ ನೇತೃತ್ವದ ಆಡಳಿತ ಮಂಡಳಿ ಸಾಮಾನ್ಯ ಸಭೆ ಅನುಮತಿ ಪಡೆಯದೇ ಕೆಪಿಎಲ್ ಆರಂಭಿಸುವ ನಿರ್ಧಾರ ಕೈಗೊಂಡಿದ್ದಲ್ಲದೇ, ಅದಕ್ಕೆ ಹಣ ವೆಚ್ಚವನ್ನೂ ಮಾಡಿದೆ. ಎಲ್ಲವನ್ನೂ ಮಾಡಿ ನಂತರ ಸಾಮಾನ್ಯ ಸಭೆ ಅನುಮತಿ ಪಡೆಯಲಾಗಿದೆ!
ಲಾಭ ಗಳಿಸಿದ ಫ್ರಂಟಿಯರ್: ಕೆಪಿಎಲ್‌ನಿಂದ ಬಂದ ಹಣವನ್ನೆಲ್ಲ ಕೆಎಸ್‌ಸಿಎ ಪಂದ್ಯಾವಳಿಗಾಗಿ ಖರ್ಚು ಮಾಡಿದೆ. ಆದರೆ, ಇಲ್ಲಿ ಮಾಲೀಕರಿಗೆ ನಷ್ಟವಾಗಿದ್ದೇ ಹೆಚ್ಚು. ಸ್ವಲ್ಪವೂ ಕಷ್ಟಪಡದೇ ಶೇ.15ರಷ್ಟು ಲಾಭಗಳಿಸಿದ್ದು ಸ್ಪೋರ್ಟ್ಸ್ ಫ್ರಂಟಿಯರ್ ಎಂಬ ಕಂಪನಿ!
ಸ್ಪೋರ್ಟ್ಸ್ ಫ್ರಂಟಿಯರ್ ಲಾಭಗಳಿಸಿದ ಕತೆ ಕೆಪಿಎಲ್ ಪಂದ್ಯಗಳಿಗಿಂತ ಹೆಚ್ಚು ಆಸಕ್ತಿಕರವಾಗಿದೆ. ಕೆಪಿಎಲ್ ಆಯೋಜನೆಯಲ್ಲಿ ಈ ಕಂಪನಿ ಪ್ರಮುಖ ಪಾತ್ರವನ್ನೇನೂ ವಹಿಸಲಿಲ್ಲ. ಬದಲಾಗಿ ಕ್ರಿಕೆಟ್ ಪಂದ್ಯಾವಳಿ ನಡೆಸುವುದು ಹೇಗೆ? ವಿವಿಧ ಫ್ರಾಂಚೈಸಿಗಳ ಜತೆ ಮಾಡಿಕೊಳ್ಳುವ ಒಪ್ಪಂದ ಹೇಗಿರಬೇಕು? ಮುಂತಾದ ಸಂಗತಿಗಳ ಕುರಿತು ಸಲಹೆ ನೀಡುವುದಷ್ಟೇ ಈ ಕಂಪನಿ ಕೆಲಸ. ಇಷ್ಟಾಗಿಯೂ ಒಪ್ಪಂದಗಳ ಪರಿಶೀಲನೆಗೆ ವಕೀಲರ ಶುಲ್ಕ ಪಾವತಿಸಿದ್ದು ಕೆಎಸ್‌ಸಿಎ!
2009ರ ಜುಲೈನಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಕೆಪಿಎಲ್ ಆಯೋಜನೆಗೆ ಸ್ಪೋಟ್ಸ್ ಫ್ರಂಟಿಯರ್ ಸಂಸ್ಥೆ ಸಹಾಯ ಪಡೆಯಲು ಹಾಗೂ ಅದಕ್ಕಾಗಿ ಸಂಸ್ಥೆಗೆ ಒಟ್ಟು ಆದಾಯದ ಶೇ.15ರಷ್ಟನ್ನು ನೀಡಲು ತೀರ್ಮಾನಿಸಲಾಗಿತ್ತು. ಆಗ ಕೆಪಿಎಲ್‌ನಲ್ಲಿ ಒಟ್ಟು 8 ತಂಡಗಳಿರಬೇಕು ಮತ್ತು ಒಂದೊಂದು ತಂಡಕ್ಕೆ 20 ಲಕ್ಷ ಮಾತ್ರ ನಿಗದಿಪಡಿಸಲಾಗಿತ್ತು. ಇಷ್ಟೆಲ್ಲ ಆಗಿದ್ದರೂ ಸ್ಪೋರ್ಟ್ಸ್ ಫ್ರಂಟಿಯರ್ ಕಂಪನಿಯ ಜತೆ ಒಪ್ಪಂದ ಮಾಡಿಕೊಳ್ಳಲಿಲ್ಲ. ಈ ನಡುವೆ ಕೆಎಸ್‌ಸಿಎ ತಂಡಗಳ ಹರಾಜಿಗೆ ಟೆಂಡರ್ ಕರೆಯಿತು. ಕೆಎಸ್‌ಸಿಎ ನಿರೀಕ್ಷೆ ಮೀರಿ ಆಸಕ್ತರು ಒಂದೊಂದು ತಂಡಕ್ಕೆ 1 ಕೋಟಿ ಮೀರಿ ದರ ನೀಡಲು ಮುಂದೆ ಬಂದರು. ಅಲ್ಲದೇ ಮಂತ್ರಿ ಸಮೂಹ ಸಂಸ್ಥೆ ಪಂದ್ಯಾವಳಿಯ ಪ್ರಾಯೋಜಕತ್ವ ವಹಿಸಿಕೊಳ್ಳಲು ಮುಂದೆಬಂತು. ಇದೆಲ್ಲದರ ಪರಿಣಾಮವಾಗಿ ಕೆಪಿಎಲ್ ಮೌಲ್ಯ ವರ್ಷಕ್ಕೆ 9 ಕೋಟಿಗೆ ಏರಿತು. ಇದರಿಂದಾಗಿ ಆರಂಭದಲ್ಲಿ ಕೆಪಿಎಲ್‌ಗಾಗಿ ವೆಚ್ಚ ಮಾಡಲು ನಿರ್ಧರಿಸಿದ್ದ 2.31 ಕೋಟಿ ಮೊತ್ತವನ್ನು ಕೆಎಸ್‌ಸಿಎ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆಯಿಲ್ಲದೇ 5.50 ಕೋಟಿಗೆ ಹೆಚ್ಚಿಸಲಾಗಿತ್ತು.
ಪಂದ್ಯಾವಳಿಯ ಹಿಂದಿನ ದಿನ ಕೆಎಸ್‌ಸಿಎ ಮತ್ತು ಸ್ಪೋರ್ಟ್ಸ್ ಫ್ರಂಟಿಯರ್ ಕಂಪನಿ ಒಪ್ಪಂದಕ್ಕೆ ಸಹಿ ಹಾಕಿದವು. ಆದರೆ ಜುಲೈನಲ್ಲಿ ಕೆಎಸ್‌ಸಿಎ ನಿರ್ಧರಿಸಿದಾಗ ಇದ್ದ ಒಟ್ಟು ಮೊತ್ತಕ್ಕೂ ನವೆಂಬರ್‌ನಲ್ಲಿ ಪಂದ್ಯಾವಳಿಗೂ ಒಂದು ದಿನ ಮೊದಲು ಒಪ್ಪಂದ ಮಾಡಿಕೊಳ್ಳುವಾಗ ಇರುವ ಮೊತ್ತಕ್ಕೂ ದೊಡ್ಡ ವ್ಯತ್ಯಾಸವಿತ್ತು. ಆದರೂ ಯಾವುದೇ ಚೌಕಾಸಿ ಮಾಡದೇ, ಹಳೇ ದರಕ್ಕೇ ಕೆಎಸ್‌ಸಿಎ ಒಪ್ಪಂದ ಮಾಡಿಕೊಂಡಿದೆ. ಇದು ಆಗಿನ ಆಡಳಿತ ಮಂಡಳಿಯ ಮೇಲೆ ಹಲವು ಅನುಮಾನಗಳು ಮೂಡುವಂತೆ ಮಾಡಿದೆ. ಇಂದರಿಂದ ಲಾಭವಾಗಿದ್ದು ಸ್ಪೋರ್ಟ್ಸ್ ಫ್ರಂಟಿಯರ್ ಸಂಸ್ಥೆಗೆ. ಮಾಡಿದ ಕೆಲಸ ಏನೂ ಇಲ್ಲದಿದ್ದರೂ, ಸಲಹೆ ಕೊಟ್ಟಿದ್ದಕ್ಕೆ 1.80 ಕೋಟಿ ಕಿಸಿಗೆಳಿಸಿದೆ. ಸಂಘಟನೆ ವೈಫಲ್ಯದಿಂದ ಕೆಪಿಎಲ್‌ಗೆ ಪ್ರೇಕ್ಷಕರು ಬರಲಿಲ್ಲ. ಕೇವಲ ಬೆಂಗಳೂರಿನಲ್ಲೇ ಹೆಚ್ಚು ಪಂದ್ಯಗಳನ್ನು ನಡೆಸಿದ್ದು ಇದಕ್ಕೆ ಪ್ರಮುಖ ಕಾರಣ. ನಿರೀಕ್ಷಿತ ಪ್ರಚಾರವೂ ಸಿಗಲಿಲ್ಲ. ಕ್ರಿಕೆಟ್ ಆಟಗಾರರಿಗೂ ಹೆಚ್ಚಿನ ಪ್ರಯೋಜನವಾಗಲಿಲ್ಲ.
ಪುನಾರಂಭ ಪ್ರಯತ್ನ ವಿಫಲ
ಅನಿಲ್ ಕುಂಬ್ಳೆ ನೇತೃತ್ವದ ಈಗಿನ ಕೆಎಸ್‌ಸಿಎ ಆಡಳಿತ ಮಂಡಳಿ ಕೆಪಿಎಲ್ ಪುನಾರಂಭಿಸಲು ಸಾಕಷ್ಟು ಪ್ರಯತ್ನ ನಡೆಸಿತು. ಆದರೆ ಹಿಂದಿನ ಆಡಳಿತ ಮಂಡಳಿ ವರ್ತನೆ ಮತ್ತು ಸಂಘಟನಾ ಆಚಾತುರ್ಯದಿಂದ ತಂಡಗಳ ಮಾಲೀಕರು ವಿಶ್ವಾಸ ಕಳೆದುಕೊಂಡಿದ್ದರು. ಪಂದ್ಯಾವಳಿಯಲ್ಲಿ ನಷ್ಟವಾಗಿರುವ ಕಾರಣಕ್ಕೆ ಕೆಎಸ್‌ಸಿಎ ಆಡಳಿತ ಮಂಡಳಿ ಕೆಲವರು ತಂಡದ ಮಾಲೀಕರಿಗೆ ತಲಾ ರು. 30 ಲಕ್ಷ ನೀಡುವ ಹುಸಿಭರವಸೆಯನ್ನೂ ನೀಡಿದ್ದರು. ಆದರೆ ಈ ಬಗ್ಗೆ ಕೆಎಸ್‌ಸಿಎ ಆಡಳಿತ ಮಂಡಳಿ ಸಭೆಯಲ್ಲಿ ಯಾವುದೇ ಪ್ರಸ್ತಾಪ ಆಗಿರಲಿಲ್ಲ. ನಷ್ಟದ ಭಯದಲ್ಲಿದ್ದ 4 ತಂಡದ ಮಾಲೀಕರು ಪಂದ್ಯಾವಳಿಯಿಂದಲೇ ಹೊರನಡೆದರು. ಕೆಎಸ್‌ಸಿಎ ತಂಡಗಳ ಮಾಲೀಕರಿಗಾಗಿ ಹೊಸದಾಗಿ ಟೆಂಡರ್ ಕರೆದರೆ, ಯಾರೂ ಆಸಕ್ತಿಯನ್ನೇ ತೋರಲಿಲ್ಲ. ಪರಿಣಾಮವಾಗಿ 5 ವರ್ಷಗಳ ಕರ್ನಾಟಕ ಪ್ರೀಮಿಯರ್ ಲೀಗ್ ಕೇವಲ 2 ವರ್ಷಕ್ಕೇ ಕರ್ನಾಟಕ ಪಾಪರ್ ಲೀಗ್ ಆಗಿ ಪರಿವರ್ತನೆಯಾಗಿದೆ.
- ವಿನಾಯಕ ಭಟ್ಟ ಮೂರೂರು
Advertisement