
ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಜೈಲು ಪಾಲಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಜೈಲನಿಂದ ಬಿಡುಗಡೆಯಾಗುವ ಕಾಲ ಸನ್ನಿಹಿತವಾಗಿದೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಶನಿವಾರ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ರೆಡ್ಡಿ ವಿರುದ್ಧದ ಐದನೇ ಪ್ರಕರಣದಲ್ಲೂ ಜಾಮೀನು ಮಂಜೂರು ಮಾಡಿದ್ದು, ಇದರೊಂದಿಗೆ ಕರ್ನಾಟಕದ ಎಲ್ಲಾ ಪ್ರಕರಣಗಳಲ್ಲೂ ರೆಡ್ಡಿಗೆ ಜಾಮೀನು ದೊರೆತಂತಾಗಿದೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ರೆಡ್ಡಿ ವಿರುದ್ಧ ಒಟ್ಟು 5 ಕೇಸ್‌ಗಳು ದಾಖಲಾಗಿದ್ದವು. ಈಗಾಗಲೇ ಐದು ಪ್ರಕರಣಗಳಲ್ಲೂ ಜಾಮೀನು ಪಡೆದಿರುವ ರೆಡ್ಡಿ, ಒಎಂಸಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆಯಬೇಕಿದೆ. ಈ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಡಿಸೆಂಬರ್ 16ರಂದು ನಡೆಯಲಿದೆ.
ಕೂಡ್ಲಿಗೆ ಶಾಸಕ ನಾಗೇಂದ್ರ ಸೇರಿದಂತೆ ರೆಡ್ಡಿ ಆಪ್ತರಾದ ಕಾರದಪುಡಿ ಮಹೇಶ್, ಅಲಿಖಾನ್ ಸೇರಿದಂತೆ 10 ಮಂದಿಗೆ ಸಿಬಿಐ ಕೋರ್ಟ್ ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
2011 ಸೆಪ್ಟೆಂಬರ್ 5ರಂದು ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೀಡಾಗಿದ್ದ ಜನಾರ್ಧನ ರೆಡ್ಡಿ ವಿರುದ್ಧ ಒಟ್ಟು 7 ಪ್ರಕರಣಗಳ ದಾಖಲಾಗಿದ್ದು, ಈ ಪೈಕಿ ರಾಜ್ಯದ 5 ಪ್ರಕರಣಗಳು ಸೇರಿದಂತೆ ಒಟ್ಟು 6 ಪ್ರಕರಣಗಳಲ್ಲಿ ರೆಡ್ಡಿಗೆ ಜಾಮೀನು ದೊರೆತಿದೆ. ಇನ್ನೂ 1 ಪ್ರಕರಣದಲ್ಲಿ ಮಾತ್ರ ರೆಡ್ಡಿಗೆ ಜಾಮೀನು ದೊರೆತರೆ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
Advertisement