
ನವದೆಹಲಿ/ ಮಥುರಾ: ಶುಕ್ರವಾರ ರಾತ್ರಿ ದೆಹಲಿಯಲ್ಲಿ 25ರ ಹರೆಯದ ಮಹಿಳೆಯೊಬ್ಬರನ್ನು ಕ್ಯಾಬ್ನಲ್ಲಿ ಅತ್ಯಾಚಾರವೆಸಗಿದ ಆರೋಪಿ ಕ್ಯಾಬ್ ಚಾಲಕನನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು.
ತಲೆಮರೆಸಿಕೊಂಡಿದ್ದ ಆರೋಪಿ ಚಾಲಕ ಶಿವ್ ಕುಮಾರ್ ಯಾದವ್ನನ್ನು ಉತ್ತರ ಪ್ರದೇಶದ ಮಥುರಾ ನಗರದಿಂದ ಪೊಲೀಸರು ಭಾನುವಾರ ಬಂಧಿಸಿದ್ದರು.
ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಉಬರ್ ಟ್ಯಾಕ್ಸಿ ಕಂಪನಿಯ ಚಾಲಕನಾಗಿದ್ದಾನೆ ಶಿವ ಕುಮಾರ್. ಈತ ಈ ಹಿಂದೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ ಎಂಬ ವಿವರಗಳು ವಿಚಾರಣೆಗೊಳಪಡಿಸಿದಾಗ ಬಹಿರಂಗವಾಗಿವೆ.
2011ರಲ್ಲಿ ದೆಹಲಿಯ ಮೆಹರೌಲಿ ಪ್ರದೇಶದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಈತ ತಿಹಾರ್ ಜೈಲಿನಲ್ಲಿ 7 ತಿಂಗಳು ಶಿಕ್ಷೆ ಅನುಭವಿಸಿದ್ದ ಎಂಬ ವಿಚಾರವನ್ನು ಸ್ವತಃ ಆತನೇ ಪೊಲೀಸರಿಗೆ ಹೇಳಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಬರ್ ಕ್ಯಾಬ್ ಪ್ರಧಾನ ಕಚೇರಿ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದಾಗ್ಯೂ, ಪ್ರಕರಣದ ಹಿನ್ನೆಲೆಯಲ್ಲಿ ಗುರ್ಗಾಂವ್ನಲ್ಲಿರುವ ಉಬರ್ ಕ್ಯಾಬ್ ಕಚೇರಿಯನ್ನು ಬಂದ್ ಮಾಡಲಾಗಿದೆ ಎಂಬ ಸುದ್ದಿಯೂ ಕೇಳಿ ಬರುತ್ತಿದೆ.
ಪ್ರಸ್ತುತ ಪ್ರಕರಣ ಲೋಕಸಭೆಯಲ್ಲಿಯೂ ಪ್ರತಿಧ್ವನಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ರಾಜ್ ನಾಥ್ ಸಿಂಗ್ ಈ ಬಗ್ಗೆ ಕೇಸು ದಾಖಲಾಗಿದ್ದು, ಪ್ರಕರಣದ ತನಿಖೆಗಾಗಿ ಕಾರನ್ನು ಫಾರೆನ್ಸಿಕ್ ಪರೀಕ್ಷೆಗೊಳಪಡಿಸಲಾಗುವುದು ಎಂದಿದ್ದಾರೆ.
ಪ್ರಕರಣದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಸಂಘಟನೆ ಗೃಹ ಸಚಿವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದವು.
ದೆಹಲಿಯಲ್ಲಿ ನಡೆದ ಈ ಘಟನೆ ದುರದೃಷ್ಟಕರ ಎಂದು ಹೇಳಿದ ರಾಜ್ನಾಥ್ ಸಿಂಗ್ ಇಂಥಾ ಕೃತ್ಯಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ.
ಉಬರ್ ಸೇವಾ ಅನುಮತಿ ರದ್ಧತಿಗೆ ಚಿಂತನೆ:
ದೆಹಲಿಯಲ್ಲಿ ಸಂಚಾರ ವ್ಯವಸ್ಥೆ ಕಲ್ಪಿಸುತ್ತಿರುವ ಉಬರ್ ಕ್ಯಾಬ್ನ ಸಂಚಾರ ಅನುಮತಿಯ ರದ್ಧತಿ ಮಾಡುವ ಬಗ್ಗೆ ದೆಹಲಿ ಸರ್ಕಾರ ಚಿಂತನೆ ನಡೆಸುತ್ತಿದೆ. ಉಬರ್ ಕ್ಯಾಬ್ ಅನಧಿಕೃತ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಜಗತ್ತಿನಾದ್ಯಂತ 200ಕ್ಕಿಂತಲೂ ಹೆಚ್ಚು ನಗರಗಳಲ್ಲಿ ಸಂಚಾರ ವ್ಯವಸ್ಥೆ ಕಲ್ಪಿಸುತ್ತಿರುವ ಈ ಕ್ಯಾಬ್ ಆರ್ಬಿಐ ನಿಯಮಕ್ಕೆ ಬದ್ಧವಾಗಿಲ್ಲ ಎಂಬ ವಿಷಯವೂ ಈಗ ಬಹಿರಂಗವಾಗಿದೆ.
ಉಬರ್ ಕ್ಯಾಬ್ಗೆ ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್ ಮಾತ್ರ ಇದ್ದು, ದೆಹಲಿಯಲ್ಲಿ ಬಾಡಿಗೆ ಸೇವೆ ನೀಡಲು ಅನುಮತಿ ಇಲ್ಲ. ಆದ್ದರಿಂದ ಇದು ಅನಧಿಕೃತ ಸರ್ವೀಸ್ ಮಾಡುತ್ತಿದೆ ಎಂದು ರಸ್ತೆ ಸಾರಿಗೆ ಸಂಚಾರ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
Advertisement