
ಚಂಡೀಗಢ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರು ತಮ್ಮ ಆಸ್ತಿ ವಿವರಗಳನ್ನು ನೀಡಬೇಕೆಂದು ಹರ್ಯಾಣ ಸರ್ಕಾರ ಹೇಳಿದೆ.
ಲ್ಯಾಂಡ್ ರೆಕಾರ್ಡ್ಸ್‌ನ ನಿರ್ದೇಶಕರು ಗುರ್‌ಗಾಂವ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ, ಡೆಪ್ಯುಟಿ ಕಮಿಷನರ್ ಶೇಖರ್ ವಿದ್ಯಾರ್ಥಿ ಅವರಿಗೆ ಪತ್ರ ಬರೆದಿದ್ದು, ಗುರ್‌ಗಾಂವ್ ಜಿಲ್ಲಾಡಳಿತದಲ್ಲಿ ವಾದ್ರಾ ಅವರು ಹೊಂದಿರುವ ಆಸ್ತಿ ವಿವರಗಳನ್ನು ನೀಡಬೇಕೆಂದು ಕೋರಿದ್ದಾರೆ.
ವಾದ್ರಾ ಅವರ ಆಸ್ತಿ ವಿವರಗಳನ್ನು ಒಂದು ವಾರದೊಳಗೆ ನೀಡುವಂತೆ ವಿದ್ಯಾರ್ಥಿ ಅವರು ಜಿಲ್ಲಾ ಕಂದಾಯ ಅಧಿಕಾರಿ ತರ್ಸೇಮ್ ಶರ್ಮಾ ಅವರಿಗೆ ಆದೇಶಿಸಿದ್ದಾರೆ.
ಹರ್ಯಾಣದಲ್ಲಿ ಅಕ್ಟೋಬರ್ 15 ವಿಧಾನಸಭಾ ಚುನಾವಣೆಯ ವೇಳೆ ಭೂಹಗರಣದ ಬಗ್ಗೆ ಬಿಜೆಪಿ ದನಿಯೆತ್ತಿತ್ತು. ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಗದ್ದುಗೆಗೇರಿದ ಮನೋಹರ್ ಲಾಲ್ ಖಟ್ಟಾರ್ ಈ ಹಗರಣ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದರು.
ಈ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕೆಂದು ಹರ್ಯಾಣ ಸಚಿವರಾದ ರಾಮ್ ಬಿಲಾಸ್ ಶರ್ಮಾ ಮತ್ತು ಅನಿಲ್ ವಿಜಿ ಒತ್ತಾಯಿಸಿದ್ದರು.
ಹರ್ಯಾಣದಲ್ಲಿ ಹೂಡಾ ಸರ್ಕಾರವಿದ್ದಾಗ ಅಂದರೆ ಮಾರ್ಚ್ 2005 -ಅಕ್ಟೋಬರ್ 2014ರ ಅವಧಿಯಲ್ಲಿ ಬಹುಕೋಟಿ ಮೌಲ್ಯದ ಭೂಹಗರಣ ಮಾಡಿದ್ದರು.
ಹರ್ಯಾಣದಲ್ಲಿ ನಡೆದ ಅತೀ ದೊಡ್ಡ ಭೂಹಗರಣ ಇದು. ಸರ್ಕಾರ ಮುಗ್ಧ ರೈತರಿಂದ ಸುಮಾರು 70,000 ಎಕರೆ ಭೂಮಿಯನ್ನು ಕಬಳಿಸಿತ್ತು. ಈ ಬಗ್ಗೆ ತನಿಖೆ ನಡೆಯಲೇ ಬೇಕು. ಈ ಹಗರಣದಲ್ಲಿ ಅಧಿಕಾರಗಳಾಗಿರಲಿ, ರಾಬರ್ಟ್ ವಾದ್ರಾ ಅಥವಾ ಭೂಪಿಂದರ್ ಸಿಂಗ್ ಹೂಡಾ ಯಾರೇ ಆಗಿರಲಿ, ತಪ್ಪಿತಸ್ಥರಾಗಿದ್ದರೆ ಅವರಿಗೆ ಶಿಕ್ಷೆಯಾಗಲೇ ಬೇಕು ಎಂದು ವಿಜ್ ಹೇಳಿದ್ದಾರೆ.
Advertisement