ಸೀಟು ಜಗಳವೇ ಕಾರಣ? ; ರೋತಕ್ ಪ್ರಕರಣಕ್ಕೆ ಹೊಸ ತಿರುವು

ಹರ್ಯಾಣದ ರೋತಕ್‌ನಲ್ಲಿ ಆರತಿ ಮತ್ತು ಪೂಜಾ ಎಂಬ ಸಹೋದರಿಯರಿಬ್ಬರಿಗೆ ಕಿರುಕುಳ ನೀಡಿದ ಯುವಕರಿಗೆ ಬೆಲ್ಟ್ ...
ರೋತಕ್‌ ಸಹೋದರಿಯರು ಥಳಿಸುತ್ತಿರುವುದು
ರೋತಕ್‌ ಸಹೋದರಿಯರು ಥಳಿಸುತ್ತಿರುವುದು

ಚಂಡೀಗಢ: ಹರ್ಯಾಣದ ರೋತಕ್‌ನಲ್ಲಿ ಬಸ್ ಪ್ರಯಾಣದ ವೇಳೆ ಆರತಿ ಮತ್ತು ಪೂಜಾ ಎಂಬ ಸಹೋದರಿಯರಿಬ್ಬರಿಗೆ ಕಿರುಕುಳ ನೀಡಿದ ಯುವಕರಿಗೆ ಬೆಲ್ಟ್ ಬಿಚ್ಚಿ ಥಳಿಸಿದ ಪ್ರಕರಣಕ್ಕೆ ಈಗ ಹೊಸತೊಂದು ತಿರುವು ಸಿಕ್ಕಿದೆ.

ಈ ಸಹೋದರಿಯರು ತಮ್ಮನ್ನು ಬಸ್‌ನಲ್ಲಿದ್ದ ಮೂವರು ಯುವಕರು ಚುಡಾಯಿಸಿದರು ಎಂಬ ಕಾರಣಕ್ಕೆ ಬೆಲ್ಟ್ ಬಿಚ್ಚಿ ಥಳಿಸಿದ್ದರು. ಆದರೆ ಆ ಯುವಕರನ್ನು ಹುಡುಗಿಯರನ್ನ ಚುಡಾಯಿಸಿಲ್ಲ, ಬಸ್ಸಿನಲ್ಲಿ ಸೀಟು ವಿಷಯಕ್ಕೆ ಸಂಬಂಧಿಸಿದಂತೆ ಅವರ ನಡುವೆ ವಾಗ್ವಾದ ನಡೆದಿತ್ತು ಎಂದು ಘಟನೆ ನಡೆದ ದಿನ ಅದೇ ಬಸ್ಸಿನಲ್ಲಿ ಸಂಚರಿಸಿದ್ದ ಮಹಿಳೆಯೊಬ್ಬರು ಬುಧವಾರ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪ್ರಸ್ತುತ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಚುಡಾಯಿಸಿದ ಯುವಕರಿಗೆ  ಥಳಿಸಿರುವ ವೀಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ದೇಶಕ್ಕೆ ದೇಶವೇ ಈ ಸಹೋದರಿಯರನ್ನು ಕೊಂಡಾಡಿತ್ತು.  ಅಷ್ಟೊತ್ತಿಗೆ ಹರ್ಯಾಣ ಸರ್ಕಾರ ಈ ಯುವತಿಯರಿಗೆ ಗಣರಾಜ್ಯದಿನದಂದು ಶೌರ್ಯ ಪ್ರಶಸ್ತಿ ನೀಡುವುದಾಗಿಯೂ ಘೋಷಿಸಿತ್ತು.
 
ಏನಿದು ಪ್ರಕರಣ?: ಪೂಜಾ ಮತ್ತು ಆರತಿ ಬಸ್ಸಿನಲ್ಲಿ ಸಂಚರಿಸುತ್ತಿದ್ದ ವೆಳೆ ಕುಲ್‌ದೀಪ್, ಮೋಹಿತ್ ಮತ್ತು ದೀಪಕ್ ಎಂಬ ಯುವಕರು ಚುಡಾಯಿಸಿದ್ದರು. ಆ ವೇಳೆ ರೊಚ್ಚಿಗೆದ್ದ ಸಹೋದರಿಯರು ಚುಡಾಯಿಸಿದ ಯುವಕರಿಗೆ ಬೆಲ್ಟ್ ಬಿಚ್ಚಿ ಚೆನ್ನಾಗಿ ಥಳಿಸಿದ್ದಾರೆ. ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದರೂ ಅಲ್ಲಿಂದ ಯಾವುದೇ ಉತ್ತರ ಸಿಗಲಿಲ್ಲ. ಆದಾಗ್ಯೂ, ಬಸ್‌ನಲ್ಲಿದ್ದವರು ಮೂಕಪ್ರೇಕ್ಷಕರಾಗಿದ್ದರೇ ಹೊರತು ಯಾರೊಬ್ಬರೂ ಈ ಯವತಿಯರ ಸಹಾಯಕ್ಕೆ ಬರಲಿಲ್ಲ. ಈ ವೇಳೆ ಬಸ್‌ನಲ್ಲಿದ್ದ ಸಹ ಪ್ರಯಾಣಿಕರೊಬ್ಬರು ಯುವತಿಯರು ಯುವಕರಿಗೆ ಥಳಿಸುತ್ತಿರುವ ದೃಶ್ಯವನ್ನು ರೆಕಾರ್ಡ್ ಮಾಡಿದ್ದರು.

ಈ ಘಟನೆ ಬೆಳಕಿಗೆ ಬಂದ ನಂತರ ಕುಲ್‌ದೀಪ್, ಮೋಹಿತ್ ಮತ್ತು ದೀಪಕ್‌ನ್ನು ಬಂಧಿಸಲಾಗಿತ್ತು.

ಈ ಹಿಂದೆಯೂ ವ್ಯಕ್ತಿಯೊಬ್ಬನಿಗೆ ಥಳಿಸಿದ್ದರು: ರೋತಕ್‌ನ ಪೂಜಾ ಮತ್ತು ಆರತಿ ಸಹೋದರಿಯರು ಪಾರ್ಕ್‌ನಲ್ಲಿ ಚುಡಾಯಿಸಿದ ವ್ಯಕ್ತಿಯೊಬ್ಬನಿಗೆ ಥಳಿಸುವ ವೀಡಿಯೋ ಮಂಗಳವಾರ ಬಹಿರಂಗವಾಗಿತ್ತು. ಈ ವಿಡಿಯೋ ಒಂದು ತಿಂಗಳ ಹಳೆಯದ್ದಾಗಿದ್ದು ಎಂದು ಹೇಳಿರುವ ಪೂಜಾ, ಆ ವೀಡಿಯೋವನ್ನು ಬಹಿರಂಗ ಪಡಿಸಿರುವ ವ್ಯಕ್ತಿಯ ವಿರುದ್ಧ ತಾನು ದೂರು ನೀಡುವುದಾಗಿ ಹೇಳಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com