ಶೇಷಾಚಲಂ ಎನ್ಕೌಂಟರ್: ಇದು ಪೊಲೀಸ್ ಭಯೋತ್ಪಾದನೆ ಎಂದ ತನಿಖಾ ತಂಡ

ಹಿರಿಯ ಅಧಿಕಾರಿಗಳನ್ನೊಳಗೊಂಡ ೮ ಜನರ ನಿಜಾಂಶ ಶೋಧ ತಂಡ, ಆಂಧ್ರ ಪೊಲೀಸರು ನಡೆಸಿದ ಶೇಷಾಚಲಂ ಎನ್ಕೌಂಟರ್ ಪ್ರಕರಣದಲ್ಲಿ
ತನಿಖೆ ನಡೆಸುತ್ತಿರುವ ನಿಜಾಂಶ ಶೋಧ ತಂಡ
ತನಿಖೆ ನಡೆಸುತ್ತಿರುವ ನಿಜಾಂಶ ಶೋಧ ತಂಡ

ವೆಲ್ಲೂರು/ತಿರುವಣ್ಣಾಮಲೈ: ಹಿರಿಯ ಅಧಿಕಾರಿಗಳನ್ನೊಳಗೊಂಡ ೮ ಜನರ ನಿಜಾಂಶ ಶೋಧ ತಂಡ, ಆಂಧ್ರ ಪೊಲೀಸರು ನಡೆಸಿದ ಶೇಷಾಚಲಂ ಎನ್ಕೌಂಟರ್ ಪ್ರಕರಣದಲ್ಲಿ ಹಲವಾರು ಸಂಸ್ತ್ರಸ್ತರ ದೇಹಗಳಲ್ಲಿ ಅಂಗಾಂಗಗಳು ಕಾಣೆಯಾಗಿವೆ, ಹಲವರಿಗೆ ಚಿತ್ರಹಿಂಸೆ ನೀಡಲಾಗಿದೆ ಎಂದಿದ್ದಾರೆ. ಏಪ್ರಿಲ್ ೨೩ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ ಎಚ್ ಆರ್ ಸಿ) ವಿವರವಾದ ವರದಿ ನೀಡಲಿದೆ.

ಈ ಎನ್ಕೌಂಟರ್ ಪೂರ್ವನಿಯೋಜಿತ ಕೊಲೆ ಎಂದಿರುವ ಎನ್ ಎಚ್ ಆರ್ ಸಿಯ ಮಾಜಿ ಸದಸ್ಯ ಹಾಗು ೮ ಜನರ ತನಿಖಾ ತಂಡದ ಸದಸ್ಯ ಸತ್ಯಬ್ರತ ಪಾಲ್, ತಾವು ಎನ್ ಎಚ್ ಆರ್ ಸಿ ಸದಸ್ಯರಾಗಿದ್ದಾಗ ನೂರಾರು ಪ್ರಕರಣಗಳನ್ನು ನೋಡಿದ್ದರು ಇಷ್ಟು ಬರ್ಬರವಾದ, ಅಮಾನವೀಯ ಕೊಲೆಗಳನ್ನು ಕಂಡಿಲ್ಲ ಎಂದಿದ್ದಾರೆ.

"ಈ ಜನರನ್ನು ಸಶಸ್ತ್ರ ಪೊಲೀಸ್ ಪಡೆ ಅಪಹರಿಸಿ ತಿರುಪತಿ ಕಾಡಿನ ಪ್ರದೇಶಕ್ಕೆ ತರಲಾಗಿತ್ತು. ಸಂತ್ರಸ್ತರ ಕುಟುಂಬ ಸದಸ್ಯರು ಅವರ ಪತಿಯರ, ಅಪ್ಪಂದಿರ ಕೈಗಳನ್ನು ಕತ್ತರಿಸಿರುವುದರ, ಕಾಲು ಬೆರಳುಗಳನ್ನು ಕತ್ತರಿಸಿರುವುದರ, ಮೂಗುಗಳನ್ನು ಕುಯ್ದಿರುವುದರ ಮತ್ತು ಹಲ್ಲುಗಳನ್ನು ಮುರಿದಿರುವುದರ ಬಗ್ಗೆ ತಿಳಿಸಿದ್ದಾರೆ" ಎಂದು ಪಾಲ್ ತಿಳಿಸಿದ್ದಾರೆ. ಎನ್ಕೌಂಟರ್ ಸಿದ್ಧಾಂತಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಕೂಡ ಅವರು ತಿಳಿಸಿದ್ದಾರೆ.

ಹಾಗೆಯೇ ೨೦ ಜನರ ಎನ್ಕೌಂಟರ್ ನಲ್ಲಿ ಗಾಯಗೊಂಡ ಒಬ್ಬರೂ ಬದುಕುಳಿಯದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿರುವ ಇನ್ನೊಬ್ಬ ಸದಸ್ಯ, ಇದು ಸಾಮಾನ್ಯವಾಗಿ ಸಾಧ್ಯವಿಲ್ಲ ಎಂದಿದ್ದಾರೆ. "ಈ ಎನ್ಕೌಂಟರ್ ನಲ್ಲಿ ೨೦ ಜನರನ್ನು ಕೊಲ್ಲಲಾಗಿದೆ. ಮರ ಕೊಯ್ಯುವವರಲ್ಲಿ ಒಬ್ಬನು ಬದುಕುಳಿದಿಲ್ಲ, ಬದುಕಲಿಲ್ಲ ನಮಗೆ ಕಥೆ ಹೇಳಲು. "ಇದು ಆಂದ್ರ ಪೊಲೀಸರ ನಾಚಿಕೆಗೇಡಿನ ಕೃತ್ಯ" ಎಂದ್ದಿದ್ದಾರೆ ಬಿ ಎಸ್ ಎಫ್ ನ ಮಾಜಿ ಪೊಲೀಸ್ ಮಹಾನಿರ್ದೇಶಕ ಹಾಗು ಎಂಟು ಜನರ ತಂಡದ ಸದಸ್ಯ ಇ ಎನ್ ರಾಮಮೋಹನ್. ಪಾಲ್ ಅವರೊಂದಿಗೆ ರಾಮಮೋಹನ್ ಚಿತ್ತಾರಿ ಬೆಟ್ಟಗಳ ಸಂತ್ರಸ್ತರ ಕುಟುಂಬಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

"ಇಲ್ಲಿ ಸತ್ತಿರುವರೆಲ್ಲರೂ ಬಡ ಕೂಲಿಗಳು. ಕಳ್ಳಸಾಗಾಣೆಯನ್ನು ತಡೆಯಲು ಉನ್ನತ ಸಮಿತಿಯೊಂದನ್ನು ರಚಿಸಬೇಕು ಹಾಗೂ ಮೂಲದಲ್ಲೇ ಇದನ್ನು ತಡೆಯಬೇಕು" ಎಂದು ಅವರು ತಿಳಿಸಿದ್ದಾರೆ.

ತನಿಖಾ ತಂಡವನ್ನು ಮುನ್ನಡೆಸುತ್ತಿರುವ ಬಾಂಬೆ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಹೊಸಬೆಟ್ ಸುರೇಶ್ ಅವರು ಪೊಲೂರು ತಾಲೂಕಿನಲ್ಲಿ ಸಂಸ್ತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿದ್ದಾರೆ.

"ಈ ದೇಶದಲ್ಲಿ ಯಾವುದೇ ಕಾನೂನು ಕೊಲ್ಲಲು ಅವಕಾಶ ನೀಡುವುದಿಲ್ಲ.ಅವರು ಅಪರಾಧಗಳನ್ನು ನಿಲ್ಲಿಸಬೇಕೆ ಹೊರತು ಮುಗ್ಧರನ್ನು ಕೊಲ್ಲುವುದಲ್ಲ. ಜನರನ್ನು ಎಲ್ಲೋ ಕೊಲ್ಲಲಾಗಿದೆ ಹಾಗೂ ಅವರ ದೇಹಗಳನ್ನು ಕಾಡಿಗೆ ತಂದು ಎನ್ಕೌಂಟರ್ ನಾಟಕ ಆಡಲಾಗಿದೆ. ಇದು ಪೊಲೀಸ್ ಭಯೋತ್ಪಾದನೆ" ಎಂದಿದ್ದಾರೆ ಅವರು.

ಹೈದರಾಬಾದ್ ಹೈಕೋರ್ಟ್ ಪೊಲೀಸರ ವಿರುದ್ಧ ಕೊಲೆ ಆರೋಪದಲ್ಲಿ ಕೇಸ್ ದಾಖಲು ಮಾಡುವಂತೆ ನೀಡಿರುವ ಆದೇಶದ ಬಗ್ಗೆ ಮಾತನಾಡಿದ ಅವರು ಈ ಎನ್ಕೌಂಟರ್ ನಲ್ಲಿ ಭಾಗಿಯಾದ ಪೊಲೀಸರ ವಿರುದ್ಧ ಪ್ರತ್ಯೇಕವಾಗಿ ೨೦ ಕೊಲೆ ಕೇಸುಗಳನ್ನು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. "೨೦ ರಿಂದ ೩೦ ವರ್ಷದೊಳಗಿದ ೧೩ ಮಹಿಳೆಯರು ವಿಧವೆಯರಾಗಿದ್ದಾರೆ. ಇವರ ಮತ್ತು ಆ ಸಣ್ಣ ಮಕ್ಕಳ ಮುಂದಿನ ಭವಿಷ್ಯವೇನು?" ಎಂದಿದ್ದಾರೆ.

"ಸಂತ್ರಸ್ತರ ದೇಹಗಳನ್ನು ಬಿಸಿಲಿನಲ್ಲಿ ಹಲವು ಘಂಟೆಗಳ ಕಾಲ ಬಿಡಲಾಗಿತ್ತು. ಪೊಲೀಸರು ಸಾಕ್ಷ್ಯಗಳನ್ನು ಹಾಳು ಮಾಡಲು ಬೇಕಂತಲೇ ದೇಹದ ಹಲವು ಭಾಗಗಳನ್ನು ಕತ್ತರಿಸಿ ಹಾಕಿದ್ದಾರೆ" ಎಂದಿರುವ ಫಾರೆನ್ಸಿಕ್ ತಜ್ಞ ಬಿ ಎಸ್ ಅಜೀತಾ, ಮತ್ತೊಮ್ಮೆ ಶವ ಪರೀಕ್ಷೆ ಮಾಡಿದರೆ ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದಿದ್ದಾರೆ.

ಈ ನಡುವೆ ರಾಮನಾಥಪುರಂ ಶಾಶಕ ಎಚ್ ಜವಾಹಿರುಲ್ಲ ಆಂಧ್ರ ಪೊಲೀಸರ ಈ ಕೃತ್ಯ ಐಸ್ ಉಗ್ರರ ಕೊಲೆಗಳಿಂಗಿಂತಲೂ ಬರ್ಬರ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com