ನಮ್ಮ ಬೆಂಬಲ ನಿಮಗಿನ್ನೂ ಇದೆ: ಶರದ್ ಪವಾರ್

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್ ಸಿ ಪಿ ) ಅಧ್ಯಕ್ಷ ಶರದ್ ಪವಾರ್, ಬುಧವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ...
ಶರದ್ ಪವಾರ್ (ಸಂಗ್ರಹ ಚಿತ್ರ)
ಶರದ್ ಪವಾರ್ (ಸಂಗ್ರಹ ಚಿತ್ರ)

ಮುಂಬೈ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್ ಸಿ ಪಿ ) ಅಧ್ಯಕ್ಷ ಶರದ್ ಪವಾರ್, ಬುಧವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬಹುಮತ ಸಾಬೀತುಪಡಿಸಬೇಕಿದ್ದು ನಮ್ಮ ಬೆಂಬಲ ನಿಮಗೆ ಇನ್ನೂ ಇದೆ ಎಂದು ಬಿಜೆಪಿಗೆ ಮತ್ತೆ ಹೇಳಿದ್ದಾರೆ.

"ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದೆ. ನಮಗೆ ಸ್ಥಿರ ಸರ್ಕಾರ ಬೇಡ. ಮತ್ತೆ ಚುನಾವಣೆಗೆ ಹೋಗುವುದು ತರವಲ್ಲ. ರಾಜ್ಯಕ್ಕೆ ಅಸ್ಥಿರತೆ ತಲೆದೋರದಂತೆ ನಾವು ನೋಡಿಕೊಳ್ಳುತ್ತೇವೆ" ಎಂದಿರುವ ಪವಾರ್ "ತಪ್ಪು ನಡೆಗಳನ್ನು ವಿರೋಧಿಸಲು ನಾವು ಹಿಂಜರಿಯುವುದಿಲ್ಲ" ಎಂದು ಕೂಡ ಹೇಳಿದ್ದಾರೆ.

"ಬಹುಮತ ಸಾಬೀತು ಪಡಿಸಲು ಎನ್ ಸಿ ಪಿ ಯಿಂದ ಬೆಂಬಲ ತೆಗೆದುಕೊಂಡರೆ ಶಿವಸೇನೆ ವಿರೋಧಪಕ್ಷದಲ್ಲಿ ಕುಳಿತುಕೊಳ್ಳುವುದು" ಎಂದು ಉದ್ಧವ್ ಠಾಕ್ರೆ ಭಾನುವಾರ ಎಚ್ಚರಿಸಿದ್ದರು.

ಮುಖಮಂತ್ರಿ ಸ್ಥಾನದಲ್ಲಿ ಉಳಿಯಲು ಬುಧವಾರ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರು ಬಹುಮತ ಸಾಬೀತುಪಡಿಸಬೇಕಿದೆ. "ಬಿಜೆಪಿ ಮತ್ತಿ ಎನ್ ಸಿ ಪಿ ಹೊಂದಾಣಿಕೆ ಮಾಡಿಕೊಂಡರೆ ನಾವು ಅವರ ವಿರುದ್ಧ ಮತ ಹಾಕುತ್ತೇವೆ" ಎಂದಿರುವ ಠಾಕ್ರೆ ಸೇನೆ ವಿರೋಧ ಪಕ್ಷವಾಗಿ ಕೆಲಸ ಮಾಡಲು ಸಿದ್ಧವಿದೆ ಎಂದಿದ್ದಾರೆ.

ಎನ್ ಸಿ ಪಿ ಪಕ್ಷದ ಮೂಲಗಳ ಪ್ರಕಾರ ಬಹುಮತ ಸಾಬೀತು ಪಡಿಸುವ ಸಮಯದಲ್ಲಿ ಎನ್ ಸಿ ಪಿ ಪಕ್ಷದ ಸದಸ್ಯರು ಮತ ಚಲಾಯಿಸುವುದರಿಂದ ದೂರ ಉಳಿಯಲಿದ್ದು, ಬಿಜೆಪಿ ಗೆ ಸಹಕರಿಸಲಿದ್ದಾರೆ ಎನ್ನಲಾಗಿದೆ. "ಷರತ್ತು ರಹಿತಿ ಬೆಂಬಲ" ಕೊಡುವುದಾಗಿ ಘೋಷಿಸಿದ್ದ ಎನ್ ಸಿ ಪಿ ನಡೆಯಿಂದ ಶಿವಸೇನೆಗೆ ಬಿಜೆಪಿ ಜೊತೆ ಖಾತೆ ಹಂಚಿಕೆಯಲ್ಲಿ ಚೌಕಾಸಿ ಮಾಡಲು ಹಿನ್ನಡೆಯಾಗಿತ್ತು.

ಭಾನುವಾರ ಪ್ರಧಾನಿ ಮೋದಿಯವರು ಸುರೇಶ್ ಪ್ರಭು ಅವರನ್ನು ಸಂಪುಟ ದರ್ಜೆ ಸಚಿವನಾಗಿ ಸೇರಿಸಿಕೊಂಡಿದ್ದು ಶಿವಸೇನೆಗೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ಶಿವಸೇನೆಯ ಸದಸ್ಯನಾಗಿದ್ದ ಸುರೇಶ್ ಪ್ರಭು, ಶಿವಸೇನೆಯನ್ನು ತೊರೆದು ಭಾನುವಾರ ಬೆಳಗ್ಗೆ ಬಿಜೆಪಿ ಪಕ್ಷ ಸೇರಿದ್ದರು.

ಇದಕ್ಕೂ ಮುಂಚೆ ಸಂಪುಟ ಸಚಿವ ಸ್ಥಾನಕ್ಕೆ ಸೇರಿಸಿಕೊಳ್ಳಲು ಠಾಕ್ರೆ ಅವರು ಅನಿಲ್ ದೇಸಾಯಿ ಅವರನ್ನು ನಾಮಕರಣ ಮಾಡಿ ದೆಹಲಿಗೆ ಕಳುಹಿಸಿದ್ದರು. ಆದರೆ ಬಿಜೆಪಿ ಅನಿಲ್ ಅವರಿಗೆ ರಾಜ್ಯ ಸಚಿವ ಹುದ್ದೆಯನ್ನಷ್ಟೆ ನೀಡಲು ಮುಂದಾದಾಗ ಠಾಕ್ರೆ ಅವರನ್ನು ಮುಂಬೈ ಗೆ ವಾಪಸ್ ಕರೆಸಿಕೊಂಡಿದ್ದರು.

ಬಿಜೆಪಿ, ಶಿವಸೇನೆಗೆ ತನ್ನ ಕಿರಿಯ ಮೈತ್ರಿ ಪಕ್ಷವಾಗಿ ಒಪ್ಪಿಕೊಂಡು, ಉಪ ಮುಖ್ಯಮಂತ್ರಿ ಅಥವಾ ಗೃಹ ಖಾತೆಯನ್ನು ಕೇಳದಂತೆ ತಾಕೀತು ಮಾಡಿದೆ. ಇದರಿಂದ ಎರಡು ಪಕ್ಷಗಳ ಸಂಬಂಧ ಇನ್ನು ಮುರಿದು ಬಿದ್ದಂತೆಯೇ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com