
ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ದಿ. ಪಂಡಿತ್ ಮದನ್ ಮೋಹನ್ ಮಾಳವೀಯಾ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಘೋಷಿಸಲಾಗಿದೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಟಲ್ ಬಿಹಾರಿ ವಾಜಪೇಯಿ ಮತ್ತು ಮದನ್ ಮೋಹನ್ ಮಾಳವೀಯ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಟ್ವಿಟರ್‌ನಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.
ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಯಿತು. ನಂತರ ಭಾರತ ರತ್ನ ಪ್ರಶಸ್ತಿಗಾಗಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಮದನ್ ಮೋಹನ್ ಮಾಳವೀಯ ಅವರ ಹೆಸರನ್ನು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಲಾಯಿತು. ಇದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.
ಡಿ. 25ರಂದು ವಾಜಪೇಯಿ ಅವರ ಜನ್ಮದಿನ. ಈ ದಿನವನ್ನು ಉತ್ತಮ ಆಡಳಿತದ ದಿನವನ್ನಾಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿತ್ತು. ಇದಕ್ಕೆ ಪೂರಕವಾಗಿ ಭಾರತ ರತ್ನ ಘೋಷಿಸುವ ಮೂಲಕ ಅಟಲ್ ಜನ್ಮದಿನವನ್ನು ಮೋದಿ ಅವರು ಇನ್ನಷ್ಟು ಅರ್ಥಪೂರ್ಣವಾಗಿಸಿದ್ದಾರೆ.
ವಾಜಪೇಯಿ ನಡೆದು ಬಂದ ಹಾದಿ
ಚುನಾವಣಾ ಪೂರ್ವ 1942ರ ಕ್ವೀಟ್ ಇಂಡಿಯಾ ಚಳುವಳಿಯ ವೇಳೆ ರಾಜಕೀಯಕ್ಕೆ ಪ್ರವೇಶಿಸಿದರು. ಸರಿಸುಮಾರು 40 ವರ್ಷ ಅಟಲ್ ಬಿಹಾರಿ ವಾಜಪೇಯಿ ಅವರು ಸಂಸದರಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರು ಜನತಾ ಪಕ್ಷದ ಸಹ ಸಂಸ್ಥಾಪಕರಾಗಿದ್ದರು.
ವಾಜಪೇಯಿ ಅವರು ಮೂರು ಬಾರಿ ಭಾರತ ಪ್ರಧಾನಿಯಾಗಿ ದೇಶದ ಅಭಿವೃದ್ಧಿಯ ಹರಿಕಾರರಾದರು. 1996ರಲ್ಲಿ ಮೊದಲ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಬಹುಮತ ಸಾಭೀತು ಪಡಿಸಲಾಗದೆ 13 ದಿನಗಳ ನಂತರ ರಾಜಿನಾಮೆ ನೀಡಿದ್ದರು.
ಬಳಿಕ 1998ರ ಸಾರ್ವತ್ರಿಕ ಚುನಾವಣೆಯಲ್ಲಿ ಇತರ ಹಲವು ರಾಜಕೀಯ ಪಕ್ಷಗಳು ಬಿಜೆಪಿಯೊಂದಿಗೆ ಕೈಜೋಡಿಸಿದ್ದರಿಂದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಈ ಬಾರಿ ಅಲಟ್ ಬಿಹಾರಿ ವಾಜಪೇಯಿ ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದರು. ಆದರೆ ಯಶಸ್ವಿ 13 ತಿಂಗಳು ಕಾಲ ಅಧಿಕಾರದ ನಂತರ ಎಐಎಡಿಎಂಕೆ ಪಕ್ಷ ತನ್ನ ಬೆಂಬಲ ಹಿಂಪಡೆದಿದ್ದರಿಂದ ಮತ್ತೆ ಅಧಿಕಾರ ಕಳೆದುಕೊಂಡರು.
ಬಳಿಕ 1999 ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಲೋಕಸಭೆ ಚುನಾವಣೆಯಲ್ಲಿ 543 ಕ್ಷೇತ್ರಗಳ ಪೈಕಿ 303 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಗೆಳಿಸಿತ್ತು. ಇದರೊಂದಿಗೆ 1999ರಿಂದ 2004ರವೆಗೂ ಪ್ರಧಾನಿಯಾಗಿ 5 ವರ್ಷಗಳ ಕಾಲ ಅಧಿಕಾರ ನಡೆಸಿದ್ದರು.
ವಾಜಪೇಯಿಗೆ ಸಂದ ಗೌರವ
1992ರಲ್ಲಿ ಪದ್ಮ ವಿಭೂಷಣ
1993ರಲ್ಲಿ ಕಾನ್ಪುರ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ
1994 ರಲ್ಲಿ ಲೋಕಮಾನ್ಯ ತಿಲಕ್ ಪ್ರಶಸ್ತಿ ಹಾಗೂ ಅತ್ಯುತ್ತಮ ಸಂಸದೀಯ ಪಟು.
1994ರಲ್ಲಿ ಭಾರತ ರತ್ನ ಪಂಡಿತ್ ಗೋವಿಂದ್ ವಲ್ಲಬಾಯ್ ಪಾಂಟ್ ಪ್ರಶಸ್ತಿ
Advertisement