
ನವದೆಹಲಿ: ನೇಪಾಳದ ಭೂಕಂಪ ಸಂತ್ರಸ್ತರಿಗೆ ಭಾರತ ಎಲ್ಲ ರೀತಿಯಲ್ಲಿ ಸಹಾಯ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಭಾನುವಾರ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ನೇಪಾಳದ ಜನತೆಯ ಜತೆ ನಾವಿದ್ದೇವೆ. ನೇಪಾಳವೀಗ ಅತೀ ಕಷ್ಟದಲ್ಲಿದ್ದು, ಅವರಿಗೆ ಬೇಕಾದ ಎಲ್ಲ ಸಹಾಯವನ್ನು ನಾವು ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ಮನ್ ಕೀ ಬಾತ್‌ನಲ್ಲಿ ಮೋದಿ ಹೇಳಿದ್ದೇನು?
ಇವತ್ತು ಮನ್ ಕೀ ಬಾತ್ ನಲ್ಲಿ ಮಾತನಾಡುವ ಶಕ್ತಿ ನನ್ನಲ್ಲಿ ಇಲ್ಲ. ನನ್ನ ಮನಸ್ಸು ವ್ಯಾಕುಲತೆಯಿಂದ ಕೂಡಿದೆ. ಶನಿವಾರ ನೇಪಾಳದಲ್ಲಾದ ಭೂಕಂಪ ಜಗತ್ತನ್ನೇ ನಡುಗಿಸಿದೆ. ನಾನು ಅವರ ನೋವನ್ನು ಅರ್ಥ ಮಾಡಿಕೊಳ್ಳುತ್ತೇನೆ.2001ರಲ್ಲಿ ಕಚ್ ನಲ್ಲಿ ಭೂಕಂಪವಾದಾಗ ನಾನದ್ದನ್ನು ನೋಡಿದ್ದೇನೆ. ನೇಪಾಳದಲ್ಲಿರುವ ನಮ್ಮ ಸಹೋದರ ಸಹೋದರಿಯರೇ, ನಾವು ನಿಮ್ಮ ಜತೆಗಿದ್ದೇವೆ. ಅಲ್ಲಿನ ಜನರನ್ನು ರಕ್ಷಿಸುವುದು ನಮ್ಮ ಮೊದ ಉದ್ದೇಶ. ಇನ್ನೂ ಹಲವಾರು ಮಂದಿ ಕಟ್ಟಡಗಳ ಅಡಿಯಲ್ಲಿ ಸಿಲುಕಿ ಬಿದ್ದಿದ್ದಾರೆ. ರಕ್ಷಣಾ ಕಾರ್ಯಗಳ ನಂತರ ಅವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯಗಳನ್ನು ಮಾಡಲಾಗುವುದು. ಕಳೆದ ಕೆಲವು ದಿನಗಳ ಹಿಂದೆ ಯೆಮನ್‌ನಲ್ಲಿದ್ದ ಜನರನ್ನು ರಕ್ಷಿಸಲಾಯಿತು. ಅಲ್ಲಿನ ರಕ್ಷಣಾ ಕಾರ್ಯಗಳು ಶ್ಲಾಘನೀಯವಾಗಿದ್ದವು. ಸೇವೆಯೇ ಪರಮೋಚ್ಛ ಧರ್ಮವಾಗಿದೆ.
ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆಯನ್ನು ಆಚರಿಸಿದ್ದೇವೆ. ಆದಾಗ್ಯೂ, ಮುಂಬೈಯಲ್ಲಿ ಅವರ ಸ್ಮಾರಕ ನಿರ್ಮಾಣದ ಬಗ್ಗೆ ಇನ್ನೂ ವಿವಾದ ಮುಂದುವರಿಯುತ್ತಿದೆ. ಇದೀಗ ಕೇಂದ್ರ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಅನುಮತಿ ಸೂಚಿಸಿರುವುದರ ಬಗ್ಗೆ ನನಗೆ ಸಂತಸವಿದೆ. ಎಲ್ಲರಿಗೂ ವಿದ್ಯಾಭ್ಯಾಸ ನೀಡುವುದು ಅಂಬೇಡ್ಕರ್ ಆಶಯವಾಗಿತ್ತು. ಭಾರತದಲ್ಲಿ ಯಾರೊಬ್ಬರೂ ಅವಿದ್ಯಾವಂತರಾಗಿರಬಾರದು ಎಂಬುದನ್ನು ನಾವು ಖಾತರಿ ಪಡಿಸಿಕೊಳ್ಳಬೇಕಾಗಿದೆ.
ನಮ್ಮ ಇಬ್ಬರು ಹೆಣ್ಮಕ್ಕಳು (ಸೈನಾ ನೆಹ್ವಾಲ್ ಮತ್ತು ಸಾನಿಯಾ ಮಿರ್ಜಾ) ನಮ್ಮ ದೇಶ ಹೆಮ್ಮೆ ಪಡುವಂತ ಸಾಧನೆ ಮಾಡಿದ್ದಾರೆ. ನನಗೆ ತುಂಬಾ ಖುಷಿಯಾಗಿದೆ.
ನಾವು ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪರಾಭವಗೊಂಡಾಗ ಕೆಲವರು ನಮ್ಮ ಕ್ರಿಕೆಟ್ ತಂಡವನ್ನು ಹೀಯಾಳಿಸಿದರು. ಅದು ಸರಿಯಲ್ಲ, ಜಯ ಮತ್ತು ಪರಾಜಯ ಜೀವನದ ಭಾಗ. ನಮ್ಮಲ್ಲಿ ತಾಳ್ಮೆ ಮತ್ತು ಆತ್ಮ ವಿಶ್ವಾಸ ಇರಬೇಕು. ಹಾಗಿದ್ದರೆ ಮಾತ್ರ ನಮ್ಮ ದೇಶ ಅಭಿವೃದ್ಧಿ ಹೊಂದುತ್ತದೆ.
ವಿದ್ಯಾರ್ಥಿಗಳು ಈಗ ರಜಾಕಾಲದ ಮಜಾ ತೆಗೆದುಕೊಂಡಿರುತ್ತಾರೆ. ಅವರು ಹಾಗೆಯೇ ಮಜಾ ಮಾಡುತ್ತಿರಲಿ ಎಂದು ಆಶಿಸುತ್ತೇನೆ. ಅವರು ತಮ್ಮ ರಜಾಕಾಲವನ್ನು ಸಂತಸದಿಂದ ಕಳೆಯುವುದರ ಜತೆಗೆ ಹೊಸ ವಿಷಯಗಳನ್ನೂ ಕಲಿತುಕೊಳ್ಳಲಿ.
Advertisement