
ನವದೆಹಲಿ: ಭೂಕಂಪನದಿಂದ ಧ್ವಂಸಗೊಂಡಿರುವ ನೇಪಾಳದಿಂದ ಶನಿವಾರದವರೆಗೂ ೧೯೩೫ ಭಾರತೀಯರನ್ನು ರಕ್ಷಿಸಿ ಕರೆತರಲಾಗಿದ್ದು, ಸೋಮವಾರ ಸಂಜೆಯ ವೇಳೆಗೆ ಇನ್ನು ಹಲವರು ಬಂದಿಳಿಯುವ ಸಾಧ್ಯತೆ ಇದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ವೈಪರೀತ್ಯ ಹವಾಮಾನದ ಹೊರತಾಗಿಯೂ "ಆಪರೇಶನ್ ಮೈತ್ರಿ"ಯ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ರಾತ್ರೋರಾತ್ರಿ ಮುಂದುವರೆದಿದೆ.
ಭಾರತೀಯ ವೈಮಾನಿಕ ದಳದ ವಿಮಾನಗಳು ನೇಪಾಳದಿಂದ ಸೋಮವಾರ ಬೆಳಗ್ಗೆ ಹಲವರನ್ನು ರಕ್ಷಿಸಿ ಕರೆತಂದಿದ್ದು, ಪರಿಹಾರ ವಸ್ತುಗಳೊಂದಿಗೆ ಮತ್ತೆ ನೇಪಾಳಕ್ಕೆ ಹಾರಲಿವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಸೀತಾಂಶು ಕಾರ್ ತಿಳಿಸಿದ್ದಾರೆ.
"೧೨ ರಕ್ಷಣಾ ವಿಮಾನಗಳೊಂದಿಗೆ ಖಟ್ಮಂಡುವಿನಿಂದ ಭಾರತೀಯ ವೈಮಾನಿಕ ದಳ ಇಲ್ಲಿಯವರೆಗೂ ೧೯೩೫ ಜನರನ್ನು ರಕ್ಷಿಸಿದೆ" ಎಂದು ಕಾರ್ ತಿಳಿಸಿದ್ದಾರೆ.
ಖಟ್ಮಂಡುವಿನಿಂದ ನವದೆಹಲಿಗೆ ಬಂದಿಳಿದ ಕೊನೆಯ ವಿಮಾನ ಸಿ-೧೭ ೨೯೧ ಜನರನ್ನು ರಕ್ಷಿಸಿ ತಂದಿಳಿಸಿದೆ.
"ಮೂರು ವೈದ್ಯರು ಮತ್ತು ೨೫ ಅರೆ ವೈದ್ಯರು ಕೇಂದ್ರದಲ್ಲಿ ಸನ್ನದ್ಧರಾಗಿದ್ದಾರೆ" ಎಂದಿರುವ ಕಾರ್, ಆರು ವೈದ್ಯಕೀಯ ತಂಡಗಳು, ತಾಂತ್ರಿಕ ರಕ್ಷಣಾ ದಳ, ಹೊದಿಕೆಗಳು, ಟೆಂಟ್ ಗಳು ಹಾಗೂ ಇತರ ಪರಿಹಾರ ವಸ್ತುಗಳನ್ನು ನೇಪಾಳಕ್ಕೆ ಕಳುಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
೫೮ಟನ್ ನೀರು ಹೊತ್ತ ಸಿ-೧೭ ವಿಮಾನ ಸೋಮವಾರ ಬೆಳಗ್ಗೆ ಖಟ್ಮಂಡುವಿಗೆ ಹೊರಟಿದೆ.
Advertisement