
ಇಸ್ಲಾಮಿಕ್ ಸ್ಟೇಟ್ ಜಿಹಾದಿ ಸಂಸ್ಥೆಯ ನಿಗೂಢ ಮುಖ್ಯಸ್ಥ ಅಬು ಬಕ್ರ್ ಅಲ್-ಬಾಗ್ದಾದಿ ಮೃತನಾಗಿದ್ದಾನೆ ಎಂದು ರೇಡಿಯೋ ಇರಾನ್ ಸೋಮವಾರ ವರದಿ ಮಾಡಿದೆ.
ಗಾರ್ಡಿಯನ್ ಪತ್ರಿಕೆಯ ವರದಿಯ ಪ್ರಕಾರ ಮಾರ್ಚ್ ನಲ್ಲಿ ನಡೆದ ಅಮೇರಿಕಾ ಮುಂದಾಳತ್ವದ ಮಿತ್ರರಾಷ್ಟ್ರಗಳ ವೈಮಾನಿಕ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು, ಜಿಹಾದಿ ಸಂಸ್ಥೆಯ ದೈನಂದಿನ ಚಟುವಟಿಕೆಗಳಿಂದ ಬಾಗ್ದಾದಿ ಹೊರಗುಳಿದಿದ್ದ. ೪೦ ವಯಸ್ಸಿನ ಆಸುಪಾಸಿನವನು ಎಂದು ನಂಬಲಾಗಿದ್ದ ಬಾಗ್ದಾದಿ ತಲೆದಂಡಕ್ಕೆ ಅಮೇರಿಕಾ ೧೦ ಮಿಲಿಯನ್ ಯು ಎಸ್ ಡಾಲರ್ಗಳ ಬಹುಮಾನವನ್ನು ಘೋಷಿಸಿತ್ತು.
ಕಳೆದ ತಿಂಗಳು ಪಶ್ಚಿಮ ಇರಾಕಿನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅಬು ಬಕ್ರ್ ಅಲ್-ಬಾಗ್ದಾದಿ ಗಾಯಗೊಂಡ ನಂತರ, ಇಸ್ಲಾಮಿಕ್ ಸ್ಟೇಟ್ ನಿವೃತ್ತ ಭೌತಶಾಸ್ತ್ರ ಅಧ್ಯಾಪಕ ಅಬು ಅಲಾ ಆಫ್ರಿಯನ್ನು ತಾತ್ಕಾಲಿಕವಾಗಿ ಮುಖ್ಯಸ್ಥನಾಗಿ ಬದಲಿಸಿತ್ತು ಎಂದು ರಾಷ್ಟ್ರೀಯ ದಿನಪತ್ರಿಕೆಯೊಂದು ವರದಿ ಮಾಡಿತ್ತು.
ಈಗ ಈ ಭೌತಶಾಸ್ತ್ರ ಅಧ್ಯಾಪಕನನ್ನು ಶಾಶ್ವತವಾಗಿ ಇಸ್ಲಾಮಿಕ್ ಸ್ಟೇಟ್ ಸಂಸ್ಥೆಯ ಅಧ್ಯಕ್ಷನನ್ನಾಗಿ ನೇಮಿಸಿದೆಯೇ ಎಂಬುದರ ಬಗ್ಗೆ ಅಧಿಕೃತ ವರದಿ ಬಂದಿಲ್ಲ.
Advertisement