ಭಾರತ ವಿಶ್ವವನ್ನು ಮುನ್ನಡೆಸಬೇಕು: ಮೋಹನ್ ಭಾಗವತ್

ವಿಶ್ವ ಹಿಂದೂ ಪರಿಷತ್ತಿನ ಬೆಳ್ಳಿ ಹಬ್ಬದ ಆಚರಣೆಯಲ್ಲಿ ತುಮಕೂರಿನ ಸಿದ್ಧಗಂಗಾ ಮಠ ಆಯೋಜಿಸಿದ್ದ ಸಂತ ಸಮ್ಮೇಳನದಲ್ಲಿ ...
ಮೋಹನ್ ಭಾಗವತ್ (ಸಂಗ್ರಹ ಚಿತ್ರ)
ಮೋಹನ್ ಭಾಗವತ್ (ಸಂಗ್ರಹ ಚಿತ್ರ)

ತುಮಕೂರು: ವಿಶ್ವ ಹಿಂದೂ ಪರಿಷತ್ತಿನ ಬೆಳ್ಳಿ ಹಬ್ಬದ ಆಚರಣೆಯಲ್ಲಿ ತುಮಕೂರಿನ ಸಿದ್ಧಗಂಗಾ ಮಠ ಆಯೋಜಿಸಿದ್ದ ಸಂತ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಭಾರತ ಮೇಲೆದ್ದು ವಿಶ್ವವನ್ನು ಮುನ್ನಡೆಸಬೇಕು ಎಂದಿದ್ದಾರೆ. ಪೂರ್ವ ದೇಶಗಳ ಸಂಸ್ಕೃತಿ ಹಿಂದೂ ಸಮಾಜವನ್ನು ಒಡೆಯುತ್ತಿದೆ. ಅದನ್ನು ಕೊನೆಗಾಣಿಸಲು ಕರೆ ಕೊಟ್ಟಿರುವ ಭಾಗವತ್,  ನೆರೆದಿದ್ದ ೫೦೦ಕ್ಕೂ ಹೆಚ್ಚು ಸಂತರಿಗೆ, ಹಿಂದೂ ಧರ್ಮವನ್ನು ಮತ್ತು ಅದರ ಮೌಲ್ಯಗಳನ್ನು ಉಳಿಸುವಂತೆ ಕೂಡ ಕರೆ ಕೊಟ್ಟಿದ್ದಾರೆ.  

ಇದಕ್ಕೂ ಮೊದಲು ಮಾತನಾಡಿದ ಸಿದ್ಧಗಂಗಾ ಮಠದ ಶತಾಯು ಶ್ರೀ ಶಿವಕುಮಾರ ಸ್ವಾಮೀಜಿ, ವಿಶ್ವವೇ ಭಾರತ ಖಂಡದೆಡೆಗೆ ನೋಡುತ್ತಿದೆ, ಭಾರತಕ್ಕೆ ವಿಶ್ವವನ್ನು ಮುನ್ನಡೆಸುವ ಸಂಪೂರ್ಣ ಸಾಮರ್ಥ್ಯ ಇದೆ ಎಂದರು.

ವಿ ಎಚ್ ಪಿ ಯ ಅಂತರಾಷ್ಟ್ರೀಯ ಕಾರ್ಯದರ್ಶಿ ಸಂಪತ್ ರಾಯ್ ಮಾತನಾಡಿ, ಮುಂದಿನ ನಾಲ್ಕು ತಿಂಗಳಲ್ಲಿ ಎಲ್ಲ ಜಿಲ್ಲೆಗಳಲ್ಲೂ ಶೋಭಾ ಯಾತ್ರೆಗಳನ್ನು ಆಯೋಜಿಸಿ ವಿ ಎಚ್ ಪಿ ಸಂಭ್ರಮಾಚರಣೆ ನಡೆಸಲಿದೆ ಎಂದಿದ್ದಾರೆ. ವಿದೇಶಿಯರು ಸಂಸ್ಕೃತವನ್ನು ಸತ್ತ ಭಾಷೆ ಎಂದು ಕರೆಯುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ದೇಶದ ಗತ ವೈಭವವನ್ನು ಮರಳಿ ತರಲು ಸಂತರು ದೇಶವನ್ನು ಮುನ್ನಡೆಸಬೇಕಿದೆ ಎಂದಿದ್ದಾರೆ. ೧೯೬೯ ರಲ್ಲಿ  ಮೊದಲ ಬಾರಿಗೆ ಉಡುಪಿಯಲ್ಲಿ ಅಸ್ಪೃಶ್ಯತೆ ವಿರುದ್ಧ ಚಳುವಳಿ ಪ್ರಾರಂಭಿಸಿದ್ದು ವಿ ಎಚ್ ಪಿ ಎಂದು ತಿಳಿಸಿದ್ದಾರೆ. ವಿ ಎಚ್ ಪಿ ೫೦ ವರ್ಷದ ತುಂಬಿದ ಈ ಸಂದರ್ಭದಲ್ಲಿ ಅಭಿನಂದಿಸಿದ ಚಿತ್ರದುರ್ಗದ ದಲಿತ ಸ್ವಾಮೀಜಿ ಮಾದಾರ ಚನ್ನಯ್ಯ ಅವರು, ವಿ ಎಚ್ ಪಿ ತನ್ನ ಅಧಿಕಾರ ವರ್ಗದಲ್ಲಿ ಹೆಚ್ಚು ಜನ ದಲಿತರನ್ನು ಸೇರಿಸಿಕೊಳ್ಳಬೇಕು ಎಂದು ಕರೆ ಕೊಟ್ಟಿದ್ದಾರೆ.

ಪೇಜಾವರ ಸ್ವಾಮಿ, ಆದಿಚುಂಚನಗಿರಿ ಸ್ವಾಮಿ, ಶ್ರೀ ರವಿಶಂಕರ್ ಗುರೂಜಿ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ, ಹಾಗೂ ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ ಮುಖಂಡರು ಕೂಡ ಸಮಾವೇಶದಲ್ಲಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com