ಕ.ಪ್ರ.ವಾರ್ತೆ, ಬೆಂಗಳೂರು, ನ. 6-
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶಾದಿಭಾಗ್ಯ ಎಂದು ಮಂಚ-ಹಾಸಿಗೆ ನೀಡುವುದು, 'ಮಗು ನೀ ನಗು' ಎಂದು ಬಾಣಂತಿ ಹಾಗೂ ನವಜಾತ ಶಿಶುವನ್ನೂ ಮನೆಗೆ ಸುರಕ್ಷಿತವಾಗಿ ತಲುಪಿಸುವುದೇನೋ ಸರಿ. ಆದರೆ, ಹೆರಿಗೆಗಾಗಿ ಇದ್ದ ಸೌಲಭ್ಯವನ್ನು ಕಿತ್ತು ಕೊಳ್ಳುವತ್ತ ಹೆಜ್ಜೆ ಹಾಕುತ್ತಿರುವುದು ಯಾವ ನ್ಯಾಯ ?
ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ ಆತಂಕ ಹುಟ್ಟಿಸುವಷ್ಟು ಹೆಚ್ಚುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಗರ್ಭಿಣಿಯರ ಆರೋಗ್ಯದ ಕಡೆ ಹೆಚ್ಚು ಒತ್ತು ಕೊಡಬೇಕಾದ ಸರ್ಕಾರ ನಿರ್ಲಕ್ಷ್ಯ ತಾಳುತ್ತಿದೆ. ಸಹಕಾರಿ ಸಂಘಗಳ ಸದಸ್ಯ ರೈತರಿಗೆ 'ಯಶಸ್ವಿನಿ' ಆರೋಗ್ಯ ವಿಮಾ ಯೋಜನೆಯನ್ನು ಬಹುತೇಕ ಎಂಟು ವರ್ಷಗಳ ಹಿಂದೆಯೇ ಜಾರಿಗೆ ತರಲಾಗಿತ್ತು. ಇದರಡಿಯಲ್ಲಿ ಚಿಕಿತ್ಸೆಯ ವೆಚ್ಚವನ್ನು ಸರ್ಕಾರಿ ಆಸ್ಪತ್ರೆಗಳಲ್ಲದೆ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡ ಖಾಸಗಿ ಆಸ್ಪತ್ರೆಗಳಲ್ಲಿಯೂ ಪಡೆಯಬಹುದು. ಸಂಪೂರ್ಣ ವೆಚ್ಚ ಭರಿಸದೇ ಹೋದರೂ ಅಲ್ಪಸ್ವಲ್ಪವಾದರೂ ಸಿಗುತ್ತಿತ್ತು.
ಆದರೆ, ಸಿದ್ದರಾಮಯ್ಯ ಅವರು ಅಧಿಕಾರ ಸ್ವೀಕರಿಸಿದ ನಂತರ ಈ ಕಾರ್ಡನ್ನು ನವೀಕರಿಸಲು ಗಡುವು ನೀಡಿದ್ದು, ಚಿಕಿತ್ಸೆಯ ಹೆಚ್ಚಿನ ಮೊತ್ತ ಭರಿಸುವ ಭರವಸೆ ನೀಡಿದ್ದರು. ಆದರೆ, ರಾಜಧಾನಿ ಬೆಂಗಳೂರು ಸೇರಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳ ಬಹುತೇಕ ಆಸ್ಪತ್ರೆಗಳಲ್ಲಿ ಈ ಕಾರ್ಡ್ ಸ್ವೀಕರಿಸುತ್ತಿಲ್ಲ! ಅದರಲ್ಲಿಯೂ ಹೆರಿಗೆಗೆ ನೀಡುವ ವೆಚ್ಚ ವರ್ಕ್ಔಟ್ ಆಗದ ಕಾರಣ ಖಾಸಗಿ ಆಸ್ಪತ್ರೆಗಳು ಕಾರ್ಡ್ ಸ್ವೀಕೃತಿಯನ್ನು ನಿಲ್ಲಿಸಿವೆ.
ಹಣ ಬಾಕಿ ಉಳಿಸಿಕೊಂಡ ಸರ್ಕಾರ: ಯಶಸ್ವಿನಿ ಸಹಾಯವಾಣಿಗೆ ಕರೆ ಮಾಡಿದರೆ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಈ ಯೋಜನೆಯ ಸೌಲಭ್ಯ ಪಡೆಯಬಹುದು ಎಂದು ಸಂಪರ್ಕ ಸಂಖ್ಯೆಗಳನ್ನು ನೀಡುತ್ತಾರೆ. ಆ ಆಸ್ಪತ್ರೆಗಳು ಒಂದೋ ಮೈಲುಗಟ್ಟಲೆ ದೂರ ಅಥವಾ ಸಮೀಪದ ಆಸ್ಪತ್ರೆಗಳಲ್ಲಿ ವಿಚಾರಿಸಿದರೆ ಈ ಸೌಲಭ್ಯವನ್ನು ಕಳೆದ ಏಳು ತಿಂಗಳಿನಿಂದ ನಿಲ್ಲಿಸಲಾಗಿದೆ ಎಂಬ ಉತ್ತರ ನೀಡಲಾಗುತ್ತದೆ. ಕಾರಣ ಇಷ್ಟೇ. ಸರ್ಕಾರ ಎಷ್ಟು ದಿನವಾದರೂ ಹಣವನ್ನು ಭರಿಸುವುದಿಲ್ಲ. ಈಗಾಗಲೇ ಸಾಕಷ್ಟು ಹಣವನ್ನು ಬಾಕಿ ಉಳಿಸಿಕೊಂಡಿದೆ. ಇದರಿಂದ ಸಣ್ಣ ಪುಟ್ಟ ಆಸ್ಪತ್ರೆಗಳ ನಿರ್ವಹಣೆಯೇ ಕಷ್ಟವಾಗಿ ಕಾರ್ಡ್ ಸ್ವೀಕರಿಸುತ್ತಿಲ್ಲ.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ!
ಹೋಗಲಿ ಸರ್ಕಾರಿ ಆಸ್ಪತ್ರೆಗಳಿಗೆ ಹೋಗೋಣವೆಂದರೆ ಅಲ್ಲಿ ವೈದ್ಯರೇ ಇರುವುದಿಲ್ಲ. ಇದ್ದರೂ ಅಲ್ಲಿನ ಒತ್ತಡದಲ್ಲಿ ಈ ಯೋಜನೆಯ ಫಲಾನುಭವಿಗಳನ್ನೂ ನಿರ್ವಹಿಸೋದು ಸುಲಭವಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಸೌಲಭ್ಯ ಒದಗಿಸಲಾಗದ ಸರ್ಕಾರ ಖಾಸಗಿ ಆಸ್ಪತ್ರೆಗಳೊಂದಿಗೆ ಕೈ ಜೋಡಿಸುವುದು ಅನಿವಾರ್ಯ. ಆದರೂ ಇದಕ್ಕೆ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಮದುವೆ, ಮಕ್ಕಳು, ವಿಚ್ಛೇದಿತರು..... ಎಲ್ಲರಿಗೂ ನೆರವಾಗುತ್ತಿರುವ ಸರ್ಕಾರಕ್ಕೆ ಸುರಕ್ಷಿತ, ಸೂಕ್ತ ಹೆರಿಗೆಗಾಗಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತಿಸುತ್ತಿಲ್ಲ. ಈ ಯೋಜನೆ ಜಾರಿಯಾದಾಗಲಿಂದಲೂ ಹೆರಿಗೆಗಾಗಿ ಅತ್ಯಲ್ಪ ಹಣವನ್ನು ನೀಡಲಾಗುತ್ತಿತ್ತು. ಈಗದನ್ನೂ ಸರ್ಕಾರ ಕಿತ್ತು ಕೊಳ್ಳುತ್ತಿರುವುದು ಮಹಿಳೆಯ ಆರೋಗ್ಯದೆಡೆಗೆ ಸರ್ಕಾರದ ನಿಷ್ಕಾಳಜಿ ತೋರಿಸುತ್ತದೆ. ವೋಟ್ ಬ್ಯಾಂಕ್ ರಾಜಕಾರಣವೋ, ಅಲ್ಪಸಂಖ್ಯಾತರ ಓಲೈಕೆಗೋ ಸರ್ಕಾರ ಒಂದರ ಮೇಲೆ ಮತ್ತೊಂದರಂತೆ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ, ಹೆಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇಂಥ ಧೋರಣೆ ತಾಳುತ್ತಿರುವುದು ಯಾವ ನ್ಯಾಯ?
ಯಶಸ್ವಿನಿ ಕಾರ್ಡ್ ಸ್ವೀಕರಿಸದ ಆಸ್ಪತ್ರೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹೆರಿಗೆಗಾಗಿ ಈ ಯೋಜನೆಯಡಿಯಲ್ಲಿ ಅತ್ಯಲ್ಪ ಮೊತ್ತ ನೀಡುತ್ತಿರುವುದು ಈಗ ತಾನೆ ನನ್ನ ಗಮನಕ್ಕೆ ಬಂದಿದೆ. ನ.12ಕ್ಕೆ ಯಶಸ್ವಿನಿ ಟ್ರಸ್ಟ್ ಸಭೆ ಕರೆದಿದ್ದು, ಅಲ್ಲಿ ಈ ಸಮಸ್ಯೆಗಳ ಸಂಬಂಧವಾಗಿ ಚರ್ಚಿಸುತ್ತೇನೆ.
- ಎಚ್.ಎಸ್. ಮಹಾದೇವಪ್ರಸಾದ್, ಸಹಕಾರಿ ಸಚಿವ
ಯಶಸ್ವಿನಿ ಯೋಜನೆಯಡಿ ಹೆರಿಗೆಗಾಗಿ ಸರ್ಕಾರ ನೀಡುತ್ತಿರುವ ಹಣದಲ್ಲಿ ಚಿಕಿತ್ಸೆ ನೀಡಲು ಆಗುತ್ತಿಲ್ಲ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿರುವ ಆಸ್ಪತ್ರೆಗಳಲ್ಲಿ, ಹೀಗೂ ಮ್ಯಾನೇಜ್ ಮಾಡಬಹುದು. ಆದರೆ, ಬೆಂಗಳೂರಿನಂಥ ನಗರದಲ್ಲಿ ಸರ್ಕಾರ ನೀಡುವ ಹಣದಿಂದ ಯಾವ ಸೌಲಭ್ಯವನ್ನೂ ನೀಡಲಾಗುವುದಿಲ್ಲ. ಸರ್ಕಾರ ಮನಸ್ಸು ಮಾಡಿ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಸಹಜ ಹೆರಿಗೆಗೆ 8 ಸಾವಿರವನ್ನಾದರೂ ಭರಿಸಬೇಕು.
- ಡಾ.ಭಾರತಿ ರಾಜಶೇಖರ್, ನಿರ್ದೇಶಕರು, ವಾತ್ಸಲ್ಯ ಆಸ್ಪತ್ರೆ, ಹಾಸನ
- ಕೆ.ಎಸ್.ನಿರುಪಮಾ
Advertisement