

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಅವರು ಶುಕ್ರವಾರ ನಿಧನರಾಗಿದ್ದಾರೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅನಂತಮೂರ್ತಿ ಅವರನ್ನು ಇಂದು ಬೆಳಗ್ಗೆ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಂಜೆ 6 ಗಂಟೆ ವೇಳೆಗೆ ಲಘು ಹೃದಯಾಘಾತವಾಗಿ, ನಂತರ ಚೇತರಿಕೆ ಕಾಣದೆ ಕೊನೆಯುಸಿರೆಳೆದರು ಎಂದು ಮಣಿಪಾಲ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಸುದರ್ಶನ್ ಬಲ್ಲಾಳ್ ತಿಳಿಸಿದರು.
ಅನಂತಮೂರ್ತಿ ಅವರು ನಡೆದು ಬಂದ ಹಾದಿ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಗ್ರಾಮದಲ್ಲಿ 1932ರ ಡಿಸೆಂಬರ್ 21ರಂದು ಜನಿಸಿದ್ದ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಇನ್ನಿಲ್ಲ. ಇನ್ನು ಮುಂದೆ ಅವರು ನನೆಪು ಮಾತ್ರ.
ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠವನ್ನು ಕನ್ನಡಕ್ಕೆ ತಂದ ಆರನೇಯವರು. ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ. 1998ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಕೇಂದ್ರ ಸರ್ಕಾರ ಗೌರವಿಸಿತ್ತು.
ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಕುರಿತು ಪಿಎಚ್‌ಡಿ(ಬರ್ಮಿಂಗ್‌ಹ್ಯಾಮ್ ವಿವಿ, ಯುನೈಟೆಡ್ ಕಿಂಗ್‌ಡಂ) 1966. ಸಂಸ್ಕೃತ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
1970ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲೇ ಇಂಗ್ಲೀಷ್ ಬೋಧಕರಾಗಿ ಸೇವೆ ಆರಂಭಿಸಿ ತದ ನಂತರ 1987ರಲ್ಲಿ ಕೇರಳದ ತಿರುವಂತನಪುರಂನಲ್ಲಿರುವ ಕೇರಳ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿದ್ದರು. 1993ರಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಜವಹರಲಾಲ್ ನೆಹರು ವಿಶ್ವವಿದ್ಯಾಲಯ, ಈಬರ್‌ಹಾರ್ಡ್ ವಿಶ್ವವಿದ್ಯಾಲಯ, ಲೋವಾ ವಿಶ್ವವಿದ್ಯಾಲಯ, ಟಫ್ಟ್ಸ್ ವಿಶ್ವವಿದ್ಯಾಲಯ, ಶಿವಾಜಿ ವಿಶ್ವವಿದ್ಯಾಲಯದಲ್ಲಿ ಸೇರಿದಂತೆ ಭಾರತ ಮತ್ತು ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದ್ದಾರೆ.
ಸಂಸ್ಕಾರ, ಭವ, ಭಾರತೀಪುರ ಮತ್ತು ಅವಸ್ಥೆ ಕಾದಂಬರಿಗಳು ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಅನೇಕ ಪುಸ್ತಕಗಳು ಯೂರೋಪಿಯನ್ ಭಾಷೆ ಸೇರಿದಂತೆ ಭಾರತ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿದೆ. ಅವರು ಬರೆದಂತಹ ಕಾದಂಬರಿಗಳಲ್ಲಿ ಕೆಲವು ಚಲನಚಿತ್ರವಾಗಿ ಮೂಡಿ ಬಂದಿದೆ.
ಪ್ರಶಸ್ತಿಗಳು:
Advertisement