
ಮೂರು ದೇಶದ ಪ್ರವಾಸ ಮುಗಿಸಿ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಜಾರ್ಖಂಡದ ಪಲಮು ಜಿಲ್ಲೆಯ ದಲ್ತೋಂಗಂಜ್ ನಲ್ಲಿ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದಾರೆ.
ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಮೋದಿ "ನಿಮ್ಮ ನೆಲ ಸಂಪನ್ನವಾಗಿದೆ ಆದರ ಜನ ಬಡವರು, ಏಕೆಂದರೆ ಅಣೆಕಟ್ಟುಗಳನ್ನು ಒಡೆದ ಸರ್ಕಾರಗಳನ್ನು ನೀವು ಹೊಂದಿದ್ದಿರಿ. ಜಾರ್ಖಂಡ ಅಭಿವೃದ್ಧಿಯಾಗಬೇಕಾದರೆ ವಂಶ ಪಾರಂಪರ್ಯ ರಾಜಕೀಯವನ್ನು ನೀವು ಕೊನೆಗಾಣಿಸಬೇಕು" ಎಂದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಗೆಲುವನ್ನು ತಂದು ಕೊಟ್ಟದ್ದಕ್ಕೆ ಜನರಿಗೆ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ "ರೈತರ ಕಲ್ಯಾಣ ಸರ್ಕಾರದ ಆದ್ಯತೆ. ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಕ್ಕೆ ಹೋಗಿ ಅಲ್ಲಿನ ವಿಜ್ಞಾನಿಗಳನ್ನು ಭೇಟಿ ಮಾಡಿದೆ. ಅಲ್ಲಿ ರೈತರ ಉತ್ಪಾದನೆಯನ್ನು ಹೆಚ್ಚು ಮಾಡುವುದರಿಂದ ಹಿಡಿದು ಸಾಕಷ್ಟು ವಿಷಯಗಳನ್ನು ಚರ್ಚೆ ಮಾಡಿದೆ. ಹಾಗೆಯೇ ಜಪಾನಿನಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿಯನ್ನು ಭೇಟಿ ಮಾಡಿ ನಮ್ಮ ಆದಿವಾಸಿ ಕುಟುಂಬಗಳ ಆರೋಗ್ಯದ ಬಗ್ಗೆ ಚರ್ಚಿಸಿದೆ" ಎಂದಿದ್ದಾರೆ.
"ಇಲ್ಲಿನ ಸರ್ಕಾರ ದೆಹಲಿಯಿಂದ ಸಚಿವರನ್ನು ಇಲ್ಲಿಗೆ ಬರಲು ಬಿಡುವುದಿಲ್ಲ ಎನ್ನುತ್ತಿದೆ. ಜಾರ್ಖಂಡ ಸರ್ಕಾರಕ್ಕೆ ಮೋದಿಯ ಸಚಿವರು ಇಲ್ಲಿಗೆ ಬರುವುದು ಇಷ್ಟವಿಲ್ಲ ಏಕೆಂದರೆ ಅವರ ಬ್ರಷ್ಟಾಚಾರವನ್ನು ನಾವು ಬಯಲಿಗೆಳೆಯುತ್ತೇವೆ ಎಂಬುದು ಅವರಿಗೆ ಗೊತ್ತು." ಎಂದು ಮುಂದುವರೆಸಿ ಹೇಳಿದ್ದಾರೆ.
ಪಲಮು ಜಿಲ್ಲೆ ಜಾರ್ಖಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಕ್ಸಲ್ ಹಾವಳಿ ಇರುವ ಪ್ರದೇಶ. ೮೧ ಸ್ಥಾನದ ವಿಧಾನಸಭಾ ಚುನಾವಣೆ ಐದು ಹಂತಗಳಲ್ಲಿ ಮಂಗಳವಾರ ಪ್ರಾರಂಭವಾಗಲಿದೆ ಮತ್ತು ಡಿಸೆಂಬರ್ ೨೩ ರಂದು ಮತ ಎಣಿಕೆ ನಡೆಯಲಿದೆ.
Advertisement