ಸೆಂಟ್ರಲ್ ಜೈಲಿನಲ್ಲಿ ಮಹಿಳಾ ಕೈದಿಗಳಿಗೆ ಸೆಕ್ಸ್‌ ಮಾಡುವಂತೆ ಒತ್ತಾಯ

ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿರುವ, ಪುರುಷ ಕೈದಿಗಳೊಂದಿಗೆ ಸೆಕ್ಸ್ ಮಾಡುವಂತೆ ನಮ್ಮನ್ನು ಒತ್ತಾಯಿಸಲಾಗುತ್ತಿದೆ...
ಪರಪ್ಪನ ಅಗ್ರಹಾರ (ಸಂಗ್ರಹ ಚಿತ್ರ)
ಪರಪ್ಪನ ಅಗ್ರಹಾರ (ಸಂಗ್ರಹ ಚಿತ್ರ)

ಬೆಂಗಳೂರು: ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿರುವ, ಪುರುಷ ಕೈದಿಗಳೊಂದಿಗೆ ಸೆಕ್ಸ್ ಮಾಡುವಂತೆ ನಮ್ಮನ್ನು ಒತ್ತಾಯಿಸಲಾಗುತ್ತಿದೆ ಎಂದು ಮಹಿಳಾ ಕೈದಿಗಳು ಜೈಲು ವಾರ್ಡನ್  ವಿರುದ್ಧ ದೂರು ನೀಡಿದ್ದಾರೆ. ಮಹಿಳಾ ಕೈದಿಗಳೊಂದಿಗೆ ಸೆಕ್ಸ್ ಮಾಡಲಿಚ್ಛಿಸುವ ಪುರುಷರಿಂದ ವಾರ್ಡನ್ ರು. 300 -500 'ಶುಲ್ಕ'ವನ್ನೂ ಪಡೆಯುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.  

ಪರಪ್ಪನ ಅಗ್ರಹಾರದಲ್ಲಿರುವ 'ದೂರು ಪೆಟ್ಟಿಗೆ'ಯಲ್ಲಿ ಮಹಿಳಾ ಖೈದಿಗಳು ಸಹಿ ಹಾಕಿರುವ ಪತ್ರದಲ್ಲಿ ಜೈಲಿನೊಳಗೆ ನಡೆಯುತ್ತಿರುವ ಈ ವ್ಯವಹಾರದ ಬಗ್ಗೆ ಬರೆಯಲಾಗಿದೆ. ಪ್ರಸ್ತುತ ಪತ್ರವು ನ್ಯಾಯಾಧೀಶರಿಗೆ ಸಿಕ್ಕಿದ್ದು, ಅದನ್ನು ಹೈಕೋರ್ಟ್‌ಗೆ ಕಳುಹಿಸಲಾಗಿದೆ.

ಮಹಿಳಾ ಕೈದಿಗಳು ಪತ್ರವನ್ನು ಮುಖ್ಯ ನ್ಯಾಯಾಧೀಶರಿಗೆ ಬರೆದಿದ್ದು, ಜೈಲಿನಲ್ಲಿ ಮಹಿಳೆಯರಿಗಾಗುವ ಅನ್ಯಾಯದ ಬಗ್ಗೆ ದನಿಯೆತ್ತಲಾಗಿದೆ. ಈ ಪತ್ರದಲ್ಲಿ ಸೆಕ್ಸ್ ಮಾಡುವಂತೆ ಒತ್ತಾಯಿಸಿ, ಲಂಚ ಪಡೆದುಕೊಳ್ಳುವ ವಾರ್ಡನ್ ಮತ್ತು ಅಧಿಕಾರಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ.

ಆದಾಗ್ಯೂ, ಮಹಿಳಾ ಕೈದಿಗಳು ತಮ್ಮ ಸಂಬಂಧಿಕರನ್ನು ಭೇಟಿ ಮಾಡುವುದಕ್ಕೆ ರು.200 ರಿಂದ ರು. 300ನ್ನು ವಾರ್ಡನ್‌ಗೆ ಲಂಚ ಕೊಡಬೇಕಾಗಿದೆ. ಜೈಲಿನ ವಾತಾವರಣ ಹೇಗಿದೆಯೆಂದರೆ ಇಲ್ಲಿ ಲಂಚ ಕೊಡದೆ ಯಾವುದೇ ಕೆಲಸ ಸಾಧ್ಯವಾಗುವುದಿಲ್ಲ. ನಾವು ಅವರಿಗೆ ದುಡ್ಡು ಕೊಡದೇ ಹೋದರೆ ಅವರು ನಮ್ಮನ್ನು ನಾಯಿಗಿಂತ ಕಡೆ ನೋಡ್ತಾರೆ, ನಮ್ಮ ಸಂಬಂಧಿಕರೊಂದಿಗೂ ಮಾತನಾಡಲು ಕೂಡಾ ಬಿಡುವುದಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

ಇಷ್ಟೇ ಅಲ್ಲ, ಕೈದಿಗಳಿಗೆ ಸಂಬಂಧಿಕರು ಮನೆಯಿಂದ ಊಟ ತಂದರೆ ಅದರಿಂದ ಸಮಪಾಲು ವಾರ್ಡನ್‌ಗೆ ಕೊಡಬೇಕಾಗುತ್ತದೆ. ಇಲ್ಲವೇ ಮನೆ ಊಟವನ್ನು ಪೂರ್ತಿಯಾಗಿ ವಾರ್ಡನ್ ಕಬಳಿಸಿಕೊಂಡು ತಿನ್ನುತ್ತಾರೆ. ಮಾತ್ರವಲ್ಲದೆ ಜೈಲಿನಲ್ಲಿ ಒಳ್ಳೆಯ ಊಟ ಮಾಡಬಾರದು,  ಚೆನ್ನಾಗಿ ಡ್ರೆಸ್ ಮಾಡಿಕೊಳ್ಳಬಾರದು. ಒಂದು ವೇಳೆ ನೀವು ಚೆನ್ನಾಗಿ ಊಟ ಮಾಡಿ, ಬಟ್ಟೆ ಹಾಕೊಂಡ್ರೆ ನೀವು ಶಿಕ್ಷೆ ಅನುಭವಿಸುವುದರ ಅರ್ಥವೇನು? ಎಂದು ಅಧಿಕಾರಿಗಳು ಕೇಳುತ್ತಾರೆ.

ನಮ್ಮ ಸಮಸ್ಯೆಗಳನ್ನು ಮಹಿಳಾ ಅಧಿಕಾರಿಯಲ್ಲಿ ಹೇಳಿಕೊಂಡರೆ, ನಾನಿಲ್ಲಿ ನಿಮ್ಮ ದೂರುಗಳನ್ನು ಆಲಿಸಲು ಬಂದಿಲ್ಲ ಎಂಬ ಹಾರಿಕೆಯ ಉತ್ತರ ಕೊಡುತ್ತಾರೆ. ನಾವು ಮೊಬೈಲ್ ಬಳಕೆ ಮಾಡಲು ಅಧಿಕಾರಿಗಳಿಗೆ ಹಣ ನೀಡಿದ್ದೇವೆ. ಹಣ ಕೊಟ್ಟರೆ ನಿಮಗಿಲ್ಲಿ ಏನು ಬೇಕಾದರೂ ಮಾಡಬಹುದು ಎಂದು ಮಹಿಳಾ ಕೈದಿಯೊಬ್ಬರು ಹೇಳಿದ್ದಾರೆ.

ಜೈಲಿನಲ್ಲಿ ನಡೆಯುತ್ತಿರುವ ಈ ಅವ್ಯವಹಾರಗಳ ಬಗ್ಗೆ ಎಲ್ಲಿಯಾದರೂ ಹಿರಿಯ ಅಧಿಕಾರಿಗಳಿಗೆ ತಿಳಿಸಿದರೆ, ನಿಮ್ಮ ಪರೋಲ್ ಅವಕಾಶವನ್ನೂ ಇಲ್ಲದಂತೆ ಮಾಡಲಾಗುತ್ತದೆ ಎಂಬ ಬೆದರಿಕೆಯನ್ನೂ ನೀಡಲಾಗಿದೆ.

ಜೈಲಿನಲ್ಲಿರುವ 6 ಮಹಿಳಾ ವಾರ್ಡನ್‌ಗಳ ಕಿರುಕುಳವನ್ನು ನಮಗೆ ಸಹಿಸಲು ಆಗುತ್ತಿಲ್ಲ. ಇವರಿಂದ ನಮಗೆ ಮುಕ್ತಿ ಕೊಡಿ, ನಮ್ಮ ಶಿಕ್ಷೆಯ ಅವಧಿಯನ್ನು ನಿಶ್ಚಿಂತೆಯಾಗಿ ಪೂರ್ಣಗೊಳಿಸಲು ಬಿಡಿ ಎಂದು ಮಹಿಳಾ ಕೈದಿಗಳು ಸಹಿ ಹಾಕಿದ ಪತ್ರದ ಮೂಲಕ ಬಿನ್ನವಿಸಿಕೊಂಡಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com