
ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಘೋರ ಹತ್ಯೆಯ ಸತ್ಯಾಂಶಗಳನ್ನು ಬಹಿರಂಗಪಡಿಸಲಾಗಿದೆ ಎಂದು ಹೇಳಿಕೊಳ್ಳುವ ಇನ್ನೊಂದು ಪುಸ್ತಕ ಈಗ ಹೊರ ಬಂದಿದೆ. ಅದರ ಹೆಸರು "ರಾಜೀವ್ ಗಾಂಧೀ ಹತ್ಯೆ - ಒಳ ಸಂಚು?" (Assassination of Rajiv Gandhi An inside job?)
"ಹತ್ಯೆಯ ಸತ್ಯಾಸತ್ಯತೆಯನ್ನು ಮುಚ್ಚಿಹಾಕುವ ಪ್ರಜ್ಞಾಪೂರ್ವಕ, ಪೂರ್ವನಿಯೋಜಿತ ಪ್ರಯತ್ನಗಳಾಗಿವೆ. ಆರೋಪಿಗಳನ್ನು ಪತ್ತೆ ಹಚ್ಚುವ ಯಾವುದೇ ನಿಜ ಪ್ರಯತ್ನ ನಡೆದಿಲ್ಲ" ಎಂದು ದೆಹಲಿ ಮೂಲದ ಪತ್ರಕರ್ತ, ಪುಸ್ತಕದ ಲೇಖಕ ಫರಾಜ್ ಅಹಮದ್, ಸೋಮವಾರ ಪುಸ್ತಕ ಬಿಡುಗಡೆ ವೇಳೆಯಲ್ಲಿ ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದ್ದಾರೆ.
"ಇದು ಎಲ್ ಟಿ ಟಿ ಇ ಸಂಸ್ಥೆಗೆ ಯಾವುದೇ ಸಂಬಧವಿರದ ಸುಫಾರಿ ಹತ್ಯೆಯಾಗಿತ್ತು" ಎಂದು ಕೂಡ ಹೇಳಿದ್ದಾರೆ. ರಾಜೀವ್ ಗಾಂಧಿ ಹತ್ಯೆಯಾಗದಿದ್ದಲ್ಲಿ ೧೯೯೧ ರ ಚುನಾವಣೆಯ ಫಲಿತಾಂಶವೆ ಬೇರೆಯಾಗಿರುತ್ತಿತ್ತು. ರಾಜೀವ್ ಗಾಂಧಿ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ ಟಿ ಟಿ ಇ ಇಂದ ಶ್ರೀಲಂಕಾವನ್ನು ಮುಕ್ತಗೊಳಿಸಲು ಭಾರತೀಯ ಸೇನೆಯನ್ನು ಕಳುಹಿಸುತ್ತಾರೆ ಎಂಬ ಭಯದಿಂದ ಎಲ್ ಟಿ ಟಿ ಇ ಸಂಸ್ಥೆ ರಾಜೀವ್ ಗಾಂಧಿ ಅವರನ್ನು ಕೊಂದಿದ್ದಾರೆ ಎಂಬ ಸಿದ್ಧಾಂತವನ್ನೇ ಲೇಖಕರು ಪ್ರಶ್ನಿಸಿದ್ದಾರೆ. "ರಾಜೀವ್ ಗಾಂಧಿ ಹತ್ಯೆಯ ಬಗ್ಗೆ ಇದು ಹಾಸ್ಯಾಸ್ಪದ ಸಿದ್ಧಾಂತ. ರಾಜೀವ್ ಗಾಂಧಿಯನ್ನು ಕೊಲ್ಲಲು ಪ್ರಭಾಕರನ್ ಮೂರ್ಖನಾಗಿರಲಿಲ್ಲ. ೧೯೯೧ ರಲ್ಲಿ ರಾಜೀವ್ ಗಾಂಧಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಬಹಳ ಕಡಿಮೆ ಇದ್ದವು. ಅಲ್ಲದೆ ಭಾರತೀಯ ಸೇನೆಯನ್ನು ಇನ್ನೊಂದು ಸರ್ವಸ್ವತಂತ್ರ ರಾಷ್ಟ್ರಕ್ಕೆ ಕಳುಹಿಸುವುದು ಸುಲಭದ ಮಾತಾಗಿರಲಿಲ್ಲ" ಎಂದಿದ್ದಾರೆ.
ಇದು ಸುಫಾರಿ ಹತ್ಯೆಯ ಸಾದಾ ಪ್ರಕರಣ ಎಂದಿರುವ ಫರಾಜ್, ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿರುವ ಸಿವರಸನ್ ತಮಿಳು ಏಲಂ ವಿಮೋಚನಾ ಸಂಘದ (ಟಿ ಎ ಎಲ್ ಒ) ಸದಸ್ಯನಾಗಿದ್ದ. ಈ ಸಂಸ್ಥೆಯನ್ನು ಎಲ್ ಟಿ ಟಿ ಇ ಎಂದೋ ದೂರ ಮಾಡಿತ್ತು. ಟಿ ಎ ಎಲ್ ಒ, ಶ್ರೀಲಂಕಾ ಸರ್ಕಾರದೊಂದಿಗೆ ಒಳ್ಳೆಯ ಸಂಬಂಧ ಹೊಂದಿತ್ತು ಎಂದು ಹೇಳಿದ್ದಾರೆ.
ಇದೇ ರೀತಿಯ ಇನ್ನೊಂದು ಪುಸ್ತಕ ಬರೆದಿರುವ ತ್ರಿಚಿ ವೇಲುಸಾಮಿ ಹೇಳುವ ಹಾಗೆ "ಫರಾಜ್ ಅಹಮದ್ ಅವರಿಗೆ ತಮಿಳರು ಋಣಿಗಳು. ಉತ್ತರ ಭಾರತದವರೂ ಕೂಡ ತಮಿಳರು ಮತ್ತು ತಮಿಳರ ತೊಂದರೆಗಳ ಬಗ್ಗೆ ಮಾತನಾಡಬಹುದು, ಬರೆಯಬಹುದು ಎಂದು ಅವರು ತೋರಿಸಿದ್ದಾರೆ. ರಾಜೀವ್ ಹತ್ಯೆಯ ಮರು ವಿಚಾರಣೆಗೆ ಅವರು ಆಗ್ರಹಿಸಿದ್ದಾರೆ. ಆದರೆ ನಾನು ಈ ಪ್ರಕರಣದ ಹೊಸ ವಿಚಾರಣೆಗೆ ಆಗ್ರಹಿಸುತ್ತೇನೆ." ಎಂದರು. ಭಾರತೀಯ ಸೇನೆಯ ಮಾಜಿ ಗುಪ್ತಚರ ಅಧಿಕಾರಿ ಕರ್ನಲ್ ಹರಿಹರನ್ ಮತ್ತು ವಿಶೇಷ ತನಿಖಾ ತಂಡದ ಮುಖ್ಯ ತನಿಖಾದಿಕಾರಿಯಾಗಿ ರಾಜೀವ್ ಹತ್ಯೆಯನ್ನು ತನಿಖೆ ಮಾಡಿದ್ದ ಕೆ ರಘೋಥಮನ್, ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Advertisement