ಸಿದ್ದಲಿಂಗಯ್ಯ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ?

ದಲಿತ ಕವಿ ಸಿದ್ದಲಿಂಗಯ್ಯ ಅವರು ಶ್ರವಣಬೆಳಗೊಳದಲ್ಲಿ ನಡೆಯುವ 81ನೇ ಅಖಿಲ ಭಾರತ...
ಸಿದ್ದಲಿಂಗಯ್ಯ
ಸಿದ್ದಲಿಂಗಯ್ಯ

ಬೆಳಗಾವಿ: ದಲಿತ ಕವಿ ಸಿದ್ದಲಿಂಗಯ್ಯ ಅವರು ಶ್ರವಣಬೆಳಗೊಳದಲ್ಲಿ ನಡೆಯುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ಮುಂದಿನ ವರ್ಷ ಫೆಬ್ರುವರಿ 1ರಿಂದ 3ರವರೆಗೆ ನಡೆಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಿದ್ದಲಿಂಗಯ್ಯ ಅವರನ್ನು ಆಯ್ಕೆ ಮಾಡಲು ಎಲ್ಲಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಈ ಬಾರಿಯ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನಕ್ಕೆ ದಲಿತ ಲೇಖಕರನ್ನು ಪರಿಗಣಿಸಲಾಗುತ್ತಿದೆ ಎಂದು ಕಳೆದ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲಿಕ್ ಹಾಲಂಬಿ ಅವರು ಹೇಳಿದ್ದರು. ಸಿದ್ದಲಿಂಗಯ್ಯ ಅವರು ಸಹ ಒಬ್ಬ ಕನ್ನಡದ ಖ್ಯಾತ ದಲಿತ ಕವಿಯಾಗಿದ್ದು, ಅವರ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ.

ಸಿದ್ದಲಿಂಗಯ್ಯ ಅವರು ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ನಾಡು ನುಡಿ ಸಂಸ್ಕೃತಿ ಬಗ್ಗೆ ಚಿಂತನೆ ನಡೆಸುವ ಅತಿ ದೊಡ್ಡ ಸಮಾವೇಶ ಕನ್ನಡ ಸಾಹಿತ್ಯ ಸಮ್ಮೇಳನ. ಚರ್ಚಾಗೋಷ್ಠಿ, ಕವಿತಾ ವಾಚನ, ಸಾಹಿತ್ಯ ಮಂಥನ, ಪುಸ್ತಕ ಪ್ರದರ್ಶನ ಹಾಗೂ ಪ್ರಾದೇಶಿಕ ಭೋಜನದ ಉಚಿತ ವ್ಯವಸ್ಥೆ ಮುಂತಾದವುಗಳನ್ನು ಒಳಗೊಂಡ ಸಮ್ಮೇಳನ ಪ್ರತಿ ವರ್ಷ ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com