
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಜನಾಂಗೀಯ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆದು ಬುದ್ಧಿವಾದ ಹೇಳಿದ್ದಾರೆ ಎಂಬ ವರದಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಮೂಲಗಳ ಪ್ರಕಾರ ವಿರೋಧ ಪಕ್ಷಗಳು ಪ್ರತಿಭಟಿಸಿದ ಮೇಲೆ ಲೋಕಸಭೆಯಲ್ಲಿ ಗಿರಿರಾಜ್ ವಿಷಾದ ವ್ಯಕ್ತಪಡಿಸಿದ ನಂತರ ಮೋದಿ ಮತ್ತು ಗಿರಿರಾಜ್ ಅವರ ನಡುವೆ ಈ ಸಭೆ ನಡೆದಿದೆ ಎಂದು ತಿಳಿದುಬಂದಿದೆ. ಈ ಸಭೆಯ ಬಗ್ಗೆ ತಿಳಿದ ಮೂಲಗಳ ಪ್ರಕಾರ ಪಕ್ಷವನ್ನು ಮುಜುಗರಕ್ಕೀಡು ಮಾಡಿದ ಗಿರಿರಾಜ್ ಹೇಳಿಕೆ ಬಗ್ಗೆ ಮೋದಿ ತರಾಟೆಗೆ ತೆಗೆದುಕೊಂಡದ್ದಕ್ಕೆ ಗಿರಿರಾಜ್ ಗಳಗಳ ಅತ್ತರು ಎಂದು ತಿಳಿಸಿದ್ದಾರೆ.
"ರಾಜೀವ್ ಗಾಂಧಿ ಬಿಳಿ ಚರ್ಮದ ಮಹಿಳೆಯ ಬದಲು ನೈಜೀರಿಯಾದ ಮಹಿಳೆಯನ್ನು ಮದುವೆಯಾಗಿದ್ದರೆ ಕಾಂಗ್ರೆಸ್ ಅವರ (ಸೋನಿಯಾ) ನಾಯಕತ್ವವನ್ನು ಒಪ್ಪಿಕೊಳ್ಳುತ್ತಿತ್ತೇ" ಎಂದು ಪ್ರಶ್ನಿಸಿ ಸಿಂಗ್ ತೀವ್ರ ವಿವಾದಕ್ಕೆ ಗುರಿಯಾಗಿದ್ದರು.
ಆದರೆ ಈ ಭೇಟಿ ನಡೆದಿರುವ ಬಗ್ಗೆ ಸಿಂಗ್ ನಿರಾಕರಿಸಿದ್ದಾರೆ. ವರದಿಗಾರರು ಈ ಭೇಟಿಯ ಬಗ್ಗೆ ಪ್ರಶ್ನಿಸಿಡಾಗ "ಹಾಗೇನಿ ಇಲ್ಲಪ್ಪ" ಎಂದಿರುವ ಸಿಂಗ್ ಮೋದಿ ಅವರೆದುರು ಅತ್ತಿದ್ದನ್ನೂ ನಿರಾಕರಿಸಿದ್ದಾರೆ.
ಈ ವಿಷಯದ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ಗೃಹ ಸಚಿವ ರಾಜನಾಥ ಸಿಂಗ್ "ಜಾತಿ ಜನಾಂಗದ ವಿರುದ್ಧ ನೀಡುವ ಹೇಳಿಕೆಯನ್ನು ಸಂಸತ್ತಿನ ಒಳಗಾಗಲಿ ಹೊರಗಾಗಲಿ ಸರ್ಕಾರ ಯಾವುದೇ ಕಾರಣಕ್ಕೂ ಮನ್ನಣೆ ನೀಡುವುದಿಲ್ಲ" ಎಂದಿದ್ದಾರೆ.
Advertisement